ಚಿಂತನ-ಮಂಥನ – 01

0
463

ಇಸ್ಲಾಮ್ ಸರಳವಾಗಿ ನಿರ್ಣಯಿಸಿರುವ ವಿವಾಹವೆಂಬ ಪವಿತ್ರ ಕಾರ್ಯವನ್ನು ಜಟಿಲ ಮತ್ತು ತ್ರಾಸದಾಯಕಗೊಳಿಸುವ ಎಲ್ಲವೂ ಅನಾಚಾರವಾಗಿವೆ. ಅದು ಇಸ್ಲಾಮಿನ ಶುದ್ಧ ಪ್ರಕೃತಿ ಹಾಗೂ ಸನ್ಮಾರ್ಗಕ್ಕೆ ತಕ್ಕುದಲ್ಲ. ಸಮಾಜದಲ್ಲಿರುವ ದುರಾಚಾರಗಳಿಂದಾಗಿ ಹಲವು ಯುವಕರು ವಿವಾಹಕ್ಕೆ ಹೆದರುತ್ತಾರೆ. ಆರ್ಥಿಕ ಸ್ಥಿತಿ ಸುಧಾರಿಸಿದ ಬಳಿಕ ವಿವಾಹ ಸಾಕೆಂಬ ಮನೋಭಾವ ಹೆಚ್ಚಿನ ಯುವಕರಲಿ ್ಲದೆ. ಸುಗಮ ದಾಂಪತ್ಯ ಜೀವನಕ್ಕೆ ಅದು ಅನಿವಾರ್ಯವೆಂಬುದೇ ಅವರ ನಿಲುವಾಗಿದೆ. ಸಮಾಜವು ನಿರ್ಮಿಸಿರುವ ಆಚಾರ-ವಿಚಾರಗಳ ಬಂಡೆಗೆ ಢಿಕ್ಕಿ ಹೊಡೆದು ಅದು ನುಚ್ಚುನೂರಾದೀತೆಂದು ಅವರು ಭಾವಿಸುತ್ತಾರೆ. ಆದ್ದರಿಂದ 25-30 ವಯಸ್ಸಿನ ಯುವಕರು ಇಂದು ಅವಿವಾಹಿತರಾಗಿಯೇ ಉಳಿದಿದ್ದಾರೆ.
ಕಂದಾಚಾರಗಳು ಹೆಚ್ಚಾಗಿ ಹುಡುಗಿಯರು ಮತ್ತವರ ಪೋಷಕರನ್ನು ವಿಷಮ ಸ್ಥಿತಿಗೆ ದೂಡುತ್ತದೆ. ವಯಸ್ಸಿಗೆ ಬಂದರೂ ವಿವಾಹವಾಗದೆ ಉಳಿಯುವ ಬಡಪಾಯಿ ಯುವತಿಯರ ಕಣ್ಣೀರು ಮತ್ತು ಮುಖದಲ್ಲಿ ಕಾಣುವ ವ್ಯಥೆಯನ್ನು ಗಮನಿಸದಿರಲು ಸಹೃದಯಿಗಳಿಂದ ಸಾಧ್ಯವಿಲ್ಲ. ಮಧ್ಯ ರಾತ್ರಿ ಕಳೆದರೂ ನಿದ್ರಿಸದೆ ಚಿಂತಾಕ್ರಾಂತರಾಗಿ ಕಳೆಯುವ ಅವರ ಪೋಷಕರ ದುಃಖ ಭಾರವನ್ನು ಅಳೆಯಲು ಸಾಧ್ಯವಿಲ್ಲ. ಮಾನವ ಜೀವನವನ್ನು ಸುಡುತ್ತಿರುವ ಮನಸ್ಸುಗಳನ್ನು ಭಗ್ನಗೊಳಿಸುತ್ತಿರುವ ಈ ಸಾಮಾಜಿಕ ದುರಾಚಾರಗಳನ್ನು ನಿವಾರಿಸಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಒಂದಿಬ್ಬರು ವ್ಯಕ್ತಿಗಳಿಗೆ, ಸಂಘಟನೆಗಳಿಗೆ ಸಮುದಾಯವನ್ನು ಆಮೂಲಾಗ್ರವಾಗಿ ಪೀಡಿಸಿರುವ ಈ ರೋಗವನ್ನು ನಿವಾರಿಸಲು ಸಾಧ್ಯವಾದೀತೆನ್ನುವಂತಿಲ್ಲ. ಏಕೆಂದರೆ ಅವುಗಳಲ್ಲಿ ಹೆಚ್ಚಿನ ಆಚಾರಗಳು ದೇಶದಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಯ ಭಾಗವಾಗಿದೆ. ಅವು ಆಡಂಬರ ಪ್ರದರ್ಶಿಸುವ ಸಿರಿವಂತರ ಭಾವನೆಯಿಂದಲೇ ಹುಟ್ಟಿಕೊಂಡಿದೆ.
ಈ ವ್ಯವಸ್ಥೆ ಬದಲಾಗುವವರೆಗೆ ಕಾದು ಕುಳಿತುಕೊಳ್ಳಲು ಸಮಾಜ ಸುಧಾರಣೆಯ ವಕ್ತಾರರಿಗೆ ಸಾಧ್ಯವಿಲ್ಲ. ಸುತ್ತಲೂ ತಾಂಡವವಾಡುತ್ತಿರುವ ಅನಾಚಾರಗಳನ್ನು ಕಡೆಗಣಿಸಲೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಸಂವೇದನಾಶಕ್ತಿ ದುರ್ಬಲಗೊಂಡು ನಿರ್ಲಿಪ್ತ ಮತ್ತು ನಿರ್ಲಕ್ಷ್ಯರಾಗಿರುವ ಮಂದಿ ಸತ್ಯವಿಶ್ವಾಸಿಗಳು ಎಂಬ ಹೆಸರಿಗೆ ಅರ್ಹರೇ ಎಂಬುದು ಸಂದೇಹಾಸ್ಪದವಾಗಿದೆ. ಆದ್ದರಿಂದ ಇಸ್ಲಾಮೀ ಆದರ್ಶದಿಂದ ಶಕ್ತಿಗಳಿಸಿ ವಿವಾಹವೆಂಬ ಪವಿತ್ರ ಕರ್ಮ ಮತ್ತು ದಾಂಪತ್ಯ ಜೀವನಕ್ಕೆ ಅಂಟಿಕೊಂಡಿರುವ ಕೊಳೆ ಕಲ್ಮಶಗಳನ್ನು ಹೋಗಲಾಡಿಸಿ ಸರಳ ಹಾಗೂ ಸಹಜ ಸ್ಥಿತಿಗೆ ಅವುಗಳನ್ನು ಮರಳಿಸಲು ಪ್ರಯತ್ನಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.
@ ಎಸ್.ಎಂ.ಕೆ.