ಒಂದು ಪೋಸ್ಟ್ ಕಾರ್ಡ್ ನ ಸುತ್ತಾ..

0
465

ಏ. ಕೆ. ಕುಕ್ಕಿಲ

ಪೋಸ್ಟ್ ಕಾರ್ಡ್ ನ್ಯೂಸ್ ಎಂಬ ಅಂತರ್ ಜಾಲ ಪತ್ರಿಕೆಯ ಸ್ಥಾಪಕ ಮಹೇಶ್ ವಿಕ್ರಂ ಹೆಗಡೆಯ ಬಂಧನವಾಗಿದೆ. ಜೈನ ಮುನಿ ಉಪಾಧ್ಯಾಯ್ ಮುನೀರ್ ಸಾಗರ್ ಅವರನ್ನು ಹತ್ಯೆ ಮಾಡಲು ಮುಸ್ಲಿಂ ಯುವಕರು ಯತ್ನಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಡಿದ ಕಾರಣಕ್ಕಾಗಿ ಈ ಬಂಧನ ನಡೆದಿದೆ. ನಿಜವಾಗಿ, ಸಹಜವಾಗಿರುವಾಗ ಸುಳ್ಳು ಹೇಳಬೇಕಾಗಿಲ್ಲ. ಸಹಜವನ್ನು ಅಸಹಜವೆಂದು ಬಿಂಬಿಸಬೇಕಾದ ಅಗತ್ಯ ಬಂದಾಗ ಸುಳ್ಳಿನ ಮೊರೆ ಹೋಗಬೇಕಾಗುತ್ತದೆ. ಇದು, ಪೋಸ್ಟ್ ಕಾರ್ಡ್ ನ್ಯೂಸ್ ನ ಮಹೇಶ್ ವಿಕ್ರಂ ಹೆಗಡೆ ಒಬ್ಬರ ಸಮಸ್ಯೆ ಅಲ್ಲ. ಅಂದಹಾಗೆ, ಜೈನ ಮುನಿಯನ್ನು ಹತ್ಯೆ ಮಾಡಲು ಮುಸ್ಲಿಂ ಯುವಕರು ಯತ್ನಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸೃಷ್ಟಿಸಲು ಹೆಗಡೆ ಮುಂದಾದದ್ದು ಏಕೆ? ಹಾಗೆ ಮಾಡುವುದರಿಂದ ಯಾರಿಗೆ ಲಾಭ? ಯಾಕೆ ಲಾಭ? ಅಷ್ಟಕ್ಕೂ, ಮುನಿಯ ಹತ್ಯೆಗೆ ಮುಸ್ಲಿಮರು ಯಾಕಾಗಿ ಯತ್ನಿಸಬೇಕು? ಒಂದುವೇಳೆ, ಯತ್ನಿಸಿದರೂ, ಅದು, “ಜೈನ ಯುವಕರು ಮುನಿಯ ಹತ್ಯೆಗೆ ಯತ್ನಿಸಿದರು..” ಎಂಬಷ್ಟೇ ಸಹಜವಾಗಿ ಯಾಕೆ ಸ್ವೀಕೃತವಾಗಬಾರದು? ಹತ್ಯೆಗೆ ಯತ್ನಿಸುವುದು ಕ್ರಿಮಿನಲ್ ಅಪರಾಧ. ಹಿಂದೂ ಆದರೂ ಮುಸ್ಲಿಂ ಆದರೂ ಭಾರತೀಯ ದಂಡಸಂಹಿತೆ ಸಮಾನ. ಇಷ್ಟಿದ್ದೂ, ಹಿಂದೂವಿನ ಮೇಲೆ ಮುಸ್ಲಿಮನ ಹಲ್ಲೆ ಅಥವಾ ಮುಸ್ಲಿಮನ ಮೇಲೆ ಹಿಂದೂವಿನ ಹಲ್ಲೆ ಎಂಬುದರಲ್ಲಿ ಅಸಹಜತೆಯನ್ನು ಹುಟ್ಟುಹಾಕಿದವರು ಯಾರು? ಯಾಕಾಗಿ? ಇಂಥ ಪ್ರಕರಣಗಳಲ್ಲಿ ಧರ್ಮದ ಪಾತ್ರ ಏನು? ರಾಜಕೀಯದ ಪಾತ್ರ ಏನು? ಇನ್ನೊಂದು ಧರ್ಮದವರನ್ನು ಹತ್ಯೆಗೈದು ಬೆಳೆಯುವ ಧರ್ಮವಾದರೂ ಯಾವುದು? ಯಾರೇ ಆಗಲಿ, ಒಂದು ಧರ್ಮದ ಕಡೆಗೆ ಆಕರ್ಷಿತವಾಗಬೇಕಾದರೆ, ಆ ಧರ್ಮ ಶಾಂತಿಯುತವಾಗಿರಬೇಕು. ಹತ್ಯೆ, ಹಲ್ಲೆಗಳು ಒಂದು ಧರ್ಮವನ್ನು ಅನಾಕರ್ಷಣೆಗೆ ಒಳಪಡಿಸಬಹುದೇ ಹೊರತು ಆಕರ್ಷಣೆಗೆ ಅಲ್ಲ.

ಈ ದೇಶದ ಮುಸ್ಲಿಮರ ಮೂಲ ಹಿಂದೂಗಳಲ್ಲಿದೆ. ಇಸ್ಲಾಮ್ ನಿಂದ ಆಕರ್ಷಿತರಾದ ಈ ದೇಶದ (ಆಗ ಭಾರತ ದೇಶ ಎಂಬ ದೇಶ ಚೌಕಟ್ಟು ಇರಲಿಲ್ಲ) ಮೂಲನಿವಾಸಿಗಳು ಮುಸ್ಲಿಮರಾಗಿ ಪರಿವರ್ತಿತರಾದರು. ಹಾಗೆ ಬದಲಿಕೊಳ್ಳುವುದಕ್ಕೆ ಈ ದೇಶದಲ್ಲಿ ಸ್ವಾತಂತ್ರ್ಯ ಇತ್ತು ಅನ್ನುವುದನ್ನೂ ನಾವಿಲ್ಲಿ ಗಮನಿಸಬೇಕು. ಈ ದೇಶದ ಈ ಉದಾರ ಗುಣವನ್ನು ಯಾರೂ ನಿರ್ಲಕ್ಷಿಸಿ ಮಾತಾಡಬೇಕಿಲ್ಲ. ಹಾಗಂತ, ಈ ಬಗೆಯ ಉದಾರ ಗುಣ ಜಗತ್ತಿನ ಎಲ್ಲ ಭಾಗಗಳಲ್ಲೂ ಇವೆ. ಜಪಾನಿನ ಮೂಲ ನಿವಾಸಿಗಳು ಬುದ್ಧ ಧರ್ಮವನ್ನು ಪ್ರೀತಿಸಿ ಅದರಂತೆ ಬಾಳಿದರು. ಶ್ರೀಲಂಕನ್ ನಿವಾಸಿಗಳು, ಮಾನ್ ಮಾರ್ ಸಹಿತ ವಿಶ್ವದ ಎಲ್ಲೆಡೆಯೂ ಈ ವಾತಾವರಣವನ್ನು ನಾವು ಕಾಣಬಹುದು. ಅಮೇರಿಕ ಸಹಿತ ಯುರೋಪಿಯನ್ ರಾಷ್ಟ್ರಗಳಲ್ಲಿ ಹರೇ ರಾಮ್ ಹರೇ ಕೃಷ್ಣ ಪಂಥವು ಸಕ್ರಿಯವಾಗಿದೆ. ಅಲ್ಲಿನ ಮಂದಿ ಹಿಂದೂ ಧರ್ಮದಿಂದ ಆಕರ್ಷಿತರಾಗಿ ಅದರಂತೆ ಬದುಕು ಬದಲಿಸಿಕೊಳ್ಳುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಇದು ತಪ್ಪೂ ಅಲ್ಲ. ಅಸಹಜವೂ ಅಲ್ಲ. ಆದರೆ, ಇವತ್ತು, ಈ ದೇಶದಲ್ಲಿ ಈ ಪ್ರಕೃತಿ ಸಹಜ ಪ್ರಕ್ರಿಯೆಯನ್ನೇ ಅಸಹಜವಾಗಿ, ಸಂಚು ಎಂಬಂತೆ ಕಾಣಲಾಗುತ್ತಿದೆ.

ಪ್ರತಿ ಧರ್ಮಕ್ಕೂ ಅದರದ್ದೇ ಆದ ವಿಶೇಷತೆ ಇದೆ. ಆ ವಿಶೇಷತೆಗಳೇ ಆಯಾ ಧರ್ಮಗಳ ಜೀವಾಳ. ಧರ್ಮಗಳು ಎಂದೂ ಪರಸ್ಪರ ವಿರೋಧಿಗಳಲ್ಲ. ಅವುಗಳ ನಡುವೆ ವೈಚಾರಿಕ ಭಿನ್ನಾಭಿಪ್ರಾಯಗಳಿವೆಯೇ ಹೊರತು ವೈರತ್ವವೂ ಇಲ್ಲ. ಆದ್ದರಿಂದ ಅದರ ಅನುಯಾಯಿಗಳು ಪರಸ್ಪರ ವೈರಿಗಳಾಗುವುದು ಧರ್ಮವಾಗಲೂ ಸಾಧ್ಯವಿಲ್ಲ. ಸುಳ್ಳನ್ನು ಎಲ್ಲ ಧರ್ಮಗಳೂ ಖಂಡಿಸುತ್ತವೆ ಎಂಬ ನೆಲೆಯಲ್ಲಿ ಪೋಸ್ಟ್ ಕಾರ್ಡ್ ನ್ಯೂಸನ್ನು ನಾವು ಖಂಡಿಸಬೇಕೇ ಹೊರತು ಅದನ್ನು ಹರಡಿದವರು ಹೆಗಡೆ ಎಂಬ ಕಾರಣಕ್ಕಾಗಿ ಅಲ್ಲ. ಕೆಡುಕನ್ನು ಕೆಡುಕೆಂದೂ ಒಳಿತನ್ನು ಒಳಿತೆಂದೂ ಪರಿಗಣಿಸಿ ಎಲ್ಲರೂ ಅದರಂತೆ ನಡೆದರೆ, “ಮುನಿಯ ಹತ್ಯೆಗೆ ಮುಸ್ಲಿಮರು ಯತ್ನಿಸಿದರು” ಎಂಬ ಸುದ್ದಿಯ ಮುಸ್ಲಿಂ ಎಂಬ ಉಲ್ಲೇಖಕ್ಕೆ ಮಹತ್ವವೇ ಲಭ್ಯವಾಗುವುದಿಲ್ಲ. ಸಧ್ಯದ ಅಗತ್ಯ ಇದು.