ಇಂದಿರಾ ಕ್ಯಾಂಟೀನ್ ಮತ್ತು ಬಡ ಶ್ರಮಜೀವಿಗಳು

0
481

 

 

ಸಣ್ಣ ಮಗುವನೆತ್ತಿಕೊಂಡು  ಗಂಗಾನಗರ ಮಾರುಕಟ್ಟೆ ಸ್ಥಳದಲ್ಲಿ ಹಣ್ಣಿನ ಕೈಗಾಡಿಯಲ್ಲಿ ಡಿಸೆಂಬರ್-ಜನವರಿಯ ಚಳಿ, ಬಿಸಿಲೆನ್ನದೇ

ವ್ಯಾಪಾರ ನಡೆಸುವ ಆ ಮಹಿಳೆ ಈಗಲೂ ಕಾಣಸಿಗುತ್ತಾಳೆ.

ಅದೇ ರೀತಿ ಹಣ್ಣು, ತರಕಾರಿ, ಹೂವು, ಇತ್ಯಾದಿಗಳನ್ನು ಮಾರುವ ವೃದ್ಧ ಮಹಿಳೆಯರು, ಪುರುಷರು ಕೂಡಾ ಈಗಲೂ ದಿನ ರಾತ್ರಿಯೆನ್ನದೇ
ಅದನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ.

ನಾವು ಸಾಮಾನ್ಯವಾಗಿ ಬಾಂಗ್ಲಾ ದೇಶಿಗಳೆಂದು ಭಾವಿಸುವ, ಆದರೆ ತಮ್ಮನ್ನು ಬಂಗಾಳಿ, ರಾಜಸ್ಥಾನಿ, ಗುಜರಾತಿ, ಅಸ್ಸಾಮಿ ಎಂದು ಹೇಳಿಕೊಳ್ಳುವವರು ಈಗಲೂ ಸಿಗ್ನಲ್‌ ಗಳಲ್ಲಿ ಬಲೂನ್, ಮಕ್ಕಳ ಆಟಿಕೆಗಳನ್ನು ರಜಾದಿನ-ಕೆಲಸದ ದಿನವೆನ್ನದೇ ಮಾರುತ್ತಿದ್ದಾರೆ.

ಸರಿಸುಮಾರು ಇಡೀ ಬೆಂಗಳೂರಿನಲ್ಲಿ, ರಾಜ್ಯದ ಇತರ ನಗರಗಳಲ್ಲಿ ವಸ್ತುಸ್ಥಿತಿ ಇದೇ ರೀತಿ‌ ಇದೆ.

ಇಂದಿರಾ ಕ್ಯಾಂಟೀನ್ ಆರಂಭವಾಗಿ ಸುಮಾರು ನಾಲ್ಕು ತಿಂಗಳುಗಳು ಕಳೆದಿವೆ. ಗಂಗಾನಗರ ಅಸುಪಾಸಿನಲ್ಲಿ ಒಂದು‌ ಕಿ.ಮೀ ರೇಡಿಯಸ್ ಒಳಗೆ ನಾನು ನೋಡಿದಂತೆ ೩ ಇಂದಿರಾ ಕ್ಯಾಂಟೀನ್ ಗಳಿವೆ.

ಆದರೆ ಅನ್ನ ಭಾಗ್ಯ ಹಾಗೂ ಇಂದಿರಾ ಕ್ಯಾಂಟೀನನ್ನು ವಿರೋಧಿಸುವರು ಹೇಳಿದಂತೆ ಈ ಶ್ರಮಜೀವಿಗಳು ಯಾರು ಸೋಮಾರಿಗಳಾಗಿಲ್ಲ, ಈಗಲೂ ಬೆವರು ಸುರಿಸುತ್ತಿದ್ದಾರೆ, ಚಳಿಯಲ್ಲಿ ನಡುಗುತ್ತಿದ್ದಾರೆ. ಸರ್ಕಾರವನ್ನು ವಿರೋಧಿಸಲೇ ಬೇಕೆಂಬ ಹಟಕ್ಕೆ ಬಿದ್ದು  ಬಡ ಶ್ರಮಜೀವಿಗಳನ್ನು ಅವಮಾನಿಸುವುದು ಎಷ್ಟು ಸರಿ?

ಇಂದಿರಾ ಕ್ಯಾಂಟೀನ್ ನಲ್ಲಿ ಪ್ರತಿ ದಿನ ಪ್ರತಿ ಹೊತ್ತು ಊಟ ಉಪಾಹಾರ ಸೇವಿಸಿದರೆ ಒಬ್ಬ ವ್ಯಕ್ತಿ
ದಿನಕ್ಕೆ ಸುಮಾರು ₹30, ತಿಂಗಳಿಗೆ ಸುಮಾರು ₹ 1000 ಉಳಿತಾಯ ಮಾಡಬಹುದು. ಈ ಒಂದು ಸಾವಿರ ಆತನಿಗೆ ಬಹಳ ಮಹತ್ವದ್ದಾಗಿರಬಹುದು, ಆದರೆ ಅವು ಆತನ ಜೀವನದ ಆರ್ಥಿಕ ಹೊರೆಯನ್ನು ಹಾಗೂ ಇನ್ನಿತರ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ
ಕಡಿಮೆ ಮಾಡುವುವು? ಲಕ್ಷಾಂತರ ಮಂದಿ ಇರುವ ಒಂದು ಏರಿಯಾದ ಬಡ 250 ಮಂದಿಗೆ ಒಂದು ಊಟ ಉಚಿತವಾಗಿ ಕೊಟ್ಟರೆ ದೇಶದ ಆರ್ಥಿಕತೆಯ ಮೇಲೆ ಯಾವ ಮಹಾ ಸಿಡಿಲು ಬಡಿಯುವುದು? ಎಂಬುವುದನ್ನು ನಾವು ನಮ್ಮನ್ನು ಕೇಳಿಕೊಳ್ಳಬೇಕು.

ಅಪೌಷ್ಟಿಕತೆ ಯಿಂದ ಬಳಲುತ್ತಿರುವ ಮಂದಿ, ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರ ಪ್ರಮಾಣ ಗಣನೀಯವಾಗಿರುವ ಹಿನ್ನೆಲೆಯಲ್ಲಿ ಅನ್ನ ಭಾಗ್ಯವಾಗಿರಲಿ, ಇಂದಿರಾ ಕ್ಯಾಂಟೀನ ಗಳಾಗಿರಲಿ ಅಥವಾ ಮಾತೃಪೂರ್ಣ ದಂತಹ ಯೋಜನೆಗಳಾಗಲಿ ದೇಶದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.

ತನ್ನ ನಾಗರೀಕರಿಗೆ ಉಚಿತ ಸೌಲಭ್ಯ ನೀಡುವುದು ದೇಶದಲ್ಲಿರುವ ಬಡತನದ ಸಂಕೇತವು ಹೌದು, ಸಮೃದ್ಧಿಯ ಸಂಕೇತವು ಹೌದು. ಪ್ರಗತಿ ಹೊಂದಿದ ದೇಶಗಳು ತನ್ನ ಪ್ರಜೆಗಳಿಗೆ ಸಾಕಷ್ಟು ಉಚಿತ ಸೌಲಭ್ಯಗಳನ್ನು ನೀಡುತ್ತವೆ.  ಆದರೆ ಸಮೃದ್ಧ ರಾಜ್ಯವಾಗುವವರೆಗೆ ಸರ್ಕಾರವು ಸಮಾಜ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಬಾರದು ಎಂದು ವಾದಿಸುವುದು ಮೂರ್ಖತನವಾಗಿದೆ ಎಂದರೆ ತಪ್ಪಾಗದು.

ಹೊಟ್ಟೆ ತುಂಬಿದರಷ್ಟೇ ಒಬ್ಬ ಬೇರೆ ಕೆಲಸ ಮಾಡುವ, ಸಾಧಿಸುವ ಯೋಚನೆ ಮಾಡಬಲ್ಲ. ಆದರೆ ಮನುಷ್ಯ ಸ್ವಾಭಾವಿಕವಾಗಿ ಶ್ರಮಜೀವಿ. ಹೊಟ್ಟೆ ತುಂಬಿತೆಂದು ಸುಮ್ಮನೆ ಕೂರುವವನಲ್ಲ. ಆ ರೀತಿಯಾಗಿರುತ್ತಿದ್ದರೆ ಅಂಬಾನಿ, ಅದಾನಿ, ಬಿರ್ಲಾ, ಟಾಟಾಗಳು ಸೇರಿದಂತೆ ದೇಶದ ಶ್ರೀಮಂತರೆಲ್ಲಾ ಸೋಮಾರಿಗಳಾಗಿರುತ್ತಿದ್ದರು.

ಆದರ್ಶ ಸಮಾಜದಲ್ಲಿ ಜನರು ಸ್ವಾವಲಂಬಿಗಳಾಗಿರುತ್ತಾರೆ, ಅವರಿಗೆ ಯಾವುದೇ ಸಹಾಯ / ಯಾರ ಕೃಪೆಯ ಅಗತ್ಯವಿರುವುದಿಲ್ಲ. ಅದಕ್ಕಾಗಿ ಸಮಾಜದಿಂದ ಬಡತನ ನಿರ್ಮೂಲನವಾಗಬೇಕು; ಬಡತನ ನಿರ್ಮೂಲನವಾಗಿಸಲು ಸರ್ಕಾರಗಳು ಇನ್ನೂ ಪರಿಣಾಮಕಾರಿ ನೀತಿಗಳನ್ನು ರೂಪಿಸಬೇಕು.
🖋 ಶ್ರಮಜೀವಿ