ಕಾರಿನ ಬಾನೆಟ್ ಏರಿದ ಪ್ರತಿಭಟನಾಕಾರನನ್ನು ನಾಲ್ಕು ಕಿಮೀ ತನಕ ತಿರುಗಾಡಿಸಿದ ಬಿಡಿಒ ಅಧಿಕಾರಿ

0
155

ಸನ್ಮಾರ್ಗ ಡೆಸ್ಕ್
ಲಕ್ನೋ: ಉತ್ತರ ಪ್ರದೇಶದ ರಾಮನಗರದಲ್ಲಿ ನಡೆದ ಘಟನೆಯಿದು. ಬಿಡಿಓ ಕಚೇರಿಗೆ ಪ್ರತಿಭಟನೆಗೆ ಬಂದಿದ್ದ ಪ್ರತಿಭಟನಾಕಾರ ಬಿಡಿಓ ಅಧಿಕಾರಿಯ ಕಾರಿನ ಬಾನೆಟ್ ಮೇಲೇರಿದನು. ಬಿಡಿಓ ಅಧಿಕಾರಿಯು ಈತ ಬಾನೆಟ್ ಮೇಲೇರಿದಂತೆ ನಿಲ್ಲಿಸದೆ ಕಾರು ಚಲಾಯಿಸತೊಡಗಿದರು. ಈ ಪ್ರತಿಭಟನಾಕಾರನನ್ನು ಎತ್ತಿಕೊಂಡೇ ನಾಲ್ಕು ಕಿಮೀ ಯಷ್ಟು ದೂರದವರೆಗೂ ಕಾರು ಓಡಿಸಲಾಯ್ತು. ಗ್ರಾಮದ ಶೌಚಾಲಯ ನಿರ್ಮಾಣ ಯೋಜನೆಯ ಎರಡನೇ ಹಂತದ ಹಣವು ಬಿಡುಗಡೆ ಮಾಡದೇ ಇದ್ದುದನ್ನು ಪ್ರತಿಭಟಿಸಿ ಬಿಡಿಓ ಅಧಿಕಾರಿ ಪಂಕಜ್ ಕುಮಾರ್ ಗೌತಮ್ ಕಚೇರಿಗೆ ರಾಮನಗರ ನಿವಾಸಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.
ಆದರೆ ಈ ಬಗ್ಗೆ ಗ್ರಾಮವಾಸಿಗಳ ಅಹವಾಲು ಆಲಿಸಲು ಯಾರೂ ಬರಲಿಲ್ಲ. ಕೊನೆಗೆ ಪಂಕಜ್ ಕುಮಾರ್ ಕಚೇರಿಯ ಹೊರಗಡೆ ಬಂದರು, ಪ್ರತಿಭಟನಾಕಾರರ ಕಡೆಗೆ ಗಮನ ಹರಿಸದೆ ನಿರ್ಲಕ್ಷ ಭಾವದಿಂದ ಅಲ್ಲಿಂದ ತೆರಳಲು ಮುಂದಾದಾಗ ಪ್ರತಿಭಟನಾಕಾರರು ಅವರ ವಾಹನವನ್ನು ಸುತ್ತುವರಿದರು.

ಅನೇಕ ಬಾರಿ ಹಾರ್ನ್ ಮಾಡಿದರೂ ಪ್ರತಿಭಟನಾಕಾರರು ಕದಲಲಿಲ್ಲ. ಈ ಮಧ್ಯೆ ಬ್ರಿಜ್ ಪಾಲ್ ಎಂಬಾತ ಕಾರಿನ ಬಾನೆಟ್ ಮೇಲೇರಿದ. ಇದರಿಂದ ಕೆರಳಿದ ಪಂಕಜ್ ಕಾರನ್ನು ಮುಂದಕ್ಕೆ ಚಲಾಯಿಸಿದರು. ಬ್ರಿಜ್ ಪಾಲ್ ಗಟ್ಟಿಯಾಗಿ ಹಿಡಿದುಕೊಂಡನು. ಆದರೂ ಪಂಕಜ್ ವಾಹನ ನಿಲ್ಲಿಸಲು ತಯಾರಾಗಲಿಲ್ಲ. ಜೊತೆಗೆ ಈ ಪಂಕಜ್ ಅದನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸತೊಡಗಿದರು. ಬ್ರಿಜ್ ಪಾಲ್ ವಿರುದ್ದ ಪೋಲೀಸ್ ದೂರು ದಾಖಲಿಸುವ ಯೋಜನೆಯಿಂದ ಅವರು ಹಾಗೆ ಮಾಡಿದ್ದರು.
ನಾಲ್ಕು ಕಿಮೀ ತನಕ ಕಾರು ಚಲಾಯಿಸಿದ ಬಳಿಕ ಕಾರು ನಿಲ್ಲಿಸಿದರು. ಈ ಮಧ್ಯೆ ಬಾನೆಟ್ ಮೇಲೆ ಮಲಗಿದಂತೆ ಬ್ರಿಜ್ ಪಾಲ್ ಯಾರಿಗೋ ಫೋನ್ ಮಾಡುವ ದೃಶ್ಯ ಕೂಡಾ ವೀಡಿಯೋದಲ್ಲಿದೆ.
ಈ ವಿಡಿಯೋ ನೋಡಿ

ಪ್ರತಿಭಟನಾಕಾರನನ್ನು ಕಾರಿನ ಬಾನೆಟ್‍ನಲ್ಲಿ ಎತ್ತಿ ಕೊಂಡು ಹೋಗುವ ವೀಡೀಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಂಕಜ್ ಮತ್ತು ಬ್ರಿಜ್ ಪಾಲ್ ಈರ್ವರೂ ಪರಸ್ಪರ ದೂರು ದಾಖಲಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲು ಮೂವರು ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here