ಅಂದು ಕಿಂಗ್ ಪಿನ್, ಇಂದು ದೋಷಮುಕ್ತೆ: ಇದು ಕೊಡ್ನಾನಿ ಮಾಯೆ

0
490

ಏ. ಕೆ. ಕುಕ್ಕಿಲ

ಗುಜರಾತ್ ನ ನರೋಡಾ ಪಾಟಿಯ ಹತ್ಯಾಕಾಂಡದ ಸಂದರ್ಭದಲ್ಲಿ ಪ್ರಭಾವಿ ಸಚಿವೆ ಮಾಯಾ ಕೊಡ್ನಾನಿ ಸ್ಥಳದಲ್ಲಿದ್ದು ಗಲಭೆಕೋರರಿಗೆ ನಿರ್ದೇಶನ ನೀಡಿದ್ದರು ಎಂದು 2007 ರಲ್ಲಿ ತೆಹೆಲ್ಕಾ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಬಾಬು ಭಜರಂಗಿ ಹೇಳಿಕೊಂಡಿದ್ದ. ಆ ವೀಡಿಯೋ ಆ ದಿನಗಳಲ್ಲಿ ಬಹಳ ಸುದ್ದಿ ಮಾಡಿತ್ತು. 2012 ರಲ್ಲಿ ಮಾಯಾ ಕೊಡ್ನಾನಿಗೆ 28 ವರ್ಷಗಳ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಯಾಗ್ನಿಕ್ ಅಂತೂ ಅದಕ್ಕೆ ಹಲವು ಕಾರಣಗಳನ್ನು ಕೊಟ್ಟಿದ್ದರು. ಅದರಲ್ಲಿ ಮುಖ್ಯವಾದುದು- ದೂರವಾಣಿ ದಾಖಲೆ. ಹತ್ಯಾಕಾಂಡ ನಡೆಯುವ ವೇಳೆ ಕೊಡ್ನಾನಿ ಸ್ಥಳದಲ್ಲಿದ್ದರು ಎಂಬುದಕ್ಕೆ 40 ನಿಮಿಷಗಳ ದೂರವಾಣಿ ದಾಖಲೆಯನ್ನು ಆಧಾರವಾಗಿ ಪರಿಗಣಿಸಿದ್ದರು. ಕೊಡ್ನಾನಿಯನ್ನು ಹತ್ಯಾಕಾಂಡದ ಕಿಂಗ್ ಪಿನ್ ( ಮುಖ್ಯ ರೂವಾರಿ) ಎಂದೂ ಕರೆದಿದ್ದರು. ಬಾಬು ಬಜರಂಗಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಡ್ನಾನಿಗೆ 28 ವರ್ಷ ಶಿಕ್ಷೆ ವಿಧಿಸಲು ಬಹುಶಃ ಗಲಭೆಯಲ್ಲಿ ಕೊಡ್ನಾನಿಯ ಪಾತ್ರ ಅಷ್ಟು ಪ್ರಬಲವಾಗಿ ಮನದಟ್ಟಾಗಿರುವುದೇ ಕಾರಣವೆನ್ನಬೇಕು. ಆದರೆ, 6 ವರ್ಷಗಳ ಬಳಿಕ ಇದೀಗ  ರಾಜಕಾರಣಿ ಕೊಡ್ನಾನಿ ಸಾಕ್ಷ್ಯಾಧಾರದ ಕೊರತೆಯಿಂದ ಬಿಡುಗಡೆಯಾಗುತ್ತಿದ್ದಾರೆ. ರಾಜಕಾರಣಿಯಲ್ಲದ ಬಾಬು ಜೈಲು ಸೇರುತ್ತಿದ್ದಾನೆ. ಇದರ ಜೊತೆಗೇ, ಮಕ್ಕಾ ಮಸೀದಿ ಸ್ಫೋಟ ಮತ್ತು ನ್ಯಾಯಾಧೀಶರಾದ ಲೋಯ ಪ್ರಕರಣದ ತೀರ್ಪನ್ನು ನೋಡುವಾಗ ಏನು ಹೇಳಬೇಕೆಂದೇ ತೋಚುತ್ತಿಲ್ಲ. ನ್ಯಾಯಾಂಗವನ್ನು ಗೌರವಿಸಬೇಕಲ್ಲವೇ? ಆದರೆ, ಆಗ UPA ಅಧಿಕಾರದಲ್ಲಿತ್ತು, ಈಗ NDA ಅಧಿಕಾರದಲ್ಲಿದೆ ಎನ್ನುವುದೇ ನಿಜ ಉತ್ತರವೂ ಆಗದಿರಲಿ ಎಂದಷ್ಟೇ ಆಶಿಸುವೆ.