ಗುಜರಾತ್ ವಿಶ್ಲೇಷಣೆ: ರಾಹುಲ್, ಜಿಗ್ನೇಶ್ ಹಣೆಯಲ್ಲೇ ಎಲ್ಲವೂ ಇದೆ… 

0
1043

ಬದುಕು ಮತ್ತು ಭಾವನೆಗಳ ನಡುವಿನ ಸಮರ ಎಂದೇ ಹೇಳಬಹುದಾಗಿದ್ದ ಗುಜರಾತ್ ಚುನಾವಣೆಯಲ್ಲಿ ಭಾವನೆ ಮೇಲುಗೈ ಪಡೆದಿದೆ. ಬದುಕು ಬದಿಗೆ ಸರಿದಿದೆ. ಗುಜರಾತ್‍ನ ಒಟ್ಟು ಸಾಮಾಜಿಕ ವಾತಾವರಣ ಹೇಗಿದೆ ಎಂಬುದಕ್ಕೆ ಜಿಗ್ನೇಶ್ ಮೇವಾನಿ ಮತ್ತು ರಾಹುಲ್‍ಗಾಂಧಿಯವರ ಹಣೆಯೇ ಸಾಕ್ಷಿ. ಹಿಂದುಳಿದ ವರ್ಗಗಳ ಐಕಾನ್ ಆಗಿ ಮೂಡಿಬಂದಿರುವ ಜಿಗ್ನೇಶ್ ಮೇವಾನಿಯವರ ಹಣೆಯಲ್ಲಿ ಚುನಾವಣಾ ಪ್ರಚಾರದುದ್ದಕ್ಕೂ ಕುಂಕುವ ಎದ್ದು ಕಾಣುತ್ತಿತ್ತು. ರಾಹುಲ್ ಗಾಂಧಿಯವರ ಹಣೆಯನ್ನೂ ಕುಂಕುಮ ಅಲಂಕರಿಸಿತ್ತು. ಗುಜರಾತ್‍ನ ಉನಾ ಎಂಬಲ್ಲಿ ಐವರು ದಲಿತ ಯುವಕರನ್ನು ಅರೆಬೆತ್ತಲೆಗೊಳಿಸಿ ಥಳಿಸಲಾದ ಘಟನೆಯ ಬಳಿಕ ಭಾರೀ ಸದ್ದಿನೊಂದಿಗೆ ಮುನ್ನೆಲೆಗೆ ಬಂದ ವ್ಯಕ್ತಿ ಜಿಗ್ನೇಶ್ ಮೇವಾನಿ. ಹಿಂದೂ ಧರ್ಮಕ್ಕೂ ಮತ್ತು ಜಿಗ್ನೇಶ್ ಪ್ರತಿನಿಧಿಸುವ ದಲಿತ-ಹಿಂದುಳಿದ ಸಮುದಾಯಕ್ಕೂ ನಡುವೆ ಶತ ಶತಮಾನಗಳಿಂದ ಭಿನ್ನಾಭಿಪ್ರಾಯಗಳಿವೆ. ಈ ಸಮುದಾಯ ಆರಾಧನಾ ಕ್ರಮ ಬೇರೆ. ಆಹಾರ ಪದ್ಧತಿ ಬೇರೆ. ನಾಮಸೂಚಿಗಳು ಬೇರೆ. ಸಾಮಾಜಿಕ ರೀತಿ-ನೀತಿಗಳು ಬೇರೆ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿರುವುದಕ್ಕೆ ಈ ಸಮುದಾಯಗಳ ಮೇಲಾಗುತ್ತಿರುವ ದೌರ್ಜನ್ಯಗಳೇ ಮುಖ್ಯ ಕಾರಣ. ದಲಿತ- ಹಿಂದುಳಿದ ಸಮುದಾಯಗಳು ಹಿಂದೂ ಧರ್ಮದ ಒಳಗೋ-ಹೊರಗೋ ಎಂಬ ಕುರಿತು ಅಸಂಖ್ಯ ಚರ್ಚೆಗಳು ನಡೆದಿವೆ. ಈಗಲೂ ನಡೆಯುತ್ತಿದೆ. ಕುಂಕುಮವು ದಲಿತ ಸಮುದಾಯದ ಗುರುತು ಆಗಿ ಎಲ್ಲೂ ಗುರುತಿಸಿಕೊಂಡಿಲ್ಲ. ಹೀಗಿದ್ದೂ `ಉನಾ’ದಿಂದ ಹುಟ್ಟಿಕೊಂಡ ಜಿಗ್ನೇಶ್, ತನ್ನ ಹಣೆಯಲ್ಲಿ ಕುಂಕುಮ ಸದಾ ಎದ್ದು ಕಾಣುವಂತೆ ನೋಡಿಕೊಂಡಿರುವುದು ಯಾವ ಉದ್ದೇಶದಿಂದ? ರಾಹುಲ್ ಗಾಂಧಿಯು ಗುಜರಾತ್ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದೇ ಮಂದಿರ ಭೇಟಿಯ ಮೂಲಕ. ಪ್ರಚಾರ ಸಮಯದಲ್ಲಿ ಸುಮಾರು 26ಕ್ಕಿಂತೂ ಅಧಿಕ ಮಂದಿರಗಳಿಗೆ ಭೇಟಿಕೊಟ್ಟರು. ಕಳೆದ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಯು ಇಡೀ ಗುಜರಾತ್‍ನಲ್ಲಿ ಯಾವ ಬಗೆಯ ವಾತಾವರಣವನ್ನು ಹುಟ್ಟುಹಾಕಿದೆ ಎಂಬುದನ್ನು ಇವರಿಬ್ಬರ ಹಣೆಯೇ ಹೇಳುತ್ತಿದೆ. ಬಹುಸಂಖ್ಯಾತ ಧರ್ಮದ ಪ್ರತಿನಿಧಿಗಳಾಗಿ ಗುರುತಿಸಿಕೊಳ್ಳುವುದು ಗುಜರಾತ್‍ನ ಮಟ್ಟಿಗೆ ಅನಿವಾರ್ಯ. ರಾಹುಲ್ ಗಾಂಧಿಯನ್ನು ಎಲ್ಲಿಯವರೆಗೆ ಒತ್ತಡಕ್ಕೆ ಸಿಲುಕಿಸಲಾಯಿತೆಂದರೆ ಒಂದು ಹಂತದಲ್ಲಿ ಅವರು ತಮ್ಮ ಜನಿವಾರವನ್ನೂ ಪ್ರದರ್ಶಿಸಬೇಕಾಯಿತು. ‘ತಾನು ಶಿವನ ಆರಾಧಕ’ ಎಂದೂ ಬಹಿರಂಗವಾಗಿಯೇ ಹೇಳಬೇಕಾಯಿತು. ‘ರಾಹುಲ್ ಗಾಂಧಿಯವರು ಮಸೀದಿ ಪರವೋ ಮಂದಿರ ಪರವೋ’ ಎಂಬ ಪ್ರಶ್ನೆಯನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಎಸೆದರು. ಅಹ್ಮದ್ ಪಟೇಲ್‍ರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಲಿದೆ ಎಂದು ಪ್ರಧಾನಿಯವರು ಹೇಳುವ ಮೂಲಕ, ಕಾಂಗ್ರೆಸನ್ನು ಗೆಲ್ಲಿಸಿದರೆ ಗುಜರಾತ್‍ಗೆ ಮುಸ್ಲಿಮನೊಬ್ಬ ಮುಖ್ಯಮಂತ್ರಿಯಾಗುತ್ತಾನೆ ಎಂಬ ಸೂಚನೆ ಕೊಟ್ಟರು. ರಾಹುಲ್ ಗಾಂಧಿಯವರು ಅಪ್ಪಿ-ತಪ್ಪಿಯೂ ಮಸೀದಿಗೆ ಭೇಟಿ ಕೊಡಲಿಲ್ಲ. ಹಾಗಂತ, ಮಸೀದಿಗೆ ಭೇಟಿಕೊಡಬೇಕಾಗಿತ್ತು ಎಂಬುದು ಇಲ್ಲಿನ ಉದ್ದೇಶ ಅಲ್ಲ. ಮುಸ್ಲಿಮ್ ಎಂಬ ಪದವನ್ನೇ ಉಲ್ಲೇಖಿಸಬಾರದ, ಆ ಸಮುದಾಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಬಾರದ, ‘ಅಲ್ಪಸಂಖ್ಯಾತ ಅಭಿವೃದ್ಧಿ’ ಎಂಬ ಪದವನ್ನು ಪ್ರಣಾಳಿಕೆಯಲ್ಲೂ ಉಲ್ಲೇಖಿಸಬಾರದ ಸ್ಥಿತಿಯೊಂದನ್ನು ಗುಜರಾತ್‍ನಲ್ಲಿ ನಿರ್ಮಿಸಲಾಗಿದೆ. ಈ ಸ್ಥಿತಿ ಎಷ್ಟು ಅಪಾಯಕಾರಿ ಹಂತಕ್ಕೆ ತಲುಪಿದೆಯೆಂದರೆ, ರಾಹುಲ್ ಗಾಂಧೀ ಮತ್ತು ಜಿಗ್ನೇಶ್ ವೇವಾನಿಯಂತಹವರು ಅನಿವಾರ್ಯವಾಗಿ ಇದನ್ನು ಪಾಲಿಸಬೇಕಾಗುತ್ತದೆ. ಮುಸ್ಲಿಮನೊಬ್ಬ ಮುಖ್ಯಮಂತ್ರಿಯಾಗುವುದನ್ನು ಕಾಂಗ್ರೆಸ್‍ಗೆ ಹಿನ್ನಡೆಯಾಗಿಯೂ ಬಿಜೆಪಿಗೆ ಲಾಭಕರವಾಗಿಯೂ ನೋಡಲಾಗುತ್ತದೆ. ಇಂಥ ಸನ್ನಿವೇಶದಲ್ಲಿ, ಜಾತ್ಯತೀತತೆಯಲ್ಲಿ ನಂಬಿಕೆಯಿರಿಸುವ ಯಾವುದೇ ರಾಜಕೀಯ ಪಕ್ಷದ ಮುಂದೆ ಆಯ್ಕೆಗಳು ತೀರಾ ಕಡಿಮೆಯಿರುತ್ತವೆ. ಕಾಂಗ್ರೆಸ್‍ನ ಸೋಲಿಗಿರುವ ಕಾರಣಗಳೂ ಇಲ್ಲೇ ಎಲ್ಲೋ ಇವೆ. ಜಿಎಸ್‍ಟಿ, ನೋಟ್ ಬ್ಯಾನ್, ಪಟೇಲ್ ಮತ್ತು ಹಿಂದುಳಿದ ಸಮುದಾಯಗಳ ಅಸಮಾಧಾನ ಮತ್ತು ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಗುಜರಾತ್ ಬಿಜೆಪಿಯ ಕೈ ತಪ್ಪಲಿಲ್ಲ್ಲ ಅನ್ನುವುದನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಅಹ್ಮದಾಬಾದ್ ಮತ್ತು ವಡೋದರ ವಲಯಗಳು ಬಿಜೆಪಿಯ ಗೆಲುವಿನಲ್ಲಿ ಈ ಬಾರಿಯೂ ಬಹುಮುಖ್ಯ ಪಾತ್ರವಹಿಸಿವೆ. ಒಟ್ಟು ಮತದಾರರಲ್ಲಿ 48% ದಷ್ಟಿರುವ ಮಹಿಳೆಯರು ಮತ್ತು 12 ಲಕ್ಷದಷ್ಟಿದ್ದ ಹೊಸ ಮತದಾರರಲ್ಲಿ ಹೆಚ್ಚಿನವರು ಬಿಜೆಪಿಯ ಪರ ನಿಂತರು ಎಂದೂ ಹೇಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‍ನಲ್ಲಿ ಸುಮಾರು 38 ರಾಲಿಗಳನ್ನು ನಡೆಸಿದರು. ಅಮಿತ್ ಷಾ ಅಂತೂ ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕಿಂತ ಮೊದಲೇ ಗುಜರಾತ್‍ನಲ್ಲಿ ಠಿಕಾಣಿ ಹೂಡಿದರು. ಪ್ರಚಾರದ ಕೊನೆಯ ಹಂತದಲ್ಲಂತೂ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್, ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ, ನಿವೃತ್ತ ಸೇನಾ ವರಿಷ್ಠರೂ ಸೇರಿದಂತೆ ಹಲವರನ್ನು ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಿ ಏಜೆಂಟ್‍ಗಳೆಂದು ಕರೆದರು. ದೇಶ ವಿರೋಧಿ ಸಂಚಿನ ಭಾಗವಾಗಿ ಅವರನ್ನು ಪರಿಗಣಿಸಿದರು. ಬಹುಶಃ, ಬದುಕಿನ ಬದಲು ಭಾವನೆಯ ಆಧಾರದಲ್ಲಿ ನಡೆಸಲಾದ ಮತ್ತೊಂದು ಚುನಾವಣೆ ಇದು.        ನಿಜವಾಗಿ, ಗುಜರಾತ್ ಎಂಬುದು ವ್ಯಾಪಾರಿಗಳ ನಾಡು. ನೋಟ್ ಬ್ಯಾನ್ ಮತ್ತು ಜಿಎಸ್‍ಟಿಗಳಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾಗಿರಬಹುದಾದ ರಾಜ್ಯವೂ ಇದುವೇ. ಆದ್ದರಿಂದ, ಕಾಂಗ್ರೆಸ್ ತನ್ನ ಪ್ರಚಾರ ಸಾಮಗ್ರಿಯಲ್ಲಿ ಇದಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟಿರುವುದರಲ್ಲಿ ಅಚ್ಚರಿಯೇನೂ ಇರಲಿಲ್ಲ. ರೈತರ ಬಗ್ಗೆ, ನಿರುದ್ಯೋಗದ ಬಗ್ಗೆ, 22 ವರ್ಷಗಳ ಆಡಳಿತ ವೈಫಲ್ಯಗಳ ಕುರಿತಂತೆ ಕಾಂಗ್ರೆಸ್ ಪ್ರಶ್ನೆ ಎತ್ತಿತ್ತು.
ಪಟೇಲರಿಗೆ ಮೀಸಲಾತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣವೂ ಸೇರಿದಂತೆ ವಿವಿಧ ಕೊಡುಗೆಗಳನ್ನು ಕಾಂಗ್ರೆಸ್ ಮುಂದಿಟ್ಟಿತು. ಆದರೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗೆಗೊಳಿಸಿದ್ದೇ ಪ್ರಥಮ ಹಂತದ ಮತದಾನದ ಒಂದು ದಿನ ಮೊದಲು. ಪ್ರಣಾಳಿಕೆಗೆ ಬಿಜೆಪಿ ನೀಡುವ ಪ್ರಾಮುಖ್ಯತೆ ಎಷ್ಟು ಎಂಬುದನ್ನು ಇದುವೇ ಹೇಳುತ್ತದೆ. ಅದರ ಮಟ್ಟಿಗೆ ಪ್ರಣಾಳಿಕೆಯೆಂಬುದು ಒಂದು ಸಾಂಪ್ರದಾಯಿಕ ಪತ್ರಿಕಾ ಬಿಡುಗಡೆಯೇ ಹೊರತು ಅದರ ಚುನಾವಣಾ ತಂತ್ರವು ಪ್ರಣಾಳಿಕೆಯನ್ನು ಆಧರಿಸಿಕೊಂಡೇ ಇಲ್ಲ. ಜನರ ಬದುಕಿನ ಬಗ್ಗೆ ಮಾತಾಡುವುದಕ್ಕಿಂತ ಭಾವನೆಗಳ ಮೇಲೆ ಮಾತಾಡುವುದೇ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಬಿಜೆಪಿ ಕಂಡುಕೊಂಡಿದೆ. ನೋಟ್ ಬ್ಯಾನ್ ಅನ್ನು ಎತ್ತಿಕೊಂಡು ವ್ಯಾವಹಾರಿಕ ಚರ್ಚೆ ನಡೆಸುವುದಕ್ಕೂ `ಅದರಿಂದ ದೇಶಕ್ಕೆ ದೂರಗಾಮಿ ಪ್ರಯೋಜನವಿದೆ’ ಎಂದು ವಾದಿಸುವುದಕ್ಕೂ ವ್ಯತ್ಯಾಸವಿದೆ. ಒಂದು ವಾಸ್ತವ ಆಧಾರಿತವಾದರೆ ಇನ್ನೊಂದು ಭಾವನೆ ಆಧಾರಿತ. ಭಾವನೆಗೆ ವಾಸ್ತವವನ್ನು ಕಡೆಗಣಿಸುವ ಸಾಮರ್ಥ್ಯ ಇದೆ. ಮಾತ್ರವಲ್ಲ, ವಾಸ್ತವವನ್ನೇ ದೇಶದ್ರೋಹಿಯಾಗಿ ಕಾಣುವಷ್ಟು ಅದು ಪ್ರಬಲವೂ ಹೌದು. ಸದ್ಯ ಬಿಜೆಪಿಯು ಭಾವನೆ ಎಂಬ ಈ ಅಪಾಯಕಾರಿ ಕುದುರೆಯನ್ನೇರಿದೆ. ಜನಸಾಮಾನ್ಯರು ಕುದುರೆಯ ಆಕರ್ಷಣೆಗಷ್ಟೇ ಮಹತ್ವ ಕೊಡುತ್ತಾರೆ ಎಂಬುದು ಬಿಜೆಪಿಗೆ ಗೊತ್ತು.  ಸದ್ಯದ ತುರ್ತು ಏನೆಂದರೆ,   ವರ್ತಮಾನ ಕಾಲದ ಸಮಸ್ಯೆಗಳಿಗೆ ಪರಿಹಾರವೂ ಆಗದ ಮತ್ತು ಭವಿಷ್ಯತ್ ಕಾಲದ ಸವಾಲುಗಳಿಗೆ ಉತ್ತರವೂ ಆಗದ ಈ ಕುದುರೆಯನ್ನು ಕಟ್ಟಿಹಾಕುವುದು. ಗುಜರಾತ್ ಚುನಾವಣಾ ಫಲಿತಾಂಶವನ್ನು ಬಿಜೆಪಿಯ ಗೆಲುವು- ಕಾಂಗ್ರೆಸ್‍ನ ಸೋಲು ಎಂದು ಹೇಳುವುದಕ್ಕಿಂತ ಭಾವನೆಯ ಗೆಲುವು ಮತ್ತು ಬದುಕಿನ ಸೋಲು ಎಂದಷ್ಟೇ ವಿಶ್ಲೇಷಿಸಬಹುದು. ಈ ವಾತಾವರಣ ಅತ್ಯಂತ ಅಪಾಯಕಾರಿ