ಕರಾವಳಿಯನ್ನು ಕಾಡುತ್ತಿರುವ ಎರಡು ನಶೆ

0
418

ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿಯ ಜಿಲ್ಲೆ ಗಳಲ್ಲಿ ಕಳೆದ ಕೆಲವಾರು ವರ್ಷಗಳಿಂದ  ನಡೆಯು ತ್ತಿರುವ ಇಲ್ಲಿನ ವೃತ್ತಾಂತಗಳು ಆ ಹೆಸರಿಗೇ ಮಸಿ ಬಳಿಯುವಂತಿದೆ. ಹೌದು, ಇಲ್ಲಿ ಕೋಮು ವಾದದ ಅಮಲು ಮತ್ತು ಲಹರಿ  ಪದಾರ್ಥಗಳ ಅಮಲುಗಳು ಯುವಕರನ್ನು ಬೇಟೆಯಾಡುತ್ತಿವೆ. ಅದು ಕರಾವಳಿ ಜಿಲ್ಲೆಗಳನ್ನು ಕಲುಷಿತಮಯ ಗೊಳಿಸುತ್ತಿದೆ. ಅಮಾಯಕ  ಯುವಕರು ಇದಕ್ಕೆ ಬಲಿಯಾಗುತ್ತಿದ್ದಾರೆ.

ಹೆಚ್ಚುತ್ತಿರುವ ಮಾದಕ ವ್ಯಸನಿಗಳ ಸಂಖ್ಯೆಯೂ ಜಿಲ್ಲೆಗಳ ಬಗ್ಗೆ ಆತಂಕ ಹುಟ್ಟಿಸುವಂತಿದೆ. ಎಳೆಯ ಯುವ ಕಾಲೇಜು ವಿದ್ಯಾರ್ಥಿಗಳು  ಮಾದಕ ವ್ಯಸನಿಗಳಾಗುತ್ತಿರುವುದು ಕೂಡಾ ಇಲ್ಲಿ ಅಪರಾಧ ಪ್ರವೃತ್ತಿ ವ್ಯಾಪಕವಾಗಲು ಕಾರಣ ಎಂಬ ವಾಸ್ತವವನ್ನು ಮರೆಮಾಚಲಾಗದು.  ಯುವಕರು ಮತ್ತು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿ ಯಾಗಲು ಮುಖ್ಯ ಕಾರಣ ಹಣ ಗಳಿಕೆಯಾಗಿದೆ. ಈ ಲಹರಿ ಪದಾರ್ಥವನ್ನು ಖರೀದಿಸಲು ಈ ಚಟವನ್ನು ಅಂಟಿಸಿಕೊಂಡ ಮಧ್ಯಮ ವರ್ಗದ ಯುವಕರು ಶ್ರಮವಿಲ್ಲದೆ ಅಡ್ಡ  ದಾರಿಯಿಂದ ಹಣ ಗಳಿಸಲು ಪ್ರಯತ್ನಿಸುತ್ತಾರೆ. ಅಂತಹವರು ತಮ್ಮ ತಂದೆ, ತಾಯಿ ಆಪ್ತ ಸಂಬಂಧಿಕರನ್ನು ಕೊಲ್ಲಲೂ ಹೇಸುವುದಿಲ್ಲ. ಈ  ಅಪಾಯಕಾರಿ ಚಟವನ್ನು ಅಂಟಿಸಿಕೊಂಡ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ವಿಫಲರಾಗುತ್ತಾರೆ. ಅದು ಆ  ಕುಟುಂಬದ ಸ್ವಾಸ್ಥ್ಯವನ್ನೇ ಕೆಡಿಸುತ್ತಿದೆ. ಇವೆಲ್ಲವೂ ಪಕ್ಕದ ಕೇರಳ ರಾಜ್ಯದಲ್ಲಿ ನಡೆದ ನಡೆಸಿದ ಸರ್ವೆಯಲ್ಲಿ ಕಳೆದ ಮೂರು ವರ್ಷಗಳಿಗಿಂತ  2017ರಲ್ಲಿ ಹಣಕ್ಕಾಗಿ ತಮ್ಮ ತಂದೆ, ತಾಯಿ ಆಪ್ತ ಸಂಬಂಧಿಕ ರನ್ನು ಕೊಂದ ಘಟನೆಗಳು ನಡೆದಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ  ಮಹಾನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಪೋಷಕರು ಗಂಭೀರವಾಗಿ ಚಿಂತಿಸ ಬೇಕಾದ ಅನಿವಾರ್ಯತೆ  ಎದುರಾಗಿದೆ. ಯಾಕೆಂದರೆ ಹೈಸ್ಕೂಲ್‍ಗಳಿಗೂ ವ್ಯಾಪಿಸುವ ಹಂತಕ್ಕೆ ಈ ಪಿಡುಗು ಕಾಲಿಟ್ಟಿದೆ ಎಂಬುದು ಆತಂಕಕಾರಿ ವಿಚಾರವಾಗಿದೆ.
ಯಾಕೆಂದರೆ, ಇದು ಮದ್ಯಪಾನಕ್ಕಿಂತ ಅಪಾಯ ವಾಗಿದೆ. ಮದ್ಯವು ಬಹಿರಂಗವಾಗಿ ದೊರೆಯು ತ್ತಿದ್ದರೆ ಈ ಮಾದಕ ಪದಾರ್ಥದ  ವ್ಯವಹಾರಗಳು ಬಹಳ ರಹಸ್ಯವಾಗಿ ನಡೆಯುತ್ತಿರುತ್ತದೆ. ಸೆರೆ ಸಿಗುತ್ತಿರುವ ಮಾದಕ ಕಳ್ಳ ಸಾಗಾಣಿಕೆದಾರರ ಸಂಖ್ಯೆಯೂ ಇದಕ್ಕೆ  ಪುರಾವೆಯೆನ್ನುವಂತಿದೆ. ಗಾಂಜಾ ಮತ್ತು ಬ್ರೌನ್ ಶುಗರ್ ಇಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದೆ. ನಮ್ಮ ದೇಶದಲ್ಲಿ ಎಲ್ಲ ರೀತಿಯ  ಮಾದಕ ಪದಾರ್ಥ ಗಳನ್ನು ನಿಷೇಧಿಸಿದ್ದರೂ ಈ ಪಿಡುಗು ಹೇಗೆ ವ್ಯಾಪಕವಾಗುತ್ತಿದೆ ಎಂಬುದು ಕೂಡಾ ಚಿಂತನಾರ್ಹ. ಡ್ರಗ್ಸ್  ಮಾಫಿಯಾವನ್ನು ತಡೆಯಲು ಆಡಳಿತಗಾರರ ವಿಫಲವಾಗಿರುವುದನ್ನು ಇದು ಇದು ಸೂಚಿಸುತ್ತದೆ. ಇತ್ತೀಚೆಗೆ ಯುವತಿಯರು ಕೂಡಾ  ಇದರ ದಾಸರಾಗಿರುವ ವರದಿಗಳು ಕೇಳಿಬರು ತ್ತಿವೆ. ಬಸ್‍ಸ್ಟ್ಯಾಂಡ್ ಮತ್ತು ಸಣ್ಣ ಗೂಡಂಗಡಿಗಳಲ್ಲಿಯೂ ಇದರ ವ್ಯವಹಾರ ರಹಸ್ಯವಾಗಿ  ನಡೆಯುತ್ತಿವೆ. ಮಾಫಿಯಾಗಳು ಎಸೆಯುವ ಲಂಚದ ದಾಹಕ್ಕೆ ಕಾನೂನುಪಾಲಕರು ಬಲಿ ಯಾಗುತ್ತಿದ್ದಾರೆಯೆ ಎಂಬ ಅನುಮಾನ  ದಟ್ಟವಾಗಿದೆ. ಸಮಾಜದಲ್ಲಿರುವವರು ತಮ್ಮ ಮಕ್ಕಳು ಅದರ ದಾಸರಲ್ಲ ಎಂದು ತೆಪ್ಪಗಿರಬಾರದು. ಆದರೆ ಅದು ಮುಂದೊಂದು ದಿನ ನಮ್ಮ  ಮನೆಯನ್ನೂ ಪ್ರವೇಶಿಸಲಿದೆ ಎಂಬ ವಾಸ್ತವ ಪ್ರಜ್ಞೆ ಅರಿತು ಮಾದಕ ವ್ಯಸನಿ ವಿರೋಧಿ ಹೋರಾಟದಲ್ಲಿ ಭಾಗಿಯಾಗಬೇಕು.

ಇನ್ನೊಂದು ಅಮಲು ಕೋಮು ಅಮಲು. ಇದು ಕೂಡಾ ಅಪಾಯಕಾರಿ ಬೆಳವಣಿಗೆಯಾಗಿದೆ. ರಾಜಕೀಯದ ಕೆಲ ಸ್ವಾರ್ಥದ ಆಟಕ್ಕೆ  ಅಮಾಯಕರು ಬಲಿಯಾಗುತ್ತಿದ್ದಾರೆ. ಅಮಾಯಕರ ತಲೆಗೆ ಕೋಮು ವಿಷವನ್ನು ತುರುಕಿಸಿ ಪ್ರಚೋದಿಸಲಾಗುತ್ತಿದೆ. ಆ ಯುವ ಸಮೂಹವು  ಪರಸ್ಪರ ಜಾತಿಯ ಹೆಸರಲ್ಲಿ ವಿಂಗಡನೆಯಾಗುತ್ತಿದೆ. ಸಹ ಧರ್ಮೀಯರನ್ನು ಕೆಕ್ಕರಿಸಿ ನೋಡುವ ಮುಖ ಸಿಂಡರಿಸಿ ನೋಡುವ ಪ್ರವೃತ್ತಿ  ಯನ್ನು ಬೆಳೆಸುವಲ್ಲಿ ಎರಡೂ ಧರ್ಮಗಳ ಕೆಲ ಕೋಮುವಾದಿಗಳು ಯಶಸ್ವಿಯಾಗುತ್ತಿರುವುದೇ ಕರಾವಳಿ ಜಿಲ್ಲೆಯಲ್ಲಿ ಕೋಮು  ಅವಾಂತರಗಳು ವ್ಯಾಪಕವಾಗಲು ಕಾರಣವಾಗಿದೆ. ಈ ಕೋಮುವಾದ ನಶೆಯನ್ನು ಯುವಕರ ಮನದಿಂದ ಇಳಿಸಬೇಕಾದ ಅನಿವಾರ್ಯತೆ  ಇಲ್ಲಿ ನಿರ್ಮಾಣವಾಗಿದೆ. ಕರಾವಳಿ ಜಿಲ್ಲೆಯ ಜನರು ಎಷ್ಟು ಶಾಂತಿಪ್ರಿಯರು ಎಂಬುದನ್ನು ಗಾಯಾಳು ಬಶೀರ್‍ರನ್ನು ಆಸ್ಪತ್ರೆಗೆ ಸಾಗಿಸಿದ  ಹಿಂದೂ ಸಹೋದರರು, ದೀಪಕ್ ರಾವ್ ಮೇಲೆ ದಾಳಿ ಯಾಗುತ್ತಿರುವಾಗ ಅದನ್ನು ಕಲ್ಲೆಸೆದು ತಡೆಯಲು ಶ್ರಮಿಸಿದ ಮುಸ್ಲಿಮ್ ¸ ಸಹೋದರರು ಬಿಂಬಿಸಿದ್ದಾರೆ. ಆದರೆ ರಾಜಕೀಯದ ಸ್ವಾರ್ಥತೆಯು ಈ ಎರಡೂ ಸಮುದಾಯದ ನಡುವೆ ಕಿಚ್ಚು ಹಚ್ಚಿಸಿ ಲಾಭ ಗಳಿಕೆಯಲ್ಲಿ  ತೊಡಗುತ್ತಿದ್ದಾರೆ. ಅದಕ್ಕಾಗಿ ಅಮಾಯಕ ಬಡ ಯುವಕರ ತಲೆಗೆ ಕೋಮು ನಶೆ ಏರಿಸಲಾಗುತ್ತಿದೆ. ಈ ಎರಡೂ ಸಮುದಾಯ  ಶಾಂತಿಯುತವಾಗಿ ಬೆಳೆದರೆ ರಾಜಕೀಯದ ಕಾಪಟ್ಯವನ್ನು ಅರ್ಥೈಸುವರು ಎಂಬ ಭಾವನೆಯಿಂದ ಜನರ ಮನವನ್ನು ಬೇರೆಡೆಗೆ ತಿರುಗಿಸುವ  ಶ್ರಮವೂ ಇದರ ಹಿಂದೆ ಅಡಗಿದೆ. ರಾಜಕೀಯದಲ್ಲಿ ಸಂಚಲನ ಮೂಡಿಸಲು ವಿಷಯವಿಲ್ಲವೆಂದಾದಾಗ ಈ ರೀತಿಯ ಕೋಮು ¸ಸಂಘರ್ಷಗಳ ಲಾಭ ಗಳಿಸಲು ಅವರು ಹಾತೊರೆಯು ತ್ತಾರೆ. ಅದಕ್ಕಾಗಿ ಧಾರಾಳ ಹಣ ವ್ಯಯಿಸಲು ಅವರು ಹಿಂಜರಿಯುವು ದಿಲ್ಲ.  ಅಪರಾಧಿಗಳ ಪರ ವಾದಿಸಿ ಅವರಿಗೆ ತಮ್ಮ ಪ್ರಭಾವ ಬಳಸಿ ಜಾಮೀನು ನೀಡಿ ಬಿಡುಗಡೆಗೆ ಪ್ರಯತ್ನಿಸುತ್ತಾರೆ. ಇದು ಅಪರಾಧಿಗಳಿಗೆ  ವರದಾನವಾಗುತ್ತದೆ. ಮತ್ತೆ ಅವರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಹಸಿರು ನಿಶಾನೆ ಸಿಕ್ಕಂತಾಗು ತ್ತದೆ. ಕಾನೂನಿನ  ಮೇಲಿನ ಭಯ ಅವರಿಂದ ದೂರವಾಗುತ್ತದೆ. ಆದ್ದರಿಂದ ಈ ಎರಡೂ ರೀತಿಯ ನಶೆಯಿಂದ ನಮ್ಮ ಕರಾವಳಿ ಜಿಲ್ಲೆಗಳನ್ನು ಕಾಪಾಡಲೇಭೇಕು. ಇದಕ್ಕೆ ಸಮಾಜದ ಸ್ವಾಸ್ಥ್ಯ ಬಯಸುವ ಎಲ್ಲರೂ ಜಾತಿ ಧರ್ಮದ ನಡುವಿನ ಗೋಡೆ ಕೆಡವಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.  ಕೋಮು ಪ್ರಚೋದಕ ಮಾತುಗಳನ್ನಾಡುವವರ ವಿರುದ್ಧ ಧ್ವನಿಯೆತ್ತಬೇಕಾಗಿದೆ.

@ ಸಲೀಮ್ ಬೋಳಂಗಡಿ