ಅಶ್ವಮೇಧಕ್ಕೆ ಕರುನಾಡಿನಲ್ಲಿ ಬಿದ್ದಿರುವ ಹಗ್ಗವನ್ನು ಬಿಗಿಗೊಳಿಸಬೇಕಿದೆ

0
714

: ಸಲೀಮ್ ಬೋಳಂಗಡಿ
ಈಗ ದೇಶಕ್ಕೆ ಯಾವುದರ ಅಗತ್ಯವಿದೆಯೋ ಅದು ನಿನ್ನೆ ಬೆಂಗಳೂರಿನಲ್ಲಿ ನಡೆದ ಕುಮಾರಸ್ವಾಮಿ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭದಲ್ಲಿ ಅನಾವರಣವಾಗಿದೆ. ಜಾತ್ಯತೀತ ಪಕ್ಷಗಳ ಈ ಮೈತ್ರಿ ವೇದಿಕೆಗಳಿಗೆ ಸೀಮಿತವಾಗದೇ ಅನುಷ್ಟಾನಕ್ಕೆ ಬರ ಬೇಕಾಗಿದೆ. ಅಂತಹ ಒಂದು ದಿಟ್ಟ ಹೆಜ್ಜೆಗೆ ಕರ್ನಾಟಕದ ಚುನಾವಣಾ ಫಲಿತಾಂಶ ನಾಂದಿಯಾಗಬಹುದೆಂದು ಈ ಮೊದಲು ಯಾರೂ ಊಹಿಸಿರಲಿಕ್ಕಿಲ್ಲ. ಜನರು ನೀಡಿದ ಈ ಅತಂತ್ರ ಜನಾದೇಶವು ಅಂತಹದ್ದೊಂದು ಅವಕಾಶವನ್ನು ಸೃಷ್ಟಿಸಿತು. ಒಂದು ವೇಳೆ ಕಾಂಗ್ರೆಸ್ ಪೂರ್ಣ ಬಹುಮತ ಪಡೆದಿದ್ದರೂ ಇಂತಹದ್ದೊಂದು ಸಾಧ್ಯತೆ ಕಂಡು ಬರುತ್ತಿರಲಿಲ್ಲವೇನೋ? ಮತದಾರರೇ ರಾಜ್ಯದ ಈ ಸ್ಥಿತಿಗೆ ಕಾರಣ ಎಂದು ಟೀಕಿಸುವವರಿದ್ದಾರೆ. ಆದರೆ ಜನರು ಜಾತ್ಯತೀತ ಪಕ್ಷಗಳ ಒಗ್ಗಟ್ಟಿಗಾಗಿ ನೀಡಿದ ಈ ಅವಕಾಶವನ್ನು ಈ ಪಕ್ಷಗಳು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತವೆ ಎಂಬುದರಲ್ಲಿ ಅದರ ಯಶಸ್ಸು ಅಡಗಿದೆ. ವಿರೋಧ ಪಕ್ಷಗಳು ಮತ್ತು ಕೆಲ ಮಾಧ್ಯಮಗಳು ಈ ಐಕ್ಯತೆಗೆ ಎಳ್ಳು ನೀರು ಬಿಡುವ ಪ್ರಯತ್ನವನ್ನು ಮಾಡಬಹುದು. ಆದರೆ ಅವೆಲ್ಲವನ್ನೂ ಮೆಟ್ಟಿ ನಿಲ್ಲಬೆಕಾದ ಅಗತ್ಯವಿದೆ. 2019ರ ಲೋಕಸಭಾ ಚುನಾವಣೆ ಆಸನ್ನವಾಗಿರುವಾಗ ಇಂತಹದ್ದೊಂದು ಗಟ್ಟಿಯಾದ ಮೈತ್ರಿ ಕೂಟದ ಅಗತ್ಯ ಖಂಡಿತಾ ಇದೆ. ಕರ್ನಾಟಕದ ಮತದಾರರು ನೀಡಿದ ಈ ಸುವರ್ಣಾವಕಾಶ ದೇಶದ ರಾಜಕೀಯಕ್ಕೆ ಬೆಳಕು ಚೆಲ್ಲುವಂತಿರಬೇಕು. ಆದ್ಧರಿಂದ ಅಧಿಕಾರ ರೂಡ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಪರವಾದ ಚಿಂತನೆಯಿಂದ ದೂರವಿದ್ದು ಈ ಮೈತ್ರಿ ಅಚಲವಾಗಿರುವಂತೆ ಪ್ರಯತ್ನಿಸಿ ಜನರ ಆಶೋತ್ತರಗಳನ್ನು ಈಡೇರಿಸಲು ಗರಿಷ್ಟ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಅಶಾಂತಿ ತಲೆದೋರದಂತೆ ಮಾಡಬೇಕು. ಜನರ ಸಮಸ್ಯೆಗಳಿಗೆ ದ್ವನಿಯಾಗಬೇಕು.

ದೇಶದ ಜಾತ್ಯತೀತ ಪಕ್ಷಗಳ ಈ ಮೈತ್ರಿಕೂಟ ಬಿಜೆಪಿಯ ನಿದ್ದೆಕೆಡಿಸಿರಬಹುದು. ಈ ಮೈತ್ರಿಕೂಟ ಪ್ರಬಲವಾದರೆ ಬಿಜೆಪಿ ಪಾಲಿಗೆ ಅದು ಕರಾಳವಾಗಲಿದೆ ಎಂಬುದನ್ನು ಅರಿತ ಆ ಪಕ್ಷ ಕರಾಳದಿನವನ್ನು ಆಚರಿಸಿದೆ ಎಂದು ಅರ್ಥೈಸಲೇಬೇಕು. ತಮಗೆ ಬಹುಮತ ದೊರೆಯದಿದ್ದರೂ ಅಧಿಕಾರಕ್ಕಾಗಿ ಬಿಜೆಪಿ ಕಸರತ್ತು ನಡೆಸಿದ್ದು ಪ್ರಜಾಪ್ರಭುತ್ವದ ಕರಾಳ ಅಧ್ಯಾಯ. ಯಾಕೆಂದರೆ ವಾಸ್ತವ ವಿಚಾರ ಅರಿತು ಕೂಡಾ ರಾಜ್ಯಪಾಲರು ತಳೆದ ನಿರ್ಧಾರಗಳು ಬಹಿರಂಗವಾಗಿ ಕುದುರೆ ವ್ಯಾಪಾರಕ್ಕೆ ಅನುವು ಮಾಡಕೊಟ್ಟಂತಿತ್ತು. ಇದು ಪ್ರಜಾಪ್ರಭುತ್ವ ಪಾಲಿನ ಕರಾಳ ದಿನ. ಪ್ರಜ್ಞಾವಂತ ನಾಗರಿಕರು ರಾಜ್ಯಪಾಲರ ಈ ಪಕ್ಷಪಾತಿ ನಿರ್ಧಾರದಿಂದ ಹತಾಶರಾಗಿದ್ದರು. ನ್ಯಾಯಾಲಯ ಅದಕ್ಕೆ ತಡೆ ನೀಡದಿದ್ದರೆ ಪರಿಸ್ಥಿತಿ ಕಲುಷಿತವಾಗುತ್ತಿತ್ತು. ಹಣದ ಮೂಟೆ ಹಿಡಿದು ಶಾಸಕರಿಗೆ ಗಾಳ ಹಾಕುವ ಪರಿಸ್ಥಿತಿ ಉದ್ಭವವಾಗುತ್ತಿತ್ತು. ಅವೆಲ್ಲದ್ದರಿಂದ ಪಾರು ಮಾಡಿದ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಸೆಲ್ಯೂಟ್ ಹೊಡೆಯಲೇ ಬೇಕು. ಈ ಸಂದಿಗ್ದ ಸ್ಥಿತಿಯಿಂದ ಪಾರು ಮಾಡಿದ್ದನ್ನು ಸಾಕಾರಗೊಳಿಸುವ ಜವಾಬ್ದಾರಿಕೆ ಎರಡೂ ಪಕ್ಷಗಳ ಶಾಸಕರ ಮೇಲಿದೆ. ಅದನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಗಾದೆ ಮಾತು ನೆನಪಲ್ಲಿರಲಿ. ಮೊದಿಯವರ ಅಶ್ವ ಮೇಧದ ಕುದುರೆಗೆ ನಿಜಕ್ಕೂ ಕರುನಾಡಿನಲ್ಲಿ ಹಗ್ಗ ಬಿದ್ದಿದೆ. ಆ ಹಗ್ಗವನ್ನು ದುರ್ಬಲಗೊಳಿಸದೆ ಇನ್ನಷ್ಟು ಬಿಗಿಗೊಳಿಸಬೇಕಾಗಿದೆ