ಚುನಾವಣಾ ವಿಶ್ಲೇಷಣೆ ಭಾಗ 4:  ಕಣದಲ್ಲಿಲ್ಲದ ಕೆಜೆಪಿ ಮತ್ತು ಕಣದಲ್ಲಿರುವ ಸ್ವತಂತ್ರ ಮುಸ್ಲಿಂ ಅಭ್ಯರ್ಥಿಗಳು 

0
753

ಏ. ಕೆ. ಕುಕ್ಕಿಲ 

ಯಾವುದೇ ಒಂದು ಚುನಾವಣಾ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿಯ ಸೋಲು ಅಥವಾ ಗೆಲುವನ್ನು ನಿರ್ಧರಿಸುವಲ್ಲಿ ಒಂದಕ್ಕಿಂತ ಹೆಚ್ಚು ಅಂಶಗಳು ಪಾತ್ರ ನಿರ್ವಹಿಸುತ್ತವೆ. ಇದರಲ್ಲಿ ಪ್ರಮುಖವಾದುದು ಏನೆಂದರೆ, ಕ್ಷೇತ್ರವೊಂದರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆ. ಉದಾಹರಣೆಗೆ ಮಂಗಳೂರು ವಿಧಾನಸಭಾ ಕ್ಷೇತ್ರ. ಆಹಾರ ಸಚಿವ ಯು. ಟಿ. ಕಾದರ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಹಾಗೆಯೇ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗಳೆರಡೂ ತಂತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಖಚಿತ. ಹಾಗಂತ, ಈ ಮೂವರ ಹೊರತಾಗಿ ಇನ್ನಾರೂ ಈ ಕ್ಷೇತ್ರದಲ್ಲಿ ಸ್ಪರ್ಧಿಸಲಾರರು ಅಂತ ಹೇಳಲು ಸಾಧ್ಯವೇ ಇಲ್ಲ. 2013ರ ವಿಧಾನಸಭಾ ಚುನಾವಣೆಯನ್ನು ಪರಿಶೀಲಿಸಿದರೆ, ಈ ಕುರಿತಂತೆ ಅನೇಕ ಮಾಹಿತಿಗಳು ಲಭ್ಯವಾಗುತ್ತವೆ. ಅಂದು ವಿಧಾನಸಭೆಯ 224 ಸ್ಥಾನಗಳಿಗೆ ಒಟ್ಟು 2948 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ 224 ಕ್ಷೇತ್ರಗಳಲ್ಲಿ 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ (SC) ಮೀಸಲಿದ್ದರೆ, 15 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ (ST) ಮೀಸಲಾಗಿದ್ದುವು. ಆದರೆ, 5 ಕ್ಕಿಂತ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿರುವ ಒಂದೇ ಒಂದು ಕ್ಷೇತ್ರ 2013 ರಲ್ಲಿ ಇರಲೇ ಇಲ್ಲ. 49 ಕ್ಷೇತ್ರಗಳಲ್ಲಿ 15 ಅಥವಾ ಅದಕ್ಕಿಂತ ಹೆಚ್ಚು ಮಂದಿ ಸ್ಪರ್ಧಿಸಿದ್ದರು. 110 ಕ್ಷೇತ್ರಗಳಲ್ಲಿ 11 ರಿಂದ 15 ರಷ್ಟು ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. 63 ಕ್ಷೇತ್ರಗಳಲ್ಲಿ 6 ರಿಂದ 10 ರಷ್ಟು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಐದೈದು ಮಂದಿ ಸ್ಪರ್ಧೆಯಲ್ಲಿದ್ದರು. ಇವರಲ್ಲಿ ಅತಿ ದೊಡ್ಡ ಸಂಖ್ಯೆ ಸ್ವತಂತ್ರ ( ಪಕ್ಷೇತರ) ಅಭ್ಯರ್ಥಿಗಳದ್ದು- 1217  ಮಂದಿ.  ಇವರಲ್ಲಿ 9 ಮಂದಿ ಗೆಲುವು ಕಂಡಿದ್ದರೆ, ಉಳಿದಂತೆ 1190 ಮಂದಿ ಠೇವಣಿ ಕಳಕೊಂಡಿದ್ದರು.
2013 ರ ಚುನಾವಣೆಗೂ ಈ ಬಾರಿಯ ಚುನಾವಣೆಗೂ ನಡುವೆ ಇರುವ ದೊಡ್ಡ ವ್ಯತ್ಯಾಸ ಏನೆಂದರೆ, ಕೆಜೆಪಿ. ಬಿಜೆಪಿಯಿಂದ ಸಿಡಿದು ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ) ಯನ್ನು ಕಟ್ಟಿದ ಯಡಿಯೂರಪ್ಪರು 204 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಮಾತ್ರವಲ್ಲ, 6 ಮಂದಿ ಅಭ್ಯರ್ಥಿಗಳು ಗೆಲುವನ್ನೂ ಕಂಡಿದ್ದರು. ಅದೇವೇಳೆ, 223 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿಯು ಬರೇ 40 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದ್ದರೆ ಮತ್ತು 110 ಕ್ಷೇತ್ರಗಳಲ್ಲಿ ಅದರ ಅಭ್ಯರ್ಥಿಗಳು ಠೇವಣಿಯನ್ನೂ ಕಳಕೊಂಡಿದ್ದರೆ  ಅದರಲ್ಲಿ ಕೆಜೆಪಿಯ ಪಾತ್ರ ಬಹಳ ಪ್ರಮುಖದ್ದಾಗಿತ್ತು. ಉದಾ: ಶಿರಹಟ್ಟಿ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ನ ದೊಡ್ಡಮನಿ ರಾಮಕೃಷ್ಣ ಶಿದ್ಧಲಿಂಗಪ್ಪ ಅವರು ಬಿಜೆಪಿಯ ರಾಮಪ್ಪ ಸೊಬೆಪ್ಪ ಲಮಾಣಿಯವರನ್ನು ಬರೇ 315 ಮತಗಳ ಅಂತರದಿ0ದ ಸೋಲಿಸಿದ್ದರು. ಇಲ್ಲಿ ಕೆಜೆಪಿಯ ಶೋಭಾ ಕೃಷ್ಣಪ್ಪ ಲಮಾಣಿಯವರು 3841 ಮತಗಳನ್ನು ಪಡೆದಿದ್ದರು. ಗುಲ್ಬರ್ಗ ರೂರಲ್ ಕ್ಷೇತ್ರದಲ್ಲಿ ಬಿಜೆಪಿಯ ರೇವು ನಾಯಕ್ ಬೆಳಮಗಿಯ ವಿರುದ್ಧ  7209 ಮತಗಳ ಅಂತರದಿಂದ ಕಾಂಗ್ರೆಸ್ ನ ರಾಮಕೃಷ್ಣ ಜಯಗಳಿಸಲು ನೆರವಾದದ್ದು ಕೆಜೆಪಿ. ಇಲ್ಲಿ ಕೆಜೆಪಿಯ ಬಾಬು ರಾವ್ ಚೌಹಾಣ್ ರು 26,612 ಮತಗಳನ್ನು ಪಡೆದು ಮೂರನೇ ಸ್ಥಾನಿಯಾದರು. ರಾಮದುರ್ಗ ಕ್ಷೇತ್ರದಲ್ಲೂ ಕಾಂಗ್ರೆಸ್ ನ ಅಶೋಕ್ ಮಹದೇವಪ್ಪ ಪಠಾಣ್ ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದೂ ಕೆಜೆಪಿಯೇ. ಇಲ್ಲಿ ಬಿಜೆಪಿಯ ಶಿವಲಿಂಗಪ್ಪ ಮಹದೇವಪ್ಪ 37,326 ಮತಗಳನ್ನು ಪಡೆದರೆ, ಕೆಜೆಪಿಯ ಸಂಗಯ್ಯ ಚಂದ್ರಯ್ಯ 16,043 ಮತಗಳನ್ನು ಪಡೆದರು. ಈ ಇಬ್ಬರ ನಡುವೆ ಆದ ಮತ ವಿಭಜನೆಯ ಲಾಭವನ್ನು ಕಾಂಗ್ರೆಸ್ ನ ಅಶೋಕ ಮಹದೇವಪ್ಪ ಪಡೆದುಕೊಂಡರು. ಗೆಲುವಿನ ಅಂತರ- 4974 ಮತಗಳು. ದೇವರ ಹಿಪ್ಪರಗಿ ಕ್ಷೇತ್ರವೂ ಇದಕ್ಕಿಂತ ಭಿನ್ನವಲ್ಲ. ಇಲ್ಲಿ ಕಾಂಗ್ರೆಸ್ ನ ಅಮೀನಪ್ಪಗೌಡ ಸಂಗನ ಗೌಡ ಪಾಟೀಲ್ 36,231 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ಸೋಮನಗೌಡ ಪಾಟೀಲ್ 28,135 ಮತಗಳನ್ನು ಪಡೆದರು. ಕೆಜೆಪಿಯ ಭೀಮನಗೌಡ ಪಾಟೀಲ್ 24,707 ಮತಗಳನ್ನು ಪಡೆದರು. ಇಲ್ಲಿ ಬಿಜೆಪಿಯ ಮತಗಳು ಕೆಜೆಪಿ ಜೊತೆ ವಿಭಜನೆಗೊಳ್ಳದೆ ಇರುತ್ತಿದ್ದರೆ, ಫಲಿತಾಂಶ ಬೇರೆಯದೇ ಆಗುವ ಎಲ್ಲ ಸಾಧ್ಯತೆಯೂ ಇತ್ತು. ಹಾಗಂತ ಈ ಕೆಜೆಪಿಯಲ್ಲದೆ, ಬಡವರ, ಶ್ರಮಿಕರ, ರೈತರ ಕಾಂಗ್ರೆಸ್ ಪಾರ್ಟಿ (BSRCP) ಯು ಕಳೆದ ವಿಧಾನಸಭಾ ಚುನಾವಣೆಯಲ್ಲಿ 176 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು ಮತ್ತು 164 ಕ್ಷೇತ್ರಗಳಲ್ಲೂ ಠೇವಣಿಯನ್ನು ಕಳಕೊಂಡಿತ್ತು. ಜೆಡಿಎಸ್ ಪಕ್ಶವು 222 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಲ್ಲದೆ, 40 ಕ್ಷೇತ್ರಗಳಲ್ಲಿ ಜಯವನ್ನೂ 110 ಕ್ಷೇತ್ರಗಳಲ್ಲಿ ಠೇವಣಿಯನ್ನೂ ಕಳಕೊಂಡಿತ್ತು. ಮಾಯಾವತಿಯವರ ಬಿಎಸ್ಪಿಯಂತೂ 175 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 174 ರಲ್ಲೂ ಠೇವಣಿಯನ್ನು ಕಳಕೊಂಡಿತ್ತು. ನೂರಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಇನ್ನೊಂದು ಪಕ್ಷವೆಂದರೆ ಜೆಡಿಯು. ಅದು 116 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 116 ರಲ್ಲೂ ಠೇವಣಿಯನ್ನು ಕಳೆದುಕೊಂಡಿತ್ತು. ಉಳಿದಂತೆ, ಎಸ್ಡಿಪಿಐ 23 ಕ್ಷೇತ್ರಗಳಲ್ಲಿ,  ಡಬ್ಲ್ಯುಪಿಐ- 12, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್- 8, ಸಿಪಿಐಎಂ- 16, ಸಿಪಿಐ-27 ಇತ್ಯಾದಿಯಾಗಿ 59 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದುವು.
ವಿಶೇಷ ಏನೆಂದರೆ, ಮುಸ್ಲಿಮರ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳ ಸ್ಪರ್ಧಾ ವಿವರ. ಎಲ್ಲೆಲ್ಲ ಮುಸ್ಲಿಮರ ಮತಗಳು ನಿರ್ಣಾಯಕವಾಗಿರುತ್ತದೋ ಅಲ್ಲೆಲ್ಲ ಮುಸ್ಲಿಮರು ಬಹುಸಂಖ್ಯೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಇಡೀ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದರು. ಉದಾ: ಬೀದರ್ ಕ್ಷೇತ್ರ. ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಓಟುಗಳು ಯಾವುದೇ ಅಭ್ಯರ್ಥಿಯ ಸೋಲು- ಗೆಲುವನ್ನು ನಿರ್ಧರಿಸುವಷ್ಟು ಬಲಶಾಲಿಯಾದುದು. ಇಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಹೀಮ್ ಖಾನ್ ರು 48,147 ಮತಗಳನ್ನು ಪಡೆದು ದ್ವಿತೀಯ ಸ್ಥಾನಿಯಾದರೆ, ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿಯವರು 50,718 ಮತಗಳನ್ನು ಪಡೆದು ಆಯ್ಕೆಯಾದರು. ಆದರೆ, ನಾಗಮಾರಪಳ್ಳಿಯವರ ಗೆಲುವಿನಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ್ದು ಮುಸ್ಲಿಂ ಸಮುದಾಯಾದ ಸ್ವತಂತ್ರ ಅಭ್ಯರ್ಥಿಗಳು. ಇಲ್ಲಿ ಸ್ಪರ್ಧಿಸಿದ ಒಟ್ಟು 18 ಅಭ್ಯರ್ಥಿಗಳಲ್ಲಿ 7 ಮಂದಿ ಮುಸ್ಲಿಮರು. ಇವರಲ್ಲಿ 4 ಮಂದಿ ಪಕ್ಷೇತರರು. ಶಿವಾಜಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರೋಷನ್ ಬೇಗ್ ರು ಬಿಜೆಪಿಯ ನಿರ್ಮಲ್ ಸುರಾಣಾರ ವಿರುದ್ಧ ಗೆಲುವು ಸಾಧಿಸಿರುವರಾದರೂ ಇಲ್ಲೂ ಒಟ್ಟು 9 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ ಮೂವರು ಸ್ವತಂತ್ರ ಅಭ್ಯರ್ಥಿಗಳು. ಚಾಮರಾಜ ಪೇಟೆಯಿಂದ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಖಾನ್ ರಿಗೆ ಒಟ್ಟು 20  ಮಂದಿ ಸ್ಪರ್ಧೆಯೊಡ್ಡಿದ್ದರು ಮತ್ತು ಇವರಲ್ಲಿ 9 ಮಂದಿ ಮುಸ್ಲಿಂ ಅಭ್ಯರ್ಥಿಗಳು. ಬಿಜೆಪಿಯ ಚಂದ್ರ ಹಾಸ ಉಳ್ಳಾಲ ಅವರನ್ನು ಸುಮಾರು 29 ಸಾವಿರ ಮತಗಳ ಅಂತರದಿಂದ ಸೋಲಿಸಿದ ಕಾಂಗ್ರೆಸ್ ನ ಯು. ಟಿ. ಕಾದರ್ ಅವರ ಮಂಗಳೂರು ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 11 ಮಂದಿ ಮುಸ್ಲಿಮರು. ನಿಜವಾಗಿ, ಎಲ್ಲೆಲ್ಲ ಕಾಂಗ್ರೆಸ್ ಪಕ್ಷವು ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೋ ಅಲ್ಲೆಲ್ಲ ಒಂದಕ್ಕಿಂತ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿರುವುದು 2013 ರ ವಿಧಾನ ಸಭಾ ಚುನಾವಣೆಯಲ್ಲಿ ಎದ್ದು ಕಾಣುತ್ತದೆ. ಇದಕ್ಕೆ ಕಾರಣಗಳು ಹಲವು ಇರಬಹುದಾದರೂ, ಅದರಿಂದಾಗಿ ಮುಸ್ಲಿಂ ಅಭ್ಯರ್ಥಿಯೇ ಸೋಲುವ ಮತ್ತು ಬಿಜೆಪಿ ಅಭ್ಯರ್ಥಿ ಗೆಲ್ಲುವ ಅವಕಾಶ ಹೆಚ್ಚಿರುತ್ತದೆ. ಇದಕ್ಕೆ ಬೀದರ್ ಒಂದೇ ಉದಾಹರಣೆಯಲ್ಲ. ಇತ್ತೀಚೆಗೆ ನಡೆದ ಗುಜರಾತ್ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲೂ ಇದಕ್ಕೆ ಸಾಕಷ್ಟು ಪುರಾವೆಗಳಿವೆ. ಬಿಜೆಪಿಯ ಚುನಾವಣಾ ತಂತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದೂ ಒಂದು ಎಂಬುದು ಅಲ್ಲಿನ ಬೆಳವಣಿಗೆಗಳು ಈಗಾಗಲೇ ಬಹಿರಂಗಪಡಿಸಿದೆ. ಮುಸ್ಲಿಮ್ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಸ್ವತಂತ್ರ ಅಭ್ಯರ್ಥಿಗಳಾಗಿ ನಿಲ್ಲಿಸುವ ಮತ್ತು ಆ ಮೂಲಕ ಮತವಿಭಜನೆ ನಡೆಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನವನ್ನು ಅದು ಗುಜರಾತ್ ಮತ್ತು ಉತ್ತರಪ್ರದೇಶಗಳಲ್ಲಿ ಮಾಡಿದೆ ಮತ್ತು ಅದರಲ್ಲಿ ಅದು ಯಶಸ್ಸನ್ನೂ ಕಂಡಿದೆ. (ಈ ಬಗ್ಗೆ ಹೆಚ್ಚಿನ ಮಾಹಿತಿಯು ಇದೇ ವೆಬ್ ಸೈಟ್ ನಲ್ಲಿ ಈ ಹಿಂದೆ ಪ್ರಕಟವಾಗಿರುವ ಚುನಾವಣಾ ವಿಶ್ಲೇಷಣೆ  ಭಾಗ – 3ರಲ್ಲಿ ಓದಬಹುದು).
ಕಳೆದ ಬಾರಿ ಕಾಂಗ್ರೆಸ್ ನ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಕೆಜೆಪಿ ಈ ಬಾರಿ ಕಣದಲ್ಲೇ ಇಲ್ಲ. ಆದ್ದರಿಂದ, ಕಳೆದ ಚುನಾವಣೆಯ ಗೆಲುವನ್ನೇ ಸ್ಮರಿಸಿಕೊಂಡು, ಆ ರೋಮಾಂಚನದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿದರೆ, ಗೆಲುವು ಸುಲಭ ಅಲ್ಲ. ಈ ಬಾರಿ ಬಿಜೆಪಿಗೆ ಕೆಜೆಪಿಯ ಬಲ ಮಾತ್ರ ಇರುವುದಲ್ಲ, ಮೋದಿ ಮತ್ತು ಅಮಿತ್ ಶಾರ ಬಲವೂ ಇದೆ. ಕಳೆದ ಚುನಾವಣೆಯಲ್ಲಿ ಇವರಿಬ್ಬರೂ ರಂಗದಲ್ಲಿರಲಿಲ್ಲ. ಅಲ್ಲದೆ, ಅಧಿಕಾರದಲ್ಲಿ ಇಲ್ಲದೆ ಇರುವುದೂ ಬಿಜೆಪಿಗೆ ಈ ಬಾರಿ ಪ್ಲಸ್ ಪಾಯಿಂಟ್. ಇದು, ಆಡಳಿತ ವಿರೋಧಿ ಭಾವನೆಯನ್ನು ನಿರ್ಮಾಣ ಮಾಡುವುದಕ್ಕೂ ಅವಕಾಶವನ್ನು ಒದಗಿಸುತ್ತದೆ. ಈ ಎಲ್ಲ ಲೆಕ್ಕಾಚಾರವನ್ನು ಮುಂದಿಟ್ಟು ನೋಡಿದರೆ, ಈ ಬಾರಿ ಕಾಂಗ್ರೆಸ್ ನ ಹಾದಿ ಕಠಿಣ. ಮೈಮರೆತರೆ, 2008 ಕ್ಕೆ ಕಾಂಗ್ರೆಸ್ ಮರಳಬೇಕಾದೀತು.