ಅಂಗಾಂಗ ದಾನ ಮತ್ತು ಇಸ್ಲಾವಿೂ ದೃಷ್ಟಿಕೋನ

0
743

ಸೈಯ್ಯದ್ ಕಾಝಿಂ

ವೈಜ್ಞಾನಿಕ ಯುಗದ ಬೆಳವಣಿಗೆಯ ಉತ್ತುಂಗತೆಯಲ್ಲಿ ಇಂದಿಗೂ ತಾಂತ್ರಿಕ ಚಟುವಟಿಕೆ ಗಳ ಕುರಿತಾದ ವಿಚಾರಗಳು ಇಸ್ಲಾಮೀ ವಲಯ ದಲ್ಲಿ ವಿವಾದಾತ್ಮಕವಾಗಿಯೇ ಉಳಿದುಕೊಂಡಿವೆ. ಹಿಂದೆ ಟರ್ಕಿಯ ಸುಲ್ತಾನನು ಮಸ್ಜಿದುನಬವಿಯಲ್ಲಿ ವಿದ್ಯುತ್ ದೀಪ ಅಳವಡಿಸಲು ನಿರ್ಧರಿಸಿದಾಗ ವಿದ್ವಾಂಸರು ಪವಿತ್ರ ಸ್ಥಳದಲ್ಲಿ ಕೃತಕ ವಸ್ತುಗಳನ್ನು ಅಲಂಕರಿಸಬಾರದೆಂದು ಹೇಳಿ ಸುಲ್ತಾನರ ನಿಲು ವನ್ನು ಖಂಡಿಸಿದ್ದರು. ಮಾತ್ರವಲ್ಲ, ಆರಂಭದಲ್ಲಿ ಪ್ರಿಂಟಿಂಗ್ ಪ್ರೆಸ್(ಮುದ್ರಣ ಘಟಕ)ಗಳನ್ನು ಸ್ಥಾಪಿ ಸಲು ಪ್ರಯತ್ನಿಸಿದಾಗಲೂ ಈ ವಿರೋಧವು ಹೊಗೆಯಾಡಿತು. ಅಷ್ಟೂ ಸಾಲದೆಂಬಂತೆ ಕುರ್‍ಆನನ್ನು ಮುದ್ರಿಸುವುದು ಹರಾಮ್ ಎಂದು ಸಾರಲಾಯಿತು. ತದ ನಂತರ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಅಳವಡಿಸುವ ವಿಷಯ ಬಂದಾಗಲೂ ಅದನ್ನು ನಿರಾಕರಿಸಲಾಯಿತು ಮತ್ತು ಕೃತಕ ಶಬ್ದವಾಹಕಗಳಿಂದ ಧ್ವನಿಯಲ್ಲಿ ವ್ಯತ್ಯಾಸ ಗಳಾಗುತ್ತವೆಯೆಂದು ತಿಳಿಸಲಾಯಿತು. ಟಿವಿ(ದೂರ ದರ್ಶನ)ಯ ವಿಷಯ ಬಂದಾಗ ಮುಸ್ಲಿಮ್ ವಿದ್ವಾಂಸರು ಅದನ್ನು ‘ಶೈತಾನನ ಪುತ್ರಿ’ ಎಂದರು. ಹಾಗೂ ಇಂಟರ್‍ನೆಟ್‍ನ ಮೇಲೆಯೂ ಅವರು ಕೋಪಗೊಂಡರು. ಹಾಗಿರುವಾಗ, ಅಂಗಾಂಗ ದಾನದ ವಿಷಯವು ಕೂಡಾ ವಿದ್ವಾಂಸರ ವಿಚಾರ ಗಳಲ್ಲಿ ವಿರೋಧಿ ಸಾಲಿನಲ್ಲಿಯೇ ನಿಂತುಕೊಂಡಿದ್ದು ಆಶ್ಚರ್ಯಕರವೇನಲ್ಲ. ಆದರೆ ಈ ವಿಷಯದಲ್ಲಿ ವಿದ್ವಾಂಸರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿ ದ್ದಾರೆ. ಕೆಲವರು ಅಂಗ ದಾನವನ್ನು ವಿರೋಧಿಸು ತ್ತಾರೆ ಮತ್ತು ಇನ್ನೂ ಕೆಲವು ವಿದ್ವಾಂಸರು ಅದನ್ನು ಸ್ವೀಕರಿಸುತ್ತಾರೆ.
`ಅಂಗ’ ಎಂಬುದು ಮಾನವನ ದೇಹದ ಒಂದು ಭಾಗವಾದ ಟಿಶ್ಶು, ಕೋಶ ಅಥವಾ ಶಕ್ತವೆಂದು ಪರಿಗಣಿಸಲ್ಪಡುತ್ತದೆ.

ಅಂಗಾಂಗ ದಾನದಲ್ಲಿಯೂ ಕೂಡಾ ಎರಡು ವಿಧಗಳಿವೆ
1. ಜೀವಂತ ವ್ಯಕ್ತಿಯಿಂದ ನೀಡಲಾಗುವ ಅಂಗದಾನ ಹಾಗೂ
2. ಮೃತ ವ್ಯಕ್ತಿಯಿಂದ ನೀಡಲಾಗುವ ಅಂಗದಾನ.
ವಿಶ್ವದಾದ್ಯಂತ ಹೆಚ್ಚಿನ ವಿದ್ವಾಂಸರ ಪ್ರಕಾರ ಮೂರು ಸ್ಥಿತಿಗಳನ್ನರಿತ ಜೀವಂತ ವ್ಯಕ್ತಿಯು ಅಂಗದಾನದಲ್ಲಿ ತನ್ನನ್ನು ತೊಡಗಿಸಿಕೊಳ್ಳಬಹು ದೆನ್ನುತ್ತಾರೆ. ಅದೇನೆಂದರೆ;
 ತಾನು ಮಾಡುತ್ತಿರುವ ಅಂಗಾಂಗ ದಾನ ದಿಂದಾಗಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಅಂಗ ದಾನಿಯ ಆರೋಗ್ಯದ ಮೇಲೆ ಬೀಳಬಾರದು.
 ದಾನಿಗೆ ತಾನು ಯಾರಿಗೆ ಅಂಗದಾನ ಮಾಡುತ್ತಿದ್ದೇನೆಂಬುದು ತಿಳಿದಿರಬೇಕು.
 ಅಂಗದಾನವನ್ನು ಹಣಗಳಿಸುವ ಉದ್ದೇಶದಿಂದ ಮಾಡಬಾರದು.

ಆದರೆ ಮೃತ ವ್ಯಕ್ತಿಯ ದೇಹದಿಂದ ಅಂಗಾಂಗ ಗಳನ್ನು ತೆಗೆದು ಇತರ ವ್ಯಕ್ತಿಗೆ ದಾನ ಮಾಡುವ ವಿಧಾನವನ್ನು ಇಸ್ಲಾಮಿಕ್ ಫಿಕ್ಹ್ ಅಕಾಡೆಮಿ ಆಫ್ ಇಂಡಿಯಾ ಸೇರಿದಂತೆ ಜಗತ್ತಿನಲ್ಲಿರುವ ಹೆಚ್ಚಿನ ಎಲ್ಲಾ ವಿದ್ವಾಂಸರು ವಿರೋಧಿಸುತ್ತಾರೆ.
ಮೌಲಾನ ಮೌದೂದಿಯವರ ಬಳಿ ಓರ್ವ ಯುವ ವ್ಯಕ್ತಿಯು ಮಾನವೀಯತೆಯ ನೆಲೆಯಲ್ಲಿ ಓರ್ವ ಮೃತ ವ್ಯಕ್ತಿಯ ದೇಹದ ಅಂಗಾಂಗಗಳ ದಾನದ ಬಗ್ಗೆ ಇತರರು ನಿರ್ಧಾರ ಕೈಗೊಳ್ಳುವ ಕುರಿತು ತಮ್ಮ ನಿಲುವೇನೆಂದು ಪ್ರಶ್ನಿಸಿದನು. ಇದಕ್ಕುತ್ತರವಾಗಿ ಮೌಲಾನಾ ಮೌದೂದಿಯವರು ಇಂತೆಂದರು- “ಇದು ಮಾನವೀಯತೆಯೊಂದಿಗೆ ಯಾವುದಾದರೂ ಸಂಬಂಧವನ್ನು ಹೊಂದಿದೆ ಯೆಂದು ಕೇವಲ ಕಣ್ಣುಗಳನ್ನು ದಾನ ಮಾಡುವ ಕುರಿತಾದ ವಿಷಯವಲ್ಲ, ಕಾಲ ಕಳೆದಂತೆ ಇದು ಮಾನವನ ಹಲವಾರು ಅಂಗಗಳ ಮೇಲೆಯೂ ಆವರಿಸಿ ಬಿಡುತ್ತದೆ. ಒಂದು ಉದಾಹರಣೆಯ ಸಹಾಯದಿಂದ ಇದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸೋಣ. ಓಬ್ಬ ವ್ಯಕ್ತಿಯು ಮೃತನಾಗಿದ್ದಾನೆ. ಆತನ ಇಡೀ ಕುಟುಂಬವೇ ದುಃಖಿತವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಕೆಲವರು ಬಂದು ಮೃತ ವ್ಯಕ್ತಿಯ ಕಣ್ಣುಗಳನ್ನು ತೆಗೆದುಕೊಂಡೊಯ್ಯುತ್ತಾರೆ. ಇನ್ನು ಕೆಲವರು ಕೈ ಕಾಲುಗಳನ್ನು, ಮತ್ತೆ ಕೆಲವು ಜನರು ಆತನ ಹೃದಯ, ಶ್ವಾಸಕೋಶ, ಕಿಡ್ನಿಗಳನ್ನು ಕೊಂಡೊಯ್ಯುತ್ತಾರೆ. ಒಂದು ವೇಳೆ ಮುಸ್ಲಿಮ್ ಸಮುದಾಯದಲ್ಲಿ ಈ ಕ್ರಮವು ಜಾರಿಯಾದರೆ ಓರ್ವ ವ್ಯಕ್ತಿ ಮೃತನಾದ ಬಳಿಕ ಆತನ ಸ್ನೇಹಿ ತರು, ಆಪ್ತರು ಕುಟುಂಬ ಸಂಬಂಧಿಕರು ಏನನ್ನು ನೋಡಲು ಬರುತ್ತಾರೆಂಬುದು ನನಗೆ ಅರ್ಥೈಹಿಸಲಾಗುತ್ತಿಲ್ಲ. ನೀವು ಯಾವಾಗ ನಿಮ್ಮ ದೇಹದ ಮಾಲಿಕರಾದಿರಿ? ಇಸ್ಲಾಮ್ ಧರ್ಮ ಮಾತ್ರವಲ್ಲ, ಕಾನೂನು ಕೂಡ ನಿಮ್ಮನ್ನು ನಿಮ್ಮ ದೇಹದ ಮಾಲಿಕರೆಂದು ಸಾರುವುದಿಲ್ಲ. ನೀವು ನಿಮ್ಮ ದೇಹದ ಮಾಲಿಕರಾಗಿದ್ದೀರೆಂದಾದಲ್ಲಿ ಆತ್ಮ ಹತ್ಯೆಯನ್ನು ಯಾಕೆ ಅನುಮತಿಸಲಾಗಿಲ್ಲ? ಹಾಗಿ ದ್ದರೆ ನಿಮ್ಮನ್ನೇಕೆ ನೀವು ಮಾರಿಕೊಳ್ಳಬಾರದು?”
(ತಫ್ಹೀಮುಲ್ ಮಸಾಯಿಲ್, ಸಂಪುಟ- 1, ಮೌಲಾನ ಗೌಹರ್ ರಹ್ಮಾನ್)

ಇಸ್ಲಾಮಿಕ್ ಫಿಕ್ಹ್ ಕೌನ್ಸಿಲ್ ಆಫ್ ದಿ ಆರ್ಗನೈ ಝೇಶನ್ ಆಫ್ ದಿ ಇಸ್ಲಾಮಿಕ್ ಕಾನ್ಫರೆನ್ಸ್‍ನ ಪ್ರಕಾರ ಒಬ್ಬ ವ್ಯಕ್ತಿಯ ದೇಹದಿಂದ ತೆಗೆಯಲಾದ ಅಂಗ ವನ್ನು ಅದೇ ವ್ಯಕ್ತಿಯ ದೇಹದಲ್ಲಿ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಲು, ಒಬ್ಬ ವ್ಯಕ್ತಿಯ ದೇಹದಿಂದ ಇನ್ನೊಂದು ವ್ಯಕ್ತಿಯ ದೇಹಕ್ಕೆ ಅಂಗವನ್ನು ಕಸಿ ಮಾಡಲು, ರಕ್ತ, ಚರ್ಮದಂತಹ ಪುನರುಜ್ಜೀವ ಗೊಳ್ಳುವ ಅಂಗಾಂಗಗಳನ್ನು ಒಬ್ಬ ವ್ಯಕ್ತಿಯ ದೇಹ ದಿಂದ ಇನ್ನೊಬ್ಬ ವ್ಯಕ್ತಿಗೆ ಬಳಸಲು, ಅನಾರೋಗ್ಯದ ಕಾರಣದಿಂದಾಗಿ ಇನ್ನೊಬ್ಬ ವ್ಯಕ್ತಿಯ ದೇಹದಿಂದ ತೆಗೆದುಕೊಳ್ಳಲ್ಪಟ್ಟ ಅಂಗಾಂಗಗಳನ್ನು ಬಳಸುವುದು, ಅನಾರೋಗ್ಯದ ಕಾರಣದಿಂದಾಗಿ ಕಣ್ಣಿನ ಕಾರ್ನಿಯಾ ತೆಗೆಯಲ್ಪಟ್ಟ ವ್ಯಕ್ತಿಯು ಇತರ ವ್ಯಕ್ತಿಯಿಂದ ಸ್ವೀಕರಿಸು ವುದು ಮತ್ತು ಒಬ್ಬ ವ್ಯಕ್ತಿಯು ಬದುಕುಳಿಯಲು ಮತ್ತು ಆತನ ಜೀವ ಉಳಿಯುವಿಕೆಗೆ ಒಂದು ನಿರ್ದಿಷ್ಟ ಅಂಗದ ಆವಶ್ಯಕತೆ ಇದ್ದಲ್ಲಿ ಮೃತ ವ್ಯಕ್ತಿಯ ದೇಹದಿಂದ ಅಂಗವನ್ನು ಸ್ವೀಕರಿಸಲು ಅನುಮತಿ ನೀಡಲಾಗುತ್ತದಾದರೂ ಈ ಎಲ್ಲಾ ನಿರ್ಣಯಗಳು ಪರಿಸ್ಥಿತಿ ಮತ್ತು ಸನ್ನಿವೇಶಗಳಿಗನುಗುಣವಾಗಿ ಬದಲಾವಣೆಗೊಳ್ಳಬಹುದೆಂದು ತಿಳಿಸುತ್ತದೆ.
ಅಂಗಾಂಗ ದಾನದ ವಿಷಯದಲ್ಲಿ ಪರಿಗಣಿಸ ಲಾದ ಕೆಲವು ವಿಷಯಗಳೆಂದರೆ,
 ಗುಣಮುಖವಾಗುವುದು ಉದ್ದೇಶವಾಗಿರಬೇಕು.
 ಜೀವ ಉಳಿಸುವಿಕೆ ಅಥವಾ ಜೀವನದ
ಉಳಿವಿಗೆ ಶ್ರಮಿಸುವಿಕೆಯು ಕಡ್ಡಾಯವಾಗಿರಬೇಕು.
 ತುರ್ತು ಪರಿಸ್ಥಿತಿಯಲ್ಲಿ ಜೀವವುಳಿಸಲು ನಿಷಿದ್ಧವಾದವುಗಳನ್ನು ಉಪಯೋಗಿಸಬಹುದು.
 ಜೀವವುಳಿಸಲು ಎರಡಕ್ಕಿಂತ ಕಡಿಮೆ ಪಾಪಗಳಿಗೆ ಆದ್ಯತೆ ನೀಡುವುದು.
 ಕುರ್‍ಆನಿನಲ್ಲಿ ಅಲ್ಲಾಹನು ಯಾವೆಲ್ಲವುಗಳನ್ನು ನಿಷೇಧಿಸಿದ್ದಾನೋ ಹಾಗೂ ಅಲ್ಲಾಹನು ಯಾವೆಲ್ಲವುಗಳನ್ನು ಧರ್ಮಬದ್ಧಗೊಳಿಸಿದ್ದಾನೋ ಅವುಗಳನ್ನು ಉಲ್ಲಂಘಿಸದಿರಲು ಅಲ್ಲಾಹನು ಎಚ್ಚರಿಕೆ ನೀಡಿದ್ದಾನೆ.
 ನಿಷಿದ್ಧವಾದದ್ದನ್ನು ಅಧಿಕೃತ ಆದೇಶ ಗಳಿಂದ ಸಾಬೀತು ಪಡಿಸುವುದು.
 ಮತ್ತು ಅಲ್ಲಾಹನು ನೇರವಾಗಿ ಅಥವಾ ಪರೋಕ್ಷವಾಗಿ ಅಂಗಾಂಗ ಕಸಿ ಮಾಡುವಿಕೆಯನ್ನು ನಿಷೇಧಿಸಿಲ್ಲ. ಆದರೆ ವಾಸ್ತವವಾಗಿ ಯಾವುದೇ ಸ್ಥಿತಿಯಲ್ಲಿ ಒಂದು ಜೀವವನ್ನು ಕಾಪಾಡುವುದನ್ನು ಅಲ್ಲಾಹನು ಉತ್ತೇಜಿಸಿದ್ದಾನೆಂಬುದನ್ನು ಮರೆಯಬಾರದು.

ಈ ಎಲ್ಲಾ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವುದರೊಂದಿಗೆ `ನಾವು ಇತರರಿಗೆ ಸಹಾಯ ಮಾಡುವುದು ಇಸ್ಲಾಮಿನ ಪ್ರಮುಖ ತತ್ವವಾಗಿದೆ’ ಎಂಬುದನ್ನು ಮರೆಯಬಾರದು. ಇಸ್ಲಾಮ್ ಎಂದಿಗೂ ಇತರರಿಗೆ ಸಹಾಯ ಮಾಡಿರಿ ಎಂದು ಪ್ರೋತ್ಸಾಹಿಸುತ್ತದೆ. ಇಸ್ಲಾಮ್, ಇತರರಿಗೆ ಸಹಾಯ ಮಾಡುವ ಕರ್ಮವು ಮಹತ್ತರವಾದ ಕರ್ಮವೆಂದು ಸಾರಿ ಹೇಳುತ್ತದೆ. ಅದರಲ್ಲಿಯೂ ಬಡ ನಿರ್ಗತಿಕರಿಗೆ ಸಹಾಯ ಮಾಡಬೇಕೆಂದು ಆಜ್ಞಾಪಿಸುತ್ತದೆ. ಯಾವುದೇ ರೀತಿಯ ಬಣ್ಣ, ಕುಲ, ಗೋತ್ರ, ಜನಾಂಗಗಳೆಂಬ ಭೇದ-ಭಾವವಿಲ್ಲದೇ ಸಹಾಯಹಸ್ತ ಚಾಚಬೇಕೆಂದು ಇಸ್ಲಾಮ್ ಕಲಿಸುತ್ತದೆ. ನಾವು ಇತರರಿಗೆ ಸಹಾಯ ಮಾಡುವಿಕೆಯು ಅಲ್ಲಾಹನು ನಮಗೆ ನೀಡಿದ ಅನುಗ್ರಹಗಳಿಗೆ ಕೃತಜ್ಞರಾಗುವ ಒಂದು ದೃಢ ಕರ್ಮವೆಂದು ಇಸ್ಲಾಮ್ ತಿಳಿಸುತ್ತದೆ. ಅಲ್ಲಾಹನಿಚ್ಛೆಯಿಂದಲೇ ನಮಗೆ ಆಹಾರ, ಉತ್ತಮ ಆರೋಗ್ಯ, ಕುಟುಂಬ, ಆಶ್ರಯಗಳಂತಹ ಸೌಲಭ್ಯ ಗಳು ಲಭಿಸಿವೆಯೆಂಬುದನ್ನೂ ಆತನ ಇಚ್ಛೆ ಇಲ್ಲದೆ ಈ ಸೌಲಭ್ಯಗಳು ಸಿಗುತ್ತಿರಲಿಲ್ಲವೆಂಬುದನ್ನು ನಾವು ಸ್ಮರಿಸಿಕೊಳ್ಳಬೇಕೆಂದೂ ಹಾಗೂ ಇತರರಿಗೆ ನೆರವಾಗಬೇಕೆಂದೂ ಇಸ್ಲಾಮ್ ಬೋಧಿಸುತ್ತದೆ. ಈ ಸಹಾಯ ಮಾಡುವಿಕೆ ಎಂಬ ಒಂದು ಗುಣವು ಓರ್ವ ವ್ಯಕ್ತಿಯನ್ನು ಎಷ್ಟರ ಮಟ್ಟಿಗೆ ಪ್ರೇರೇಪಿಸುತ್ತದೆಂದರೆ ಆತ ತನ್ನ ಸಾಮಥ್ರ್ಯಗಳಿಗೂ ಮೀರಿ ತನ್ನ ಆವಶ್ಯಕತೆಗಳನ್ನೂ ಮರೆತು ಇತರ ರಿಗೆ ಸಹಾಯ ಮಾಡಲು ಧಾವಿಸುತ್ತಾನೆ.
ಪವಿತ್ರ ಕುರ್‍ಆನಿನ ಮೂಲಕ ದಾನದ ಮಹತ್ವ ವನ್ನು ಹಾಗೂ ಪ್ರವಾದಿ(ಸ) ಜೀವನ, ಅವರ ಸಹ ಚರರ ಜೀವನದಿಂದ ಸಹಾಯ ಮಾಡುವಿಕೆಯ ಪ್ರಾಮುಖ್ಯತೆಯನ್ನು ಅರಿಯಬಹುದು.

ಅಲ್ಲಾಹನು ಪವಿತ್ರ ಕುರ್‍ಆನಿನಲ್ಲಿ ಈ ರೀತಿ ಆದೇಶಿಸಿದ್ದಾನೆ. “…ಒಬ್ಬನು ಇನ್ನೊಬ್ಬನಿಗೆ ಜೀವ ದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ.”(ಪವಿತ್ರ ಕುರ್‍ಆನ್: 5: 32)
ಈ ಮೇಲಿನ ಸೂಕ್ತವು ಓರ್ವ ವ್ಯಕ್ತಿಯ ಜೀವವನ್ನುಳಿಸಲು ಸಕಲ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಸಾರುತ್ತದೆ ಹಾಗೂ ವಿದ್ವಾಂಸರು ಕೂಡಾ ಈ ಸೂಕ್ತದ ಆಧಾರದಲ್ಲಿ ಅಂಗಾಂಗದಾನ ಮಾಡಲು ಅನುಮತಿಯನ್ನು ನೀಡುತ್ತಾರೆ. “ಇಹಲೋಕದಲ್ಲಿ ಯಾರು ವಿಶ್ವಾಸಿಯ ತೊಂದರೆಗಳನ್ನು ನೀಗಿಸುವನೋ ಪುನರುತ್ಥಾನದ ದಿನ ಅಲ್ಲಾಹನು ಆತನ ತೊಂದರೆಗಳನ್ನು ನೀಗಿಸುವನು.” ಯಾರು ಇತರರ ಸಂಕಷ್ಟಗಳನ್ನು ನೀಗಿಸಿ ಸಮಸ್ಯೆಗಳನ್ನು ಸರಳೀಕರಿಸುವರೋ ಅವರಿಗೆ ಪರಲೋಕದಲ್ಲಿ ಸಮಸ್ಯೆಗಳನ್ನು ಸರಳೀಕರಿಸುವನು. ಯಾರು ಇತರ ರಹಸ್ಯಗಳನ್ನು ಗುಪ್ತವಾಗಿಡುವರೋ ಅಲ್ಲಾಹನು ಅವರ ರಹಸ್ಯಗಳನ್ನು ಪರಲೋಕದಲ್ಲಿ ರಹಸ್ಯವಾಗಿರಿಸುವನು. ಎಲ್ಲಿಯರವರೆಗೆ ಓರ್ವ ಸಹೋದರನಿಗೆ ಸಹಾಯ ಮಾಡುತ್ತಿರುವನೋ ಅಲ್ಲಾಹನು ಅಲ್ಲಿಯವರೆಗೂ ಆತನಿಗೆ ಸಹಾಯ ಮಾಡುವನು ಎಂಬಂತಹ ಹಲವಾರು ಹದೀಸ್ ಗಳು ಪ್ರವಾದಿಯವರಿಂದ(ಸ) ಬೋಧಿಸಲ್ಪಟ್ಟಿವೆ. ಯಾರು ಇತರರಿಗೆ ಸಹಾಯ ಮಾಡುವರೋ ಅವರಿಗೆ ಅಲ್ಲಾಹನು ಸಹಾಯ ಮಾಡುತ್ತಾನೆಂಬ ಅಂಶವನ್ನು ತಿಳಿದೂ ನಾವು ಅಲ್ಲಾಹನ ಈ ಅನುಗ್ರಹವನ್ನು ಕಡೆಗಣಿಸುವುದು ಸರಿಯೇ?
ಸಹಾಬಿಗಳ ಚರಿತ್ರೆಯಿಂದಲೂ ನಮಗೆ ಸಹಾಯ ಮಾಡುವಿಕೆಯ ಮಹತ್ತರ ಗುಣಗಳನ್ನು ಕಾಣಬಹುದು. ಅಬೂ ತಲ್ಹಾ(ರ)ರವರು ಓರ್ವ ಅತಿಥಿಯನ್ನು ಮನೆಗೆ ಸತ್ಕರಿಸಲು ಕರೆದೊಯ್ದರು. ಆದರೆ ಮನೆಯಲ್ಲಿ ಮಕ್ಕಳಿಗಾಗುವಷ್ಟು ಮಾತ್ರ ಆಹಾರವಿದೆಯೆಂದು ತಿಳಿದಾಗ ಅವರು ಮಕ್ಕಳನ್ನು ಪುಸಲಾಯಿಸಿ ಮಲಗಿಸಿದರು. ಹಾಗೂ ಊಟಕ್ಕೆ ಕುಳಿತಾಗ ಅತಿಥಿಗೆ ಊಟನ್ನು ಬಡಿಸಿ ದೀಪವನ್ನು ನಂದಿಸಿ ತಾವು ಊಟ ಮಾಡಿದಂತೆ ನಟಿಸಿದರು. ಅತಿಥಿಯು ಹೊಟ್ಟೆ ತುಂಬಾ ಉಂಡರು. ಆದ್ದ ರಿಂದ ನಾವು ಶರೀಅತ್‍ನಲ್ಲಿ ಅಂಗೀಕರಿಸಲ್ಪಡುವ ಎಲ್ಲಾ ಮೂಲಗಳಿಂದಲೂ ಇತರರಿಗೆ ಸಹಾಯ ಮಾಡಲು ಮುಂದಡಿ ಇಡಬೇಕಿದೆ.

ಇನ್ನೊಂದೆಡೆ ಮಾನವನ ಅಂಗಾಂಗಗಳಿಗೆ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಲೇ ಇವೆ. ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ 27 ನಿಮಿಷಗಳಿಗೊಬ್ಬರಂತೆ ಒಬ್ಬರು ಅಂಗಾಂಗ ಕಸಿ ಗೊಳಪಡುತ್ತಾರೆ. ಆದರೆ ಪ್ರತಿ 2 ಗಂಟೆ 24 ನಿಮಿಷಗಳಿಗೆ ಜಗತ್ತಿನಲ್ಲಿ ಒಬ್ಬರು ಅಂಗಾಂಗದಾನಿ ಗಳಿಗಾಗಿ ಕಾದು ಮೃತರಾಗುತ್ತಾರೆ. ಸಾವಿರಾರು ಜನರು ಅಂಗಾಂಗ ದಾನಿಗಳಿಗಾಗಿ ಜಗತ್ತಿನಾದ್ಯಂತ ಕಾಯುತ್ತಿದ್ದಾರೆ. ಲಕ್ಷಾಂತರ ಜನರು ಹಲವಾರು ಕಾರಣಗಳಿಂದಾಗಿ ಮರಣ ಹೊಂದುತ್ತಾರೆ. ಆದರೆ ಈ ಮೃತರಲ್ಲಿ ಕೇವಲ 2% ಜನರು ಅಂಗಾಂಗ ದಾನಿಗಳಾಗಿ ತಮ್ಮನ್ನು ನೋಂದಾಯಿಸಿಕೊಳ್ಳು ತ್ತಾರೆಂಬುದು ವಿಪರ್ಯಾಸಕರ. ಅಂಗಾಂಗದಾನಿ ಗಳಾದ ಈ 2% ಜನರಲ್ಲಿ 30% ಜನರು ತಮ್ಮ ದೇಹದ ಅಂಗಾಂಗ ಅಥವಾ ಟಿಶ್ಯೂಗಳನ್ನು ದಾನ ಮಾಡಿರುತ್ತಾರೆ. ಐದು ಜೀವಗಳನ್ನುಳಿಸುವುದ ರೊಂದಿಗೆ 50 ಜನರ ದೈಹಿಕ ಸದೃಢತೆಗೆ ಅವರು ಸಹಾಯಕರಾಗುತ್ತಾರೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಅಂಗಾಂಗ ಕಸಿಗಾಗಿಯೇ ವೈದ್ಯರು ಕಾಯದೇ ಕೃತಕ ಅಂಗಾಂಗಗಳ ತಯಾರಿಗೆ ಶ್ರಮಿಸಬೇಕಿದೆ. ಇತರ ಸಂಘ ಸಂಸ್ಥೆಗಳು ಹಾಗೂ ಸಂಶೋಧನಾ ರಂಗಗಳು ಮಾನವನ ಅಂಗಗಳಿಗೆ ಬದಲಾಗಿ ಪ್ರಾಣಿಗಳ ಅಂಗಗಳನ್ನು ಬಳಸಲು ಸಂಶೋಧನಾತ್ಮಕ ವಿಧಾನಗಳಲ್ಲಿ ತೊಡಗಿಸಿಕೊಳ್ಳಬೇಕಿದೆ.

ಇದು ಮಾನವೀಯತೆಯ ನಿಜವಾದ ಸೇವೆಯಾಗಿದೆ. ಈ ರೀತಿಯ ಸೇವೆಯು ಇಡೀ ಮಾನವಕುಲಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ.
1967ರ ಡಿಸೆಂಬರ್ 25ರಂದು ಪ್ರಕಟವಾದ ಪಾಶ್ಚಾತ್ಯ ದೈನಿಕವೊಂದರಲ್ಲಿ ಈ ರೀತಿ ವರದಿ ಮಾಡಲಾಗಿತ್ತು. “ಮಾನವನ ಎಲುಬುಗಳ ಸಹಾಯದಿಂದ ಮಾನವ ಅಸ್ಥಿಪಂಜರಗಳನ್ನು ತಯಾರಿಸಲು ಬ್ರಿಟನ್ನಿನ ಸಂಘಟನೆಯು ಸಮಸ್ಯೆಯನ್ನೆದುರಿಸುತ್ತಿದೆ. ಏಕೆಂದರೆ ರಷ್ಯಾ ಮತ್ತು ಫ್ರಾನ್ಸ್‍ನಂತಹ ದೇಶಗಳು ಮಾನವನ ಮೂಳೆಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದ್ದು ಈಗ ಏಷ್ಯಾದಿಂದ ಮಾತ್ರ ಎಲುಬುಗಳನ್ನು ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ಏಷ್ಯಾ ಕೂಡ ಮಾನವನ ಮೂಳೆಗಳ ರಫ್ತನ್ನು ನಿಷೇಧಿಸಿದರೆ ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಪರಿಸ್ಥಿತಿಯನ್ನು ಎದುರಿಸಲು ಕೃತಕ ವಸ್ತುಗಳನ್ನು ಉಪಯೋಗಿಸಿ ಕೃತಕ ಮಾನವನ ಅಸ್ಥಿಪಂಜರಗಳನ್ನು ತಯಾರಿಸಬೇಕಿದೆ” ಎಂದಿತ್ತು.

ಈ ವರದಿಯು ಈಗಾಗಲೇ ಅರ್ಧ ಶತಮಾನವನ್ನು ದಾಟಿದೆ. ಮಾತ್ರವಲ್ಲ, ಈ ವ್ಯವಸ್ಥೆಯಲ್ಲಿ ಬೆಳವಣಿಗೆಗಳೂ ಕಂಡು ಬಂದಿವೆ. ಅರ್ಧ ಶತಮಾನದ ಹಿಂದೆಯೇ ಈ ಬೆಳವಣಿಗೆಗಳು ಆಗಿವೆ ಎಂದಾದ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನದ ಮುನ್ನಡೆಯಲ್ಲಿದ್ದುಕೊಂಡು ಇಂದೇಕೆ ಈ ಕಾರ್ಯಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ.
ಭವಿಷ್ಯದಲ್ಲಿ ಅಂಗಾಂಗ ದಾನಗಳ ಕುರಿತಾದ ವಿಚಾರಗಳು ಹೆಚ್ಚು ಸಂಕೀರ್ಣಗೊಳ್ಳಬಹುದಾಗಿದ್ದು ವಿದ್ವಾಂಸರು ಹೆಚ್ಚಿನ ಜ್ಞಾನವನ್ನು ಹೊಂದುವ ಹಾಗು ಸಂಶೋಧನೆಗಳನ್ನು ನಡೆಸುವುದು ಅತ್ಯಗತ್ಯವಾಗಿದೆ. ಇಂದು ವೈಜ್ಞಾನಿಕ ಬೆಳವಣಿಗೆಗಳಿಂದಾಗಿ ರಕ್ತ, ಅಂಗಾಶಯಗಳು, ಜೀವಕೋಶಗಳು, ಮೂಳೆ-ಮಜ್ಜೆ, ಚರ್ಮ, ಕಾರ್ಟಿಲೆಜ್, ರಕ್ತನಾಳ, ಕಣ್ಣು, ಯಕೃತ್ತು, ಶ್ವಾಸಕೋಶ ಮತ್ತು ಮೂತ್ರಪಿಂಡವನ್ನು ಕಸಿ ಮಾಡಲು ಸ್ಥಳಾಂತರಿಸಲು ಸಾಧ್ಯವಾಗಿದೆಯೆಂದಾದ ಮೇಲೆ ಭವಿಷ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಮಾಂಸ, ಮೂಳೆಗಳು ಸೇರಿದಂತೆ ದೇಹದ ಇತರ ಭಾಗಗಳನ್ನು ಬಳಸಲು ಸಾಧ್ಯವಾಗಬಹುದು.