ಚರ್ಚೆ: ಒಂದು-ಹೆಣ್ಣು; ಎರಡೂ- ಹೆಣ್ಣು ಮತ್ತು…

0
398

ಯಾವುದೇ ಕಾಲ, ಪರಿಸ್ಥಿತಿ, ಸಮಯದ ಹಂಗಿಲ್ಲದೇ ಎರಡು ವಿಷಯಗಳು ಮಾಧ್ಯಮಗಳಲ್ಲಿ ಆಗಾಗ ಚರ್ಚೆಗೆ ಒಳಗಾಗುತ್ತಲೇ ಇರುತ್ತವೆ. 1. ಹೆಣ್ಣು. 2. ಹೆಣ್ಣು. ಮಹಿಳಾ ಸುರಕ್ಷಿತತೆಯ ವಿಷಯ ಇದರಲ್ಲಿ ಒಂದಾದರೆ, ಇನ್ನೊಂದು ಲಿಂಗಾನುಪಾತದ ಸಮಸ್ಯೆ. ಎರಡೂ ಹೆಣ್ಣಿಗೇ ಸಂಬಂಧಿಸಿದ್ದು. ಈ ದೇಶವನ್ನು ಹೆಣ್ಣಿನ ಪಾಲಿಗೆ ಸುರಕ್ಷಿತಗೊಳಿಸುವ ಉದ್ದೇಶದಿಂದ ರಚಿಸಲಾದ ಕಾನೂನುಗಳ ಸಂಖ್ಯೆ ಸಣ್ಣದೇನಲ್ಲ. 2012ರ ನಿರ್ಭಯ ಘಟನೆಯ ಬಳಿಕವಂತೂ ಹೆಣ್ಣು ಈ ದೇಶದಲ್ಲಿ ಬಹುಮುಖ್ಯ ಚರ್ಚಾವಸ್ತುವಾದಳು. 2013ರಲ್ಲಿ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ ವಿಧಿಸುವಷ್ಟು ಕಾನೂನನ್ನು ಬಲಪಡಿಸಲಾಯಿತು. ಆದರೂ ಹೆಣ್ಣು ಸುರಕ್ಷಿತಳಲ್ಲ ಅನ್ನುವುದಕ್ಕೆ ಆ ಬಳಿಕದ ಹಲವು ಭಯಾನಕ ಅತ್ಯಾಚಾರ-ಹತ್ಯೆ ಪ್ರಕರಣಗಳು ಸಾಕ್ಷಿಯಾದವು. ಕಥುವಾ ಮತ್ತು ಉನ್ನಾವೋ ಈ ಪಟ್ಟಿಯಲ್ಲಿ ಇತ್ತೀಚೆಗೆ ಸ್ಥಾನ ಪಡೆದುಕೊಂಡ ಪ್ರಕರಣಗಳಾದರೆ ಕಳೆದವಾರ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ರಾಜ್‍ಪುರ ಗ್ರಾಮದಲ್ಲಿ 35 ವರ್ಷದ ವಿವಾಹಿತ ಮಹಿಳೆಯನ್ನು ಐದು ಮಂದಿಯ ಗುಂಪು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿ ಬಳಿಕ ದೇವಸ್ಥಾನದ ಯಾಗ ಶಾಲೆಯ ಹೋಮಕುಂಡದಲ್ಲಿ ದಹಿಸಿದ ಘಟನೆ ನಡೆಯಿತು. ಇದರ ಜೊತೆಜೊತೆಗೇ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಒಂದು ಆಘಾತಕಾರಿ ಅಂಕಿ-ಸಂಖ್ಯೆ ಬಿಡುಗಡೆಯಾಗಿದೆ. ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಜಿಲ್ಲೆಯಲ್ಲಿ ಹೆಣ್ಮಕ್ಕಳ ಬಗ್ಗೆ ತಾತ್ಸಾರ ಭಾವನೆಯಿದೆ ಎಂಬ ಮಾಹಿತಿಯನ್ನು ಈ ಅಂಕಿಅಂಶಗಳು ರುಜುವಾತುಪಡಿಸುತ್ತಿವೆ. 2011ರ ಜನಗಣತಿಯ ಪ್ರಕಾರ ಈ ಜಿಲ್ಲೆಯಲ್ಲಿ 6 ವರ್ಷದೊಳಗಿನ ಪ್ರತಿಸಾವಿರ ಗಂಡು ಮಕ್ಕಳಿಗೆ 945 ರಷ್ಟು ಹೆಣ್ಣು ಮಕ್ಕಳಷ್ಟೇ ಇದ್ದಾರೆ. 2001ರಲ್ಲಿ 1000 ಗಂಡು ಮಕ್ಕಳಿಗೆ 951 ಹೆಣ್ಣು ಮಕ್ಕಳಿದ್ದರು. ಅಂದರೆ, ಕಳೆದ 16 ವರ್ಷಗಳ ಅವಧಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದಕ್ಕೆ ಕಾರಣಗಳೇನು?

ಸಾವಿರ ಗಂಡು ಮಕ್ಕಳಿಗೆ ಸಾವಿರದ ಒಂದು ಹೆಣ್ಣು ಮಕ್ಕಳಿರುವ ಜಿಲ್ಲೆ ಈ ದೇಶದಲ್ಲಿ ಬಹುಶಃ ಹುಡುಕಿದರೂ ಸಿಗುವ ಸಾಧ್ಯತೆ ಇಲ್ಲ. ದೇಶದ ಒಟ್ಟಾರೆ ಗಂಡು-ಹೆಣ್ಣು ಲಿಂಗಾನುಪಾತವು 1000-938ರ ಆಸುಪಾಸಿನಲ್ಲಿದೆ. ಇದಕ್ಕೆ ಎರಡು ಕಾರಣಗಳನ್ನು ಅಂದಾಜಿಸಬಹುದು. ಒಂದು- ಪ್ರಕೃತಿಯೇ ಈ ಅಸಮತೋಲನಕ್ಕೆ ಕಾರಣವಾಗಿದೆ. ಗಂಡು ಮಕ್ಕಳು ಹುಟ್ಟುವಷ್ಟು ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತಿಲ್ಲ. ಇದು ಪ್ರಕೃತಿ ಸಹಜ ಕ್ರಿಯೆಯಾಗಿದ್ದು, ಮಾನವನ ಹಸ್ತಕ್ಷೇಪವನ್ನು ಇದರಲ್ಲಿ ಶಂಕಿಸಬೇಕಾಗಿಲ್ಲ. ಎರಡು- ಮಾನವನ ಹಸ್ತಕ್ಷೇಪದಿಂದಾಗಿಯೇ ಈ ಏರಿಳಿಕೆ ಉಂಟಾಗಿದೆ. ಹೆಣ್ಣು ಮಗುವಿನ ಬಗ್ಗೆ ಹೆತ್ತವರಲ್ಲಿ ತಾತ್ಸಾರಭಾವವಿದೆ.

ನಿಜವಾಗಿ, ಈ ಎರಡು ಕಾರಣಗಳಲ್ಲಿ ಎರಡನೇ ಕಾರಣವನ್ನೇ ಹೆಚ್ಚಿನೆಲ್ಲ ಸಂಶೋಧನೆಗಳು ಅಂಗೀಕರಿಸಿವೆ. ಹೆಣ್ಣು ಯಾವ್ಯಾವುದೋ ಕಾರಣಕ್ಕೆ ಸಮಾಜದ ಪಾಲಿಗೆ ಭಾರವೆಂದು ಪರಿಗಣಿಸಲ್ಪಡುತ್ತಿದ್ದಾಳೆ. ಅತ್ಯಾಚಾರವೂ ಈ ಭಾರಕ್ಕೆ ಒಂದು ಕಾರಣವಾಗಿರಬಹುದು. ವರದಕ್ಷಿಣೆಯೂ ಒಂದು ಕಾರಣವಾಗಿರಬಹುದು. ಹೆತ್ತವರ ಲಾಭ-ನಷ್ಟದ ಲೆಕ್ಕಾಚಾರಕ್ಕೂ ಈ ಕಾರಣಗಳಲ್ಲಿ ಪಾಲು ಇರಬಹುದು. ಪ್ರದೇಶದಿಂದ ಪ್ರದೇಶಕ್ಕೆ, ನಗರದಿಂದ ನಗರಕ್ಕೆ ಈ ಕಾರಣಗಳಲ್ಲಿ ವ್ಯತ್ಯಾಸ ಇರಬಹುದಾದರೂ ಅದರ ಪರಿಣಾಮ ಮಾತ್ರ ಹೆಣ್ಣಿನ ಮೇಲೆಯೇ. ದಕ್ಷಿಣ ಕನ್ನಡ ಜಿಲ್ಲೆಯನ್ನು ಎಜುಕೇಶನಲ್ ಹಬ್ ಎಂದು ಕರೆಯಲಾಗುತ್ತದೆ. ರಾಜ್ಯದ ಬೇರೆ ಬೇರೆ ಕಡೆಯಿಂದ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳು ಜಿಲ್ಲೆಗೆ ಬರುತ್ತಾರೆ. ಶಿಕ್ಷಣದ ಬಗ್ಗೆ ಅತ್ಯಂತ ಹೆಚ್ಚು ಜಾಗೃತಿಯುಳ್ಳ ಮತ್ತು ಶೈಕ್ಷಣಿಕವಾಗಿ ಅತ್ಯಂತ ಮುಂದುವರಿದ ಜಿಲ್ಲೆ ಇದು. ಹಾಗಿದ್ದರೂ ಕಳೆದ 16 ವರ್ಷಗಳಿಂದ ಜಿಲ್ಲೆಯಲ್ಲಿ ಹೆಣ್ಣು ಮಗು ನಿಧಾನಕ್ಕೆ ನಾಪತ್ತೆಯಾಗುತ್ತಿದೆ ಎಂದರೆ ಅದು ಕೊಡುವ ಸೂಚನೆ ಏನು? ಹೆಣ್ಣಿನ ಕುರಿತಾದ ನಕಾರಾತ್ಮಕ ಭಾವನೆಯನ್ನು ಬದಲಿಸಲು ಶಿಕ್ಷಣ ವಿಫಲವಾಗುತ್ತಿದೆ ಎಂಬುದನ್ನೇ ಅಲ್ಲವೇ? ಹಾಗಿದ್ದರೆ, ಶೈಕ್ಷಣಿಕ ಪ್ರಗತಿಗೂ ಹೆಣ್ಣಿನ ಕುರಿತಾದ ಸಕಾರಾತ್ಮಕ ಭಾವನೆಗೂ ನಡುವೆ ಹೇಗೆ ಸಂಬಂಧವನ್ನು ಕಲ್ಪಿಸಬಹುದು? ಹೆಣ್ಣಿನ ಬಗ್ಗೆ ಗೌರವಾರ್ಹ ಭಾವನೆ ಹುಟ್ಟಿಸಲು ನಮ್ಮ ಶಿಕ್ಪಣ ಪದ್ಧತಿಗೆ ಸಾಧ್ಯವಾಗುತ್ತಿಲ್ಲವೇ? ಕಳೆದವಾರ ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆಯಿತು. ಹಿರಿಯ ನ್ಯಾಯವಾದಿಯೊಬ್ಬರು ಕಿರಿಯ ನ್ಯಾಯವಾದಿಯ ಮೇಲೆ ಅತ್ಯಾಚಾರ ಎಸಗಿದರು. ಆ ಬಗ್ಗೆ ದೂರೂ ದಾಖಲಾಯಿತು. ಇದೊಂದು ಬಿಡಿ ಉದಾಹರಣೆ ಅಷ್ಟೇ. ಹೆಣ್ಣು ಯಾರಿಂದ ಅಸುರಕ್ಷಿತಳಾಗಿದ್ದಾಳೆ? ವಿದ್ಯಾವಂತ ಪುರುಷ ವರ್ಗ ಆಕೆಯನ್ನು ಹೇಗೆ ನೋಡುತ್ತಿದೆ? ಹೆಣ್ಣನ್ನು ಅತ್ಯಾಚಾರಕ್ಕೆ ಒಳಪಡಿಸುವ, ವರದಕ್ಷಿಣೆಗೆ ಪೀಡಿಸುವ, ಉದ್ಯೋಗ, ಭಡ್ತಿಗಾಗಿ ಹಾಸಿಗೆ ಸುಖ ಬಯಸುವ ಪುರುಷರೆಲ್ಲ ಅಶಿಕ್ಷಿತರೇ? ಅವಿದ್ಯಾವಂತರೇ? ಸಮಾಜ ಶಿಕ್ಷಿತವಾದಂತೆಯೇ ಹೆಣ್ಣು ಸುರಕ್ಷಿತಗೊಳ್ಳುತ್ತಾ ಹೋಗುತ್ತಾಳೆ ಎಂಬ ನಂಬಿಕೆ ಎಲ್ಲಿಯ ವರೆಗೆ ಸರಿ? ಅಮೇರಿಕ, ಬ್ರಿಟನ್ ಸೇರಿದಂತೆ ಮುಂದುವರಿದ ದೇಶಗಳಲ್ಲಿ ‘MeToo’ ಅನ್ನುವ ಹ್ಯಾಶ್‍ಟ್ಯಾಗ್ ಚಳವಳಿ ಪ್ರಾರಂಭವಾಗಿದೆ. ಅತ್ಯಂತ ಪ್ರಗತಿಪರ ಮತ್ತು ವಿದ್ಯಾವಂತ ಸಮಾಜವಾಗಿ ಗುರುತಿಗೀಡಾಗಿರುವ ಅಲ್ಲೆಲ್ಲ ಹೆಣ್ಣು ಹೇಗೆ ಶೋಷಣೆಗೆ ಒಳಗಾಗಿದ್ದಾಳೆ ಅನ್ನುವುದನ್ನು ಹೇಳುವ ಚಳವಳಿ ಇದು. ಸಿನಿಮಾ ರಂಗದ ಖ್ಯಾತನಾಮ ನಟಿಯರಲ್ಲಿ ಅನೇಕರು ತಮ್ಮ ಒಡಲ ನೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಅವಕಾಶಕ್ಕಾಗಿ ಹೇಗೆ ಪುರುಷ ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡರು ಎಂಬುದನ್ನು MeToo ನಲ್ಲಿ ಅವರು ಹಂಚಿಕೊಳ್ಳುತ್ತಿದ್ದಾರೆ. ಭಾರತೀಯ ಸಿನಿಮಾ ರಂಗದ ನಟಿಯರೂ ಈ ಬಗ್ಗೆ ಧ್ವನಿಯೆತ್ತಿದ್ದಾರೆ. ರಾಜಕೀಯ ಕ್ಷೇತ್ರವೂ ಹೆಣ್ಣಿನ ಪಾಲಿಗೆ ಸುರಕ್ಷಿತವಾಗಿಲ್ಲ ಎಂಬುದನ್ನು ರೇಣುಕಾ ಚೌಧರಿಯಂಥ ಒಂದಕ್ಕಿಂತ ಹೆಚ್ಚು ರಾಜಕೀಯ ನಾಯಕಿಯರು ಬಹಿರಂಗಪಡಿಸಿದ್ದಾರೆ. ಈ ಶೋಷಣೆಯ ವ್ಯಾಪ್ತಿ ಬಹಳ ದೊಡ್ಡದು. ಹೆಚ್ಚಿನೆಲ್ಲ ಕ್ಷೇತ್ರಗಳು ಮಹಿಳಾ ಶೋಷಣೆಯ ಕಪ್ಪು ಕಲೆಯನ್ನು ಅಚಿಟಿಸಿಕೊಂಡೇ ಮುಂದೆ ಸಾಗುತ್ತಿವೆ. ಹೀಗಿರುವಾಗ, ಶೈಕ್ಷಣಿಕ ಪ್ರಗತಿಯೇ ಹೆಣ್ಣಿಗೆ ಈ ಭೂಮಿಯನ್ನು ಸುರಕ್ಷಿತವಾಗಿಡಬಲ್ಲದು ಎಂಬ ಅಭಿಪ್ರಾಯ ಸಂಪೂರ್ಣ ಸರಿಯಲ್ಲ. ಇವತ್ತು ಹೆಣ್ಣನ್ನು ಲೈಂಗಿಕವಾಗಿ ಬಳಸಿಕೊಳ್ಳುವವರಲ್ಲಿ ವಿದ್ಯಾವಂತ ಪುರುಷರ ಸಂಖ್ಯೆಯೇ ಅತ್ಯಧಿಕ. ಆದ್ದರಿಂದ ಹೆಣ್ಣಿಗೆ ಸುರಕ್ಷಿತ ವಾತಾವರಣವೊಂದನ್ನು ಒದಗಿಸಿಕೊಡುವ ಬಗ್ಗೆ ಪರ್ಯಾಯ ಚಿಂತನೆಗಳೂ ನಡೆಯಬೇಕು. ಭಾರತದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಹೋಲಿಸಿದರೆ ಅಮೇರಿಕದಲ್ಲಿ ಇದರ ಪ್ರಮಾಣ 15% ಹೆಚ್ಚು ಇದೆ ಎಂಬ ವರದಿಗಳಿವೆ. ಇಲ್ಲೂ ಶಿಕ್ಷಣವೇ ಕಟಕಟೆಯಲ್ಲಿ ನಿಲ್ಲುತ್ತದೆ. ಆದ್ದರಿಂದ ವಿದ್ಯಾವಂತ ಸಮಾಜದಲ್ಲಿ ಹೆಣ್ಣು ಸುರಕ್ಷಿತಳು ಎಂದು ಭಾವಿಸಬೇಕಿಲ್ಲ. ಹೆಣ್ಣಿನ ಸುರಕ್ಷಿತತೆ ಮತ್ತು ಅಸುರಕ್ಷಿತತೆ ಗಂಡಿನ ಮನಃಸ್ಥಿತಿಯನ್ನು ಹೊಂದಿಕೊಂಡಿದೆ. ಆ ಒಳ್ಳೆಯ ಮನಸ್ಥಿತಿಯನ್ನು ಹುಟ್ಟು ಹಾಕುವ ಶಿಕ್ಷಣ ಯಾವುದು? ಅನಾದಿ ಕಾಲದಿಂದಲೂ ಹೆಣ್ಣು ದುರ್ಬಳಕೆಗೆ ಒಳಗಾಗುತ್ತಲೇ ಬಂದಿದ್ದಾಳೆ. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲಿ ಹೆಣ್ಣು ಮಗುವನ್ನು ಜೀವಂತವಾಗಿ ಹೂಳಲಾಗುತ್ತಿತ್ತು. ಇವತ್ತು ಆಸ್ಪತ್ರೆಯೆಂಬ ನಾಲ್ಕು ಗೋಡೆಗಳ ಒಳಗಡೆ ಅದೇ ಕ್ರೌರ್ಯವನ್ನು ಅತ್ಯಂತ ಉನ್ನತ ತಂತ್ರಜ್ಞಾನದ ಮೂಲಕ ಎಸಗಲಾಗುತ್ತಿದೆ. ಶತಮಾನಗಳು ಸಂದರೂ ಮಾನವನ ಮನಃಸ್ಥಿತಿಯಲ್ಲಿ ಬಹುದೊಡ್ಡ ಬದಲಾವಣೆ ಆಗಿಲ್ಲ ಅನ್ನುವುದನ್ನು ಸೂಚಿಸುವ ಮಾಹಿತಿಗಳಿವು. ಹೆಣ್ಣಿನ ಬಗ್ಗೆ ಒಂದು ಬಗೆಯ ಕೀಳರಿಮೆ, ಅನಾದರ, ಅತೃಪ್ತಿಯ ಭಾವ ಅಂದಿನಿಂದ ಇಂದಿನ ತನಕ ಮುಂದುವರಿಯುತ್ತಲೇ ಬಂದಿದೆ. ಪವಿತ್ರ ಕುರ್‍ಆನ್ ಈ ಭಾವವನ್ನು ಎಷ್ಟು ಪ್ರಬಲವಾಗಿ ಖಂಡಿಸಿತೆಂದರೆ, ಹೆಣ್ಣು ಮಕ್ಕಳನ್ನು ಹೂಳುತ್ತಿದ್ದ ಕೈಗಳೇ ಅಂದು ಹೆಣ್ಣು ಶಿಶುವಿಗಾಗಿ ಆಸೆ ಪಟ್ಟವು. ಹೆಣ್ಣು ಮಕ್ಕಳಿಗಾಗಿ ಹೆಮ್ಮೆ ಪಡುವ ಸಮಾಜವೊಂದನ್ನು ಪ್ರವಾದಿ ಮುಹಮ್ಮದ್(ಸ) ನಿರ್ಮಿಸಿ ತೋರಿಸಿದರು. ನಾಲ್ಕು ಹೆಣ್ಣು ಮಕ್ಕಳನ್ನು ಪೋಷಿಸಿ ಬೆಳೆಸಿದರು. ಹೆಣ್ಣು ಅಸುರಕ್ಷಿತವಾಗಿರುವ ಇಂದಿನ ದಿನಗಳಲ್ಲಿ ಅವರ ಬಗ್ಗೆ ಮತ್ತು ಅವರು ಸಾಧಿಸಿರುವ ಸಾಧನೆಯ ಬಗ್ಗೆ ಅಧ್ಯಯನ ನಡೆಯುವ ಅಗತ್ಯ ಇದೆ. ದಕ್ಷಿಣ ಕನ್ನಡ ಜಿಲ್ಲೆಗೂ ಇದು ಅನ್ವಯಿಸಲಿ.