ಉರುಳಿದ ಮಾಣಿಕ್ಯ’ ಚುನಾವಣಾ ಮೈತ್ರಿ ಬಗ್ಗೆ ಸಿದ್ದರಾಮಯ್ಯ ಮರು ಚಿಂತನೆ?

0
1217

ಈಶಾನ್ಯದ ಮೂರು ರಾಜ್ಯಗಳ ಚುನಾವಣಾ ಫಲಿತಾಂಶಗಳು ಬಿಜೆಪಿಯಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ರೀತಿಯಲ್ಲಿ ಹೊರಬಂದಿದ್ದು, ಎಡ ಪಕ್ಷಗಳ ಅಸ್ತಿತ್ವದ ಮೇಲೆ ತೀವ್ರ ಪ್ರಶ್ನೆಗಳನ್ನೆತ್ತಿದೆ. ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬಾರದೆಂಬ ಎಡ ಪಕ್ಷ ಪಾಲಿಟ್ ಬ್ಯೂರೋದ ಇತ್ತೀಚಿನ ತೀರ್ಮಾನವು ತ್ರಿಪುರಾದ ಮಾಣಿಕ್ ಸರ್ಕಾರ್ ಅವರ ಎಡ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಅಲ್ಲಗಳೆಯಲಾಗದು. ತ್ರಿಪುರದಲ್ಲಿ ಕಳೆದ 25 ವರ್ಷಗಳಿಂದ ಆಳ್ವಿಕೆ ನಡೆಸುತ್ತಿರುವ ಎಡ ಪಕ್ಷ ಸರ್ಕಾರದ ಪತನವು ಎಡಪಂಥೀಯ ವಿಚಾರಧಾರೆಯ ಮೇಲೆ ಜನರ ಆಕರ್ಷಣೆ ಕಡಿಮೆಯಾಗುತ್ತಿದೆಯೇ ಎಂಬ ಸಂದೇಹ ಚಿಂತಕರನ್ನು ಕಾಡತೊಡಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಚಾರ ಮಾಡಲಾಗುತ್ತಿರುವ ತೀವ್ರ ಬಲಪಂಥೀಯ ಆಲೋಚನೆಗಳನ್ನು ಎದುರಿಸುವಲ್ಲಿ ಕಾರಾಟ್ ನೇತೃತ್ವದ ಎಡ ಪಕ್ಷವು ವಿಫಲವಾಗಿರುವುದನ್ನು ತ್ರಿಪುರ ಸೋಲು ಸ್ಪಷ್ಟಪಡಿಸುತ್ತಿದೆ. ಸೊನ್ನೆಯಿಂದ ನಲವತ್ತರಷ್ಟು ಸ್ಥಾನ ಪಡೆದ ಬಿಜೆಪಿಯ ಸಾಧನೆಯು ಅಭೂತಪೂರ್ವವಾದುದು. ನೋಟು ನಿಷೇಧ, ಜಿಎಸ್ಟಿ, ಭ್ರಷ್ಟಾಚಾರ, ಮತ್ತು ಆಹಾರ ಮೈಲಿಗೆಯಂಥ ಕೇಂದ್ರದ ನಿಲುವುಗಳು ಈಶಾನ್ಯ ರಾಜ್ಯಗಳ ಮತದಾರರ ಮೇಲೆ ಪರಿಣಾಮ ಬೀರದಿರುವುದಕ್ಕೆ ಕಾರಣಗಳೇನು ಅನ್ನುವ ಪ್ರಶ್ನೆಗಳೂ ಉದ್ಭವಿಸಿವೆ. ಈ ಫಲಿತಾಂಶಗಳು ಮುಂದಿನ ಕರ್ನಾಟಕ ಚುನಾವಣೆಯ ಬಗ್ಗೆ ಬಿಜೆಪಿಯಲ್ಲಿ ಭರವಸೆ ಹೆಚ್ಚಿಸಿದ್ದರೆ ಅದನ್ನು ಅಸಹಜ ಎನ್ನುವಂತಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರವು ಬಿಜೆಪಿಯೇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮರು ಚಿಂತನೆ ನಡೆಸುವುದಕ್ಕೆ ಈ ಫಲಿತಾಂಶಗಳು ಒತ್ತಡ ಹೇರುವ ಸಾಧ್ಯತೆಯೇ ಹೆಚ್ಚು