ಗಾಂಧಿ ಪಾರ್ಕು, ಗಾಂಧಿ ಬಝಾರ್‍ನಲ್ಲಿ `ಮಹಾತ್ಮ’ ನನ್ನು ಹುಡುಕುತ್ತ…

0
1000

ಗಾಂಧಿ ಪಾರ್ಕು, ಗಾಂಧಿ ಬಝಾರ್‍ನಲ್ಲಿ `ಮಹಾತ್ಮ’ ನನ್ನು ಹುಡುಕುತ್ತ…
@ ಎಂ.ಆರ್. ಮಾನ್ವಿ

ಗಾಂಧಿ ಪಾರ್ಕು, ಗಾಂಧಿ ಬಝಾರ್, ಗಾಂಧಿ ರೋಡ್, ಗಾಂಧಿ ಸರ್ಕಲ್, ಗಾಂಧಿ ಸರ್ಕಸ್ ಇತ್ಯಾದಿ, ಇತ್ಯಾದಿ… ಗಳಿಲ್ಲದ ಊರು ಕಲ್ಪನೆಗೂ ನಿಲುಕದ್ದು. ಏಕೆಂದರೆ ನಮ್ಮ ದೇಶದ ಪ್ರತಿಯೊಂದು ಹಳ್ಳಿ, ಗ್ರಾಮ, ಪಟ್ಟಣ, ನಗರವೆನ್ನದೆ ಪ್ರತಿಯೊಂದು ಕುಗ್ರಾಮವೇ ಆಗಲಿ ಅಲ್ಲಿ ಗಾಂಧಿ ಪಾರ್ಕು ಇಲ್ಲವೆ ಗಾಂಧಿ ಬಝಾರ್ ಇರಲೇಬೇಕು. ಅಂದ ಹಾಗೆ ಗಾಂಧಿಯ ತತ್ವಾದರ್ಶಗಳಿಗೂ, ಇಲ್ಲಿ ಪ್ರಸ್ತಾಪಿತ ಗಾಂಧಿ ಹೆಸರಿನ ಸ್ಥಳಗಳಿಗೂ ಯಾವುದೇ ಸಂಬಂಧವೇ ಇಲ್ಲ. ಇಲ್ಲಿ ಗಾಂಧಿ ಕೇವಲ ಪ್ರತಿಮೆ ಮಾತ್ರ. ಉಳಿದೆಲ್ಲವೂ ಗಾಂಧಿಜೀ ಯವರ ಬದುಕಿಗೆ ವಿರುದ್ಧವಾಗಿರುವ ಚಟುವಟಿಕೆ ಗಳು. ಗಾಂಧೀಜಿಯವರ ಹೆಸರು ಇಟ್ಟುಕೊಂಡ ಈ ಪಾರ್ಕುಗಳು, ಬಝಾರ್‍ಗಳು ಗಾಂಧಿತತ್ವ, ಗಾಂಧಿ ಸಂದೇಶದ ಗಂಧ ಗಾಳಿಯಿಲ್ಲದೆ ಕೇವಲ ಹೆಸರಿನಲ್ಲಿ ಮಾತ್ರ ಗಾಂಧಿಯನ್ನು ಕಾಣುವಂತಾಗಿದ್ದು ಈ ದೇಶದ ದುರಂತ.
ಗಾಂಧಿ ಬಝಾರ್, ಗಾಂಧಿ ಪಾರ್ಕುಗಳಲ್ಲಿ ಆ ಮಹಾತ್ಮನನ್ನು ಅನ್ವೇಷಿಸುತ್ತ ನಡೆದರೆ, ಗಾಂಧಿ ತತ್ವಗಳಿಗೆ ವಿರುದ್ಧವಾಗಿರುವುದನ್ನೆ ನಾವು ಕಂಡಕೊಳ್ಳಲು ಸಾಧ್ಯ. ಇಂದು ಕಂಡು ಬರುವ ಹೆಚ್ಚಿನ ಗಾಂಧಿ ಪಾರ್ಕುಗಳು ವ್ಯಭಿಚಾರ, ವ್ಯಸನ, ಜೂಜು, ನಶೆ, ಶೋಕಿಯ ಅಡ್ಡೆಗಳಾಗಿ ಮಾರ್ಪ ಟ್ಟಿದ್ದು ಗಾಂಧೀಜಿಯ ತತ್ವ ಸಂದೇಶಗಳು ದಿಕ್ಕು ಕಾಣದೆ ಮಾಯವಾಗಿರುವುದು ಕಂಡು ಬರುತ್ತದೆ.
ಕಾಲೇಜಿಗೆ ಚಕ್ಕರ್ ಹೊಡೆದ ಹುಡುಗ ಹುಡುಗಿಯರ ಒಂದು ದೊಡ್ಡ ದಂಡೇ ಗಾಂಧಿ ಪಾರ್ಕಿನಲ್ಲಿ ಬಿಡಾರ ಬಿಟ್ಟಿರುವುದನ್ನು ಕಂಡರೆ ಗಾಂಧಿತತ್ವಗಳು ನಮ್ಮ ಯುವ ಸಮೂಹದಿಂದ ಯಾವ ರೀತಿ ಮಾಯವಾಗಿವೆ ಎಂಬುದು ಅರಿವಿಗೆ ಬಾರದೆ ಇರದು. ಮದ್ಯ ವ್ಯಸನಿಗಳು, ಜೂಜುಕೋರರು, ಸಮಾಜಕ್ಕೆ ಹೊರೆಯಾದವರ ಆಶ್ರಯ ತಾಣಗಳಾಗಿ ಗಾಂಧಿ ಪಾರ್ಕುಗಳು ಕೆಲಸ ಮಾಡುತ್ತಿವೆ. 1948 ರಂದು ಗುಂಡಿಗೆ ಬಲಿಯಾದಂದಿನಿಂದ ಗಾಂಧೀಜಿಯವರು ಕಲ್ಲಾಗಿ ಹೋಗಿದ್ದು ಪ್ರತಿ ಪಾರ್ಕು, ಬಝಾರ್ ನಲ್ಲಿ ಮೂರ್ತಿ ರೂಪ ತಳೆದು ಯಾವುದನ್ನು ತಮ್ಮ ಬದುಕಿನುದ್ದಕ್ಕೂ ವಿರೋಧಿಸುತ್ತ ಬಂದರೋ ಅದುವೇ ತಮ್ಮ ಕಾಲಬುಡದಲ್ಲಿ ನಡೆಯುತ್ತಿದ್ದರೂ ಏನನ್ನೂ ಹೇಳದ ಸ್ಥಿತಿಯಲ್ಲಿದ್ದಾರೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕಥೆಯೂ ಇದುವೇ ಆಗಿದೆ. ತಮ್ಮ ಕಣ್ಮುಂದೆಯೇ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದರೂ, ದೇಶದಲ್ಲಿ ಅತ್ಯಾಚಾರ, ಅನಾಚಾರಗಳು, ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ನಡೆಯುತ್ತಿದ್ದರೂ ಕಣ್ಣಿದ್ದೂ ಕುರುಡರಾಗಿದ್ದೇವೆ. ಗಾಂಧಿಜೀಯವರ ತತ್ವ ಸಿದ್ಧಾಂತಗಳನ್ನು ಅಣುಕಿಸುವ ರೀತಿಯಲ್ಲಿ ಪಾರ್ಕಿ ನಲ್ಲಿ ಮೂರ್ತಿ ರೂಪ ತಳೆದಿರುವ ಗಾಂಧಿ ಪ್ರತಿಮೆಗಳಂತಾಗಿದ್ದೇವೆ. ಜೀವಂತವಿದ್ದರೂ ಕಲ್ಲು ಗಳಂತೆ ನಿರ್ಜೀವಿಗಳಾಗಿದ್ದೇವೆ. ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಕೆಡುಕುಗಳನ್ನು ಕಂಡೂ ನಾವು ಸುಮ್ಮನಾಗಿದ್ದೇವೆ. ನಮ್ಮ ತುಟಿಗಳು ಅದಕ್ಕಾಗಿ ತೆರೆದುಕೊಳ್ಳುವುದಿಲ್ಲ. ಯಾಕಾಗಿ ನಾವು ನಿರ್ವೀರ್ಯರಾಗಿದ್ದೇವೆ?
ಗಾಂಧೀಜಿ ಒಮ್ಮೆ ಬದುಕಿ ಬಂದರೆ ನಮ್ಮನ್ನು ನಮ್ಮ ದೇಶವನ್ನು ಕಂಡು ಅವರ ಪ್ರತಿಕ್ರಿಯೆ ಏನಾಗಿರುತ್ತೆ ಎನ್ನುವುದನ್ನು ಕವಿಯೊಬ್ಬ ಬಹಳ  
ಮಾರ್ಮಿಕವಾಗಿಯೇ ಹೇಳಿದ್ದಾರೆ.
`ಗಾಂಧೀಜಿ ಮರಳಿ ಬಂದರೆ ಇಲ್ಲಿ
ಹುಡುಕುತಲಿರುವರು ಭಾರತವು ಎಲ್ಲಿ?
ಸತ್ಯ ಅಹಿಂಸೆ ದೇಶವೆಲ್ಲಿ
ನ್ಯಾಯ ನಿಷ್ಠೆಯ ಮಂದಿರವೆಲ್ಲಿ
ಗಾಂಧೀಜಿ ಬಂದರೆ ಇಲ್ಲಿ….
ಶರಾಬು ದೊರಕದ ಊರುಗಳೆಲ್ಲಿ
ದರೋಡೆ ನಡೆಯದ ಕೇರಿಗಳೆಲ್ಲಿ
ಗಾಂಧಿಜೀ ಮರಳಿ ಬಂದರೆ ಇಲ್ಲಿ….
ಹೌದು ನಿಜಕ್ಕೂ ಒಂದು ವೇಳೆ ಗಾಂಧಿಜಿ ಯವರೇನಾದರೂ ಮರಳಿ ಬಂದರೆ ದಿಕ್ಕು ತೋಚದೆ ಈ ದೇಶದ ಸಹವಾಸವೇ ಬೇಡಪ್ಪ ಎಂದು ಮತ್ತೆ ಮರಳಿ ಹೋಗಬಹುದೇನೋ. ಏಕೆಂದರೆ ಅಂತಹ ಸ್ಥಿತಿಯಲ್ಲಿಂದು ನಾವು ಬದುಕುತ್ತಿದ್ದೇವೆ. ದೇಶದ ಪ್ರಗತಿಯನ್ನು ಜಪಿಸುತ್ತಲೇ ದೇಶವನ್ನು ಕೊಳ್ಳೆ ಹೊಡೆಯುತ್ತಿರುವ, ಮನುಷ್ಯ ಪ್ರೇಮದ ನಾಟಕ ವಾಡುತ್ತಲೇ ಮನು ಕುಲದ ಮಾರಣ ಹೋಮ ನಡೆಸುತ್ತಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಆ ಮಹಾತ್ಮನಿಗೇನು ಕೆಲಸ?
ಗಾಂಧಿ ಬಝಾರ್‍ಗಳೆಂದು ಕರೆಸಿಕೊಳ್ಳುವ ನಮ್ಮ ವ್ಯಾಪಾರ ಕೇಂದ್ರಗಳಲ್ಲಂತೂ ಬರೀ ಮೋಸ, ವಂಚನೆಯ ಜಾಲದಂತಾಗಿವೆ. ತಮ್ಮ ವಸ್ತುವನ್ನು ಹೇಗಾದರೂ ಮಾರಾಟ ಮಾಡಿ ಅದರಿಂದ ಅಧಿಕ ಲಾಭಗಳಿಸುವ ಲಾಭಕೋರರು ಗ್ರಾಹಕರ ಸುತ್ತ ಗಿರಕಿ ಹೊಡೆಯುತ್ತಿರುತ್ತಾರೆ. ಸುಳ್ಳು ಹೇಳಿ ಗ್ರಾಹಕರನ್ನು ವಂಚಿಸುವ ವಿಶ್ವ ಜಾಲವೇ ನಿರ್ಮಾಣವಾಗಿದೆ. ಇಂತಹದ್ದರಲ್ಲಿ ಗಾಂಧೀಜಿಯವರ ಪ್ರಾಮಾಣಿಕತೆಗೆ ಇಲ್ಲಿ ಬೆಲೆ ಯಾದರೂ ಹೇಗೆ ಲಭಿಸಬಲ್ಲದು? ಗಾಂಧಿ ಈಗ ಪ್ರತಿಮೆಗಳಿಗೆ ಮಾತ್ರ ಸೀಮಿತವಾಗಿ ಬಿಟ್ಟಿದ್ದಾರೆ.
ಗಾಂಧಿಯನ್ನು ಮುಂದಿಟ್ಟುಕೊಂಡು ದೇಶವನ್ನು ಸ್ವಚ್ಚಗೊಳಿಸುವ ಕೆಲಸಕ್ಕೆ ಕೈ ಹಾಕಿರುವುದೇನೂ ಪ್ರಶಂಸನೀಯ. ಆದರೆ ಇದೇ ವೇಳೆ ನಮ್ಮ ಹೃದಯ, ಮನಸ್ಸುಗಳಲ್ಲಿ ಶೇಖರಣಗೊಂಡಿರುವ ಕಲ್ಮಷವನ್ನು ಸ್ವಚ್ಚಗೊಳಿಸುವ ಕಾರ್ಯ ಮಾಡಬೇಕಾ ಗಿರುವುದು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಕೇವಲ ‘ಮನ್ ಕಿ ಬಾತ್’, ಟಿ.ವಿ. ಜಾಹಿರಾತು, ಬ್ಯಾನರ್‍ಗಳ ಮೂಲಕ ದೇಶದ ಜನರ ಹೃದಯಗಳಲ್ಲಿ ಬೆಳೆಯುತ್ತಿರುವ ಕೊಳೆಯನ್ನು ಸ್ವಚ್ಚಗೊಳಿಸಲು ಸಾಧ್ಯವಿಲ್ಲ. ಇದಕ್ಕಾಗಿ `ಸಚ್ಚಿಬಾತ್’, `ಕಾಮ್ ಕಿ ಬಾತ್’ `ಕರ್ತವ್ಯ್ ಕಿ ಬಾತ್’ ಆಗಬೇಕು. ಕೇವಲ ಮನ್ ಕಿ ಬಾತ್ ನಿಂದ ದೇಶ ಅಭಿವೃದ್ಧಿ ಸಾಧಿಸಬಹುದಾಗಿದ್ದರೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ‘ಮನ್ ಕಿ ಬಾತ್’ ಮೂಲಕ ಇಡೀ ದೇಶ ಅಭಿವೃದ್ಧಿ ಕಾಣಬೇಕಿತ್ತು. ಆದರೆ ಹಾಗೆ ಆಗಲಿಲ್ಲ ಎನ್ನುವುದು ದೇಶದ ಪ್ರಸಕ್ತ ಸ್ಥಿತಿಗತಿಗಳು ಬೆಟ್ಟು ಮಾಡಿತೋರಿಸುತ್ತಿವೆ.
ಗಾಂಧೀಜಿಯವರ ಆಶ್ರಮದಲ್ಲಿ ಮೂರು ಕೋತಿಗಳು ಸಾರುವ ಸಂದೇಶವಾದರೂ ಏನು? ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟ ಮಾತುಗಳನ್ನು ಆಡಬೇಡಿ ಎಂದಾಗಿದೆ. ಆದರೆ `ಗಾಂಧೀ’ ಎಂಬ ಹೆಸರಿನಲ್ಲಿರುವ ತಾಣ ಗೆಲ್ಲ ಈ ಮೂರನ್ನೂ ಬಿಟ್ಟಿವೆ. ಕೆಟ್ಟದನ್ನೇ ನೋಡುವ, ಕೆಟ್ಟದ್ದನ್ನೆ ಆಡುವ ಮತ್ತು ಕೆಟ್ಟದ್ದನ್ನೆ ಮಾಡುವ ಗುರಿಯೊಂದಿಗೆ ಮುನ್ನೆಡೆಯುತ್ತಿರುವಂತೆ ತೋರುತ್ತಿದೆ. ಇದಕ್ಕೆ ದೇಶದ ಯುವಶಕ್ತಿಯೂ ಕೈಜೋಡಿಸಿ ಮಹಾತ್ಮನ ತತ್ವಾದರ್ಶಗಳನ್ನು ಗಾಳಿಗೆ ತೂರಿದಂತೆ ಭಾಸವಾಗುತ್ತಿದೆ. ನಮ್ಮ ದೇಶದ ರಾಜಕಾರಣ ಎತ್ತ ಸಾಗುತ್ತಿದೆ? ದೇಶಕ್ಕಾಗಿ ತನ್ನೆಲ್ಲ ಸ್ವಾರ್ಥವನ್ನು ಬದಿಗೊತ್ತಿ ತುಂಡು ಬಟ್ಟೆ ಯೊಂದಿಗೆ ಹೋರಾಡಿದ ಆ ಮಹಾತ್ಮನೆಲ್ಲಿ? ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ವಿದೇಶಿಗರಿಗೆ ಮಾರಿಕೊಳ್ಳುತ್ತಿರುವ ಇಂದಿನ ರಾಜಕಾರಣವೆಲ್ಲಿ? ತುಲನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ.
ಗಾಂಧೀಜಿಯವರ ಕುರಿತಂತೆ ಅವರ ಸಾಧನೆ ಗಳನ್ನು ಹುಡುಕುತ್ತ ಈ ಗಾಂಧಿ ಬಝಾರ್, ಗಾಂಧಿ ಪಾರ್ಕು, ಗಾಂಧಿ ರಸ್ತೆಯಲ್ಲೊಮ್ಮೆ ತಿರು ಗಾಡಿದರೆ ಗಾಂಧಿಯನ್ನು ಅಪಾರ್ಥ ಮಾಡಿ ಕೊಳ್ಳುವ ಸಾಧ್ಯತೆಗಳೇ ಹೆಚ್ಚು.