ಉದ್ರಿಕ್ತ ಗುಂಪು: ಹತ್ಯೆಗೆ ಧೈರ್ಯ ತುಂಬುವ ನಾಮಕರಣ

0
1374

ಈ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ‘ಆಡಳಿತ ನಡೆಸುತ್ತಿರುವ’ ‘ಉದ್ರಿಕ್ತ ಗುಂಪಿನ’ ಬಗ್ಗೆ ಚರ್ಚೆ ನಡೆಸುವುದಕ್ಕೆ ತ್ರಿಪುರದ ಸುಕಾಂತ ಚಕ್ರವರ್ತಿ ಎಂಬ ಬಡಪಾಯಿ ಜಾಗತಿಕ ಮಾಧ್ಯಮಗಳಿಗೆ ಸಂದರ್ಭ ಒದಗಿಸಿದ್ದಾನೆ. ಈತನನ್ನು ತ್ರಿಪುರದ ಹಳ್ಳಿಯೊಂದರ ‘ಉದ್ರಿಕ್ತ ಗುಂಪು’ ಥಳಿಸಿ ಕೊಂದಿದೆ. ಆತ ಆ ಹಳ್ಳಿಗೆ ಹೋದದ್ದು ಏಕೆಂದರೆ, ವದಂತಿಗಳನ್ನು ನಂಬಿ ಯಾರನ್ನೂ ಥಳಿಸಿ ಕೊಲ್ಲಬೇಡಿ ಎಂದು ಜನರನ್ನು ಎಚ್ಚರಿಸುವುದಕ್ಕೆ. ಸುಕಾಂತ ಚಕ್ರವರ್ತಿಗೆ ಈ ಹೊಣೆಯನ್ನು ಅಲ್ಲಿನ ಸರಕಾರವೇ ನೀಡಿತ್ತು. ಇದಾದ ಒಂದೇ ವಾರದೊಳಗೆ ಮಹಾರಾಷ್ಟ್ರದ ದುಳೆ ಜಿಲ್ಲೆಯ ರೈನ್‍ಪಾಡ ಎಂಬಲ್ಲಿ 5 ಮಂದಿಯನ್ನು ‘ಉದ್ರಿಕ್ತ ಗುಂಪು’ ಥಳಿಸಿ ಕೊಂದಿದೆ. ಕಳೆದ ಒಂದು ತಿಂಗಳಲ್ಲಿ ಉದ್ರಿಕ್ತ ಗುಂಪಿನಿಂದ ಥಳಿತಕ್ಕೊಳಗಾಗಿ ಸಾವಿಗೀಡಾದವರ ಸಂಖ್ಯೆ 20ನ್ನು ದಾಟಿದೆ. ಇದು ಅಧಿಕೃತ ಲೆಕ್ಕಾಚಾರ. ಕೇವಲ ಒಡಿಸ್ಸಾ ರಾಜ್ಯವೊಂದರಲ್ಲೇ 28 ಥಳಿತ ಪ್ರಕರಣಗಳು ನಡೆದಿರುವುದು ಅಧಿಕೃತ ವರದಿ. ಹೀಗಿರುವಾಗ, ವರದಿಯಾಗದೇ ಸತ್ತು ಹೋದ ಪ್ರಕರಣಗಳು ಈ ಅಧಿಕೃತ ವರದಿಗಳ ದುಪ್ಪಟ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಈ ‘ಉದ್ರಿಕ್ತ ಗುಂಪನ್ನು’ ತೋರಿಸಿಯೇ ಬ್ಯಾಂಕ್ ಹಗರಣದ ಆರೋಪಿ ಚೋಕ್ಸಿಯು ಭಾರತಕ್ಕೆ ಬರುವುದರಿಂದ ವಿನಾಯಿತಿ ಕೋರಿದ್ದ. ಭಾರತಕ್ಕೆ ಬಂದರೆ ಥಳಿತಕ್ಕೊಳಗಾಗಿ ಹತ್ಯೆಗೀಡಾಗಬಹುದು ಎಂಬ ಭಯವನ್ನು ಬ್ರಿಟನ್ನಿನಲ್ಲಿರುವ ಆತ ವ್ಯಕ್ತಪಡಿಸಿದ್ದ. ಭಾರತದ ಈ ಉದ್ರಿಕ್ತ ಗುಂಪಿನ ಬಗ್ಗೆ ಕಳೆದ ವಾರ ಲಂಡನ್ನಿನ ಪ್ರಸಿದ್ಧ ಪತ್ರಿಕೆ ದಿ ಗಾರ್ಡಿಯನ್ ವಿಸ್ತೃತ ವರದಿಯನ್ನೇ ಮಾಡಿತ್ತು. ಅಷ್ಟಕ್ಕೂ, ಈ ಉದ್ರಿಕ್ತ ಗುಂಪು ತಯಾರಾಗುವುದು ಹೇಗೆ? ಯಾಕೆ? ಪ್ರತಿರೋಧ ವ್ಯಕ್ತಪಡಿಸಲೂ ಆಗದ ಒಂದು ಮನುಷ್ಯ ಜೀವವನ್ನು ಮನುಷ್ಯರೇ ಆಗಿರುವ ಕೆಲವರು ಥಳಿಸಿ ಕೊಲ್ಲುವಷ್ಟು ಕ್ರೂರಿಗಳಾಗುವುದು ಹೇಗೆ?
ನಿಜವಾಗಿ, ಥಳಿಸಿ ಕೊಲ್ಲುವವರನ್ನು ‘ಉದ್ರಿಕ್ತ ಗುಂಪು’ ಎಂಬ ಅನಾಮಿಕ ನಾಮದಲ್ಲಿ ಗುರುತಿಸುವುದೇ ಮೊದಲ ತಪ್ಪು. ‘ಉದ್ರಿಕ್ತ ಗುಂಪು’ ಎಂಬ ನಾಮಕರಣವು ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಸುಲಭ ಅವಕಾಶವನ್ನು ನೀಡುವುದಷ್ಟೇ ಅಲ್ಲ, ಆ ಕ್ರೌರ್ಯದ ತೀವ್ರತೆಯನ್ನು ತಗ್ಗಿಸುತ್ತದೆ. ಒಂದು ಸಮಾಜವೇ ಭಾಗಿಯಾದ ಪ್ರಕರಣವಾಗಿ ಅಂಥದ್ದೊಂದು ನಾಮಕರಣವು ಆ ಕ್ರೌರ್ಯವನ್ನು ಮಾರ್ಪಡಿಸಿ ಬಿಡುತ್ತದೆ. ‘ಉದ್ರಿಕ್ತ ಗುಂಪು’ ಎಂಬ ಪದವು ಸ್ಥಳೀಯವಾದ ಮತ್ತು ಕ್ಪಣದ ಆವೇಶದಿಂದ ಪ್ರಚೋದಿತವಾದ ನಾಗರಿಕ ಸಮೂಹ ಎಂಬರ್ಥದಲ್ಲಿ ಇವತ್ತು ಬಳಸಲ್ಪಡುತ್ತದೆ. ಈ ಗುಂಪಿಗೆ ಅಪರಾಧ ಹಿನ್ನೆಲೆ ಇರಬೇಕೆಂದಿಲ್ಲ. ಸಾಂದರ್ಭಿಕ ಬೆಳವಣಿಗೆಗಳಿಂದ ಪ್ರಚೋದಿತಗೊಂಡು ಪ್ರತಿಕ್ರಿಯೆ ವ್ಯಕ್ತಪಡಿಸುವ ಸ್ಥಳೀಯ ನಾಗರಿಕರ ಗುಂಪೆಂಬುದಾಗಿ ಈ ಉದ್ರಿಕ್ತ ಗುಂಪು ಎಂಬ ಪದಪ್ರಯೋಗವು ಸಾಮಾನ್ಯವಾಗಿ ನಮ್ಮನ್ನು ನಂಬಿಸುತ್ತದೆ. ಇವತ್ತು ಥಳಿತ, ಹತ್ಯೆ, ಹಲ್ಲೆಗಳಲ್ಲಿ ನಿರತವಾಗಿರುವ ಉದ್ರಿಕ್ತ ಗುಂಪು ನಿಜಕ್ಕೂ ಇಷ್ಟು ಮುಗ್ಧವೇ? ಮಕ್ಕಳ ಕಳ್ಳತನದ ಹೆಸರಲ್ಲಿ ಮಾತ್ರ ಇವತ್ತು ಈ ದೇಶದಲ್ಲಿ ಉದ್ರಿಕ್ತ ಗುಂಪು ಸುದ್ದಿ ಮಾಡುತ್ತಿರುವುದಲ್ಲ. ಗೋಮಾಂಸ ಸಾಗಾಟದ ಹೆಸರಲ್ಲಿ, ದನಗಳ್ಳತನದ ಹೆಸರಲ್ಲಿ ಮತ್ತು ಭಿನ್ನ ಧರ್ಮದ ಜೋಡಿಗಳ ಹೆಸರಲ್ಲೂ ಈ ಗುಂಪು ಉದ್ರಿಕ್ತವಾಗುತ್ತಿದೆ. ಮಕ್ಕಳ ಕಳ್ಳತನವನ್ನು ತಡೆಯುವ ಹೆಸರಲ್ಲಿ ಹುಟ್ಟಿಕೊಂಡ ಗುಂಪು ಈ ಉದ್ರಿಕ್ತ ಗುಂಪಿನ ಪಟ್ಟಿಯಲ್ಲಿ ತೀರಾ ಇತ್ತೀಚಿನದು. ಬಹುಶಃ, ಈ ಹಿಂದಿನ ಉದ್ರಿಕ್ತ ಗುಂಪುಗಳ ಪ್ರಭಾವದಿಂದಾಗಿ ಹುಟ್ಟಿಕೊಂಡಿರುವ ಗುಂಪು ಇದಾಗಿರುವ ಸಾಧ್ಯತೆಯೇ ಹೆಚ್ಚು. ಕೋಮುಗಲಭೆಯ ಸಂದರ್ಭದಲ್ಲಿ ಈ ‘ಉದ್ರಿಕ್ತ ಗುಂಪು’ ಅತ್ಯಂತ ಹೆಚ್ಚು ಪ್ರಾಣಹಾನಿ ಮತ್ತು ಮಾನಹಾನಿಗೆ ಕಾರಣವಾಗಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಈ ಉದ್ರಿಕ್ತ ಗುಂಪಿನ ಪಾತ್ರ ಬಹಳ ದೊಡ್ಡದು.
ಅಪರಾಧ ಕೃತ್ಯಗಳನ್ನು ನಿರ್ದಿಷ್ಟ ವ್ಯಕ್ತಿಗಳ ಮೇಲೆ ಹೊರಿಸುವುದಕ್ಕೂ ಅನಾಮಿಕರಾದ ಒಂದು ಗುಂಪಿನ ಮೇಲೆ ಹೊರಿಸುವುದಕ್ಕೂ ಬಹುದೊಡ್ಡ ವ್ಯತ್ಯಾಸವಿದೆ. ಒಂದಿಬ್ಬರು ವ್ಯಕ್ತಿಗಳು ಒಂದು ಹತ್ಯೆಯಲ್ಲಿ ಭಾಗಿಯಾದರೆ ಅದು ನಿರ್ದಿಷ್ಟ ವ್ಯಕ್ತಿಗಳ ಅಪರಾಧವಾಗಿ ಗುರುತಿಗೀಡಾಗುತ್ತದೆ. ಸಮಾಜ ಅವರನ್ನು ತಪ್ಪಿತಸ್ಥರಂತೆ ನೋಡುತ್ತದೆ. ಮಾಧ್ಯಮಗಳು ಅವರ ಹೆಸರನ್ನು ಉಲ್ಲೇಖಿಸಿಯೇ ಕೃತ್ಯವನ್ನು ವರದಿ ಮಾಡುತ್ತದೆ. ಆದರೆ ‘ಉದ್ರಿಕ್ತ ಗುಂಪಿಗೆ’ ಈ ಭೀತಿ ಎದುರಾಗುವುದು ಕಡಿಮೆ. ಉದ್ರಿಕ್ತ ಗುಂಪಿನ ಹತ್ಯೆಯಲ್ಲಿ ಸತ್ತವರು ಅಪರಾಧಿಗಳಾಗಿಯೂ ಸಾಯಿಸಿದವರು ನ್ಯಾಯಪಾಲಕರಾಗಿಯೂ ಸಾಮಾಜಿಕ ಮನ್ನಣೆಗೆ ಒಳಗಾಗುವ ಸಾಧ್ಯತೆಗಳೇ ಅಧಿಕ. ಈ ಹತ್ಯೆಯಲ್ಲಿ ಅಪರಾಧಿ ಇರುವುದಿಲ್ಲ. ಪಾಠ ಕಲಿಸಿದವರಷ್ಟೇ ಇರುತ್ತಾರೆ. ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಅತ್ಯಾಚಾರ ಮತ್ತು ಹತ್ಯೆಯಲ್ಲಿ ನಿರತವಾದ ಉದ್ರಿಕ್ತ ಗುಂಪನ್ನು ಇವತ್ತು ಸಾಮಾನ್ಯರಷ್ಟೇ ಅಲ್ಲ ಕೆಲವು ಮಾಧ್ಯಮದ ಮಂದಿಯೇ ಅಭಿಮಾನದಿಂದ ನೋಡುತ್ತಾರೆ. ಆ ಗುಂಪನ್ನು ಅಪರಾಧಿ ಎನ್ನುವ ಬದಲು ಪಾಠ ಕಲಿಸಿದ ಗುಂಪಾಗಿ ಪರೋP್ಷÀವಾಗಿ ವ್ಯಾಖ್ಯಾನಿಸುವ ಶ್ರಮ ನಡೆಸುತ್ತಾರೆ. ಮಕ್ಕಳ ಕಳ್ಳತನದ ಹೆಸರಲ್ಲಿ ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಉದ್ರಿಕ್ತ ಗುಂಪನ್ನು ಪಕ್ಕಕ್ಕಿಟ್ಟು ಈ ಹಿಂದೆ ಸುದ್ದಿಯಲ್ಲಿದ್ದ ಮತ್ತು ಈಗಲೂ ಇರುವ ಉದ್ರಿಕ್ತ ಗುಂಪನ್ನೊಮ್ಮೆ ಸ್ಮರಿಸಿಕೊಳ್ಳಿ. ಅದು ಮಾಡಿರುವ ಮತ್ತು ಮಾಡುತ್ತಿರುವ ಅನಾಹುತಗಳನ್ನೊಮ್ಮೆ ಮೆಲುಕು ಹಾಕಿ. ಈ ಗುಂಪು ಉದ್ರಿಕ್ತವಾಗುವುದು ಯಾವಾಗಲೂ ಒಂದು ನಿರ್ದಿಷ್ಟ ಧರ್ಮದೊಂದಿಗೆ ಗುರುತಿಸಿಕೊಂಡ ಜನರ ಮೇಲೆ. ದನ ಸಾಗಾಟದ ಹೆಸರಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಮತ್ತು ಉತ್ತಮ ಭಾರತದಲ್ಲಿ ಈ ಉದ್ರಿಕ್ತ ಗುಂಪು ಸಾಯಿಸಿರುವ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ಈಡು ಮಾಡಿರುವ ಹೆಸರುಗಳೆಲ್ಲ ಏನೇನು? ಯಾಕೆ ಒಂದೇ ಸಮುದಾಯಕ್ಕೆ ಸೇರಿದವರ ಮೇಲೆ ಈ ಗುಂಪು ಉದ್ರೇಕಗೊಳ್ಳುತ್ತದೆ? ದನ ಮಾರಾಟ ಮಾಡಿದವರು, ಅದನ್ನು ಕಸಾಯಿ ಮಾಡುವವರು, ಕಸಾಯಿಖಾನೆಯನ್ನು ಏಲಂ ಮಾಡುವವರು ಮತ್ತು ಗೋಮಾಂಸದ ಕಾರ್ಖಾನೆಯನ್ನು ಸ್ಥಾಪಿಸಿ, ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವವರ ಮೇಲೆ ಈ ಗುಂಪು ಉದ್ರಿಕ್ತವಾಗದೇ ಇರುವುದಕ್ಕೆ ಕಾರಣಗಳೇನು? ಉದ್ರಿಕ್ತ ಗುಂಪು ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಅದು ಗೋಮಾರಾಟದಿಂದ ತೊಡಗಿ ಮಾಂಸವಾಗಿ ರಫ್ತಾಗುವವರೆಗಿನ ಉದ್ದದ ರೈಲಿನಂಥ ಬೋಗಿಯಿಂದ ಮಧ್ಯದ ಒಂದು ಬೋಗಿಯನ್ನು ಮಾತ್ರ ಕಿತ್ತು ಉಳಿದ ಬೋಗಿಗಳ ಸಾಗಾಟಕ್ಕೆ ಅನುಮತಿ ಕೊಡುವುದಕ್ಕೆ ಸಾಧ್ಯವೇ ಇಲ್ಲ. ಆ ಇಡೀ ರೈಲನ್ನು ತಡೆದು ನಿಲ್ಲಿಸುವುದೇ ನಿಜವಾದ ಪ್ರಾಮಾಣಿಕತೆ. ಆದರೆ ಹಾಗೆ ಆಗುವುದೇ ಇಲ್ಲವಲ್ಲ ಯಾಕೆ?
ಮಕ್ಕಳ ಕಳ್ಳರನ್ನು ಶಿಕ್ಷಿಸುವ ಹೆಸರಲ್ಲಿ ಇದೀಗ ಸುದ್ದಿಯಲ್ಲಿರುವ ಉದ್ರಿಕ್ತ ಗುಂಪಿಗೆ ನಿಜವಾಗಿ ಈಗಾಗಲೇ ಚಟುವಟಿಕೆಯಲ್ಲಿರುವ ಮತ್ತು ನಿರ್ದಿಷ್ಟ ಸಮುದಾಯವನ್ನೇ ಗುರಿ ಮಾಡಿಕೊಂಡು ಉದ್ರಿಕ್ತವಾಗುವ ಗುಂಪೇ ಮೂಲ ಪ್ರಚೋದನೆ ಎಂದೇ ಹೇಳಬೇಕು. ಈ ಗುಂಪನ್ನು ಮಟ್ಟ ಹಾಕಲು ವ್ಯವಸ್ಥೆಗೆ ಸಾಧ್ಯವಾಗಿರುತ್ತಿದ್ದರೆ ಮಕ್ಕಳ ಕಳ್ಳತನದ ಹೆಸರಲ್ಲಿ ಉದ್ರಿಕ್ತ ಗುಂಪು ತಯಾರಾಗುವುದನ್ನು ತಪ್ಪಿಸುವುದಕ್ಕೆ ಸಾಧ್ಯವಾಗುತ್ತಿತ್ತು. ಯಾರೇ ಆಗಲಿ, ಥಳಿಸಿ ಕೊಲ್ಲುವವರನ್ನು ಎಂದೂ ಉದ್ರಿಕ್ತ ಗುಂಪಿಗೆ ಸೇರಿಸಲೇಬಾರದು. ಆ ಗುಂಪು ಎಷ್ಟೇ ದೊಡ್ಡದಿದ್ದರೂ ಅದನ್ನು ಬಿಡಿಬಿಡಿಯಾಗಿಸಿ ಪ್ರತಿಯೊಬ್ಬರ ಮೇಲೂ ಪೊಲೀಸರು ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಪೂರಕ ಸಾಕ್ಷ್ಯಗಳನ್ನೂ ಕಲೆ ಹಾಕಬೇಕು. ಗುಂಪಾಗಿ ಸೇರಿಕೊಂಡು ಮಾಡುವ ಹತ್ಯೆಯು ನ್ಯಾಯಾಂಗದಲ್ಲಿ ಸಾಬೀತಾಗುವುದಿಲ್ಲ ಎಂಬ ಧೈರ್ಯವೇ ಇಂಥ ಕ್ರೌರ್ಯಕ್ಕೆ ಜನರನ್ನು ಪ್ರೇರೇಪಿಸುತ್ತದೆ. ಇಂಥ ಗುಂಪಿನಲ್ಲಿ ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರೇ ಅಧಿಕವಿರುತ್ತಾರೆ. ಹೆಸರಿಗೆ ಉದ್ರಿಕ್ತ ಗುಂಪಾದರೂ ಅಲ್ಲಿರುವುದೆಲ್ಲ ಬಹುತೇಕ ಕ್ರಿಮಿನಲ್ ಹಿನ್ನೆಲೆ ಇರುವವರೇ. ಆದರೆ ಉದ್ರಿಕ್ತ ಗುಂಪು ಎಂಬ ನಾಮಕರಣವು ಅವರ ನಿಜ ಮುಖವನ್ನು ಸಮಾಜದಿಂದ ಅಡಗಿಸಿಡುತ್ತದೆ. ಇದು ನಡೆಯಬಾರದು.