ಅಂಬರೀಶ್ ಗೆ ಕಾಂಗ್ರೆಸ್ ಇನ್ನೂ ಏನೇನು ಕೊಡಬೇಕಿತ್ತು?

0
587

 

ಸಲೀಮ್ ಬೋಳಂಗಡಿ

ಮಾಜಿ ಸಚಿವ ಅಂಬರೀಶ್ ಅವರ ರಾಜಕಾರಣದ ಇತಿಹಾಸ ಬಲ್ಲವರಿಗೆ ಅವರು ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದು ಸಮಾಧಾನ ತಂದಿರಬಹುದು. ಪ್ರಬುದ್ಧ ರಾಜಕಾರಣಿಯಾಗಿ ಅವರು ಎಂದಿಗೂ ವರ್ತಿಸಿಲ್ಲ. ವಿಧಾನ ಸಭಾ ಕಲಾಪಕ್ಕೂ ಗೈರುಹಾಜರಾದವರಲ್ಲಿ ಅವರದ್ದು ಎತ್ತಿದ ಕೈ. ತನ್ನ ಕ್ಷೇತ್ರದ ಜನಸಾಮಾನ್ಯರೊಂದಿಗೆ ಬೆರೆಯಲೂ ಪ್ರಯತ್ನಿಸಿಲ್ಲ. ಭಾರೀ ಸಾಧನೆ ಮಾಡಬಹುದಾಗಿದ್ದ ವಸತಿ ಸಚಿವ ಹುದ್ದೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ತಮ್ಮ ಕೆಲ ಆಪ್ತರನ್ನು ಹೊರತು ಪಡಿಸಿ ಉಳಿದವರನ್ನು ಅವರು ದೂರ ಮಾಡಿಬಿಟ್ಟರು.
ಶಾಸಕರಾಗಿದ್ದ ಅಂಬರೀಶ್ ಆ ಕ್ಷೇತ್ರಕ್ಕೆ ಒಂದು ಕುಡಿಯುವ ನೀರಿನ ಘಟಕವನ್ನೂ ತರಲು ಸಾಧ್ಯವಾಗಿಲ್ಲ ಎಂದು ಅಂಬರೀಶ್ ವಿರುದ್ದ ಜೆ.ಡಿ.ಎಸ್. ಬದನೂರು ಜಿಲ್ಲಾಪಂಚಾಯತ್  ಸದಸ್ಯ ಯೋಗೀಶ್ ಆರೋಪಿಸಿದ್ದರು. ಬೇಜವಾಬ್ದಾರಿತನದ ವರ್ತನೆ, ಜನರ ಸಮಸ್ಯೆಗಳ ನಿರ್ಲಕ್ಷ್ಯ ಮತ್ತು ಕಲಾಪಕ್ಕೂ ಗೈರುಹಾಜರಿಯಾಗುತ್ತಿದ್ದ ಅಂಬರೀಶ್ ವಿರುದ್ದ ವಿಧಾನಸಭಾದ್ಯಕ್ಷರಿಗೆ ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್, ಗೌಡ ದೂರು ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದು. ಇಂತಹ ಹಿನ್ನೆಲೆ ಇರುವ ಅಂಬರೀಶ್ ರನ್ನು ಮುಖ್ಯಮಂತ್ರಿಗಳು ಸಂಪುಟದಿಂದ ಕಿತ್ತು ಹಾಕಿರುವುದರಲ್ಲಿ ತಪ್ಪೇನಿದೆ? ಅಷ್ಟಕ್ಕೇ ಗರಂ ಆದ ಅಂಬರೀಶ್ ಸರಕಾರದ ವಿರುದ್ದ ಅಸಹನೆ ಹೊಂದಿದ್ದರು. ಈ ಮಧ್ಯೆ ಚಿತ್ರ ನಟಿ ರಮ್ಯಾ ರಂಗ ಪ್ರವೇಶವಾದಂತೆ ಹತಾಶರಾದರು. ರಾಹುಲ್ ಗಾಂಧಿ ಮೇಲೆ ಪ್ರಭಾವ ಬೀರುವಷ್ಟು ರಮ್ಯಾರ ವರ್ಚಸ್ಸು ಬೆಳೆದಾಗಲಂತೂ ಕುಸಿದೇ ಹೋದರು. ಹತಾಶರಾಗಿ ಆ ಬಳಿಕ ಏನೆಲ್ಲಾ ಮಾಡಿಕೊಂಡರು. ಮಂಡ್ಯದ ರಾಜಕಾರಣ ಯಾವಾಗಲೂ ಗೋಜಲುಗಳಿಂದಲೇ ಕೂಡಿತ್ತು, ಬಣ ರಾಜಕೀಯ ಅಲ್ಲಿ ತೀವ್ರವಾಗಿತ್ತು. ಪರಸ್ಪರ ಕಾಲೆಳೆಯುವ, ಬೆಂಬಲಿಸುವ ಪ್ರಕ್ರಿಯೆ ಅಲ್ಲಿ ಜೋರಾಗಿ ಸುದ್ದಿ ಮಾಡಿತ್ತು.
ಅಂಬರೀಶ್ ಸದನದ ಕಲಾಪಗಳಿಗೆ ಗೈರುಹಾಜರಾದ ಕುರಿತು ವಿಧಾನ ಸಭಾಧ್ಯಕ್ಷರು ಅಂಬರೀಶ್ ರಲ್ಲಿ ಪ್ರಶ್ನಿಸಿದಾಗ ಅನಾರೋಗ್ಯದ ಕಾರಣ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಎಸ್ ಗೌಡ, ಹವಾ ನಿಯಂತ್ರಿತ ಕಾರಲ್ಲಿ ದಿನವೂ ಓಡಾಡುವಾಗ ಅನಾರೋಗ್ಯ ಕೈ ಕೊಡುವುದಿಲ್ಲವೇ ಎಂದು ಕಟಕಿಯಾಡಿದ್ದರು.  ಮೂರುಬಾರಿ ಈ ಕುರಿತು ದೂರು ನೀಡಿಯೂ ಸಭಾಧ್ಯಕ್ಷ ಕೋಳಿವಾಡ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ವಿಧಾನ ಸಭಾಧ್ಯಕ್ಷರು ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೂ ದೂರು ಸಲ್ಲಿಸಲಾಯಿತು.
ಈ ಮಧ್ಯೆ ಒಮ್ಮೆ ತೀವ್ರ ಅನಾರೋಗ್ಯ ಕಾಡಿ ಸಿಂಗಾಪುರದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅದಕ್ಕೆ ಕೃತಜ್ಞರಾಗುವ ಅವಕಾಶವನ್ನೂ ಅವರು ದುರುಪಯೋಗಪಡಿಸಿದರು. ಇದರ ವೆಚ್ಚವನ್ನು ಸರಕಾರವೇ ಭರಿಸಿತು. ಅಂದರೆ ಸುಮಾರು 1.16 ಕೋಟಿಯಷ್ಟು ವ್ಯಯಿಸಲಾಯಿತು. ಇದರಲ್ಲಿ ಅವರ ಅಪ್ತರ ವಿಮಾನ ಟಿಕೇಟುಗಳ ವೆಚ್ಚವೂ ಸೇರಿತ್ತು. ಇದರ ವಿರುದ್ಧ ಆರ್. ಟಿ.ಐ ಕಾರ್ಯಕರ್ತ ರವೀಂದ್ರ ರಂಗಕ್ಕಿಳಿದಿದ್ದರು. ಕಾನೂನು ಪ್ರಕಾರ ಓರ್ವ ಜನ ಪ್ರತಿನಿಧಿಗೆ ಐದು ಲಕ್ಷದಷ್ಟು ವೆಚ್ಚವನ್ನು ಮಾತ್ರ ಸರಕಾರ ಭರಿಸಬಹುದು. ವಿದೇಶದಲ್ಲಿ ಚಿಕಿತ್ಸೆ ಪಡೆದರೆ ಆತನ ಆರ್ಥಿಕ ಸ್ಥಿತಿಗತಿ ನೋಡಿ ಖರ್ಚು ಮಾಡಬಹುದು. ಆದರೆ ಅಂಬರೀಶ್ ಈ ಖರ್ಚುವೆಚ್ಚ ಭರಿಸದವರೇನಲ್ಲ. ಆದ್ದರಿಂದ ಈ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಿ ಬಡವರಿಗೆ ಹಂಚಬೇಕು ಎಂದು ರವೀಂದ್ರ ಹೇಳಿದ್ದರು.
ಹೀಗೆಲ್ಲಾ ಇರುವಾಗ ಅವರು ಸರಕಾರಕ್ಕೆ ಮುಜುಗರವುಂಟು ಮಾಡುವಂತಹ ವರ್ತನೆ ತೋರಿದು ಸರಿಯಲ್ಲ. ಸಚಿವ ಸ್ಥಾನ ನಿಭಾಯಿಸಲು ಆಗದಿದ್ದರೆ ರಾಜಿನಾಮೆ ನೀಡಿ ದೂರ ಇದ್ದರೆ ಅವರ ಗೌರವ ಇನ್ನೂ ಹೆಚ್ಚುತ್ತಿತ್ತು. ಅದು ದರ್ಪದ ವರ್ತನೆಯನ್ನೇ ತೋರಿದರು ಎನ್ನಬಹುದು. ಮಾತ್ರವಲ್ಲ ಮುಖ್ಯಮಂತ್ರಿ ಆಗುವ ಕನಸನ್ನೂ ಮನದಲ್ಲಿ ಹೊತ್ತು ಕೊಂಡಿದ್ದರು. ಮುಖ್ಯಮಂತ್ರಿಗಳು ಸಚಿವ ಸ್ಥಾನದಿಂದ ಕಿತ್ತುಹಾಕಿದಾಗ ಅವೆಲ್ಲವೂ ಟುಸ್ಸ್ ಆದದ್ದರಿಂದ ಅಂಬರೀಶ್ ಸಹಜವಾಗಿಯೇ ಗರಂ ಆಗಿದ್ದರು ಅಲ್ಲವೇ? ಈಗ ರಾಜಕಾರಣಕ್ಕೆ ನಿವ್ರತ್ತಿ ಘೋಷಿಸಿ ಜನರಿಂದ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಅಷ್ಟೇ? ಅವರಿಗೆ ಚಿತ್ರರಂಗವೇ ಸೂಕ್ತ ಹೊರತು ರಾಜಕಾರಣ ಒಗ್ಗದು. ಇದನ್ನು ಮಂಡ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು.