ಅನುದಾನ ತಾರತಮ್ಯ: ಕೇಂದ್ರದ ಯೋಗಿ ಪ್ರೀತಿ ಮತ್ತು ಕರ್ನಾಟಕ ವಿರೋಧವನ್ನು ತೆರೆದಿಟ್ಟ ಸಿದ್ದರಾಮಯ್ಯ

0
653

ಸಲೀಮ್ ಬೋಳಂಗಡಿ
ಉತ್ತರ ಮತ್ತು ದಕ್ಷಿಣದ ರಾಜ್ಯಗಳ ನಡುವೆ ಅನುದಾನ ಹಂಚಿಕೆಯಲ್ಲಿ ಕೇಂದ್ರವು ತಾರತಮ್ಯನೀತಿ ಅನುಸರಿಸುತ್ತಿದೆಯೆಂಬ ಆರೋಪದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ರಂಗಕ್ಕಿಳಿದಿದ್ದಾರೆ. ಅನುದಾನ ಹಂಚಿಕೆಗೆ ಕೇಂದ್ರ ಅನುಸರಿಸುತ್ತಿರುವ ಮಾನದಂಡಗಳನ್ನು ಮರು ಪರಿಶೀಲಿಸಲು ಆಗ್ರಹಿಸಿದ್ದಾರೆ. ದಕ್ಷಿಣದ ಆರು ರಾಜ್ಯಗಳು ತೆರಿಗೆ ರೂಪದಲ್ಲಿ ಹೆಚ್ಚಿನದ್ದನ್ನು ಕೊಟ್ಟರೂ ಅವುಗಳಿಗೆ ಅನುದಾನವು ಬಹಳ ಕಡಿಮೆ ಮಟ್ಟದಲ್ಲಿ ದೊರಕುತ್ತಿವೆ. ಉತ್ತರ ಪ್ರದೇಶವು ತಾನು ನೀಡಿದ ಒಂದು ರೂಪಾಯಿಗೆ ಪ್ರತಿಯಾಗಿ 1.79 ರೂಪಾಯಿ ಅನುದಾನ ಪಡೆಯುತ್ತಿದೆ, ಆದರೆ ಕರ್ನಾಟಕ ತಾನು ನೀಡಿ ಒಂದು ರೂಪಾಯಿಗೆ ಪ್ರತಿಯಾಗಿ ಕೇವಲ 0,47 ರೂಪಾಯಿ ಅನುದಾನ ಪಡೆಯುತ್ತಿದೆ. ರಾಜ್ಯದಿಂದ ಕೇಂದ್ರಕ್ಕೆ ಶೇಕಡಾ 9.47ರಷ್ಟು ತೆರಿಗೆ ಸಂದಾಯವಾಗುತ್ತಿದೆ. ರಾಜ್ಯಕ್ಕೆ ಸಿಗುವ ಅನುದಾನ ಶೇಕಡಾ4.6ರಷ್ಟಿದೆ. ಜನಸಂಖ್ಯೆಯ ಆಧಾರದಲ್ಲಿ 1971ರ ಸರ್ವೆಯನುಸಾರ ಈ ಹಂಚಿಕೆ ನಡೆಸಲಾಗುತ್ತಿತ್ತು. ಈಗ 2011ರ ಸೆನ್ಸಸ್ ಪ್ರಕಾರ ಅನುದಾನ ಹಂಚಲು ಪ್ರದಾನಿಗಳು ಆದೇಶಿಸಿರುವಾಗ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನ ಉತ್ತರದ ರಾಜ್ಯಗಳ ಪಾಲಾಗುವ ಸಾಧ್ಯತೆಯಿದೆ. ಆಗ ದಕ್ಷಿಣದ ರಾಜ್ಯಗಳಿಗೆ ಸಿಗುವ ಅನುದಾನಗಳಲ್ಲಿ ಇನ್ನೂ ಕೊರತೆಯಾಗಲಿದೆ. ಮಾತ್ರವಲ್ಲ ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆಯುವ ಸೌಲಭ್ಯವನ್ನು ಕಡಿತಗೊಳಿಸುವ ಸಿದ್ದತೆಯಲ್ಲಿ ಕೇಂದ್ರ  ತೊಡಗಿಸಿ ಕೊಂಡಿರುವ ವಿಚಾರಗಳೂ ಕೇಳಿಬರುತ್ತಿವೆ. ಆದ್ದರಿಂದ ದಕ್ಷಿಣದ ರಾಜ್ಯಗಳ ಮೇಲಿನ ಮಲತಾಯಿ ಧೋರಣೆಯಿಂದ ಕೇಂದ್ರವು ಹೊರಬರಬೇಕು.

ಇದರ ವಿರುದ್ದ ಈಗಾಗಲೇ ತಮಿಳುನಾಡಿನ ಸ್ಟಾಲಿನ್ ಮತ್ತು ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ರ೦ಗಕ್ಕಿಳಿದಿದ್ದಾರೆ.  ಸ್ಟಾಲಿನ್ ಬಿಜೆಪಿಯೇತರ ಹತ್ತು ರಾಜ್ಯಗಳ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿರುವುದನ್ನು ಸ್ಮರಿಸಬಹುದು. ಈ ಕುರಿತು 15ನೇ ಹಣಕಾಸು ಆಯೋಗ ಸಲ್ಲಿಸಿದ ಸಂಗತಿಗಳ ಬಗ್ಗೆ ಚರ್ಚಿಸಲು ಕೇರಳ ಸರಕಾರವು ಎಪ್ರಿಲ್ ಹತ್ತರಂದು ದಕ್ಷಿಣ ರಾಜ್ಯಗಳ ಹಣಕಾಸು ಸಚಿವರುಗಳ ಸಭೆ ಕರೆದಿರುವುದು ಕೂಡಾ ಸಿದ್ದರಾಮಯ್ಯರ ಪ್ರತಿಪಾದನೆಗೆ ಆನೆ ಬಲ ಬಂದಂತಾಗಿದೆ. ಚುನಾವಣೆ ಆಸನ್ನವಾಗಿರುವ ಈ ಸಮಯದಲ್ಲಿ ಈ ವಿಚಾರವನ್ನು ಸಿದ್ದರಾಮಯ್ಯರವರು ಪ್ರಸ್ತಾಪಿಸಿದ್ದು ಚಾಣಾಕ್ಷ ನಡೆಯಾಗಿದೆ. ಕೇಂದ್ರದಿಂದ ಅದು ಕೊಟ್ಟಿದ್ದೇವೆ ಇದು ಕೊಟ್ಟಿದ್ದೇವೆ ಎಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ನಾಯಕರು ಬಿಡುವ ರೈಲುಗಳಿಗೆ ಇದು ತಡೆಯಾಗಬಹುದು.ಈಗಾಗಲೇ ರಾಜ್ಯ ಸರಕಾರದ ಯೋಜನೆಗಳಲ್ಲಿ ಮೂಗು ತೂರಿಸುವ ಪ್ರಯತ್ನಗಳು ಬಿಜೆಪಿ ಕಡೆಯಿಂದಾಗಿದೆ. ಆದ್ದರಿಂದ ವಾಸ್ತವ ಜನರಿಗೆ ತಲುಪಿಸಬೇಕಾದ ಅಗತ್ಯವಿದೆ.