ಚುನಾವಣಾ ವಿಶ್ಲೇಷಣೆ: ಎಯುಡಿಎಫ್, ಎಸ್ ಡಿಪಿಐಯಂಥ ಪಕ್ಷಗಳ ಹುಟ್ಟಿನ ಬಗ್ಗೆ…

0
1197

ಭಾಗ- 1

ಏ. ಕೆ. ಕುಕ್ಕಿಲ
ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಳ್ಳತೊಡಗಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ಮೂರು ಮುಖ್ಯ ಪಕ್ಷಗಳ ಹೊರತಾಗಿ, ಎಡಪಕ್ಷಗಳು, ಎಸ್ಡಿಪಿಐ, ಎಂಐಎಂ, ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ, ನೌಹೇರಾ ಶೇಖ್ ರ ಮುಸ್ಲಿಮ್ ಎಂಪವರ್ ಮೆಂಟ್ ಪಾರ್ಟಿ ಇತ್ಯಾದಿ ಪಕ್ಷಗಳು ಕಣದಲ್ಲಿವೆ. ರಾಜಕೀಯ ಪಕ್ಷವೆಂದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದುದು ಅನಿವಾರ್ಯ. ಅದು ಎಸ್ ಡಿಪಿಐ ಆಗಿರಲಿ, ವೆಲ್ ಫೇರ್ ಆಗಿರಲಿ ಅಥವಾ ಮುಸ್ಲಿಂ ಲೀಗೇ ಆಗಿರಲಿ… ಅವು ಸ್ಪರ್ಧಿಸಲೇಬೇಕು. ಸ್ಪರ್ಧೆಯನ್ನೇ ಅಪರಾಧವೆಂಬಂತೆ ಕಾಣುವುದು ಬಾಲಿಶತನ. ಆದರೆ, ಈ ವಾಸ್ತವದ ಹೊರತಾಗಿಯೂ ಈ ಪಕ್ಷಗಳ ಚುನಾವಣಾ ಸ್ಪರ್ಧೆಯ ಬಗ್ಗೆ ಭಿನ್ನ ವಾದಗಳು ಸಾಮಾಜಿಕವಾಗಿ ಇದೆ. ಮುಖ್ಯವಾಗಿ, ಮುಸ್ಲಿಂ ಸಮುದಾಯದಲ್ಲಿ ಇದೆ. ಮುಸ್ಲಿಂ ಸಮುದಾಯದಲ್ಲೇ ಯಾಕೆ ಇದೆ ಅಂದರೆ, ಬಿಜೆಪಿಯ ವಿಭಜನಕಾರಿ ರಾಜಕೀಯದ ಮೊದಲ ಬಲಿಪಶು ಈ ಸಮುದಾಯ. ಒಂದುವೇಳೆ, ಬಿಜೆಪಿಯ ವಿಚಾರಧಾರೆ ಸರ್ವರನ್ನೂ ಒಳಗೊಳ್ಳುವ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಿರುತ್ತಿದ್ದರೆ, ಇವತ್ತು ಮುಸ್ಲಿಮರ ಆಯ್ಕೆಯ ಪಟ್ಟಿಯಲ್ಲಿ ಕಾಂಗ್ರೆಸ್ ನಂತೆಯೇ ಬಿಜೆಪಿಯೂ ಇರುತ್ತಿತ್ತು. ನಿಜವಾಗಿ, ಬಿಜೆಪಿಯು ತನ್ನ ಏಕಮುಖ ವಿಚಾರಧಾರೆಯಿಂದಾಗಿ, ಮುಸ್ಲಿಮರನ್ನು ಬಿಜೆಪಿಯೇತರ ರಾಜಕೀಯ ಪಕ್ಷಗಳ ತೆಕ್ಕೆಗೆ ಸ್ವತಃ ಬಿಜೆಪಿಯೇ ನೂಕಿದೆ. ಇದರ ಗರಿಷ್ಠ ಲಾಭ ಪಡಕೊಂಡಿರುವುದು ಮಾತ್ರ ಕಾಂಗ್ರೆಸ್ಸೇ. ಆದರೆ, ಕಾಂಗ್ರೆಸ್ ಪಕ್ಷವು ಈ ಲಾಭವನ್ನು ಆನಂದಿಸಿತೇ ಹೊರತು ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಗಂಭೀರ ಪ್ರಯತ್ನಗಳನ್ನು ನಡೆಸಲೇ ಇಲ್ಲ ಎಂಬ ಧ್ವನಿಗಳು ನಿಧಾನಕ್ಕೆ ಬಲಪಡೆಯತೊಡಗಿದುವು. ಇದಕ್ಕೂ ಒಂದು ಕಾರಣ ಇದೆ,

ದೇಶ ವಿಭಜನೆಯಿಂದಾಗಿ ಮುಸ್ಲಿಮರು ಅವಳಿ ಸವಾಲುಗಳನ್ನು ಎದುರಿಸಬೇಕಾಯಿತು
1. ದೇಶನಿಷ್ಠೆಯನ್ವು ದೇಶಕ್ಕೆ ಸದಾ ಸಾಬೀತುಪಡಿಸುವುದು.
2. ದೇಶದ ಮುಖ್ಯಧಾರೆಯಿಂದ ಕಳಚಿಕೊಳ್ಳದಂತೆ ನೋಡಿಕೊಳ್ಳುವುದು.
ಮುಸ್ಲಿಮರನ್ನು ಹಣಿಯುವ, ಅವರನ್ನು ವಿದೇಶಿಗಳೆಂದು ದೂಷಿಸುವ, ಅವರನ್ನು ಭಾರತೀಯತೆಗೆ ಅನ್ಯರೆಂದು ಚಿತ್ರಿಸುವ ಶ್ರಮಗಳು ದೇಶವಿಭಜನೆಯ ಪೂರ್ವದಲ್ಲೇ ಆರಂಭವಾಗಿದ್ದುವು. ವಿಭಜನೆಯ ನಂತರವಂತೂ ಇದರ ಕಾವು ಇನ್ನಷ್ಟು ವೇಗವನ್ನು ಪಡೆಯಿತು. ದೇಶನಿಷ್ಠೆಯ ಬಗ್ಗೆ ಪ್ರಶ್ನೆಗಳು ದಿನನಿತ್ಯವೆಂಬಂತೆ ಕೇಳಿಬರತೊಡಗಿದುವು. ಈ ಸಂದರ್ಭದಲ್ಲಿ ಮುಸ್ಲಿಮರಿಗೆ ಭರವಸೆಯಾಗಿ ಇದ್ದುದು ಕಾಂಗ್ರೆಸ್ ಪಕ್ಷ ಮಾತ್ರ. ಕಾಂಗ್ರೆಸ್ ಮತ್ತು ಮುಸ್ಲಿಮರ ನಡುವಿನ ಈ ಸಂಬಂಧ ಸುಮಾರು ಮೂರು ದಶಕಗಳ ಕಾಲ ಎಗ್ಗಿಲ್ಲದೇ ಮುಂದುವರಿಯಿತು. ಹಾಗಂತ, ಈ ಸಮಯದಲ್ಲಿ ಕಾಂಗ್ರೆಸ್ ಬಗ್ಗೆ ಮುಸ್ಲಿಮರಲ್ಲಿ ಅಸಮಾಧಾನ ಇದ್ದಿರಲೇ ಇಲ್ಲ ಎಂದಲ್ಲ. ಇತ್ತು. ಮುಸ್ಲಿಮರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸಬಲೀಕರಣಕ್ಕೆ ಕಾಂಗ್ರೆಸ್ ಉದಾಸೀನ ತೋರುತ್ತಿದೆ ಎಂಬ ಭಾವನೆ ಮುಸ್ಲಿಮರಲ್ಲಿ ಇತ್ತು. ಮುಸ್ಲಿಮರು ಮುಖ್ಯ ಧಾರೆಯಲ್ಲಿ ಗುರುತಿಸಿಕೊಳ್ಳಬೇಕೆಂದರೆ, ಮೊದಲು ಅವರ ಸಬಲೀಕರಣ ಆಗಬೇಕು. ಶೈಕ್ಷಣಿಕವಾಗಿ ಅವರು ಸಬಲರಾದರೆ, ಆರ್ಥಿಕವಾಗಿ ತನ್ನಿಂತಾನೇ ಸಬಲರಾಗುತ್ತಾರೆ. ಈ ಎರಡು ಕ್ಷೇತ್ರಗಳಲ್ಲಿ ಆಗುವ ಸಬಲೀಕರಣವು ದೇಶದ ಮುಖ್ಯ ಧಾರೆಯಲ್ಲಿ ಅವರ ಪಾಲ್ಗೊಳ್ಳುವಿಕೆಗೆ ದಾರಿ ಸುಗಮಗೊಳಿಸುತ್ತದೆ. ಸರಕಾರಿ ಉದ್ಯೋಗ, ಪೊಲೀಸು, ಮಿಲಿಟರಿ, ವೈದ್ಯಕೀಯ ಕ್ಷೇತ್ರ, ಉದ್ಯಮರಂಗ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಅವರ ಉಪಸ್ಥಿತಿಯನ್ನು ಶೈಕ್ಣಿಕವಾಗಿ ಅವರ ಪ್ರಗತಿಯು ಶ್ರುತುಪಡಿಸುತ್ತದೆ. ದೇಶವಿಭಜನೆಯಿಂದಾಗಿ ಅತ್ಯಂತ ಹೆಚ್ಚು ತುಳಿತಕ್ಕೊಳಗಾದ ಸಮುದಾಯ ಎಂಬ ನೆಲೆಯಲ್ಲಿ ಮುಸ್ಲಿಮರ ಬಗ್ಗೆ ವಿಶೇಷ ಕಾಳಜಿ ತೋರುವುದು ಮುಸ್ಲಿಮ್ ಓಲೈಕೆ ಆಗುವುದಕ್ಕೆ ಸಾಧ್ಯವಿರಲಿಲ್ಲ. ಇಲ್ಲಿನ ದಲಿತರು, ಆದಿವಾಸಿಗಳು ಮತ್ತಿತರ ತಳ ಸಮುದಾಯದ ಬಗ್ಗೆ ವಿಶೇಷ ಕ್ರಪಾದ್ರಷ್ಟಿಯನ್ನು ಬೀರಿದ ಕಾಂಗ್ರೆಸ್ ಗೆ ಮುಸ್ಲಿಮರೂ ಅದೇ ಸ್ಥಿತಿಯಲ್ಲಿದ್ದಾರೆ ಅಥವಾ ಅದಕ್ಕಿಂತಲೂ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂಬುದು ಗೊತ್ತಿರದ ಸಂಗತಿಯೇನೂ ಆಗಿರಲಿಲ್ಲ. ಇದರರ್ಥ ಮುಸ್ಲಿಮರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಏನೇನೂ ಮಾಡಿಲ್ಲ ಎಂದಲ್ಲ. ಕೊಟ್ಟ ಗಮನ ಸಾಕಾಗಿಲ್ಲ ಎಂಬುದೇ ಇಲ್ಲಿನ ಉದ್ದೇಶ. ಹೀಗೆ ವಾದಿಸುವುದಕ್ಕೆ ಇರುವ ಅತೀ ಮುಖ್ಯ ಆಧಾರ ಏನೆಂದರೆ, ಮನ್ ಮೋಹನ್ ಸಿಂಗ್ ಅವಧಿಯಲ್ಲಿ ಮಂಡಿಸಲಾದ ಸಾಚಾರ್ ವರದಿ. ಒಂದು ರೀತಿಯಲ್ಲಿ ಅದು ದೀರ್ಘ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಬಿಚ್ಚಿಟ್ಟ ವರದಿ ಎಂದೂ ಹೇಳಬಹುದು. ಹೀಗೆ,

ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮುಸ್ಲಿಂ ಓಟು ಪಡೆಯುವ ಕಾಂಗ್ರೆಸ್, ಮುಸ್ಲಿಂ ಸಬಲೀಕರಣದ ಪ್ರಶ್ವೆ ಬಂದಾಗ, ಆ ಋಣಭಾರವನ್ನು ಪ್ರದರ್ಶಿಸುತ್ತಿಲ್ಲ ಎಂಬ ಭಾವನೆ ಗಟ್ಟಿಗೊಳ್ಳುತ್ತಾ ಹೋದುದರ ಪರಿಣಾಮವೇ 1970 ರ ದಶಕದಲ್ಲಿ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದುದು ಮತ್ತು ಮುಸ್ಲಿಮರು ಆ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿರುವುದು. ಜೆಪಿ ಚಳವಳಿಯ ಹಿಂದೆ ಇಂಥ ಅತ್ರಪ್ತ ಭಾವನೆಯುಳ್ಳ ಹಿಂದೂ ಮುಸ್ಲಿಮರು ಇದ್ದರು. ಮುಸ್ಲಿಮರಿಗೆ ಕಾಂಗ್ರೆಸ್ ಅನಿವಾರ್ಯವಲ್ಲ ಎಂದು ಸಾರಿದ ಮೊದಲ ಪ್ರಕರಣ ಅದು. ಬಳಿಕ ರಾಜಕೀಯ ಚಟುವಟಿಕೆಗಳಲ್ಲಿ ಮಹತ್ತರ ಬದಲಾವಣೆಗಳು ಉಂಟಾದುವು. ಕಾಂಗ್ರಸನ್ನು ಪ್ರಶ್ನಿಸುವವರ ಸಂಖ್ಯೆಯಲ್ಲಿ ಅಪಾರ ಹೆಚ್ಚ ಳ ಉಂಟಾಯಿತು. ಪ್ರಾದೇಶಿಕ ಪಕ್ಷಗಳು ವೇಗವಾಗಿ ಹುಟ್ಟಿಕೊಳ್ಳತೊಡಗಿದುವು. ದಲಿತ, ಬಿಲ್ಲವ, ಲಿಂಗಾಯತ, ಬಂಟ, ಜಾಟ, ಮುಸ್ಲಿಂ.. ಇತ್ಯಾದಿ ಸಾಮುದಾಯಿಕ ಧ್ವನಿಗಳು ರಾಜಕೀಯ ಛಾಪನ್ನು ಒತ್ತುವುದಕ್ಕಾಗಿ ಒಗ್ಗಟ್ಟಾಗತೊಡಗಿದರೆ, ರಾಜ್ಯವಾರು ಅಸ್ಮಿತೆಗಳೂ ದೊಡ್ಡಮಟ್ಟದಲ್ಲಿ ಮುಂಚೂಣಿಗೆ ಬಂದುವು. ಕಾಂಗ್ರೆಸ್ ನಿಂದ ಅನ್ಯಾಯವಾಗುತ್ತಿದೆ ಎಂಬ ವಾದವು ದಲಿತರ ರಾಜಕೀಯ ಪಕ್ಷ, ಜಾಟರ ಪಕ್ಷ ಇತ್ಯಾದಿ ಪ್ರಾದೇಶಿಕ ರಾಜಕೀಯ ಪಕ್ಷಗಳ ಹುಟ್ಟಿಗೆ ಕಾರಣವಾದುವು. ಜೆಡಿಎಸ್, ತೆಲುಗುದೇಶಂ, ಡಿಎಂಕೆ, ಅಣ್ಣಾಡಿಎಂಕೆ, ಪಿಡಿಪಿ, ಬಿಜೆಡಿ ಮತ್ತು ಈಶಾನ್ಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಹುಟ್ಟಿನ ಹಿಂದೆ ಕಾಂಗ್ರೆಸ್ ಮೇಲಿನ ಇಂಥ ಅಸಮಾಧಾನಗಳ ಕತೆಯೇ ಇದೆ. ಓವೈಸಿಯ ಎಂಐಎಂ, ಅಸ್ಸಾಂನ ಅಜ್ಮಲ್ ಅವರ ಎಯುಡಿಎಫ್ ಮತ್ತು ದಶಕದ ಈಚೆಗೆ ರೂಪುಗೊಂಡ ಎಸ್ ಡಿಪಿಐ ಹುಟ್ಟಿನಲ್ಲೂ ಇರುವ ಹಿನ್ನೆಲೆ ಇದುವೇ.
(ಉಳಿದದ್ದು ಭಾಗ ಎರಡರಲ್ಲಿ)