ಕೋಮು ಭಾವನೆ ಕೆರಳಿಸುವ, ಶಾಂತಿಗೆ ಭಂಗ ತರುವವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಿ : ಸಿಎಂ

0
270

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಬರಗಳನ್ನು ಪ್ರಕಟಿಸಿ ಕೋಮು ಭಾವನೆ ಕೆರಳಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೇ ಮಾಡಿದರೂ, ಅವರು ಯಾವುದೇ ಧರ್ಮದ ಸಂಘಟನೆಗೆ ಸೇರಿದವರಾಗಿದ್ದರೂ ಸ್ವಯಂಪ್ರೇರಿತಯವಾಗಿ, ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿದೇರ್ಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಯವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರಚೋದನಾಕಾರಿ ಬರಹಗಳ ಮೂಲಕ ಅವರು ಕೋಮು ಭಾವನೆ ಕೆರಳಿಸುವ ಹಾಗೂ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂತಹವರ ಬಗ್ಗೆ ವಿಶೇಷವಾಗಿ ನಿಗಾ ಇರಿಸುವುದರ ಜೊತೆಗೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಂಯ್ಯ ಅವರು ಹೇಳಿದರು.

ಮಾದಕ ವಸ್ತುಗಳ ಮಾರಾಟ ಜಾಲದಿಂದಾಗಿ ಯುವ ಜನಾಂಗ ದಿಕ್ಕು ತಪ್ಪುತ್ತಿರುವುದು ಕಳವಳಕಾರಿ ಸಂಗತಿ. ಹೀಗಾಗಿ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟ ಹಾಕುವುದರ ಜೊತೆಗೆ ಆ ಜಾಲದ ಹಿಂದೆ ಇರುವ ವ್ಯಕ್ತಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕಾನೂನಿನ ಚೌಕಟ್ಟಿಗೆ ತಂದು ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದೇನೆ ಎಂದರು.

ಗೂಂಡಾ ಕಾಯಿದೆಯಲ್ಲಿ ಗಡಿಪಾರು ಮಾಡಿ :

ಕೋಮು ಭಾವನೆ ಕೆರಳಿಸುವುದೇ ಮೂಲಭೂತವಾದಿಗಳ ಕೆಲಸ. ಅಂತಹವರನ್ನು ಪತ್ತೆ ಮಾಡಿ. ಅಗತ್ಯವೆನಿಸಿದರೆ ಗೂಂಡಾ ಕಾಯಿದೆಯಲ್ಲಿ ಕೇಸು ದಾಖಲು ಮಾಡಿ ಗಡಿಪಾರು ಮಾಡಿ ಎಂದು ಹೇಳಿದ್ದೇನೆ. ಮಂಗಳೂರಿನಲ್ಲಿ ಇತ್ತೀಚೆಗೆ ದೀಪಕರಾವ್ ಹಾಗೂ ಬಶೀರ್ ಎಂಬುವರ ಹತ್ಯೆ ಆಗಿದೆ. ಪೊಲೀಸರು ಮುಂಜಾಗ್ರತೆ ವಹಿಸಿದ್ದರೆ ಎರಡೂ ಹತ್ಯೆ ತಪ್ಪಿಸಬಹುದಿತ್ತು.
2017ರಲ್ಲಿ ಅಪರಾಧಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ಆದರೆ, ಗಣನೀಯವಾಗಿ ಇಳಿಕೆಯಾಗಬೇಕು.ಮಹಿಳೆಯರು, ಮಕ್ಕಳು ಅದರಲ್ಲಿಯೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದೇನೆ.

ಗುಪ್ತದಳ ಹೆಚ್ಚು ಕ್ರಿಯಾಶೀಲವಾಗಲಿ :

ಗುಪ್ತದಳವನ್ನು ಹೆಚ್ಚು ಕ್ರಿಯಾಶೀಲ ಮಾಡಬೇಕು. ಅದಕ್ಕಾಗಿಯೇ ಗುಪ್ತದಳಕ್ಕೆ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈಗ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದೆ. ನೇಮಕ ಪ್ರಕ್ರಿಯೆ ಸಹ ವಿಶೇಷವಾಗಿ ನಡೆಯುತ್ತದೆ. ನೇಮಕಗೊಳ್ಳುವ ಸಿಬ್ಬಂದಿ ಅಲ್ಲಿಯೇ ಕಾಯಂ ಆಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಬೇರೆ ವಿಭಾಗಗಳಿಗೆ ಹೋಗುವಂತಿಲ್ಲ.

ಗುಪ್ತದಳದಲ್ಲಿ ಕಾರ್ಯನಿರ್ವಹಿಸುವುದು ಶಿಕ್ಷೆ ರೂಪದಲ್ಲಿ ಮಾಡುವ ಕೆಲಸ ಅಥವಾ ವರ್ಗಾವಣೆ ಎಂಬ ಮನೋಭಾವ ಇದೆ. ಹೀಗಾಗಿ ವಿಶೇಷವಾಗಿ ಮತ್ತು ಪ್ರತ್ಯೇಕವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಅಪರಾಧ ನಡೆದ ಬಳಿಕ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದು,ಆರೋಪ ಪಟ್ಟಿ ದಾಖಲು ಮಾಡುವುದು ಬೇರೆ ವಿಚಾರ. ಆದರೆ ಅಪರಾಧಗಳೇ ನಡೆಯದಂತೆ ಮುಂಜಾಗ್ರತೆ ವಹಿಸುವುದು ಮುಖ್ಯ.

ದರೋಡೆಗಳು, ಕಳ್ಳತನ, ಸರ ಕಳ್ಳತನ, ಮತೀಯವಾದ, ಗೂಂಡಾಗಿರಿಗೆ ಕಾರಣರಾಗುವ ವ್ಯಕ್ತಿಗಳನ್ನು ಮೊದಲೇ ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಿದರೆ ಒಳ್ಳೆಯದು. ಇದು ಆಯಾ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿ.

ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ಮಾಡಿ :

ಮಾದಕ ವಸ್ತುಗಳ ಮಾರಾಟ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳು ಎಲ್ಲಿ ಮಾರಾಟವಾಗುತ್ತದೆ. ಅದು ಎಲ್ಲಿಂದ ಸರಬರಾಜು ಆಗುತ್ತದೆ ಎಂಬುದರ ಬಗ್ಗೆ ನಿಗಾ ಇರಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವಿದ್ಯಾರ್ಥಿಗಳು ಹಾಗೂ ಯುವಕರ ಕೈಗೆ ಮಾದಕ ವಸ್ತುಗಳು ಸಿಗದಂತೆ ನೋಡಿಕೊಳ್ಳಬೇಕು. ಮಾರಾಟ ಜಾಲ ಪತ್ತೆ ಹಚ್ಚಿ ಕಡಿವಾಣ ಹಾಕಬೇಕು.

ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದಲ್ಲಿ 56 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಿವೆ. ಅಲ್ಲಿ ಸರಿಯಾದ ರೀತಿಯಲ್ಲಿ ಬಂದೋಬಸ್ತ್ ಮಾಡಬೇಕು. ಮತದಾರರು ನಿರ್ಭಯವಾಗಿ ಮತ ಚಲಾವಣೆ ಮಾಡಲು ವ್ಯವಸ್ಥೆ ಮಾಡಬೇಕು. ಅಂತಹ ವಾತಾವರಣ ನಿರ್ಮಿಸಬೇಕು. ಸೂಕ್ಷ್ಮ ಮತಗಟ್ಟೆಗಳ ಕಡೆ ವಿಶೇಷ ಗಮನ ಹರಿಸಬೇಕು.

ಕಾಮಾಲೆ ಕಣ್ಣಿನವರಿಗೆ ಕಾಣುವುದು ಹಳದಿಯೇ :

ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತವೆ. ಅದು ರಾಜಕೀಯ ಪ್ರೇರಿತ. ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲ ಹಳದಿಯೇ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡು ಬಂದಿದೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ಪೊಲೀಸ್ ಸಿಬ್ಬಂದಿಯ ವೇತನ, ಭತ್ಯೆ ಹೆಚ್ಚಳಕ್ಕೂ ಸರ್ಕಾರ ಕ್ರಮ ಕೈಗೊಂಡಿದೆ. ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ಖಾಲಿ ಇರುವ 42 ಸಾವಿರ ಹುದ್ದೆಗಳ ಪೈಕಿ 32 ಸಾವಿರ ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ. 2272 ಕೋಟಿ ರೂ. ವೆಚ್ಚದಲ್ಲಿ ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ 12 ಸಾವಿರ ಮಂದಿಗೆ ಏಕ ಕಾಲದಲ್ಲಿ ಬಡ್ತಿಯನ್ನೂ ನೀಡಲಾಗಿದೆ. ಇಂತಹ ಕಾರ್ಯ ಈ ಹಿಂದೆ ಎಂದೂ ನಡೆದಿರಲಿಲ್ಲ ಎಂದು ಹೇಳಿದರು.
ಪೊಲೀಸರು, ವೈದ್ಯರು ಹಾಗೂ ಶಿಕ್ಷಕರ ನೇಮಕ ವಿಚಾರದಲ್ಲಿ ಆರ್ಥಿಕ ಮಿತಿ ನಿರ್ಬಂಧ ಹೇರದಂತೆ ಸೂಚನೆಯನ್ನೂ ಕೊಟ್ಟಿದ್ದೇನೆ ಎಂದರು.

ನಿವೃತ್ತಿ ವಯಸ್ಸು ಏರಿಕೆ ಇಲ್ಲ :
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿಯವರು ಇದೇ ವೇಳೆ ಸ್ಪಷ್ಟಪಡಿಸಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.