ಗುಜರಾತ್ ಚುನಾವಣೆಯಲ್ಲಿ ಮುಸ್ಲಿಮರೆಲ್ಲಿ?

0
1528

                        ಇರ್ಶಾದ್ ಬೆಂಗಳೂರು

ಗುಜರಾತ್ ಚುನಾವಣೆ ಮುಗಿದ ಮಾರನೆ ದಿನ ಟೈಮ್ಸ್‌ ಆಫ್ ಇಂಡಿಯಾದಲ್ಲಿ ಪ್ರಕಟವಾದ ಈ ಕಾರ್ಟೂನ್ ಗುಜರಾತ್ ಮುಸ್ಲಿಮರ ಚಿತ್ರಣವನ್ನು ಬಣ್ಣಿಸಲು ಸಾಕಾಗಬಹುದು.
ರಾಜ್ಯದಲ್ಲಿ ಸುಮಾರು 10% ರಷ್ಟು ಜನಸಂಖ್ಯೆ ಇರುವ ಒಂದು ಸಮುದಾಯದ ಸಮಸ್ಯೆಗಳ ಕುರಿತು ಇಡೀ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷ ಮಾತನಾಡುವ ಗೋಜಿಗೂ ಹೋಗುವುದಿಲ್ಲವೆಂದರೆ ಆಶ್ಚರ್ಯ ಆಗಬಹುದು. ಆದರೆ ಅದಕ್ಕಿಂತ ಅಚ್ಚರಿಯ ವಿಷಯವೆಂದರೆ ರಾಜಕೀಯ ಪಕ್ಷಗಳಂತೆ ಚುನಾವಣೆ ಸೋಲು ಗೆಲುವಿನ ಲೆಕ್ಕಾಚಾರವಿಲ್ಲದ ಮಾಧ್ಯಮಗಳು ಸಹ ಮುಸ್ಲಿಮರನ್ನು ಮಾತನಾಡಿಸಿದ್ದು ಅವರ ಸಮಸ್ಯೆಗಳ ಕುರಿತು ವರದಿ ಮಾಡಿದ್ದು ಅತ್ಯಂತ ಕಡಿಮೆ.
ಅಂದರೆ ಎಷ್ಟು ವ್ಯವಸ್ಥಿತವಾಗಿ ಒಂದು ಸಮುದಾಯವನ್ನು ಬೇರ್ಪಡಿಸಿ ಮುಖ್ಯವಾಹಿನಿಯಿಂದ ಹೊರಗಿಡಲಾಗಿದೆಯೆಂದು ತಿಳಿಯಬಹುದು.
ಸಾಮಾಜಿಕ ಕಾರ್ಯಕರ್ತ ಹನೀಫ್ ಲಕ್ಕಡವಾಲ ಹೇಳುತ್ತಾರೆ ” ಗುಜರಾತಿನ ಮುಸ್ಲಿಮರು ಈಗ ಯಾವ ರಾಜಕೀಯ ಪಕ್ಷಗಳ ಬಳಿ ಹೋಗುವುದಿಲ್ಲ. ಹಾಗೆಯೇ ಯಾವ ರಾಜಕೀಯ ಪಕ್ಷವು ಸಹ ಮುಸ್ಲಿಮರ ಬಳಿ ಬರುವುದಿಲ್ಲ. ”
2002 ರ ಗಲಭೆಗಳಾಗಿ 15 ವರ್ಷಗಳು ಕಳೆದರೂ ಅಹ್ಮದಾಬಾದ್ ನಂತಹ ನಗರದಲ್ಲಿ ಹಿಂದೂ-ಮುಸ್ಲಿಮರು ಜೊತೆಯಲ್ಲಿ ವಾಸಿಸುವುದನ್ನು ಉಹಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿ ಅವರಾಗಿಯೇ ಮಾಡಿಕೊಂಡ ಅದೃಷ್ಯ ಗಡಿಗಳಿವೆ. ಗಡಿಯ ಒಂದೆಡೆ ಸುಂದರ ಅಭಿವೃದ್ಧಿ ಹೊಂದಿದ ಸಕಲ ಸೌಲಭ್ಯಗಳಿರುವ ಪ್ರದೇಶವಾದರೆ ಗಡಿಯ ಆಚೆ ಬದಿಯಲ್ಲಿ ಕೊಳಚೆ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಜೀವಿಸುತ್ತಿರುವ ಸಮುದಾಯ.
ಹಾಗಂತ ಗುಜರಾತ್ ಮುಸ್ಲಿಮರ ಈ ಪರಿಸ್ಥಿತಿ ಹೊಸದೇನಲ್ಲ ಅಥವಾ 2002 ರ ಗಲಭೆ ಹಾಗೂ ಮೋದಿ ಬಂದಾದ ಮೇಲಷ್ಟೇ ಆಗಿದ್ದಲ್ಲ, ಅದಕ್ಕೊಂದು ಇತಿಹಾಸವೇ ಇದೆ.
ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆಯೇ ಗುಜರಾತ್ ಇಡೀ ದೇಶದಲ್ಲಿ ಹೆಚ್ಚು ಕೋಮುಗಲಭೆಗಳನ್ನು ಕಂಡ ರಾಜ್ಯವಾಗಿತ್ತು.
1985 ಮತ್ತು 1998 ರ ನಡುವೆ ದೇಶದ ಸುಮಾರು 30% ರಷ್ಟು ಗಲಭೆಗಳು ಕೇವಲ ಗುಜರಾತ್ ರಾಜ್ಯದಲ್ಲಾಗಿವೆ.
ಇನ್ನೂ ಕಾಂಗ್ರೆಸ್ ಸರ್ಕಾರ 1991ರಲ್ಲಿ ಜಾರಿಗೆ ತಂದ Gujarat Disturbed Areas Act ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಇನ್ನಷ್ಟು ದೂರ ಮಾಡಿತು.
ಇದರ ಪ್ರಕಾರ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ರೀತಿಯ ಭೂ ವ್ಯವಹಾರ ಮಾಡುವ ಮೊದಲು ಜಿಲ್ಲಾಧಿಕಾರಿಯಿಂದ ಅಪ್ಪಣೆ ಪಡೆಯುವುದು ಕಡ್ಡಾಯವಾಗಿಸಿತು. ಇದರಿಂದಾಗಿ ಬಯಸಿಯೊ ಸಹ ಬೇರೆಡೆಗೆ ಹೋಗದೆ ಮುಸ್ಲಿಮರು Ghetto ಗಳಿಗೆ ಸೀಮಿತವಾಗಬೇಕಾಯಿತು.
2009 ರಲ್ಲಿ ಆ ಕಾಯ್ದೆಗೆ ಇನ್ನಷ್ಟು ಕಠಿಣ ತಿದ್ದುಪಡಿ ಮಾಡಿದ ಮೋದಿ ಸರ್ಕಾರ ಮುಸ್ಲಿಮರು ಸದಾ ಭಯದ ವಾತಾವರಣದಲ್ಲಿ ಜೀವಿಸುವಂತೆ ಮಾಡಿತು.
1985 ರ ನಂತರ ಒಬ್ಬ ಮುಸ್ಲಿಮ ಸಹ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಲೇ ಇಲ್ಲ.
1989 ಮತ್ತು 1991 ರಲ್ಲಿ ಸೋತ ಅಹ್ಮದ್ ಪಟೇಲ್ ಪಾರ್ಲಿಮೆಂಟ್ ಪ್ರವೇಶಿಸಲು ರಾಜ್ಯಸಭೆಯನ್ನೆ ಅವಲಂಬಿಸಬೇಕಾಯಿತು.
1985 ರಲ್ಲಿ ಕಾಂಗ್ರೆಸ್ ಗೆ 149 ಸ್ಥಾನ ಗೆಲ್ಲಲು ಸಹಾಯಕವಾದ KHAM ( ಕ್ಷತ್ರಿಯ , ಹರಿಜನ , ಆದಿವಾಸಿ ಮತ್ತು ಮುಸ್ಲಿಂ ) ಸೂತ್ರವಿದ್ದಾಗಲೂ ಅತ್ಯಂತ ಹೆಚ್ಚು ಅಂದ್ರೆ ಕೇವಲ 7 ಮುಸ್ಲಿಮರು ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಳೆದ ಬಾರಿ ಅದು ಅತ್ಯಂತ ಕಡಿಮೆ 2 ಕ್ಕೆ ಇಳಿಯಿತು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ 6 ಸ್ಥಾನ ನೀಡಿದ್ದರೂ ಅದರ ಪ್ರನಾಳಿಕೆ ಮತ್ತು ಪ್ರಚಾರದಲ್ಲಿ ಎಲ್ಲೂ ಮುಸ್ಲಿಮರ ಸಮಸ್ಯೆಗಳ ಚರ್ಚೆ ಆಗಲೇ ಇಲ್ಲ. ಪಕ್ಷದ ಸ್ಟಾರ್ ಪ್ರಚಾರಕರಾಗಿ ಮಂದಿರಗಳನ್ನು ಸುತ್ತಿದ ರಾಹುಲ್ ಗಾಂಧಿ ಅಪ್ಪಿತಪ್ಪಿಯೂ ಇಡೀ ಪ್ರಚಾರದಲ್ಲಿ
‘ ಮುಸ್ಲಿಮ್ ‘ ಪದ ಸಹ ಬಳಸಲಿಲ್ಲ.
ಇನ್ನೂ ಬಿಜೆಪಿ ಮುಸ್ಲಿಮರನ್ನು ವ್ಯವಸ್ಥಿತವಾಗಿ ತನ್ನ ಪ್ರಚಾರದುದ್ದಕ್ಕೂ ದುರ್ಬಳಕೆ ಮಾಡಿಕೊಂಡಿತು.
ಗಡ್ಡ ಟೋಪಿಯವರ ಸಂಖ್ಯೆ ಹೆಚ್ಚುತ್ತಿದೆ , ನಿಮಗೆ ಮಂದಿರ ಬೇಕೆ ಅಥವಾ ಮಸೀದಿ ಬೇಕು , ಪಾಕಿಸ್ತಾನ-ಕಾಂಗ್ರೆಸ್ ಮತ್ತು ಹಾಮಿದ್ ಅನ್ಸಾರಿ ಹೆಸರು ಸೇರಿಸಿ ಇಲ್ಲದ ಷಡ್ಯಂತ್ರದ ಬಗ್ಗೆ ಸ್ವತಃ ಪ್ರಧಾನಿಯವರೇ ಸುಳ್ಳು ಪ್ರಚಾರ ಮಾಡಿದ್ದು ಒಂದು ವ್ಯವಸ್ಥಿತ ಚುನಾವಣಾ ತಂತ್ರವಾಗಿತ್ತು.
ಇದೆಲ್ಲಾ ಬಹಿರಂಗ ಪ್ರಚಾರವಾದರೆ ಆಂತರಿಕ ಚರ್ಚೆಗಳಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದರೆ ಮುಸ್ಲಿಮರು 2002 ರ ಗಲಭೆಗಳ ಪ್ರತಿಕಾರ ತಗೆದುಕೊಳ್ಳಲು ಸಿದ್ಧವಾಗಿದ್ದಾರೆ , ನಮ್ಮ ಹೆಣ್ಣು ಮಕ್ಕಳು ಸುರಕ್ಷಿತವಾಗಿರುವುದು ಕಷ್ಟವಾಗಬಹುದು ಎಂಬ ಸುಳ್ಳು ವದಂತಿಗಳನ್ನು ವ್ಯವಸ್ಥಿತವಾಗಿ ಹರಡಿಸಲಾಯಿತು.
ಇದಲ್ಲದೇ ಮುಸ್ಲಿಮರನ್ನು ಮತಗಟ್ಟಗೆ ಬರದಿರುವಂತೆ ತಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಸಂಘಪರಿವಾರದ ಕಾರ್ಯಕರ್ತರು ಮಾಡಿದರು.
ಅದರಲ್ಲಿ ದುಡ್ಡಿನ ಆಸೆ ತೋರಿಸಿ ಬಡ ಮುಸ್ಲಿಮ ಮತದಾರರ ಗುರುತಿನ ಚೀಟಿಯನ್ನು ಪಡೆದು ಚುನಾವಣೆ ನಂತರ ಹಿಂತಿರುಗಿಸುವುದು ಸಹ ಒಂದು ಎಂದು ಸೂರತ್ ನಿವಾಸಿ ಅಸ್ಲಮ್ ಸೈಕಲ್ ವಾಲ ಹೇಳುತ್ತಾರೆ.
ಅದೇ ರೀತಿ ವಟ್ಟಾವ ಕ್ಷೇತ್ರದ ಸೋಷಿಯಲಿಸ್ಟ್ ಇಂಡಿಯಾ ಪಕ್ಷದ ಅಭ್ಯರ್ಥಿ ಹೇಳುವ ಪ್ರಕಾರ
ಮತದಾನ ಮುಗಿಯುವವರೆಗೆ ಕೆಲವು ಮುಸ್ಲಿಮರನ್ನು ಉಚಿತವಾಗಿ ಅಜ್ಮೇರ್ ದರ್ಗಾಗೆ ಕಳಿಸುವ ವ್ಯವಸ್ಥೆ ಸಹ ಮಾಡಲಾಗುತ್ತದೆ.
ಹಾಗೆಯೇ ಮತದಾನದ ದಿನ ಗಲಭೆಗಳಾಗಬಹುದೆಂಬ ವದಂತಿಗಳನ್ನು ಹರಡುವುದು ಇತ್ಯಾದಿ.
ಯಾವ ಮಟ್ಟಿಗೆ ಭಯದ ವಾತಾವರಣ ಸೃಷ್ಟಿಸಲಾಗಿದೆ ಎಂದರೆ ತಾವು ಮತ ನೀಡಲಿ ನೀಡದಿರಲಿ ಬಿಜೆಪಿಯೇ ಗೆಲ್ಲುವುದು ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ತಮ್ಮ ದೈನಂದಿನ ಜೀವನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲವೆಂಬ ಭಾವನೆ ಹಲವಾರು ಮುಸ್ಲಿಮರಲ್ಲಿದೆಯೆಂಬುದು ಸ್ಪಷ್ಟ.
ಇಷ್ಟೆಲ್ಲಾ ಅಡೆತಡೆಗಳಿದ್ದರೂ ಗುಜರಾತಿನ ಯುವ ಮುಸ್ಲಿಮರು ಶಿಕ್ಷಣ ಮತ್ತು ಉದ್ಯಮಶೀಲತೆಯಲ್ಲಿ
ಮುಂದುವರಿಯಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ.
ಇನ್ನೂ ಗುಜರಾತ್ ಚುನಾವಣೆ ಫಲಿತಾಂಶಗಳು ಸಹ ಹಲವಾರು ಮುಸ್ಲಿಮರಲ್ಲಿ ಆಶಾಕಿರಣಗಳನ್ನು ಮೂಡಿಸಿವೆ.
ಗೆಲವು ಸಾಧಿಸಿದ ಮುಸ್ಲಿಮ್ ಶಾಸಕರ ಸಂಖ್ಯೆ 2 ರಿಂದ ಈ ಸಾರಿ 3 ಆಗಿದೆ. ಅದರಲ್ಲಿ ಎರಡು ಅಭ್ಯರ್ಥಿಗಳು ಹಿಂದೂ ಬಾಹುಳ್ಯ ಪ್ರದೇಶಗಳಿಂದ ಗೆದ್ದು ಬಂದಿದ್ದಾರೆ.
ಮುಸ್ಲಿಮರ ಸಮಸ್ಯೆಗಳ ಕುರಿತು ಮುಕ್ತವಾಗಿ ಮಾತನಾಡಿದ ಏಕೈಕ ಅಭ್ಯರ್ಥಿ ಜಿಗ್ನೇಷ್ ಮೇವಾನಿ ಗೆಲವು ಸಾಧಿಸಿದ್ದಾರೆ. ಹಿಂದೂ-ಮುಸ್ಲಿಮ್ ಹಾಗೂ ಎಲ್ಲಾ ಸಮುದಾಯಗಳ ಸಮಾನತೆಯ ಮಾತುಗಳನ್ನಾಡುವ ಅಲ್ಪೇಶ್ ಠಾಕೂರ್ ಮತ್ತು ಹಾರ್ದಿಕ್ ಪಟೇಲ್ ರಿಗೆ ಅಪಾರ ಜನ ಬೆಂಬಲ ಪ್ರಾಪ್ತವಾಗಿದೆ. ಬಿಜೆಪಿ ಬಯಸುವ ಕೋಮುವಾದಿ ರಾಜಕೀಯಕ್ಕಿಂತ ಶಾಂತಿ ಮತ್ತು ಸಹಬಾಳ್ವೆಯ ರಾಜಕೀಯದತ್ತ ಗುಜರಾತಿನ ಜನತೆಯ ಒಲವು ಹೆಚ್ಚಿದೆಯೆಂಬುದು ಉತ್ತಮ ಬೆಳವಣಿಗೆ