ಉತ್ತರಪ್ರದೇಶದ ಸರ್ವೆಯ ಫಲಿತಾಂಶವನ್ನು ಕರ್ನಾಟಕದ್ದೆಂದು ತಪ್ಪಾಗಿ ಜಾಹೀರಾತು ಪ್ರಕಟಿಸಿತೇ ಬಿಜೆಪಿ?

0
997

ಏ. ಕೆ. ಕುಕ್ಕಿಲ

ಇದು ಇವತ್ತಿನ (ಏಪ್ರಿಲ್ 26) ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ ಬಿಜೆಪಿಯ ಜಾಹೀರಾತು. ಈ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿರುವ ಸಿದ್ದರಾಮಯ್ಯ ಸರಕಾರದ ಏಳು ಭ್ರಷ್ಟಾಚಾರಗಳ ಪಟ್ಟಿಯನ್ನು ಓದಿದ ನನಗೆ ತಕ್ಷಣಕ್ಕೆ ನೆನಪಾದದ್ದು ಉತ್ತರಪ್ರದೇಶದ ಯೋಗಿ ಸರಕಾರ. ಆ ಸರಕಾರದ ಬಗ್ಗೆ ನಡೆಸಲಾದ ಸರ್ವೆಯ ಫಲಿತಾಂಶವನ್ನು ಕರ್ನಾಟಕದ್ದೆಂದು ಬಿಜೆಪಿ ತಪ್ಪಾಗಿ ಉಲ್ಲೇಖಿಸಿದೆಯೆಂದೇ ನಾನು ಭಾವಿಸಿದೆ ಮತ್ತು ಅದೇ ಕಾರಣಕ್ಕೆ ಎರಡನೇ ಬಾರಿ ಓದಿದೆ. ಇಲ್ಲಿ ಉಲ್ಲೇಖಿಸಲಾದ ಭ್ರಷ್ಟಾಚಾರಗಳ ಪಟ್ಟಿಯಲ್ಲಿ ಒಂದನ್ನು ( ಮಕ್ಕಳಿಂದ ಬಿಸಿ ಊಟವನ್ನು ಕಸಿದಿರುವರೆಂಬ ಆರೋಪ. ನಿಜವಾಗಿ ಇದೂ ಸುಳ್ಳೇ) ಬಿಟ್ಟರೆ, ಉಳಿದಂತೆ ಎಲ್ಲವೂ ಉತ್ತರಪ್ರದೇಶಕ್ಕೇ ಹೆಚ್ಚು ಹೊಂದುತ್ತದೆ. ಸಿದ್ದರಾಮಯ್ಯ ಸರಕಾರದ ಆರ್ಥಿಕ ಭ್ರಷ್ಟಾಚಾರವನ್ನು ಇವತ್ತು ಬಹಿರಂಗಪಡಿಸ್ತೀವಿ, ನಾಳೆ ಬಹಿರಂಗಪಡಿಸ್ತೀವಿ, ಬಿಗ್ ಬ್ರೇಕಿಂಗ್ ನ್ಯೂಸ್ ಕೊಡ್ತೀವಿ ಎಂದೆಲ್ಲಾ ಹೇಳುತ್ತಾ ಬಂದ ಯಡಿಯೂರಪ್ಪ ಮತ್ತು ಬಿಜೆಪಿಯು, ಸದ್ಯ ಎಷ್ಟು ಹತಾಶೆಗೆ ಒಳಗಾಗಿದೆ ಎಂಬುದಕ್ಕೂ ಈ ಜಾಹೀರಾತು ಅತ್ಯುತ್ತಮ ಪುರಾವೆ. ಈ ಪಟ್ಟಿಯಲ್ಲಿ ಆರ್ಥಿಕ ಭ್ರಷ್ಟಾಚಾರದ ಒಂದೇ ಒಂದು ಉಲ್ಲೇಖ ಇಲ್ಲ. ಅಂದಹಾಗೆ, ಈ ಜಾಹೀರಾತಿನ ಇನ್ನೊಂದು ತಮಾಷೆ ಏನೆಂದರೆ, ಭ್ರಷ್ಟಾಚಾರ ಮತ್ತು ಕೊಲೆಕೃತ್ಯದ ಆರೋಪ ಹೊತ್ತು ಜೈಲಿಗೆ ಹೋದ ಅಮಿತ್ ಶಾ, ಯಡಿಯೂರಪ್ಪ  ಹಾಗೂ ರಾಜಧರ್ಮ ಪಾಲಿಸದ ಮೋದಿ- ಈ ಮೂವರೂ ಅಚ್ಚ ಬಿಳಿ ಉಡುಪಿನಲ್ಲಿ ಕಿರುನಗೆ ಬೀರುತ್ತಾ ಕಪ್ಪಾಗಿ ತಮ್ಮ ಪಕ್ಕದಲ್ಲೇ ನಿಂತಿರುವ ಸಿದ್ದರಾಮಯ್ಯರತ್ತ ನೋಡುತ್ತಿರುವುದು. ಈ ನೋಟವೇ ಎಲ್ಲವನ್ನೂ ಹೇಳುತ್ತೆ. ಈ ಚಿತ್ರ ಆದಲು- ಬದಲು ಆಗಬೇಕಿತ್ತು ಎಂದು ಅವರ ಕಿರುನಗೆಯೇ ಹೇಳುತ್ತಿರುವಂತಿದೆ. ನಿಜವಾಗಿ, ಈ ಜಾಹೀರಾತಿನಿಂದ ಬಿಜೆಪಿಯು ಬೆಂಬಲಿಗರನ್ನು ಗಳಿಸಿಕೊಳ್ಳುವ ಬದಲು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಬಹುಶಃ, ಟಿಕೆಟ್ ಹಂಚಿಕೆಯಿಂದ ಅತೃಪ್ತಗೊಂಡ ಬಿಜೆಪಿ ಕಾರ್ಯಕರ್ತರೇ ಈ ಜಾಹೀರಾತನ್ನು ನಿರ್ವಹಿಸಿರಬೇಕು. ಅವರಿಗೆ ಕಾಂಗ್ರೆಸ್ ಕೃತಜ್ಞತೆಯನ್ನು ಸಲ್ಲಿಸಲಿ.