ಅವಿವೇಕವೋ ಅಹಂಕಾರವೋ?

0
382

ಜೆರುಸಲೇಮ್‍ನಲ್ಲಿ ಅಮೆರಿಕದ ರಾಯಭಾರ ಕಚೇರಿ

ಅವಿವೇಕಿಗಳಿಗೆ ಅಧಿಕಾರ ನೀಡಿದರೆ ಅವಾಂತರಗಳಿಗೆ ಕಾರಣವಾಗುತ್ತಿದೆಯೆಂಬುದಕ್ಕೆ ಇತ್ತೀಚೆಗೆ ಜೆರೂಸಲೇಮ್ ನಗರವನ್ನು ಇಸ್ರೇಲಿನ ರಾಜಧಾನಿಯಾಗಿ ಘೋಷಿಸಿದ ಡೊನಾಲ್ಡ್ ಟ್ರಂಪ್‍ರ ನಿರ್ಧಾರವನ್ನೇ ಉದಾಹರಿಸಬಹುದು. ಅವರ ಈ ಅವಿವೇಕತನಕ್ಕೆಕಿಡಿಗೇಡಿ ಇಸ್ರೇಲ್ ಹೊರತುಪಡಿಸಿ ಮಿಕ್ಕೆಲ್ಲ ರಾಷ್ಟ್ರಗಳು ಅಸಹನೆ ವ್ಯಕ್ತಪಡಿಸಿದೆ. ಅಷ್ಟು ಮಾತ್ರವಲ್ಲ, ಚಿಕಾಗೋದ ಸಾವಿರಾರು ಜನರು ಕೂಡಾ ಬೀದಿಗಿಳಿದು ತಮ್ಮ ಅಧ್ಯಕ್ಷರ ಪಕ್ಷಪಾತಿ ನಿಲು ವನ್ನು ಖಂಡಿಸಿದರು. ಈ ನಿಲುವು ವಿಶ್ವದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಮಾತ್ರವಲ್ಲ, ಅನೇಕ ಪ್ರತ್ಯಾಘಾತಗಳಿಗೆ ಖಂಡಿತ ಹೇತುವಾಗುತ್ತದೆ. ವಿಶ್ವಶಾಂತಿಗೆ ಮಾರಕವೆನಿಸಿರುವ ಈ ಅನ್ಯಾಯದ ತೀರ್ಮಾನವನ್ನು ಅಮೆರಿಕದೊಂದಿಗೆ ಮಿತೃತ್ವ ಹೊಂದಿರುವ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆ ಖಂಡಿಸಿದೆ. ಫ್ರಾನ್ಸ್‍ನ ಅಧ್ಯಕ್ಷರು, ವಿಶ್ವಸಂಸ್ಥೆಯ ಕಾರ್ಯದರ್ಶಿ, ಜರ್ಮನ್ ಚಾನ್ಸ್‍ಲರ್, ಬ್ರಿಟನ್ ಪ್ರಧಾನಿ, ಜೋರ್ಡಾನಿನ ದೊರೆ, ಇರಾನ್ ವಿದೇಶಾಂಗ ಕಾರ್ಯದರ್ಶಿ, ಅರಬ್ ಲೀಗ್‍ನ ವಕ್ತಾರ, ಸೌದಿ ದೊರೆ, ಈಜಿಪ್ಟ್, ಟರ್ಕಿಯ ಅಧ್ಯಕ್ಷರೆಲ್ಲರೂ ಈ ಮೂರ್ಖ ನಿರ್ಧಾರವನ್ನು ವಿಮರ್ಶಿಸಿದ್ದಾರೆ. ಹಮಾಸ್‍ನ ನೇತಾರ ಇಸ್ಮಾಈಲ್ ಹನಿಯ್ಯ, ಇದು ಫೆಲೆಸ್ತೀನ್ ವಿರುದ್ಧದ ಯುದ್ಧ ಘೋಷಣೆಯಾಗಿದ್ದು, ಮೂರನೇ ಇಂತಿಫಾದಕ್ಕೆ ರಂಗಕ್ಕಿಳಿಯಲು ಆಹ್ವಾನವಿತ್ತಿದ್ದಾರೆ. ಫೆಲೆಸ್ತೀನಿ ಶಾಂತಿ ಮಾತುಕತೆಯನ್ನು ಅಪಹಾಸ್ಯ ಮಾಡುವ ಈ ನಿರ್ಧಾರವು ವಿಶ್ವವನ್ನು ಯುದ್ಧದಂಚಿಗೆ ತಳ್ಳಿದೆ.


ಇಷ್ಟಕ್ಕೂ, ಈ ತೀರ್ಮಾನವು ಅನ್ಯಾಯದ್ದೆಂದು ಸಾರಲು ನಾವು ಫೆಲೆಸ್ತೀನಿನ ಇತಿಹಾಸವನ್ನು ಅಧ್ಯಯನ ಮಾಡಲೇಬೇಕು. ಬ್ರಿಟನ್ ವ¸ ಸಹತುಶಾಹಿಗಳ ನಿಗೂಢ ತಂತ್ರದ ಫಲವಾಗಿ 1948ರಲ್ಲಿ ಇಸ್ರೇಲ್ ಎಂಬ ದೇಶ ಅಸ್ತಿತ್ವಕ್ಕೆ ಬಂತು. ಅದಕ್ಕಿಂತ ಒಂದು ವರ್ಷ ಮುಂಚೆ ವ¸ ಸಹತುಶಾಹಿಗಳು ಫೆಲೆಸ್ತೀನನ್ನು ಯಹೂದಿಗಳಿಗೂ, ಫೆಲೆಸ್ತೀನಿಯರಿಗೂ ಹಂಚುವ ಒಂದು ನಕಾಶೆ ತಯಾರಿಸಿದ್ದರು. ಆ ಪ್ರಕಾರ 55% ¨ ಭೂಭಾಗ ಯಹೂದಿಗಳಿಗೂ 45% ಭೂಭಾಗ ಫೆಲೆಸ್ತೀನಿಯರಿಗೂ ಹಂಚಲಾಗಿತ್ತು. ಯಹೂದಿ ಗಳಿಗೂ ಕ್ರೈಸ್ತರಿಗೂ ಮುಸ್ಲಿಮರಿಗೂ ಪವಿತ್ರ ಸ್ಥಳವಾಗಿರುವ ಜೆರೂಸಲೇಮ್ ಶತಮಾನಗಳಿಂದಲೂ ಫೆಲೆಸ್ತೀನಿನ ಭಾಗವಾಗಿಯೇ ಇತ್ತು. ಮೂರೂ ಧರ್ಮಗಳ ಪವಿತ್ರ ಸ್ಥಳವಾಗಿರುವ ಜೆರೂಸಲೇಮ್ ವಿವಾದಾತ್ಮಕವಾಗಿರಬಾರದೆಂಬ ಉದ್ದೇಶದಿಂದ ವಿಶ್ವಸಂಸ್ಥೆಯ ಅಧೀನದಲ್ಲಿ ವಿಶ್ವ ಅಂತಾರಾಷ್ಟ್ರೀಯ ಒಕ್ಕೂಟದ ಭಾಗವಾಗಿರಬೇಕೆಂದು ವಿಶ್ವಸಂಸ್ಥೆ ತೀರ್ಮಾನಿಸಿತ್ತು. ಆದರೆ 1948ರಲ್ಲಿ ರಾಷ್ಟ್ರ ಘೋಷಣೆಯಾದ ಬಳಿಕ ನಡೆದ ಅರಬ್ ಇಸ್ರೇಲ್ ಯುದ್ಧದಲ್ಲಿ ಜೆರೂಸಲೇಮ್ ಸಹಿತ 78% ಭೂಭಾಗವನ್ನು ಇಸ್ರೇಲ್ ವಶಪಡಿಸಿತು. ಫೆಲೆಸ್ತೀನಿಗೆ ಕೇವಲ ಪಶ್ಚಿಮ ದಂಡೆ, ಗಾಝಾ ಮತ್ತು ಪೂರ್ವ ಜೇರೂಸಲೇಮ್ ಮಾತ್ರ ಉಳಿಯಿತು. ಇದರ ನಿಯಂತ್ರಣ ಜೋರ್ಡಾನ್ ಮತ್ತು ಈಜಿಪ್ಟ್‍ನ ಅಧೀನದಲ್ಲಿತ್ತು. 1967ರಲ್ಲಿ ನಡೆದ ಅರಬ್, ಇಸ್ರೇಲ್ ಯುದ್ಧದಲ್ಲಿ ಪಶ್ಚಿಮ ದಂಡೆ ಅದರ ಭಾಗವಾದ ಪೂರ್ವ ಜೆರೂಸಲೇಮನ್ನು ಜೋರ್ಡಾನ್‍ನಿಂದ ಇಸ್ರೇಲ್ ವಶಪಡಿಸಿತು. ಕಳೆದ ಐವತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ವಸಾಹತುಶಾಹಿತ್ವವನ್ನು ಮುಸ್ಲಿಮ್ ರಾಷ್ಟ್ರಗಳು ಮಾತ್ರವಲ್ಲ, ವಿಶ್ವಸಂಸ್ಥೆಯೂ ಅಂಗೀಕರಿಸಲಿಲ್ಲ.

ಈ ವಸಾಹತು ಶಾಹಿಗಳು ಜೆರೂಸಲೇಮ್ ಬಿಟ್ಟು ತೆರಳಬೇಕೆಂದು 1967ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ನಿ ರ್ಣಯಿಸಿದ 242ನೇ ಪರಿ ಚ್ಛೇದವನ್ನು ಇಸ್ರೇಲ್ ಪಾಲಿಸಲಿಲ್ಲ. ಮಾತ್ರವಲ್ಲ, ಮುಸ್ಲಿಮ್ ರಾಷ್ಟ್ರದ ವಿರೋಧಗಳನ್ನು ಲೆಕ್ಕಿಸದೆ ಜೆರೂಸಲೇಮನ್ನು 1980ರಲ್ಲಿ ರಾಜಧಾನಿಯಾಗಿ ಇಸ್ರೇಲ್ ಘೋಷಿಸಿತು. ಈ ಘೋಷಣೆಯು ವಿಶ್ವಸಂಸ್ಥೆಯ 478ನೇ ಪರಿಚ್ಛೇದದ ಸ್ಪಷ್ಟ ಉಲ್ಲಂಘನೆಯೆಂದು ವಿಶ್ವಸಂಸ್ಥೆ ಘೋಷಿಸಿತು. ಆದರೆ ಇಸ್ರೇಲ್ ಅದಕ್ಕೆ ಸೊಪ್ಪು ಹಾಕದೆ ತನ್ನ ದಾಷ್ಟ್ರ್ಯತನ ಪ್ರದರ್ಶಿಸಿತು. ಇಸ್ರೇಲಿನ ಅಧಿಕಾರದ ಕೇಂದ್ರಗಳು ಒಂದೊಂದಾಗಿ ಸ್ಥಳಾಂತರಗೊಳ್ಳತೊಡಗಿತು. ಪ್ರಧಾನಿ, ಅಧ್ಯಕ್ಷರ ಭವನ ಸನೆಟ್ (ಪಾರ್ಲಿಮೆಂಟ್) ಅನ್ನು ಜೆರೂಸಲೇಮ್‍ನಲ್ಲಿ ನಿರ್ಮಿಸಲಾಯಿತು. ಪೂರ್ವ ಜೆರೂಸಲೇಮನ್ನು ರಾಜಧಾನಿಯನ್ನಾಗಿ ಸುವ ಫೆಲೆಸ್ತೀನಿಯರ ಕನಸಿಗೆ ಈ ರೀತಿ ಇಸ್ರೇಲ್ ಕಲ್ಲು ಹಾಕಿತು. ಯಹೂದಿಗಳ ಈ ಬೆಳವಣಿಗೆಯ ಹಿಂದೆ ಅಮೇರಿಕದ ಕರಾಳ ಹಸ್ತವಿತ್ತು. ಅದು ಈಗ ಬಹಿ ರಂಗವಾಗಿದೆ ಅಷ್ಟೇ. 1995ರಲ್ಲಿಯೇ ಇಸ್ರೇಲ್‍ನ ಇಂಗಿತದನುಸಾರ ಟೆಲ್ ಅವೀವ್‍ನಿಂದ ಜೆರೂಸಲೇಮ್‍ಗೆ ರಾಯಭಾರ ಕಚೇರಿಯನ್ನು ಬದಲಾಯಿಸುವ ಪ್ರಸ್ತಾಪವು ಅಮೇರಿಕದ ಕಾಂಗ್ರೆಸ್ ಅಂಗೀಕರಿಸಿತ್ತು. ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವೆಂದು ಬಗೆದು ಬಿಲ್ ಕ್ಲಿಂಟನ್ ತನ್ನ ಅಧಿಕಾರ ಪ್ರಯೋಗಿಸಿ ತಡೆದಿ ದ್ದರು. ಬಳಿಕ ವಿಶ್ವದ ಪ್ರತಿಭಟನೆಗೆ ಹೆದರಿ ಒಬಾಮ ಕೂಡಾ ಈ ಅವಿವೇಕತನಕ್ಕೆ ಕೈ ಹಾಕಲಿಲ್ಲ. ಈಗಾಗಲೇ ಕೆಟ್ಟ ದಾಖಲೆ ಹೊಂದಿರುವ ಟ್ರಂಪ್ ಈ ಅವಿವೇಕತ ನಕ್ಕೆ ಕೈ ಹಾಕಿದರು. ನಿಜವಾಗಿ, ಈಗ ಜೆರೂಸಲೇಮ್‍ನಲ್ಲಿ ಯಾವುದೇ ರಾಷ್ಟ್ರದ ರಾಯಭಾರಿಗಳು ಕಾರ್ಯಾಚರಿಸುತ್ತಿಲ್ಲ. ಜೆರೂಸಲೇಮ್‍ನಲ್ಲಿ ನಾಲ್ಕು ಲಕ್ಷ ಫೆಲೆಸ್ತೀನಿ ಯರಿದ್ದಾರೆ. ಇಸ್ರೇಲ್ ಅವರಿಗೆ ಪೌರತ್ವ ನೀಡಿಲ್ಲ. ಕೇವಲ ಸ್ಥಿರ ವಾಸ ಅನುಮತಿ ಪತ್ರ ಮಾತ್ರ ಇದೆ. ದಕ್ಷಿಣ ಜೆರೂಸಲೇಮ್‍ನಲ್ಲಿ 12 ವಸಾಹತು ಕೇಂದ್ರವನ್ನು ಇಸ್ರೇಲ್ ಸ್ಥಾಪಿಸಿದೆ. ಇದರಲ್ಲಿ 2 ಲಕ್ಷ ಯಹೂದಿಗಳು ವಾಸಿಸುತ್ತಿದ್ದಾರೆ. ಅಲ್ಲಿ ಅರಬರ ಜನಸಂಖ್ಯೆ 22%ವನ್ನು ಮೀರಬಾರದೆಂದು ತಾಕೀತು ನೀಡಿ ವಿವಿಧ ಕಾನೂನನ್ನು ಹೇರುತ್ತಿದ್ದಾರೆ. ಜೆರೂಸಲೇಮ್ ನಗರದ ಜನಸಂಖ್ಯೆಯಲ್ಲಿ ಶೇಕಡಾ 58 (4,10,000) ಮಸ್ಜಿದುಲ್ ಅಕ್ಸಾ ಇರುವ ಪೂರ್ವ ನಗರದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಎರಡು ಕಾಲು ಲಕ್ಷಕ್ಕಿಂತಲೂ ಮಿಕ್ಕಿ (55%) ಮುಸ್ಲಿಮರಿದ್ದರೆ 2 ಲಕ್ಷ (45%) ಯಹೂದಿಗಳೂ ವಾಸಿಸುತ್ತಿದ್ದಾರೆ. ಮುಸ್ಲಿಮರ ಜನಸಂಖ್ಯೆ ವ್ಯಾಪಿಸದಂತೆ ಅನೇಕ ಕಾನೂನುಗಳನ್ನು ಹೇರುತ್ತಿದ್ದಾರೆ.

ಫೆಲೆಸ್ತೀನ್ ಮತ್ತು ಇಸ್ರೇಲ್‍ನ ಹೋರಾಟದ ಪ್ರಾರಂಭದಿಂದಲೇ ಜೆರೂಸಲೇಮ್ ಅದರ ಕೇಂದ್ರೀಯ ವಿಷಯವಾಗಿತ್ತು. ಅಮೇರಿಕ ಇದುವರೆಗೆ ಆ ಸಮಸ್ಯೆಯ ಪರಿಹಾರದ ಮಧ್ಯಸ್ಥಿಕೆ ದಾರನಂತೆ ನಟಿಸಿತ್ತು. ಆ ನಾಟ್ಯಕ್ಕೆ ಈಗ ಅಂತಿಮ ತೆರೆ ಬಿದ್ದಿದೆ. ಮಾತ್ರ ವಲ್ಲ, ವಿಶ್ವಕ್ಕೆ ಅಮೇರಿಕದ ಮೇಲಿದ್ದ ವಿಶ್ವಾಸಕ್ಕೂ ಇದು ಧಕ್ಕೆ ತಂದಿದೆ ಎಂದರೂ ತಪ್ಪಾಗಲಾರದು. ಯಾಕೆಂದರೆ, ಅಮೇರಿಕದ ಶಾಂತಿಯ ದೌತ್ಯವನ್ನು ಕಣ್ಣು ಮುಚ್ಚಿ ಆಲಿಸುತ್ತಿದ್ದ ವಿಶ್ವದ ರಾಷ್ಟ್ರಗಳು ಕಣ್ತೆರೆಯುವ ಕಾಲ ಸನ್ನಿಹಿತವಾಗಿದೆ. ಭಾರತದ ಇತಿಹಾಸವು ಎಂದಿಗೂ ಅರಬ್ ಮತ್ತು ಫೆಲೇಸ್ತೀನಿನ ಜೊತೆಯಿತ್ತು. ಆದರೆ ಇತ್ತೀಚೆಗೆ ಟ್ರಂಪ್ ಮತ್ತು ಇಸ್ರೇಲ್ ಜೊತೆ ಮಮಕಾರ ತೋರುತ್ತಿರುವ ಮೋದಿ ಸರಕಾರ ಈ ದೊಡ್ಡಣ್ಣನ ಕಾಪಟ್ಯವನ್ನು ಅರ್ಥೈಸ ಬೇಕಾಗಿದೆ. ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ನ್ಯಾಯವನ್ನು ಬಲಿ ಕೊಡಬಾರದು. ಟ್ರಂಪ್‍ರ ಈ ಘೋಷಣೆಯನ್ನು ಖಂಡಿಸಿ ಮೋದಿಯವರು ತನ್ನ ಇಂಗಿತವನ್ನು ಬಹಿರಂಗ ಪಡಿಸಲು ತಡ ಮಾಡಬಾರದು. ನ್ಯಾಯದ ಪರವಾಗಿ ಮೋದಿಯವರು ದನಿಯೆತ್ತುವ ಕಾಲ ಸಮೀಪಿಸಿದೆ. ವಿಶ್ವದ ಶಾಂತಿಯನ್ನು ಕದಡುವಂತಹ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಟ್ರಂಪ್‍ಗೆ ವಿಶ್ವವು ಲಗಾಮು ಹಾಕುವ ಕಾಲ ಸನ್ನಿಹಿತವಾಗಿದೆ. ಇದು ಹೀಗೆ ಮುಂದುವರಿದರೆ ಮುಂದೆ ವಿಶ್ವ ಯುದ್ಧ ವಾಗುವುದು ಖಚಿತ.

ಸಲೀಮ್ ಬೋಳಂಗಡಿ