ಈ ಫೋಟೋವನ್ನು ಎಲ್ಲೆಡೆ ನೇತು ಹಾಕೋಣ

0
4494

ಅಕ್ಷರ ಸೋತಿದೆ. ಎರಡು ಭಾವಚಿತ್ರಗಳು ಮತ್ತೆ ಮತ್ತೆ ಕಾಡುತ್ತಿವೆ. ದೀಪಕ್ ಮತ್ತು ಬಶೀರ್. ದೀಪಕ್ ಹತ್ಯೆಯ ಬಳಿಕದಿಂದ ಬಶೀರ್ ಹತ್ಯೆಯ ವರೆಗೆ ಮತ್ತು ಆ ಬಳಿಕದ ಬೆಳವಣಿಗೆಗಳು ದ.ಕ. ಜಿಲ್ಲೆಯ ಪಾಲಿಗೆ ಅತ್ಯಂತ ಮಹತ್ವಪೂರ್ಣವಾದವು ಎಂದು ಹೇಳಬೇಕಾಗುತ್ತದೆ. ದೀಪಕ್‍ನ ಮಾಲಿಕ ಮಜೀದ್ ಮತ್ತು ಅವರ ಕುಟುಂಬ ದೀಪಕ್‍ರ ಮನೆಗೆ ಭೇಟಿಕೊಟ್ಟಿತು. ಅದರಲ್ಲೂ ಪುತ್ರ ಶೋಕದಿಂದ ಬಳಲಿದ್ದ ದೀಪಕ್‍ನ ತಾಯಿಯನ್ನು ಮಜೀದ್‍ರ ಪತ್ನಿ ಎದೆಗಪ್ಪಿಕೊಂಡು ಸಂತೈಸಿದ ಫೋಟೋ ಬಹುಶಃ 2018ನೇ ಇಸವಿಯ ವರ್ಷದ ಫೋಟೋ ಆಗುವಷ್ಟು ಅಮೂಲ್ಯ ವಾದುದು. ಬಶೀರ್‍ರ ಸಾವಿನ ಸಂದರ್ಭದಲ್ಲಿ ಅವರ ಕುಟುಂಬ ತೋರಿದ ಸಹನೆ, ಸಾಮಾಜಿಕ ಕಳಕಳಿಯು ¸ಸಾವಿರಾರು ಮಂದಿಯ ಕಣ್ಣನ್ನು ತೇವಗೊಳಿಸಿತು. ವಿಶೇಷ ಏನೆಂದರೆ, ಈ ಎರಡು ಹತ್ಯೆಗಳಿಗೆ ನಾಗರಿಕ ಸಮಾಜ ತೋರಿದ ಪ್ರತಿಕ್ರಿಯೆ. ಯುವ ಸಮೂಹದ ದೊಡ್ಡದೊಂದು ಗುಂಪು ಈ ಹತ್ಯೆಗಳನ್ನು ಪ್ರಬಲವಾಗಿ ಖಂಡಿಸಿತು. ಈ ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಈ ಬಾರಿ ವ್ಯಕ್ತವಾದ ನಾಗರಿಕ ಆಕ್ರೋಶ ಅತ್ಯಂತ ತೀವ್ರವಾದುದು. ದೀಪಕ್‍ನ ಹತ್ಯೆಯನ್ನು ಮುಸ್ಲಿಮ್ ಸಮುದಾಯವು ದೊಡ್ಡ ಧ್ವನಿಯಲ್ಲಿ ಖಂಡಿಸಿತು. ಈ ಪ್ರತಿಕ್ರಿಯೆಯು ಸಾವಿನಲ್ಲಿ ಓಟು ಬಾಚುವ ರಾಜಕೀಯ ನಾಯಕರ ಮೇಲೆ ಯಾವ ಮಟ್ಟದ ಪರಿಣಾಮ ಬೀರಿತೆಂದರೆ, ¸ ಸ್ವತಃ ಅವರೇ ತಮ್ಮ ದನಿಯನ್ನು ತಗ್ಗಿಸಿಕೊಂಡರು. ಬಶೀರ್ ಸಾವಿಗೀಡಾದ ಮೇಲಂತೂ ಪಶ್ಚಾತ್ತಾಪ ಭಾವದಲ್ಲಿ ಮಾತಾಡುವಷ್ಟು ಅದು ಅವರನ್ನು ಒತ್ತಡಕ್ಕೊಳಪಡಿಸಿತು. ಐದಾರು ತಿಂಗಳ ಹಿಂದೆ ಇದೇ ಜಿಲ್ಲೆಯಲ್ಲಿ ಅಶ್ರಫ್ ಕಲಾಯಿ ಎಂಬ ಯುವಕನ ಹತ್ಯೆ ನಡೆ ದಾಗ ಕ್ಷೇತ್ರದ ಜನಪ್ರತಿನಿಧಿಯಾಗಿದ್ದೂ ಆ ಮನೆಗೆ ಭೇಟಿ ಕೊಡದ ಮತ್ತು ಅತ್ಯಂತ ಉಡಾಫೆಯಿಂದ ಪ್ರತಿಕ್ರಿಯಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಶೀರ್ ಹತ್ಯೆಗೆ ತಕ್ಷಣ ಸ್ಪಂದಿಸಿದರು. 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸಿದರು. ದೀಪಕ್ ಹತ್ಯೆಯನ್ನು ಮತಾಂಧತೆ ಮತ್ತು ಜಿಹಾದಿ ಕೃತ್ಯ ಎಂದು ಸಂಬೋಧಿಸಿದವರು ಹಾಗೂ ಆ ಹತ್ಯೆಯನ್ನು ಬಳಸಿಕೊಂಡು ಮುಸ್ಲಿಮ್ ಸಮುದಾಯದ ವಿರುದ್ಧ ಹಿಂದೂ ಸಮುದಾಯ ವನ್ನು ಎತ್ತಿಕಟ್ಟಲು ಶ್ರಮಿಸಿದವರೂ ಬಶೀರ್ ಸಾವಿನ ಬಳಿಕ ತಪ್ಪಿತಸ್ಥ ಭಾವದಲ್ಲಿ ಕಾಣಿಸಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಹಿಂದೂ ಮತ್ತು ಮುಸ್ಲಿಮ್ ಸಮೂಹದ ಯುವ ತಲೆಮಾರು ಎರಡೂ ಹತ್ಯೆಗಳನ್ನು ಏಕಪ್ರಕಾರವಾಗಿ ಖಂಡಿಸಿದುವು. ಈ ಹಿಂದೆಂದೂ ಕಾಣದ ಒಗ್ಗಟ್ಟು ಈ ಬಾರಿ ಕಾಣಿಸಿತು. ಇದೊಂದು ಆಶಾವಾದ. ಅಂದಹಾಗೆ, ದ.ಕ. ಜಿಲ್ಲೆಯಲ್ಲಿ ಈವರೆಗೆ ಹತ್ಯೆಗಳು ರಾಜಕೀಯವಾಗಿ ಮೊಟ್ಟೆಯಿಡುತ್ತಿದ್ದುವು. ಸತ್ತ ವ್ಯಕ್ತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವು ದನ್ನು ಬಿಜೆಪಿ ತನ್ನ ಕಾರ್ಯತಂತ್ರವಾಗಿಯೇ ಮಾಡಿಕೊಂಡಿತ್ತು. ಜಿಲ್ಲೆಯ ಮಟ್ಟಿಗೆ ಈ ಸಾವಿನ ರಾಜಕೀಯದಾಟ ಎಷ್ಟು ಚಿರಪರಿಚಿತವೆಂದರೆ, ಚುನಾವಣೆ ಹತ್ತಿರ ಬರುವಾಗಲೆಲ್ಲ ಜನರು ಕೋಮು ಗಲಭೆಯ ಬಗ್ಗೆ ಮಾತಾಡಿಕೊಳ್ಳುವಷ್ಟು. ಆದ್ದರಿಂದಲೇ, ಜಿಲ್ಲೆಯ ನಾಗರಿಕರ ಪ್ರತಿಕ್ರಿಯೆಯೂ ಈ ಬಾರಿ ಮುಖ್ಯವಾಗುತ್ತದೆ. ರಾಜಕೀಯಕ್ಕಾಗಿ ತಮ್ಮ ಮನೆಯ ಮಕ್ಕಳು ಬಲಿಯಾಗುವುದರ ಬಗ್ಗೆ ಸಾಮಾಜಿಕ ಜಾಗೃತಿ ಮೂಡುತ್ತಿರುವ ಲಕ್ಷಣ ದೀಪಕ್ ಮತ್ತು ಬಶೀರ್ ಹತ್ಯೆಯಲ್ಲಿ ಗೋಚ ರಿಸಿದೆ. ನಿಜವಾಗಿ, ಹಿಂದೂ ಸಮುದಾಯದ ವ್ಯಕ್ತಿಯೋರ್ವ ಮುಸ್ಲಿಮ್ ವ್ಯಕ್ತಿಯಿಂದ ಹಲ್ಲೆಗೋ ಹತ್ಯೆಗೋ ಒಳಗಾದಾಗ ಮುಸ್ಲಿಮ್ ಸಮುದಾಯ ಮೌನವಾಗಿರಬೇಕು ಅಥವಾ ಸಮರ್ಥಿಸುವ ಧಾಟಿಯಲ್ಲಿ ವರ್ತಿ¸ಸಬೇಕು ಎಂದು ಕೋಮುವಾದಿಗಳು ಬಯಸುತ್ತಾರೆ. ಅದೇ ರೀತಿ ಮುಸ್ಲಿಮ್ ಸಮುದಾಯದ ವ್ಯಕ್ತಿ ಹಿಂದೂ ವ್ಯಕ್ತಿಯಿಂದ ಹತ್ಯೆಗೋ ಹಲ್ಲೆಗೋ ಒಳಗಾದಾಗ ಹಿಂದೂ ಸಮು ದಾಯ ಅದನ್ನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಮಾತಾಡಬೇಕೆಂದೂ ಅವರು ಬಯಸುತ್ತಾರೆ. ಇಂಥದೊಂದು ತಪ್ಪು ನಡೆಯುವುದನ್ನು ಎರಡೂ ಕಡೆಯ ಕೋಮುವಾದಿಗಳೂ ಬಯಸುತ್ತಿರುತ್ತಾರೆ. ಒಂದು ಹಂತದ ವರೆಗೆ ಈ ತಪ್ಪುಗಳು ಜಿಲ್ಲೆಯಲ್ಲಿ ಸಣ್ಣ ಮಟ್ಟದಲ್ಲೂದರೂ ಈ ಹಿಂದೆ ನಡೆದಿದೆ ಎಂದು ಹೇಳಬಹುದು. ಆದರೆ ದೀಪಕ್ ಮತ್ತು ಬಶೀರ್‍ರ ಸಾವು ಈ ಹಿಂದಿನ ಎಲ್ಲ ಪ್ರಮಾದ ಗಳಿಗೂ ಉತ್ತರವೆಂಬ ರೀತಿಯಲ್ಲಿ ಕೊಲ್ಲುವ ರಾಜಕೀಯಕ್ಕೆ ಸಡ್ಡು ಹೊಡೆದಿದೆ. ನಿಜವಾಗಿ, ಜಿಲ್ಲೆಯ ಪಾಲಿಗೆ ಇದು ದೊಡ್ಡ ಯಶಸ್ಸು. ಹತ್ಯೆಗಳ ವಿರುದ್ಧ ಸಮಾಜ ಏಕಧ್ವನಿಯಲ್ಲಿ ಮಾತಾಡುವುದೆಂದರೆ, ಕೋಮು ರಾಜಕೀಯಕ್ಕೆ ಸ್ಪೇಸ್ ಕಡಿಮೆಯಾಗತೊಡಗಿದೆ ಎಂದರ್ಥ. ಈ ಹಿಂದೆ ಹತ್ಯೆಯೊಂದು ನಡೆದರೆ ಪ್ರತೀಕಾರವಾಗಿ ಎಷ್ಟು ಹತ್ಯೆ, ಹಲ್ಲೆ ನಡೆಯಬಹುದು ಎಂಬ ಭೀತಿಯೊಂದು ಸಾರ್ವಜನಿಕ ವಾಗಿ ನೆಲೆಗೊಳ್ಳುತ್ತಿತ್ತು. ಆದರೆ ಬಶೀರ್‍ರ ಸಾವಿನ ಬಳಿಕದ ವಾತಾವರಣ ಹಾಗಿಲ್ಲ. ಓರ್ವನ ಹತ್ಯೆಗೆ ಇನ್ನಾರನ್ನೋ ಆಕ್ರಮಿಸುವುದು ಉತ್ತರ ಅಲ್ಲ ಎಂದು ಸಮಾಜ ದೊಡ್ಡ ಧ್ವನಿಯಲ್ಲಿ ಹೇಳತೊಡಗಿದೆ. ದೀಪಕ್ ಮತ್ತು ಬಶೀರ್ ಈ ಸ್ಥಿತಿಗೆ ಮುಖ್ಯ ಕಾರಣರು. ಈ ಸಮಾಜ ಆತ್ಮವಿಮರ್ಶೆ ಮಾಡಕೊಳ್ಳುವಂತೆ ಒತ್ತಾಯಿಸುತ್ತಾ ಅವರು ಸ್ವತಃ ತಮ್ಮನ್ನೇ ಈ ಸಮಾಜಕ್ಕೆ ಅರ್ಪಿಸಿ ಕೊಂಡರು. ಇದೀಗ ಅವರ ಅನುಪಸ್ಥಿತಿಯಲ್ಲಿ ಕರಾವಳಿ ಜಿಲ್ಲೆಗಳೂ ಸೇರಿದಂತೆ ಇಡೀ ರಾಜ್ಯದ ನಾಗರಿಕರು ಸ್ವಅವಲೋಕನಕ್ಕೆ ಮುಂದಾಗಬೇಕು. ಧರ್ಮದ ಹೆಸರಲ್ಲಿ ತಮ್ಮಂತೆಯೇ ಇರುವ ಇನ್ನೋರ್ವರನ್ನು ಆಕ್ರಮಿಸುವುದರಿಂದ ಆಗುವ ಲಾಭವೇನು ಎಂಬುದಾಗಿ ಸ್ವಯಂ ಪ್ರಶ್ನಿಸಿಕೊಳ್ಳಬೇಕು. ಯಾವ ಧರ್ಮಕ್ಕೂ ಹತ್ಯೆ ಮತ್ತು ಹಿಂಸೆಗಳು ಲಾಭ ತಂದುಕೊಡಲು ಸಾಧ್ಯವಿಲ್ಲ. ಆದ್ದರಿಂದ ಧರ್ಮಕ್ಕಾಗಿ ಹತ್ಯೆ ಅಥವಾ ಹಿಂಸೆ ಎಂಬುದು ಎಲ್ಲೂ ಇಲ್ಲ. ಎಲ್ಲ ಹತ್ಯೆಗಳೂ ಹಿಂಸೆಗಳೂ ಧರ್ಮೇತರ ಕಾರಣಗಳಿಗಾಗಿಯೇ ಆಗಿರುತ್ತವೆ. ಅದರಿಂದ ಯಾರೋ ಬೆಳೆಯುತ್ತಾರೆ. ನಾಯಕರಾಗುತ್ತಾರೆ. ಅದೇ ವೇಳೆ, ಯಾವುದೋ ಮನೆಯ ತಾಯಿ, ಪತ್ನಿ, ಮಕ್ಕಳು ಅನಾಥರಾಗುತ್ತಾರೆ. ದೀಪಕ್ ಮತ್ತು ಬಶೀರ್‍ರ ಕುಟುಂಬ ಇದಕ್ಕೆ ಅತ್ಯುತ್ತಮ ಉದಾಹರಣೆ. ಸಾಧ್ಯವಾದರೆ ದೀಪಕ್‍ನ ತಾಯಿಯನ್ನು ಅಪ್ಪಿಕೊಂಡು ಸಂತೈಸಿದ ಆ ತಾಯಿಯ ಫೋಟೋವನ್ನು ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ನೇತುಹಾಕಲಿ. 2019ರ ಕ್ಯಾಲೆಂಡರ್‍ಗಳಲ್ಲಿ ಆ ಫೋಟೋ ಕಾಣಿಸಿಕೊಳ್ಳಲಿ. ಎಲ್ಲ ಮನೆ -ಮನಸ್ಸುಗಳಿಗೆ ಆ ಫೋಟೋವನ್ನು ತಲುಪಿಸುವ ಶ್ರಮ ನಡೆಯಲಿ. ಸದ್ಯದ ಅಗತ್ಯ ಇದು