ಗೌರಿ ಹತ್ಯೆ- ಬಂಧಿತ ನವೀನ ಕುಮಾರ್ ನಿಂದ ಬೆಚ್ಚಿಬೀಳಿಸುವ ಮಾಹಿತಿ

0
5585

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪದಲ್ಲಿ ಬಂಧಿತನಾಗಿರುವ ಮಂಡ್ಯ ಸಮೀಪದ ಮದ್ದೂರಿನ ನವೀನ ಕುಮಾರ್ ಕೆಲವು ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದು, ಹೊರರಾಜ್ಯದವರಾದ ನಾಲ್ಕು ಮಂದಿಗೆ ೨೦೧೭ ಜುಲೈ ಯಲ್ಲಿ ಬಂದೂಕು ತರಬೇತಿಗೆ ವ್ಯವಸ್ಥೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಸಿಟ್ ಮೂಲಗಳು ತಿಳಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಬಲಪಂಥೀಯ ಸಂಘಟನೆಗಳಿಗೆ ಸೇರಿದವರಾದ ಈ ನಾಲ್ಕು ಮಂದಿ 2017 ಜುಲೈ ಮಧ್ಯದಲ್ಲಿ ನವೀನ ಕುಮಾರ್ ನನ್ನು ಮದ್ದೂರಿನಲ್ಲಿ ಭೇಟಿಯಾಗಿದ್ದು ಅವರದೇ ಮಾರುತಿ ಓಮ್ನಿ ವ್ಯಾನ್ ನಲ್ಲಿ ಕೊಳ್ಳೇಗಾಲ- ಚಾಮರಾಜನಗರ ಅರಣ್ಯ ಪ್ರದೇಶದ ನಡುವಿನ ಸ್ಥಳಕ್ಕೆ ತೆರಳಿ ದೇಶೀ ತಯಾರಿಕೆಯ ಪಿಸ್ತೂಲ್ ಮೂಲಕ ಅಭ್ಯಾಸ ನಡೆಸಿದ್ದರು. ನವೀನ ಕುಮಾರ್ ನ ಮಂಗಳೂರಿನ ಗೆಳೆಯ ಈ ನಾಲ್ಕು ಮಂದಿಗೆ ಬಂದೂಕು ಅಭ್ಯಾಸಕ್ಕೆ ನೆರವಾಗುವಂತೆ ಕೇಳಿಕೊಂಡಿದ್ದ ಎಂದೂ ನವೀನ ಕುಮಾರ್ ಹೇಳಿದ್ದಾನೆ ಎಂದು ಸಿಟ್ ಮೂಲಗಳು ತಿಳಿಸಿವೆ.
ಈ ಅಭ್ಯಾಸವು ಆಗಸ್ಟ್ ಮೂರನೇ ವಾರದ ತನಕ ನಡೆದಿದೆ. ಅಲ್ಲದೆ ಸ್ಥಳೀಯರು ನವೀನ ಮತ್ತು ಈ ನಾಲ್ಕು ಮಂದಿಯನ್ನು ನೋಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ವ್ಯಕ್ತಿಯ ಸಹಕಾರದೊಂದಿಗೆ ನವೀನ್ ಈ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿದ್ದ. ಕಳೆದ 2018 ಫೆ. 25 ರಂದು ಉಡುಪಿಯಳ್ಳಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಈ ನಾಲ್ಕು ಮಂದಿಯನ್ನು ಸೆರೆ ಹಿಡಿಯಲು ಸಿಟ್ ಎಲ್ಲ ತಯಾರಿಯನ್ನೂ ನಡೆಸಿತ್ತು. ಅದಕ್ಕಾಗಿ ನಾಲ್ಕು ತಂಡವನ್ನೂ ರಚಿಸಿತ್ತು. ಆದರೆ ಆ ನಾಲ್ಕು ಮಂದಿ ಮದುವೆಗೆ ಬರದೇ ತಪ್ಪಿಸಿಕೊಂಡರು ಎಂದೂ ಮೂಲಗಳು ತಿಳಿಸಿವೆ. ಈ ನಾಲ್ಕು ಮಂದಿಗೆ ಗೌರಿಯ ಮನೆ ಮತ್ತು ಕಚೇರಿಯನ್ನು ತೋರಿಸಿರುವುದು ನವೀನ ಎಂಬುದಾಗಿಯೂ ಪೊಲೀಸ್ ಮೂಲಗಳು ತಿಳಿಸಿವೆ.
ನವೀನ ಕುಮಾರ್ ನನ್ನು ಫೆ. 15 ರಂದು ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬಂಧಿಸಲಾಗಿತ್ತು. ಹಿಂದೂ ಯುವ ವಾಹಿನಿಯಲ್ಲಿರುವ ಈತನಿಂದ ಬಂದೂಕು ಮತ್ತು ೧೫ ಜೀವಂತ ಮದ್ದುಗುಂಡುಗಳನ್ನು ವಶಪಡಿಸಲಾಗಿತ್ತು.