ಅಪ್ರಾಪ್ತರಲ್ಲಿ ಹಿಂಸಾ ಪ್ರವೃತ್ತಿ..

0
926

ಅಪ್ರಾಪ್ತರಲ್ಲಿ ಹಿಂಸಾ ಪ್ರವೃತ್ತಿ.. 

ಎರಡು ತಿಂಗಳ ಹಿಂದೆ ಹರ್ಯಾಣದ ಗುರ್ಗಾಂವ್‍ನ ಪ್ರತಿಷ್ಠಿತ ರಯಾನ್ ಇಂಟರ್‍ನ್ಯಾಶ ನಲ್ ಸ್ಕೂಲ್‍ನ ಶೌಚಾಲಯದಲ್ಲಿ 2ನೇ ತರಗತಿಯ ವಿದ್ಯಾರ್ಥಿ ಪ್ರದ್ಯುಮ್ನ ಎಂಬ ಬಾಲಕನ ಶವ ಪತ್ತೆಯಾಗಿತ್ತು. ವಿದ್ಯಾರ್ಥಿಯ ಕತ್ತು ಸೀಳಿ ಕೊಲ್ಲ ಲಾಗಿತ್ತು. ಕತ್ತಿಯು ಶೌಚಾಲಯದ ಆವರಣದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಈ ವಿದ್ಯಾರ್ಥಿಯನ್ನು ಅದೇ ಶಾಲೆಯ ಬಸ್ ನಿರ್ವಾಹಕ ಅಶೋಕ್ ಕುಮಾರ್ ಎಂಬಾತ ಲೈಂಗಿಕ ಕಿರುಕುಳ ನೀಡಿ ಹತ್ಯೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದರು. ಮಾತ್ರವಲ್ಲ, ಆತ ತಪ್ಪೊಪ್ಪಿಕೊಂಡಿದ್ದಾನೆಂದೂ ಹೇಳಿಕೊಂಡಿದ್ದರು. ಆದರೆ ಪ್ರದ್ಯುಮ್ನನ ಹೆತ್ತವರು ಇದನ್ನು ಒಪ್ಪಲು ಸಿದ್ಧರಿರಲಿಲ್ಲ. ಇದೆಲ್ಲಾ ಪೊಲೀಸರ ಕಟ್ಟು ಕತೆಯೆಂದು ಹೇಳಿ ತನಿಖೆಯ ಬಗ್ಗೆ ಅಸಂತೃಪ್ತಿ ಪ್ರಕಟಿಸಿದ್ದರು. ಆದರೆ ಸಿಬಿಐ ವಿಚಾ ರಣೆಯ ಬಳಿಕ ಅದೇ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದಿದ್ದ 11ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯನ್ನು ಮತ್ತು ಶಿಕ್ಷಕ ಪೊಷಕರ ಸಭೆಯನ್ನು ಮುಂದೂಡಿಸಬೇಕೆಂಬ ಕಾರಣಕ್ಕೆ ಹತ್ಯೆ ಮಾಡಿದ್ದಾನೆಂಬ ವಿಚಾರ ಬೆಳಕಿಗೆ ಬಂದು ಪ್ರಕರಣ ಹೊಸ ತಿರುವು ಪಡೆದಿದೆ.
ತಮ್ಮ ಮಗನನ್ನು ಈ ಅಶೋಕ್ ಕುಮಾರ್ ಶಾಲೆಗೆ ಆ ಬಸ್‍ನಲ್ಲಿ ಕರೆದುಕೊಂಡು ಹೋಗದಿರು ವಾಗ, ಆತನ ಪರಿಚಯವೂ ಇಲ್ಲದಿರುವಾಗ ಆತ ಹೇಗೆ ಹತ್ಯೆ ಮಾಡಿದ ಎಂಬ ಸಂಶಯವನ್ನು ಪ್ರದ್ಯುಮ್ನನ ಹೆತ್ತವರು ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸಿಬಿಐ ಹೇಳಿದ ಈ ವಿಚಾರಗಳು ಸರಿಯೆಂದಾದಲ್ಲಿ ಇದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದೆ. 16 ವರ್ಷದ ವಿದ್ಯಾರ್ಥಿ ಬಾಲಾಪರಾಧಿಯಾಗಿ ಸ್ವಲ್ಪ ಮಟ್ಟಿನ ಶಿಕ್ಷೆ ಪಡೆಯಬಹುದು. ಆದರೆ ಇದು ಬಹಳ ಗಂಭೀರ ವಿಚಾರವಾಗಿದೆ. ನಿರ್ಭಯಾ ಪ್ರಕರಣದಲ್ಲಿಯೂ ನಾವು ಈ ಹದಿ ಹರೆಯದ ಬಾಲಕನೊಬ್ಬ ಅಪರಾಧಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಕಲಿಕೆಯಲ್ಲಿ ಹಿಂದುಳಿದಿದ್ದ ಈ ಬಾಲಕ ಪರೀಕ್ಷೆಗಾಗಿ ಓದಿ ತಲೆ ಕೆಡಿಸಬೇಕಾ ಗಿಲ್ಲ. ಪರೀಕ್ಷೆ ಖಂಡಿತ ಮುಂದೂಡಲ್ಪಡುತ್ತದೆ ಎಂದು ತನ್ನ ಸಹಪಾಠಿಗಳೊಂದಿಗೆ ಹೇಳಿಕೊಂಡಿದ್ದ ಎಂಬುದೂ ತಿಳಿದುಬಂದಿದೆ. ಸಿಸಿಟಿವಿ ಪರಿಶೀಲ ನೆಯ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ. ಈತನನ್ನು ಅಪ್ರಾಪ್ತ ಬಾಲಕ ಎಂದು ಪರಿಗಣಿಸಿದರೆ ಕೇವಲ 6 ತಿಂಗಳ ಸೆರೆವಾಸ ಅನುಭವಿಸಿ ಬಿಡು ಗಡೆಯಾಗುತ್ತಾನೆ. ಆದರೆ ಇತ್ತೀಚಿನ ಬಾಲನ್ಯಾಯ ಮಂಡಳಿಯ ತೀರ್ಪಿನ ಅನುಸಾರ ಈತನನ್ನು ವಯಸ್ಕ ಎಂದು ಪರಿಗಣಿಸಿ ವಿಚಾರಣೆ ನಡೆಸ ಬೇಕೇ ಎಂಬುದನ್ನು ನ್ಯಾಯಾಲಯ ತೀರ್ಮಾನಿಸ ಲಿದೆ. ನಿಜವಾಗಿ, ಇಲ್ಲಿ 16ರಿಂದ 18ರ ವಯಸ್ಸಿನವರನ್ನು ಕೂಡಾ ಪ್ರಾಪ್ತರಂತೆ ಅಪರಾಧಿಗಳ ಸಾಲಿಗೆ ಸೇರಿಸಿ ವಿಚಾರಣೆ ನಡೆಸುವುದು ಸೂಕ್ತ. ಅಂತಹ ಕಾನೂನು ಅಸ್ತಿತ್ವಕ್ಕೆ ಬರಬೇಕಾದ ಅಗತ್ಯವಿದೆ. ಆದರೆ ಗುರ್ಗಾಂವ್‍ನ ಪೊಲೀಸರು ಈ ಹತ್ಯಾ ಪ್ರಕರಣದಲ್ಲಿ ವಹಿಸಿದ ಪಾತ್ರ ಮಾತ್ರ ಅಕ್ಷಮ್ಯವಾದದ್ದು. ಯಾಕೆಂದರೆ, ಅಪರಾಧಿ ಸಿಗದೇ ಇದ್ದಾಗ ಸಿಕ್ಕಿದವನನ್ನು ಅಪರಾಧಿಯನ್ನಾಗಿಸುವ ಪ್ರವೀಣತೆಯ ವಿರುದ್ಧ ಶಿಕ್ಷೆಯಾಗಲೇಬೇಕು.

ಓರ್ವ ನಿರಪರಾಧಿಯ ಮೇಲೆ ವಿನಾ ಕಾರಣ ಹತ್ಯಾ ಆರೋಪವನ್ನು ಹೊರಿಸಿ ತಿಪ್ಪೆ ಸಾರಿಸಲು ನೋಡಿದ ಪೊಲೀಸರ ಮೇಲೆ ಸರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಅಮಾಯಕ ಬಸ್ ನಿರ್ವಾಹಕ ತನ್ನ ಅಮೂಲ್ಯ ಜೀವನವನ್ನು ಜೈಲಿನಲ್ಲಿ ಕೊಳೆಯಿಸಬೇಕಾಯಿತು. ಇಂತಹ ಹತ್ತು ಹಲವು ಘಟನೆಗಳು ಈ ದೇಶದಲ್ಲಿ ನಡೆದಿವೆ. ಆದರೆ ಆಗೊಮ್ಮೆ ಈಗೊಮ್ಮೆ ಅದು ಹೊರಗೆ ಬರುತ್ತಿವೆ ಅಷ್ಟೇ. ಯಾರದ್ದೋ ರಕ್ಷಣೆಗೋಸ್ಕರ ಯಾರದ್ದೋ ಎಂಜಲು ಕಾಸಿಗೆ ಅಮಾ ಯಕ ಯುವಕರ ಜೀವನದ ಜೊತೆ ಚೆಲ್ಲಾಟವಾಡುವ ಇಂತಹ ಪೊಲೀಸರಿಂದಲೇ ಇಂದು ಪೊಲೀಸ್ ಇಲಾಖೆಗೆ ಕಳಂಕ ತಟ್ಟಿದೆ. ಅರುಷಿ ಕೊಲೆ ಪ್ರಕರಣದಲ್ಲಿಯೂ, ಪ್ರದ್ಯುಮ್ನ ಕೊಲೆ ಪ್ರಕರಣದಲ್ಲಿಯೂ ಆರಂಭದಲ್ಲಿ ಆರೋಪ ಹೊರಿಸಲಾಗಿದ್ದು ಬಡ ಜನಸಾಮಾನ್ಯರ ಮೇಲೆ ಎಂಬುದು ಕೂಡಾ ಗಮನಾರ್ಹ. ಕೊನೆಗೆ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು ಆರೋಪಿ ಪಟ್ಟಿಗೆ ಸೇರಿದ್ದಾರೆ. 1998ರಲ್ಲಿ 18ನೇ ವಯಸ್ಸಿನಲ್ಲಿ ಬಂಧಿತನಾದ ಅಮೀರ್ ಎಂಬ ನಿರಪರಾಧಿ ಅನ್ಯಾಯವಾಗಿ 14 ವರ್ಷ ಸೆರೆವಾಸ ಅನುಭವಿಸಿದ್ದು ಕೂಡಾ ಈಗಲೂ ಹಚ್ಚಹಸಿರಾಗಿದೆ.
ಪ್ರಕರಣಗಳು ಒಂದರ ನಂತರ ಮತ್ತೊಂದನ್ನು ಬೆಳೆಯುತ್ತಲೇ ಇವೆ. ಕೊನೆಗೆ ಎಲ್ಲ ಕೇಸುಗಳು ಸಾಕ್ಷ್ಯಾಧಾರ ವಿಲ್ಲದೆ ದುರ್ಬಲತೆಯನ್ನು ಕಂಡು ನ್ಯಾಯಾಲಯ ಬಿಡುಗಡೆ ಮಾಡುತ್ತದೆ. ಆ ಬಿಡುಗಡೆಯಾಗುವಾಗ ಅವನ ಅಮೂಲ್ಯವಾದ ಯೌವನವು ಅನ್ಯಾಯ ವಾಗಿ ಹರಣವಾಗುತ್ತಿದೆ. ದೆಹಲಿಯ ನಿಸಾರುದ್ದೀನ್ ಅಹ್ಮದ್ 23 ವರ್ಷಗಳ ಕಾಲ ಜೈಲುವಾಸ ಕಳೆದು ಬಳಿಕ ನಿರಪರಾಧಿಯಾಗಿ ಹೊರ ಬರುವಾಗ ಕುಟುಂಬವು ಶಿಥಿಲಗೊಂಡಿರುತ್ತದೆ. ಇಂತಹ ಅದೆಷ್ಟೋ ಘಟನೆಗಳು ನಮ್ಮ ದೇಶದಲ್ಲಿ ನಡೆದ ಉದಾಹರಣೆಗಳಿವೆ. ಆದ್ದರಿಂದ ಹೀಗೆ ನಿರಪರಾಧಿಯಾಗಿ ನ್ಯಾಯಾಲಯದಿಂದ ಹೊರಬಂದ ಬಳಿಕ ಅಂತಹವರಿಗೆ ಸರಕಾರ ನೆರವು ನೀಡಬೇಕಾದ ಅಗತ್ಯವಿದೆ. ಯಾವುದೇ ನಿರಪರಾಧಿಗೆ ಅನ್ಯಾಯವಾಗಿ ಶಿಕ್ಷೆಯಾಗ ಬಾರದು ಎಂಬ ಪ್ರಾಮಾಣಿಕ ಗುರಿ ಮೊದಲು ಪೊಲೀಸರಲ್ಲಿರಬೇಕು. 
ಅಪ್ರಾಪ್ತ ಬಾಲಕರಲ್ಲಿ ಹಿಂಸಾ ಪ್ರವೃತ್ತಿ ಬೆಳೆದು ಬರುತ್ತಿರುವುದು ಕೂಡಾ ಅಪಾಯಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಸೂಕ್ತ ಕಾರಣಗಳನ್ನು ನಾವು ಹುಡುಕಬೇಕು. ಸಿನಿಮಾಗಳು, ಧಾರಾ ವಾಹಿಗಳ ಪಾತ್ರ ಕೂಡಾ ಇದರಲ್ಲಿ ಇಲ್ಲ ಎನ್ನುವಂತಿಲ್ಲ. ಮೊಬೈಲ್ ಬಳಕೆಯ ವಿರುದ್ಧ ಮಕ್ಕಳ ಬಗ್ಗೆ ಕಟ್ಟುನಿಟ್ಟಿನ ಕಾನೂನು ಅನಿವಾರ್ಯ ವೆಂಬಷ್ಟರ ಮಟ್ಟಿಗೆ ಅಪರಾಧಿ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕಕಾರಿ. ಹಿಂಸೆ, ಕೊಲೆ, ಲೈಂಗಿಕ ಕಿರುಕುಳ ಮುಂತಾದು ವುಗಳು ಒಂದು ಹವ್ಯಾಸೀ ಮೋಜಿನ ಆಟದ ಮನೋಭಾವವಾಗಿ ಪ್ರಸಕ್ತ ಮಕ್ಕಳ ಪೀಳಿಗೆಯಲ್ಲಿ ಬೆಳೆದು ಬರದಂತೆ ತಡೆಯಬೇಕಾದ ಅನಿವಾರ್ಯತೆಯಿದೆ ಎಂಬುದನ್ನು ಮರುಕಳಿಸುತ್ತಿರುವ ಇಂತಹ ಘಟನೆಗಳು ನಮ್ಮ ಚಿಂತನೆಗೆ ಹೆಚ್ಚು ಗ್ರಾಸ ಒದಗಿಸುತ್ತದೆ.

@ ಸಲೀಮ್ ಬೋಳಂಗಡಿ