ಚರ್ಚೆಗೊಳಗಾಗಬೇಕಾದ್ದು ಷಹಜಹಾನ್ ಅಲ್ಲ, ಜಯ್ ಶಾ…

0
1407

ಅವರಿಗೆ ಇತಿಹಾಸದ ಅರಿವಿಲ್ಲ , ಮಾತಿನ ಭರದಲ್ಲಿ ಏನೇನೊ ಮಾತಾಡ್ತಾರೆ. ಅವರ ಹೇಳಿಕೆ ಮತ್ತು ಬಿಜೆಪಿ ಪಕ್ಷಕ್ಕೆ ಸಂಬಂಧವಿಲ್ಲ ಅದು ಅವರ ವೈಯಕ್ತಿಕ ಅಭಿಪ್ರಾಯ.
ಭಾರತೀಯ ಸಂಸ್ಕೃತಿಯಲ್ಲಿ ತಾಜ್ ಮಹಲ್ ಒಂದು ಕಪ್ಪು ಚುಕ್ಕೆ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ಈ ರೀತಿ ಸಮರ್ಥನೆ ನೀಡಿದೆ.
ಮೊಘಲರ ಇತಿಹಾಸವನ್ನು ಅಳಿಸಿ ಹಾಕಬೇಕೆನ್ನುವುದು , ಅಕ್ಬರ್ ನನ್ನು ಹಿಟ್ಲರ್ ಗೆ ಹೋಲಿಸುವುದು ಅಥವಾ ಈ ರೀತಿಯ ಇನ್ನಾವುದೇ ಹೇಳಿಕೆಗಳಿಂದ ಇತಿಹಾಸ ಬದಲಿಸಲು ಸಾಧ್ಯವಿಲ್ಲವೆಂದು ಬಿಜೆಪಿಯವರಿಗೂ ಗೊತ್ತು. ಅದೇ ರೀತಿ ಕೋಟಿಗಟ್ಟಲೆ ಆದಾಯವಿರುವ, ಭಾರತೀಯ ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಿರುವ ತಾಜ್ ಮಹಲ್ ನಂತಹ ಸ್ಮಾರಕಗಳ ಬಗ್ಗೆ ಈ ರೀತಿಯ ಹೇಳಿಕೆಗಳಿಂದಾಗುವ ನಷ್ಟದ ಅರಿವಿಲ್ಲದಿರುವ ಮುಗ್ಧರೂ ಅಲ್ಲ.
ಅವರ ಈ ರೀತಿಯ ಹೇಳಿಕೆಗಳ ಹಿಂದೆ ಒಂದು ವ್ಯವಸ್ಥಿತ ಯೋಜನೆಯಿರುತ್ತದೆ.
ಇದು ಕೇವಲ ಸಂಗೀತ್ ಸೋಮ್ ಮತ್ತು ಸಾಕ್ಷಿ ಮಹಾರಾಜ್ ರಂತಹ ಕೆಳಮಟ್ಟದ ನಾಯಕರಿಗೆ ಸೀಮಿತವಾಗಿಲ್ಲ.
ಸಂಗೀತ್ ಸೋಮ್ ನ ಹೇಳಿಕೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಯೋಗಿಯವರೇ ಕೆಲ ತಿಂಗಳ ಹಿಂದೆ ವಿದೇಶಿ ಗಣ್ಯರು ದೇಶಕ್ಕೆ ಭೇಟಿ ನೀಡಿದಾಗ ಉಡುಗೊರೆಯಾಗಿ ತಾಜ್ ಮಹಲ್ ಪ್ರತಿಕೃತಿ ನೀಡುವುದು ಸರಿಯಲ್ಲ ಏಕೆಂದರೆ ಅದು ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಲ್ಲವೆಂದು ಹೇಳಿದ್ದರು.

ಸದ್ಯದಲ್ಲೇ ಹಿಮಾಚಲ ಪ್ರದೇಶ ಮತ್ತು ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆಗಳಿವೆ. ಉತ್ತರ ಪ್ರದೇಶದಲ್ಲಿ ಉಪಚುನಾವಣೆ ಮತ್ತು ಸ್ಥಳಿಯ ಸಂಸ್ಥೆ ಚುನಾವಣೆಗಳಿವೆ.
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ , ರೈತರು ಆತ್ಮ ಹತ್ಯೆ ಮಾಡ್ತಿದ್ದಾರೆ , ಯುವಕರು ಉದ್ಯೋಗವಿಲ್ಲದೆ ಅಲಿಯುತ್ತಿದ್ದಾರೆ. Demonitisation ಮತ್ತು GST ಯಿಂದಾಗಿ ವರ್ತಕರು ಬೀದಿಗಿಳಿದಿದ್ದಾರೆ. ಬೆಲೆಯೇರಿಕೆಯಿಂದ ಜನ ಕಂಗೆಟ್ಟಿ ಹೋಗಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಮೇಲಿನ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಹರಿಸಲು ಬಿಜೆಪಿಗೆ ಈ ರೀತಿಯ ಹೇಳಿಕೆಗಳು ಯಾವಾಗಲೂ ಸಹಕಾರಿಯಾಗಿವೆ.
ಕೆಲವೊಮ್ಮೆ ಹೀಗೆ ಹೇಳಿ ಜನರ ನಾಡಿ ಮಿಡಿತ ಅರಿಯುವ ಪ್ರಯತ್ನ ಸಹ ಮಾಡುತ್ತಾರೆ.
ಉತ್ತಮ ಪ್ರತಿಕ್ರಿಯೆ ಬಂದರೆ ಮುಂದಿನ ಚುನಾವಣೆಯಲ್ಲಿ ಇಂತಹ ಬಾಲಿಷ ಹೇಳಿಕೆಗಳೇ ಅವರ ಆಯುಧ ಇಲ್ಲವಾದಲ್ಲಿ ಮತ್ತೊಮ್ಮೆ ಅಚ್ಛೆ ದಿನಗಳ ಕನಸಿನ ಲೋಕದಲ್ಲಿ ಜನರನ್ನು ಕೊಂಡೊಯ್ಯುವುದು.
ಕಾರ್ಪೊರೇಟ್ ಕಂಪನಿಗಳ ಮತ್ತು ರಾಜಕಾರಣಿಗಳ ಕೃಪೆಯಿಂದಾಗಿ ನಡೆಯುವ ಮಾಧ್ಯಮಗಳು ಈ ರೀತಿಯ ಅನವಶ್ಯಕ ವಿಷಯಗಳು ಜನರಲ್ಲಿ ಚರ್ಚೆಗೆ ಒಳಗಾಗುವಂತೆ ನೋಡಿಕೊಳ್ಳುತ್ತವೆ.
ಆಜಮ್ ಖಾನ್ ಮತ್ತು ಓವೈಸಿಗಳು ಇದನ್ನು ತಮ್ಮ ರಾಜಕೀಯ ಬೇಳೆ ಬೇಯಿಸುಕೊಳ್ಳಲು ಉಪಯೋಗಿಸಿಕೊಂಡರೆ ಸಾಮಾನ್ಯ ಜನರು ತಮ್ಮ ನೈಜ ಸಮಸ್ಯೆಗಳನ್ನು ಮರೆತು ಇಂತಹ ವಿಷಯಗಳ ಕುರಿತು ತಲೆ ಕೆಡಿಸಿಕೊಳ್ಳುತ್ತಾ ಹೋಗ್ತಾರೆ.
ಇದು ಬಿಜೆಪಿಯ ಯಶಸ್ಸಿನ ಸೂತ್ರವಾಗಿದೆ. ಮೊದಲು ಗುಜರಾತ್ ಇದರ ಪ್ರಯೋಗ ಶಾಲೆಯಾಗಿತ್ತು ಈಗ ಇಡಿ ದೇಶದ ಮೇಲೆ ಈ ಸೂತ್ರ ಅನುಷ್ಠಾನದ ಪ್ರಯತ್ನ ನಡೆದಿದೆ.
ಆರಂಭದಲ್ಲಿ ‘ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ‘ ಬಗ್ಗೆ ಮಾತಾಡುವ ಇವರು ಚುನಾವಣೆ ಬಂದ ಕೂಡಲೇ
‘ ಸ್ಮಶಾನ ಮತ್ತು ಕಬರಸ್ತಾನ ‘ ಗಳ ಮಾತಾಡುತ್ತಾರೆ.
ಒಟ್ಟಲ್ಲಿ ಜನರನ್ನು ಮುಖ್ಯ ಸಮಸ್ಯೆಗಳಿಂದ ವಿಮುಖಗೊಳಿಸಿ ಅವರನ್ನು ಟಿಪ್ಪು , ಅಕ್ಬರ್ , ತಾಜ್ ಮಹಲ್ ಮತ್ತು ಲವ್ ಜಿಹಾದ್ ನಂತಹ ಅನವಶ್ಯಕ ವಿಷಯಗಳಲ್ಲಿ ಮಗ್ನರಾಗಿಸುವುದೇ ಇವರ ಉದ್ದೇಶ.
ಹೀಗಾಗಿ ಜನರು ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮಗೆ ಲಭ್ಯವಿರುವ ಮಾಧ್ಯಮಗಳ ಮೂಲಕ ಮುಖ್ಯ ವಿಷಯಗಳ ಕುರಿತು ಸರಕಾರವನ್ನು ಪ್ರಶ್ನಿಸುವ ಕೆಲಸ ಮಾಡಬೇಕು.
2018 ರ ಕರ್ನಾಟಕ ಚುನಾವಣೆಯಿರಲಿ , 2019 ರ ಚುನಾವಣೆಯಾಗಲಿ ರಾಜಕೀಯ ಪಕ್ಷಗಳು ಟಿಪ್ಪು , ತಾಜ್ ಮಹಲ್ , ಔರಂಗಜೇಬ್ ಇತ್ಯಾದಿಗಳನ್ನು ಚರ್ಚೆಗೆ ತರಲು ಯತ್ನಿಸುತ್ತಾರೆ, ನಾವು ಮಾತ್ರ ಈ ಹಳ್ಳಕ್ಕೆ ಮತ್ತೆ ಬೀಳಬಾರದು.

ಅವ್ರು ಅಲೆಕ್ಸಾಂಡರ್ ಬಗ್ಗೆ ಮಾತಾಡ್ತಾರೆ ನಾವು ಸಿಲೆಂಡರ್ ಬಗ್ಗೆ ಮಾತಾಡೋಣ

ಅವ್ರು ಶಾಹ್ ಜಹಾನ್ ಬಗ್ಗೆ ಮಾತಾಡ್ತಾರೆ ನಾವು ಜಯ ಶಾ ಬಗ್ಗೆ ಮಾತಾಡೋಣ

ಅವ್ರು ಸ್ಮಶಾನ-ಕಬ್ರಸ್ತಾನ ಬಗ್ಗೆ ಮಾತಾಡ್ತಾರೆ ನಾವು ಹಿಂದುಸ್ತಾನ್ ಬಗ್ಗೆ ಮಾತಾಡೋಣ

ಅವ್ರು ಬುಲೆಟ್ ಟ್ರೇನ್ ಬಗ್ಗೆ ಮಾತಾಡ್ತಾರೆ ನಾವು ಲೋಕಲ್ ಟ್ರೇನ್ ಬಗ್ಗೆ ಮಾತಾಡೋಣ

ಅವ್ರು ಔರಂಗಜೇಬ್ ಬಗ್ಗೆ ಮಾತಾಡ್ತಾರೆ ನಾವು ನಮ್ಮ ಜೇಬ್ ಬಗ್ಗೆ ಮಾತಾಡೋಣ

ಇರ್ಶಾದ್ ಬೆಂಗಳೂರು