ಕಿಂಗ್ ಮೇಕರ್ ಆಗುವ ಕನಸಲ್ಲಿ ಜನತಾದಳ: ಪ್ರತಿತಂತ್ರ ಹೆಣೆಯುತ್ತಿರುವ ಸಿದ್ದರಾಮಯ್ಯ 

0
373

: ಸಲೀಮ್ ಬೋಳಂಗಡಿ

ಕಾಂಗ್ರೆಸ್ ನಲ್ಲಿ ಟಿಕೇಟ್ ಘೋಷಣೆಯಾಗುತ್ತಿದ್ದಂತೆಯೇ ಪಕ್ಷದೊಳಗಿನ ಆಂತರಿಕ ಕಲಹ ಸ್ಪೋಟಗೊಳ್ಳುತ್ತಿವೆ. ಒಗ್ಗಟ್ಟಿನ ತಂತ್ರ ಹೆಣೆದವರಿಂದ ಬಿಕ್ಕಟ್ಟಿನ ಮಂತ್ರ ಹೊರಬೀಳುತ್ತಿದೆ. ಪಕ್ಷದ ಪ್ರಭಾವೀ ನಾಯಕರ ಆಂತರಿಕ ತಿಕ್ಕಾಟಗಳು ಬಹಿರಂಗವಾಗುತ್ತಿವೆ. ಹೈಕಮಾಂಡ್‍ಗಂತೂ ಇದು ಎಂದಿನಂತೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೇಸ್‍ನಲ್ಲಿ ವಲಸಿಗ ಮತ್ತು ಮೂಲನಿವಾಸಿಗಳ ನಡುವಿನ ತಿಕ್ಕಾಟವೂ ಜೋರಾಗುವ ಸೂಚನೆ ಕಂಡುಬರುತ್ತಿದೆಯಾದರೂ ಇದು ಶುಭ ಸೂಚನೆಯಲ್ಲ. ವಿರೋಧ ಪಕ್ಷಗಳು ಸಿದ್ದರಾಮಯ್ಯರನ್ನು ತಹಬಂಧಿಗೆ ತರಲು ಆಯುಧವಿಲ್ಲದೆ ಹೆಣಗಾಡುತ್ತಿರುವಾಗ ಇಂಥಹ ಪ್ರಕ್ರಿಯೆಗಳು ಅವರಿಗೆ ಆಹಾರವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟವರಿಗೆ ಅನುಕೂಲ ಮಾಡಿಕೊಟ್ಟರೆ ತಾವು ಕೂಡಾ ಮನೆಗೆ ಹೋಗಬೇಕಾಗಬಹುದೆಂಬ ಸಾಮಾನ್ಯ ಪ್ರಜ್ಞೆ ಕೂಡಾ ಕಾಂಗ್ರೆಸ್  ವರಿಷ್ಟರಲ್ಲಿ ಇಲ್ಲವೇ ಎಂಬ ಅನುಮಾನ ಮೂಡುತ್ತದೆ. ಸ್ವಾರ್ಥವನ್ನು ಬದಿಗಿಡಬೇಕಾದ ಅಗತ್ಯವಿದೆ.
ಸಿದ್ದರಾಮಯ್ಯನವರಿಗೆ ಜೆಡಿಎಸ್ ಸಹವಾಸ ಬೇಡವೇ ಬೇಡ ಎಂಬಂತಿದ್ದರೆ ಮೂಲ ನಿವಾಸಿಗಳು ಈ ನಿಲುವಿನ ಬಗ್ಗೆ ಅಷ್ಟು ಸಹಮತ ಹೊಂದಿಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಹಾಗೂ ಜೆಡಿಎಸ್ ಎಂದರೆ ಜನತಾದಳ ಸಂಘಪರಿವಾರವೆಂದು ಬಹಿರಂಗವಾಗಿ ರಾಹುಲ್ ಹೇಳಿದ್ದರ ಹಿಂದೆ ಸಿದ್ದರಾಮಯ್ಯನವರ ಕೈಚಳಕವಿದೆ. ಜೆಡಿಎಸ್ ಸಂಪೂರ್ಣ ನೆಲ ಕಚ್ಚುವುದನ್ನು ಸಿದ್ದರಾಮಯ್ಯ ಬಯಸುತ್ತಾರೆ. ಯಾಕೆಂದರೆ ಅತಂತ್ರ ವಿದಾನ ಸಭೆ ಅಸ್ತಿತ್ವಕ್ಕೆ ಬಂದು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ
ಆಗ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ. ಆಗ ಸರಕಾರಕ್ಕೆ ಬೆಂಬಲ ಬೇಕಾದರೆ ಸಿದ್ದರಾಮಯ್ಯರವರನ್ನು ಮುಖ್ಯಮಂತ್ರಿಯಿಂದ ಕೆಳಗಿಳಿಸುವ ಬೇಡಿಕೆ ಮುಂದಿಡುವ ಸಾದ್ಯತೆಯಿದೆ. ಇದೇ ಚಿಂತನೆ ಮೂಲ ಕಾಂಗ್ರೆಸಿಗರಲ್ಲಿಯೂ ಮೂಡಿದೆ. ಅದಕ್ಕಾಗಿ ಅವರು ಜೆಡಿಎಸ್ ಮೇಲೆ ಸ್ವಲ್ಪ ಮಟ್ಟಿನ ಅನುಕಂಪ ತೋರುತ್ತಿದ್ದಾರೆ. ಈ ಮೂಲಕ ಅವಕಾಶವಾದೀ ರಾಜಕಾರಣದ ಬೆನ್ನು ಹತ್ತುವ ಕೆಲಸದಲ್ಲಿ ತೊಡಗಿದ್ದಾರೆ. ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂದರೆ ಸಿದ್ದು ಆಟವೇನೂ ನಡೆಯದು ಎಂಬ ಕಾರಣದಿಂದ ಜನತಾದಳದ ಜನ್ಮವನ್ನು ಜಾಲಾಡಿಸುವಲ್ಲಿ ಸಿದ್ದರಾಮಯ್ಯ ನಿರತರಾಗಿದ್ದಾರೆ. ಕೋಮುವಾದೀ ಪಕ್ಷದೊಂದಿಗಿನ ಜನತಾದಳದ ಸಂಬಂಧವನ್ನು ಅವರು ಹರಾಜು ಹಾಕುತ್ತಿದ್ದಾರೆ. ಈ ರೀತಿ ಮುಸ್ಲಿಮ್ ಮತ ಜನತಾದಳದತ್ತ ಹರಿಯದಂತೆ ಚಾಣಾಕ್ಷತನದಲ್ಲಿ ಸಿದ್ದರಾಮಯ್ಯ ತೊಡಗಿಸಿಕೊಂಡಿದ್ದಾರೆ.
ಈ ಕಾರಣದಿಂದ ಮೊದಲ ಬಾರಿಗೆ ಮಾಯಾವತಿಯವರ ಜೊತೆ ಸಖ್ಯ ಬೆಳೆಸಲು ಜನತಾದಳ ಮುಂದಾಗಿದೆ. ಶೇಕಡಾ ಇಪ್ಪತ್ತೆರಡರಷ್ಟಿರುವ ಹಿಂದುಳಿದ ವರ್ಗಗಳ ಮತ ಸೆಳೆಯುವ ತಂತ್ರವೂ ಇದರಲ್ಲಿ ಅಡಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ಲಭಿಸದೆ ಅತೃಪ್ತಿ ಹೊಂದಿದವರನ್ನು ಸೆಳೆಯುವುದರಲ್ಲಿ ಅದು ನಿರತವಾಗಿದೆ. ಪರಂಪರಾಗತವಾಗಿ ಇಲ್ಲಿನ ದಲಿತರು ಕಾಂಗ್ರೆಸ್ ಓಟ್ ಬ್ಯಾಂಕ್ ಆದರೂ  ಬಿಎಸ್‍ಪಿ ಜೊತೆಯ ಸಂಬಂಧದಿಂದ ಲಾಭಗಳಿಸುವ ತಂತ್ರದಲ್ಲಿ ಜೆಡಿಎಸ್ ಮುಂದಾಗಿದೆ. ಹಿಂದುಳಿದ ವರ್ಗಗಳ ನಾಯಕರಾದ ಪಿಜಿಆರ್ ಸಿಂದ್ಯಾ, ವಿಶ್ವನಾಥ್, ಮಧು ಬಂಗಾರಪ್ಪ, ಬಂಡೆಪ್ಪ ಕಾಶೆಂಪುರ ಮುಂತಾದವರನ್ನು ಬಳಸಿಕೊಂಡು ಜನತಾದಳ ಮತಬೇಟೆಯಲ್ಲಿ ತೊಡಗಲಿದೆ. ದಲಿತರಿಗೆ ಮತ್ತು ಮುಸ್ಲಿಮರಿಗೆ ಉಪಮುಖ್ಯಮಂತ್ರಿಯ ಆಮಿಷವನ್ನೂ ಅದು ನೀಡಿದೆ. ಇವೆಲ್ಲ ಇದ್ದರೂ ಅಹಿಂದ ವಿಭಾಗಗಳ ಅಭಿವೃದ್ಧಿಗಳಿಗೆ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಹೆಚ್ಚು ಮಹತ್ವ ನೀಡಿದ್ದು ಜೆಡಿಎಸ್‍ಗೆ ನುಂಗಲಾರದ ತುಪ್ಪವಾಗಿದೆ. ಐದು ವರ್ಷಗಳಲ್ಲಿ ಅಹಿಂದ ವಿಭಾಗಗಳಿಗೆ ಬಜೆಟ್ ಶೇಕಡಾ 137ರಷ್ಟು ಹೆಚ್ಚಳವಾಗಿದೆ. ರಾಜ್ಯದ ಜನಸಂಖ್ಯೆಯ ಶೇಕಡಾ 39ರಷ್ಟು ಬರುವ ಅಹಿಂದ ವಿಭಾಗದ ಮತಗಳಲ್ಲಿ ಹೆಚ್ಚಿನ ಮತ ಕಾಂಗ್ರೆಸ್ ಕಡೆಗೆ ಬೀಳಲಿದೆ, ಈ ಲೆಕ್ಕಾಚಾರ ಜೆಡಿಎಸ್ ಆತಂಕ ಮೂಡಿಸಿದೆ. ಹೀಗೆ ಜೆಡಿಎಸ್ ಆಡಳಿತಕ್ಕಿಂತ ಕಿಂಗ್ ಮೇಕರ್ ಆಗುವ ಕನಸಲ್ಲಿ ತೇಲಾಡುತ್ತಿದೆ. ಸಿದ್ದರಾಮಯ್ಯರಿಗೆ ಪಾಠ ಕಲಿಸಬೇಕೆಂಬ ಧಾವಂತದಲ್ಲಿ ಅದು ತೊಡಗಿಸಿಕೊಂಡಿದೆ.