ಗೋರಕ್ಷಕರ ಹೆಸರಿನಲ್ಲಿ ಹೊಡೆದು ಕೊಲೆ ಮಾಡಿದ್ದಕ್ಕೆ ಕೋಮುವಾದಿ ಬಣ್ಣ ಹಚ್ಚಬಾರದು: ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ

0
910

ಹೊಸದಿಲ್ಲಿ, ನ.16: ಗೋರಕ್ಷಕರ ಹೆಸರಿನಲ್ಲಿ ನಡೆದ ಕೊಲೆಗಳಿಗೆ ಕೋಮು ಬಣ್ಣ ಹಚ್ಚಬಾರದೆಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ. ಇವೆಲ್ಲವು ಕ್ರಿಮಿನಲ್ ಕೃತ್ಯಗಳಾಗಿವೆ. ಅದಕ್ಕೆಲ್ಲ ಕೋಮು ಬಣ್ಣ ಹಚ್ಚುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಸ್ತಾನದ ಅಲ್ವಾರ ಜಿಲ್ಲೆಯಲ್ಲಿ ಕಳೆದ ಶುಕ್ರವಾರ ಗೋರಕ್ಷರಿಂದ ನಡೆದ ಹಲ್ಲೆಯಲ್ಲಿ ರೈತ ಉಮರ್ ಖಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರನ್ನು ಅಟ್ಟಾಡಿಸಿ ಹೊಡೆದು ಸಾಯಿಸಲಾಗಿತ್ತು.
ಈ ಅಪರಾಧ ಪ್ರಕರಣಗಳ ವಿರುದ್ಧ ಸರಕಾರ ಖಂಡಿತ ಕ್ರಮ ಜರಗಿಸಲಿದೆ. ಸಮಾಜದಲ್ಲಿಎಲ್ಲ ವರ್ಗಕ್ಕೂ ಸುರಕ್ಷೆಯನ್ನು ಕಲ್ಪಿಸುವುದು ಸರಕಾರದ ಸಾಂವಿಧಾನಿಕ ಕರ್ತವ್ಯವೂ ಆಗಿದೆ ಎಂದು ನಕ್ವಿಯವರು ಹೇಳಿದ್ದಾರೆ. ಎಲ್ಲ ಕಡೆಗಳಲ್ಲಿ ಅಂತಹ ವಿನಾಶಕಾರಿ ಜನರು ಇರುತ್ತಾರೆ. ಅವರದ್ದು ಅಭಿವೃದ್ಧಿಯ ಅಜೆಂಡಾವಲ್ಲ. ವಿನಾಶದ ಅಜೆಂಡಾವಾಗಿದೆ. ಇಂತಹ ಘಟನೆಗಳು ವಿಷಾದನೀಯ ಮತ್ತು ದೌರ್ಭಾಗ್ಯಕರವಾಗಿದೆ ಎಂದು ನಕ್ವಿ ಹೇಳಿದರು. ಕೆಲವೊಮ್ಮೆ ಜನರು ಗೋರಕ್ಷಣೆಯ ಹೆಸರಿನಲ್ಲಿ ತಮ್ಮ ಖಾಸಗಿ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಾರೆ. ಆದರೆ, ನನ್ನ ಅಭಿಪ್ರಾಯದಲ್ಲಿ ಇಂತಹ ಘಟನೆಗಳಿಗೆ ಕೋಮು ಬಣ್ಣ ಹಚ್ಚಬಾರದು. ಯಾಕೆಂಂದರೆ ಇಂತಹ ಸ್ವ ಘೋಷಿತ ರಕ್ಷಕರು ಒಡಕು ಮೂಡುವ ಅಜೆಂಡಾಗಳಿಗೆ ನೆರವಾಗುತ್ತಿದ್ದಾರೆ ಎಂದು ಸಚಿವ ನಕ್ವಿ ಹೇಳಿದ್ದಾರೆ.