ಕನ್ನಡಪ್ರಭದ ಮುಖಪುಟದಲ್ಲಿ ಪ್ರಕಟವಾದ ಸಮೀಕ್ಷಾ ವರದಿ ಮತ್ತು ಚಾಲ್ತಿಯಲ್ಲಿರುವ ಸುಳ್ಳು ವರದಿಗಳು     

0
2545

ಏ. ಕೆ. ಕುಕ್ಕಿಲ

ಇವತ್ತಿನ ( ಮೇ 9) ಕನ್ನಡಪ್ರಭ ಪತ್ರಿಕೆಯು ಜನ್ ಕೀ ಬಾತ್ ಎಂಬ ಅನಾಮಧೇಯ ಸಂಸ್ಥೆಯ ಸಮೀಕ್ಷಾ ವರದಿಯನ್ನು ಮುಖಪುಟದಲ್ಲಿ ಪ್ರಕಟಿಸಿದೆ. ಅದರ ಪ್ರಕಾರ, ಬಿಜೆಪಿಗೆ 107 ಮತ್ತು ಕಾಂಗ್ರೆಸ್ ಗೆ 74 ಸ್ಥಾನಗಳು ಸಿಗಲಿವೆಯಂತೆ. ಆದರೆ, ಇಡೀ ವರದಿಯಲ್ಲಿ ಈ ಜನ್ ಕೀ ಬಾತ್ ಸಂಸ್ಥೆಯ ಬಗ್ಗೆ ಯಾವ ವಿವರಗಳೂ ಇಲ್ಲ. ಈ ಸಂಸ್ಥೆ ಎಲ್ಲಿಯದು, ಅದರ ಮೂಲ ವ್ಯಕ್ತಿ ಯಾರು, ಈ ಹಿಂದೆ ಸಮೀಕ್ಷೆ ನಡೆಸಿದ ಅನುಭವ ಏನು, ಸಂಸ್ಥೆ ಯಾವ ಯಾವ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ.. ಇತ್ಯಾದಿ ಸಾಮಾನ್ಯ ಪ್ರಶ್ನೆಗಳಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಯಾವ ಉತ್ತರಗಳೂ ಇಲ್ಲ. ಈಗಾಗಲೇ, ಜನತಾ ಕೀ ಬಾತ್ ಮತ್ತು  ಸೀ ಫೋರ್ಸ್ ಸಂಸ್ಥೆ  ಹೆಸರಲ್ಲಿ ಪ್ರಕಟವಾದ ಸಮೀಕ್ಷಾ ವರದಿಗಳು ನಕಲಿ ಎಂಬುದು ಸಾಬೀತಾಗಿದೆ. ಜನತಾ ಕೀ ಬಾತ್ ಸಂಸ್ಥೆಯ ಹೆಸರಲ್ಲಿ ಪ್ರಕಟವಾದ ಸಮೀಕ್ಷೆಯಲ್ಲಿ ಬಿಜೆಪಿಗೆ 135 ಮತ್ತು ಕಾಂಗ್ರೆಸ್ ಗೆ 35 ಸ್ಥಾನಗಳನ್ನು ನೀಡಲಾಗಿತ್ತು. ಮಾತ್ರವಲ್ಲ, ಸಮೀಕ್ಷೆಯನ್ನು ಬಲಗೊಳಿಸುವುದಕ್ಕಾಗಿ ಬಿಬಿಸಿ ಸಂಸ್ಥೆಯ ಲೋಗೋ ಮತ್ತು ವೆಬ್ ಲಿಂಕ್ ಅನ್ನು ಬಳಸಿಕೊಂಡು ಇದು ಬಿಬಿಸಿ ನಡೆಸಿದ ಸಮೀಕ್ಷೆ ಎಂದು ಜನರನ್ನು ನಂಬಿಸುವ ಪ್ರಯತ್ನವನ್ನೂ ಮಾಡಲಾಗಿತ್ತು. ಆದರೆ, ಬಿಬಿಸಿ ಸಂಸ್ಥೆಯೇ ಅದನ್ನು ಅಲ್ಲಗಳೆಯಿತು. ಇನ್ನು, ಸಿ ಫೋರ್ಸ್ ಅನ್ನುವ ಸಂಸ್ಥೆಯೇ ಅಸ್ತಿತ್ವದಲ್ಲಿಲ್ಲ. ಆದರೆ, ಇದರ ಹೆಸರಲ್ಲಿ ಪ್ರಕಟವಾದ ಸಮೀಕ್ಷೆ ಕೂಡ  ಬಿಜೆಪಿಗೆ 95 ಮತ್ತು ಕಾಂಗ್ರೆಸ್ ಗೆ 85 ಸ್ಥಾನಗಳನ್ನು ನೀಡಿತ್ತು. ಹೀಗೆ ಬಿಜೆಪಿಯನ್ನು ಗೆಲ್ಲಿಸುವುದಕ್ಕಾಗಿ ನಕಲಿ ಸಂಸ್ಥೆಗಳೆಲ್ಲಾ ರಂಗಕ್ಕಿಳಿದಿರುವ ಈ ಹೊತ್ತಿನಲ್ಲಿ, ಜನ್ ಕೀ ಬಾತ್  ಅನ್ನು ಕನ್ನಡಪ್ರಭ ನಂಬಿರುವುದಕ್ಕೆ ಕಾರಣಗಳೇನು? ಪತ್ರಿಕೆಯು ಸಂಸ್ಥೆಯ ವಿಶ್ವಾಸಾರ್ಹತೆಯನ್ನು ದೃಢಪಡಿಸಿಕೊಂಡಿದೆಯೇ,  ಅಥವಾ…

ಕನ್ನಡಪ್ರಭವೇ ಉತ್ತರಿಸಲಿ.