ಚುನಾವಣಾ ವಿಶ್ಲೇಷಣೆ-  ಭಾಗ 5: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ಮರಳಿ ಅಧಿಕಾರಕ್ಕೆ ಬರಬೇಕು? 

0
2608

ಏ. ಕೆ. ಕುಕ್ಕಿಲ 

ಮುಖ್ಯಮಂತ್ರಿ ಸಿದ್ದರಾಮಯ್ಯ ಮರಳಿ ಯಾಕೆ ಅಧಿಕಾರಕ್ಕೆ ಬರಬೇಕು ಎಂಬ ಪ್ರಶ್ನೆಗೆ ಡಜನ್ ಗಟ್ಟಲೆ ಉತ್ತರಗಳಿವೆ. ಸ್ವತಃ, ಸಿದ್ದರಾಮಯ್ಯನವರೇ ಹತ್ತು – ಹಲವು ಬಾರಿ ತಾನೇಕೆ ಮರಳಿ ಸರಕಾರ ರಚಿಸಬೇಕು ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಹಾಗಂತ, ಅದನ್ನು ಒಪ್ಪಿಕೊಳ್ಳುವುದು, ಬಿಡುವುದು ಬೇರೆ ಮಾತು. ಆದರೆ, ಯಡಿಯೂರಪ್ಪ ಯಾಕೆ ಮುಖ್ಯಮಂತ್ರಿಯಾಗಬೇಕು ಎಂಬ ಪ್ರಶ್ನೆಗೆ ಇರುವ ಉತ್ತರಗಳು ಏನೇನು? ಕರ್ನಾಟಕವು ಕಾಂಗ್ರೆಸ್ ಮುಕ್ತವಾಗಬೇಕು ಎಂಬುದು ಅದಕ್ಕಿರುವ ಉತ್ತರವೇ? ಇದು ಅತ್ಯಂತ ಅಸಂಬದ್ಧ, ಅನೈತಿಕ ಮತ್ತು  ಅಪ್ರಜಾಸತ್ತಾತ್ಮಕವಾದ ವಾದವಾಗಿದೆ. ಒಂದು ಪಕ್ಷವನ್ನು ನಿರ್ನಾಮಗೊಳಿಸುವುದನ್ನೇ ಇನ್ನೊಂದು ಪಕ್ಷವು ಗುರಿಯಾಗಿಟ್ಟುಕೊಳ್ಳುವುದು ಪ್ರಜಾಸತ್ತಾತ್ಮಕವಾದ ನಡೆಯಾಗುವುದಿಲ್ಲ. ಅದು ಸರ್ವಾಧಿಕಾರೀ ಪ್ರವೃತ್ತಿ. ಈ ಗುರಿ ಈಡೇರಿದ ತಕ್ಷಣ ಆ ಪಕ್ಷ ಉಳಿದ ಪಕ್ಷಗಳ ನಿರ್ನಾಮವನ್ನೂ ಗುರಿಯಾಗಿಟ್ಟುಕೊಳ್ಳುತ್ತದೆ. ಕೊನೆಗೆ ಒಂದೇ ಪಕ್ಷ ಮತ್ತು ಒಬ್ಬರೇ ಸರ್ವಾಧಿಕಾರಿ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಬಳಿಕ ಈ ದೇಶದ ಅಂಬೇಡ್ಕರ್ ಸಂವಿಧಾನ ಅನೂರ್ಜಿತಗೊಂಡು ಸರ್ವಾಧಿಕಾರಿ ಪ್ರತಿಪಾದಿಸುವ ಸಿದ್ಧಾಂತ ಜಾರಿಗೆ ಬರುತ್ತದೆ. ಮೊನ್ನೆ ಪ್ರಧಾನಿ ಮೋದಿಯವರು ಚುನಾವಣಾ ಭಾಷಣ ಮಾಡುತ್ತಾ, P P P ಎಂಬ ಪದಪುಂಜವನ್ನು ಉದ್ಧರಿಸಿದ್ದರು. ಮೇ 12 ರ ಬಳಿಕ ಕಾಂಗ್ರೆಸ್ ನಿಂದ ಕರ್ನಾಟಕವೂ ಕೈತಪ್ಪಿ ಹೋಗಲಿದ್ದು, ಬಳಿಕ ಮೂರು  P ಗಳು (ರಾಜ್ಯಗಳು) ಮಾತ್ರ ಕಾಂಗ್ರೆಸ್ ಕೈಯಲ್ಲಿ ಉಳಿಯಲಿದೆ ಎಂದು ವ್ಯಂಗ್ಯವಾಡಿದ್ದರು. ಅದಾವುದೆಂದರೆ, P- ಪಂಜಾಬ್,  P- ಪಾಂಡಿಚೇರಿ ಮತ್ತು ಇನ್ನೊಂದು P- ಪರಿವಾರ್ (ಕಾಂಗ್ರೆಸ್ ಕುಟುಂಬ).’ ಇದೊಂದು ಅಪಾಯಕಾರಿ ಮನಸ್ಥಿತಿ. ನಿಜವಾಗಿ, ಯಡಿಯೂರಪ್ಪ ಯಾಕೆ ಮುಖ್ಯಮಂತ್ರಿಯಾಗಬೇಕು ಅನ್ನುವುದಕ್ಕೆ P P P ಗಳು  ಉತ್ತರ ಅಲ್ಲ. ಉತ್ತರ ಆಗಬೇಕಾದುದು 2008 ರಿಂದ 13 ರವರೆಗೆ ರಾಜ್ಯವನ್ನು ಆಳಿದ ಯಡಿಯೂರಪ್ಪ ಸಹಿತ ಬಿಜೆಪಿಯ ಮೂವರು ಮುಖ್ಯಮಂತ್ರಿಗಳ ಆಡಳಿತ ಸಾಧನೆ. ಇನ್ನೂ ಒಂದು ಹೆಜ್ಜೆ ಮುಂದಿಡುವುದಾದರೆ, 2014 ರಿಂದ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರದ ಸಾಧನೆ. ವಿಷಾದ ಏನೆಂದರೆ, ಪ್ರಧಾನಿ ಮೋದಿಯವರು ಅಪ್ಪಿತಪ್ಪಿಯೂ ಈ ಹಿಂದಿನ ಯಡಿಯೂರಪ್ಪ ಸರಕಾರದ ಸಾಧನೆಗಳ ಬಗ್ಗೆ ಒಂದು ಗೆರೆಯ ಹೇಳಿಕೆಯನ್ನೂ ಕೊಡುತ್ತಿಲ್ಲ. ಮಾತ್ರವಲ್ಲ, ತನ್ನ ನಾಲ್ಕು ವರ್ಷಗಳ ಅಧಿಕಾರಾವಧಿಯ ಸಾಧನೆಯ ಬಗೆಗೂ ತುಟಿಬಿಚ್ಚುತ್ತಿಲ್ಲ. ಅದರ ಬದಲು, ಯಡಿಯೂರಪ್ಪ ಮತ್ತು ಮೋದಿಯವರು ಬರಿಯ ಟೀಕೆಗಳನ್ನಷ್ಟೇ ಮಾಡುತ್ತಿದ್ದಾರೆ. ಈ ಟೀಕೆಗಳಾದರೋ ಯಾರ ಮೇಲೆ ಎಂದರೆ, ನೆಹರೂ, ರಾಜೀವ್ ಗಾಂಧೀ, ಇಂದಿರಾ ಗಾಂಧೀ ಮತ್ತಿತರ ಮೇಲೆ. ಇದೂ ಒಂದು ಸಾಧನೆಯೇ? ಯಡಿಯೂರಪ್ಪರನ್ನು ಈ ಕಾರಣಕ್ಕಾಗಿ ಈ ರಾಜ್ಯದ ಮತದಾರರು ಚುನಾಯಿಸಬೇಕೇ? ಅಷ್ಟಕ್ಕೂ, ಸಿದ್ದರಾಮಯ್ಯ ತನ್ನ ಐದು ವರ್ಷಗಳ ಸಾಧನೆಯನ್ನು ಹೇಳಿಕೊಂಡೇ ಮತ ಯಾಚಿಸುವಾಗ, ಯಡಿಯೂರಪ್ಪ ಯಾಕೆ ತನ್ನ ಸಾಧನೆಯ ಪಟ್ಟಿಯನ್ನು ಜನರ ಮುಂದಿಡುತ್ತಿಲ್ಲ? ಪ್ರಧಾನಿ ಮೋದಿಯವರೇಕೆ ತನ್ನ ನಾಲ್ಕು ವರ್ಷಗಳ ಸಾಧನಾ ಪಟ್ಟಿಯನ್ನು ಹೇಳಿಕೊಳ್ಳುತ್ತಿಲ್ಲ? ಹೇಳಿಕೊಳ್ಳಲು ಸಾಧನೆಯೇ ಇಲ್ಲ ಅಂದ ಮೇಲೆ ಯಡಿಯೂರಪ್ಪರನ್ನು ಯಾಕೆ ಕನ್ನಡಿಗರು ಆಯ್ಕೆ ಮಾಡಬೇಕು? ಅಂದಹಾಗೆ,
ಒಂದು ಕಡೆ ಸಿದ್ದರಾಮಯ್ಯ ಮತ್ತು ಇನ್ನೊಂದು ಕಡೆ ಮೋದಿ ಹಾಗೂ ಯಡಿಯೂರಪ್ಪರನ್ನು ಇಟ್ಟು ಸುಮ್ಮನೆ ತುಸು ಹೊತ್ತು ತದೇಕಚಿತ್ತದಿಂದ ವೀಕ್ಷಿಸಿನೋಡಿ. ಏನನಿಸುತ್ತದೆ? ಯಡಿಯೂರಪ್ಪರನ್ನು ಸ್ಮರಿಸುವಾಗ ಥಟ್ಟನೆ ಕಣ್ಣಿಗೆ ರಾಚುವುದು ಸಾಧನೆಗಳಲ್ಲ, ಹಗರಣಗಳು. ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಸಾಧನೆ ಬಿಜೆಪಿಯದ್ದು. ಬಳ್ಳಾರಿಯ ಗುಡ್ಡದಿಂದ  ಗದಗದ ಕಪ್ಪತಗುಡ್ಡದವರೆಗೆ ಈ ಮೂವರು ಸೇರಿ ಭೂಮಿಯನ್ನು ಅಗೆದರು ಮತ್ತು ಅಗೆಯಲು ಹಸಿರು ನಿಶಾನೆ ತೋರಿದರು. ಲಂಚ ಪಡೆದುಕೊಂಡ ಆರೋಪದಲ್ಲಿ ಯಡಿಯೂರಪ್ಪ ಜೈಲು ಸೇರಿದರು. ನೀಲಿ ಚಿತ್ರಗಳ ವೀಕ್ಷಣೆ, ಸೆಕ್ಸ್ ಹಗರಣ, ಚರ್ಚ್ ದಾಳಿ, ಹೋಮ್ ಸ್ಟೇ ದಾಳಿ, ಇತ್ಯಾದಿಗಳು ಸಾಲು ಸಾಲಾಗಿ ನಡೆದುವು. ಬಳಿಕ ಬಿಜೆಪಿ ಮೋಸ ಮಾಡಿತೆಂದು ಯಡಿಯೂರಪ್ಪ ಕೆಜೆಪಿ ಎಂಬ ಪಕ್ಷವನ್ನೇ ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ನಿಜವಾಗಿ, ರಾಜ್ಯದಲ್ಲಿ ಈ ಬಿಜೆಪಿ ಸರಕಾರ ಇರುವಾಗಲೇ, ಕೇಂದ್ರದ ಮನ್ ಮೋಹನ್ ಸಿಂಗ್ ಸರಕಾರವು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಅದರಲ್ಲಿ, ಆಹಾರದ ಹಕ್ಕೂ ಒಂದು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯೂ ಒಂದು. ಇನ್ನೊಂದು, ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಸಂಬಂಧಿಸಿದ ಅರಣ್ಯ ಕಾಯ್ದೆ. ಅಂದಹಾಗೆ, ಈ ಮೂರೂ ಯೋಜನೆಗಳ ಲಾಭವನ್ನು ಕರ್ನಾಟಕದ ಜನತೆಗೆ ಒದಗಿಸಬೇಕಾದ ರಾಜ್ಯ ಬಿಜೆಪಿ ಸರಕಾರವು ಅದರಲ್ಲಿ ಸಂಪೂರ್ಣ ವಿಫಲವಾಯಿತಲ್ಲದೆ, ತನ್ನ ಆಂತರಿಕ ಕಲಹದಲ್ಲೇ ತನ್ನ ಅವಧಿಯನ್ನು ಪೂರ್ತಿಗೊಳಿಸಿತು. ಒಂದುವೇಳೆ, ಯಡಿಯೂರಪ್ಪ ಮನಸ್ಸು ಮಾಡಿರುತ್ತಿದ್ದರೆ ಮನ್ ಮೋಹನ್ ಸಿಂಗ್ ಸರಕಾರದ ಆಹಾರದ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಬಡತನ ರೇಖೆಗಿಂತ ಕೆಳಗಿರುವ ರಾಜ್ಯದ ಬಡವರಿಗೆ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿಯನ್ನು ವಿತರಿಸಬಹುದಿತ್ತು. ಇಂದಿರಾ ಕ್ಯಾ೦ಟೀನ್ ನಂಥ ಬಡವರ ಹೋಟೆಲನ್ನು ಪ್ರಾರಂಭಿಸಬಹುದಿತ್ತು. ದಲಿತ ಸಮುದಾಯಕ್ಕೆ ಸೌಲಭ್ಯ ಒದಗಿಸುವ ಅರಣ್ಯ ಕಾಯ್ದೆಯನ್ನು ಜಾರಿಗೊಳಿಸಬಹುದಿತ್ತು. ಆದರೆ, ರಾಜ್ಯವನ್ನಾಳುತ್ತಿದ್ದ ಬಿಜೆಪಿಯ ರಾಜಕೀಯ ಇಚ್ಛಾಶಕ್ತಿಯ ಕೊರತೆಯು ಈ ಎಲ್ಲ ಅವಕಾಶಗಳಿಂದ ಕನ್ನಡಿಗರನ್ನು ವಂಚಿತಗೊಳಿಸಿತು. ಅದೇವೇಳೆ, ಕೇಂದ್ರದ ಈ ಎಲ್ಲ ಯೋಜನೆಗಳ ಲಾಭವನ್ನು ರಾಜ್ಯದ ಜನತೆಗೆ ತಲುಪಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಇಂದಿರಾ ಕ್ಯಾ೦ಟೀನ್ ಮತ್ತು ಅನ್ನಭಾಗ್ಯ ಯೋಜನೆಗಳು ದೇಶದಲ್ಲೇ ಅತೀ ಜನಪ್ರಿಯ ಯೋಜನೆಗಳಾಗಿ ಗುರುತಿಗೀಡಾದುವು. ದುರಂತ ಏನೆಂದರೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿ ವ್ಯಕ್ತಿಗೆ ತಿಂಗಳಲ್ಲಿ ಒಂದು ರೂಪಾಯಿಗೆ ಒಂದು ಕೆಜಿಯಂತೆ ಏಳು ಕೆಜಿ ಅಕ್ಕಿಯನ್ನು ವಿತರಿಸುವ ಅನ್ನಭಾಗ್ಯ ಯೋಜನೆಯನ್ನು ಆರಂಭದಲ್ಲಿ ಇದೇ ಯಡಿಯೂರಪ್ಪರ  ಪಕ್ಷ ತಮಾಷೆ ಮಾಡಿತ್ತು. ಸೋಮಾರಿಗಳನ್ನು ಬೆಳೆಸುವ ಯೋಜನೆ ಎಂದು ಹೀಯಾಳಿಸಿತ್ತು. ನಿಜವಾಗಿ, ಹಸಿವಿನ ಬೇಗೆ ಗೊತ್ತಿಲ್ಲದವರು ಮಾತ್ರ ಇಷ್ಟು ದಾರ್ಷ್ಟ್ಯದಿಂದ ಮಾತಾಡಲು ಸಾಧ್ಯ. ಇವತ್ತು ಇದೇ ಬಿಜೆಪಿ  ತನ್ನ ಪ್ರಣಾಳಿಕೆಯಲ್ಲಿ ಅನ್ನಪೂರ್ಣ ಕ್ಯಾ೦ಟೀನ್ ಆರಂಭಿಸುವುದಾಗಿ ಘೋಷಿಸಿದೆ. ಸಾಲ ಮನ್ನಾ ಮಾಡುವಂತೆ ರೈತರು ಕೇಳಿಕೊಂಡಾಗ “ತನ್ನ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ” ಎಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಇದೀಗ, ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಯಾಕೆಂದರೆ, ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲದೇನೇ ರೈತರ ಸಾಲ ಮನ್ನಾ ಮಾಡಲು ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಕೇಂದ್ರದ ಅರಣ್ಯ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅವರು ದಲಿತರು ಮತ್ತು ಹಿಂದುಳಿದ ಸಮುದಾಯಕ್ಕೆ ಭೂಮಿಯನ್ನು  ಮಂಜೂರು ಮಾಡಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇಂದಿರಾ ಗಾಂಧಿಯವರ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರೀ ಯೋಜನೆಯ ಬಳಿಕ ಅತೀ ಮಹತ್ವಪೂರ್ಣ ಸಾಧನೆ ಇದು. ಯಡಿಯೂರಪ್ಪ ಯಾವುದನ್ನು ಅಸಾಧ್ಯ ಅಂದುಕೊಂಡಿದ್ದರೋ ಅವನ್ನೆಲ್ಲಾ ಸಿದ್ದರಾಮಯ್ಯ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಆಡಳಿತದ  ಅವಧಿಯಲ್ಲಿ  ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು (GSDP) 6.43 ಲಕ್ಷ ಕೋಟಿ ರೂಪಾಯಿ ಇದ್ದರೆ, ಸಿದ್ದರಾಮಯ್ಯ ಸರಕಾರದ 2017- 18 ರ ಅವಧಿಯಲ್ಲಿ 9.49 ಲಕ್ಷ ಕೋಟಿ ರೂಪಾಯಿಗೇರಿದೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲಾದಾಯವು ಐದು ವರ್ಷಗಳ ಹಿಂದೆ 77,709 ರೂಪಾಯಿಯಷ್ಟು ಇತ್ತು. ಇವತ್ತು ಅದು  1,24,551 ರೂಪಾಯಿಗೆ ಏರಿಕೆಯಾಗಿದೆ. ರಾಷ್ಟ್ರ ಮಟ್ಟದಲ್ಲಿ ತಲಾದಾಯದ ಪ್ರಮಾಣವು ಶೇ. 56 ರಷ್ಟು ಏರಿಕೆಯಾಗಿದ್ದರೆ, ರಾಜ್ಯದಲ್ಲಿ ತಲಾದಾಯದ ಏರಿಕೆಯು ಶೇ. 125 ರಷ್ಟು ಹೆಚ್ಚಾಗಿದೆ ಎಂಬುದೇ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪರ ನಡುವಿನ ಅಂತರವನ್ನು ಹೇಳುತ್ತದೆ. ಇವತ್ತು ರಾಷ್ಟ್ರ ಮಟ್ಟದಲ್ಲಿ ನಿರುದ್ಯೋಗದ ಪ್ರಮಾಣ ಶೇ. 5.9ರಷ್ಟಿದೆ. ಆದರೆ, ಕರ್ನಾಟಕದಲ್ಲಿ ನಿರುದ್ಯೋಗದ ಪ್ರಮಾಣ ಶೇ. 2.6 ರಷ್ಟೇ ಇದೆ. ಈ ಅಂಕಿಸಂಖ್ಯೆಗಳ ಜೊತೆ ಸಿದ್ದರಾಮಯ್ಯ ಸರಕಾರದ ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಶೂ  ಭಾಗ್ಯ, ವಿದ್ಯಾ ಸಿರಿ, ಆರೋಗ್ಯ ಕವಚ, ಮಾತೃಪೂರ್ಣ ಯೋಜನೆ, ವಸತಿ ಯೋಜನೆ, ಪಿಯುಸಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ… ಇತ್ಯಾದಿಗಳನ್ನೂ ಸೇರಿಸಿಕೊಂಡು ಓದಿದರೆ ಯಡಿಯೂರಪ್ಪರಿಗಿಂತ ಸಿದ್ದರಾಮಯ್ಯ ತುಂಬಾ ಎತ್ತರದಲ್ಲಿ ನಿಲ್ಲುತ್ತಾರೆ. ಇದಕ್ಕೆ ಮುಖ್ಯ ಕಾರಣ, ಸಿದ್ದರಾಮಯ್ಯ ಉತ್ತಮ ಅರ್ಥ ತಜ್ಞನಾಗಿರುವುದು ಮತ್ತು ಅವರ ಮೇಲೆ ಸಮಾಜವಾದಿ ಚಿಂತನೆಗಳು ಪ್ರಭಾವ ಬೀರಿರುವುದು. ಅಂದಹಾಗೆ,
ಅತ್ಯುತ್ತಮ ಮಾತುಗಾರರಾಗಿರುವ ಪ್ರಧಾನಿ ನರೇಂದ್ರ ಮೋದಿಯವರೇ ತನ್ನ ಚುನಾವಣಾ ಭಾಷಣಗಳ ವೇಳೆ, ತನ್ನ ಸಾಧನೆಯನ್ನು ಹೇಳಿಕೊಳ್ಳಲಾಗದ ಮತ್ತು ಸಿದ್ದರಾಮಯ್ಯರ ಸಾಧನೆಗಳನ್ನು ಅಲ್ಲಗಳೆಯಲಾಗದ ಸ್ಥಿತಿಗೆ ತಲುಪಿರುವರೆಂಬುದೇ ಸಿದ್ದರಾಮಯ್ಯರ ಜನಪ್ರಿಯತೆಗೆ ಸಾಕ್ಷಿ. ಮೋದಿಯವರು ಮನ್ ಮೋಹನ್ ಸಿಂಗ್ ರಂತೆ ಅರ್ಥತಜ್ಞರೂ ಅಲ್ಲ, ಚಿದಂಬರಂ, ಶಶಿ ತರೂರ್ ರಂತೆ ಅದ್ಭುತ ಒಳನೋಟ ಉಳ್ಳವರೂ ಅಲ್ಲ. ಆದ್ದರಿಂದ, ಕಳೆದ ನಾಲ್ಕು ವರ್ಷಗಳ ಸಾಧನೆ ಎಂಬುದು ನೋಟು ನಿಷೇಧ, GST, ತೈಲಬೆಲೆ ಏರಿಕೆ, ಕಪ್ಪು ಹಣ ಮರಳಿ ತರುವಲ್ಲಿ ವೈಫಲ್ಯ, ಬ್ಯಾ೦ಕಿ೦ಗ್ ಹಗರಣ, ಉದ್ಯೋಗ ಸೃಷ್ಟಿಸುವಲ್ಲಿ ಸೋಲು, ಆಹಾರ ವಸ್ತುಗಳ ಬೆಲೆ ಏರಿಕೆ… ಇತ್ಯಾದಿಗಳೇ ಆಗಿರುವುದು. ನೋಟು ನಿಷೇಧ ಮತ್ತು GST ಯಿಂದ ಲಕ್ಷಾಂತರ ಉದ್ಯೋಗಗಳು ನಷ್ಟವಾದುವು. ಕಳೆದ ಹದಿನಾಲ್ಕು ವರ್ಷಗಳಲ್ಲೇ ದೇಶದ ರಫ್ತಿನ ಪ್ರಮಾಣ ಅತೀ ಕನಿಷ್ಠ ಮಟ್ಟಕ್ಕೆ ಬಂದು ತಲುಪಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾಗಿದ್ದರೂ ಅದನ್ನು ಬಳಸಿಕೊಂಡು ಜನರ ಮೇಲಿನ ತೆರಿಗೆ ಭಾರವನ್ನು ಇಳಿಸಲು ಮೋದಿಯವರು ವಿಫಲರಾಗಿದ್ದಾರೆ. ದಲಿತರು, ಹಿಂದುಳಿದ ಸಮುದಾಯ ಮತ್ತು ರೈತರು ತೀವ್ರ ಅಸಮಾಧಾನದಲ್ಲಿದ್ದಾರೆ. ಅಣ್ಣಾ ಹಜಾರೆಯವರು ಸತ್ಯಾಗ್ರಹ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಸಾರ್ವಜನಿಕ ವಲಯದ ಬ್ಯಾ೦ಕ್ ಗಳ  (PSU) 2.41 ಲಕ್ಷ ಕೋಟಿ  ರೂಪಾಯಿಯನ್ನು ಮನ್ನಾ ಮಾಡಿರುವ ಮೋದಿಯವರು ರೈತರ ಸಾಲವನ್ನು ಮನ್ನಾ ಮಾಡಲು ಇನ್ನೂ ಸಿದ್ಧರಿಲ್ಲ. ನಿಷ್ಕ್ರಿಯ ಸಾಲವು 2013 ಸೆಪ್ಟೆಂಬರ್ ನಲ್ಲಿ 28,416 ಕೋಟಿಯಿದ್ದರೆ, 2017 ಸೆಪ್ಟೆಂಬರ್ ಗೆ ಆಗುವಾಗ ಅದರ ಪ್ರಮಾಣ 1.11 ಲಕ್ಷ ಕೋಟಿಗೇರಿದೆ. ಮಲ್ಯ, ನೀರವ್ ಮೋದಿಯಂಥವರು ಬ್ಯಾ೦ಕ್ ಲೂಟಿಕೊಂಡು ದೇಶ ತೊರೆಯುತ್ತಿದ್ದಾರೆ. ಮೋದಿಯವರು ಅಧಿಕಾರಕ್ಕೆ ಬಂದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ. 67 ರಷ್ಟು ಕುಸಿದಿತ್ತು. ಆದರೆ, ದೇಶದ ಪೆಟ್ರೋಲ್ – ಡೀಸೆಲ್ ಬೆಲೆ ಶೇ. 110 ರಷ್ಟು ಹೆಚ್ಚಾಯಿತು. ಕೇಂದ್ರದ ಆರ್ಥಿಕ ನಿರ್ವಹಣೆ ಎಷ್ಟು ಕೆಟ್ಟದಾಗಿದೆ ಅನ್ನುವುದಕ್ಕೆ ಇತ್ತೀಚಿನ ಉದಾಹರಣೆ ಯಾವುದೆಂದರೆ, ATM ನಲ್ಲಿ ಹಣದ ಕೊರತೆ ಎದುರಾದದ್ದು.
ನಿಜವಾಗಿ, ಮೋದಿ ಮತ್ತು ಯಡಿಯೂರಪ್ಪರಿಗೆ ಹೋಲಿಸಿದರೆ ಸಿದ್ದರಾಮಯ್ಯರ ಆಡಳಿತ ಅತ್ಯಂತ ಜನಪರ ಮತ್ತು ಅತ್ಯಂತ ಯಶಸ್ವಿಯಾಗಿ ಕಾಣಿಸುತ್ತದೆ. ನಾಡಧ್ವಜ, ಮಹದಾಯಿ, ಕಾವೇರಿ.. ಇತ್ಯಾದಿ ಎಲ್ಲದರಲ್ಲೂ ಸಿದ್ದರಾಮಯ್ಯರಲ್ಲಿ ಒಂದು ಖಚಿತ ನಿಲುವು ಇದೆ. ಅವರು ರಾಜ್ಯದ ಜನತೆಯನ್ನು ಮನುಷ್ಯರಾಗಿ ಕಂಡಿದ್ದಾರೆಯೇ ಹೊರತು ಹಿಂದೂ ಮುಸ್ಲಿಂ ಆಗಿ ವಿಭಜಿಸಿಯೇ ಇಲ್ಲ. ಅವರು ಬಡವರನ್ನು ಆಲಂಗಿಸಿಕೊಂಡರು ಮತ್ತು ಶ್ರೀಮಂತರನ್ನು ಗೌರವಿಸಿದರು. ಆದ್ದರಿಂದಲೇ, ಹಸಿವು ಮುಕ್ತ ರಾಜ್ಯ ಮತ್ತು ಅತ್ಯಂತ ಹೆಚ್ಚು ಬಂಡವಾಳ ಹರಿದು ಬಂದಿರುವ ರಾಜ್ಯ ಎರಡರಲ್ಲೂ ಕರ್ನಾಟಕವೇ ನಂಬರ್ ವನ್ ಆಗಿರುವುದು. ಈ ಕಾರಣಕ್ಕಾಗಿಯೇ, ಸಿದ್ದರಾಮಯ್ಯ ಮರಳಿ ಅಧಿಕಾರಕ್ಕೆ ಬರಬೇಕು. ಒಂದು ವೇಳೆ, ಅವರಿಗೆ ಸೋಲಾದರೆ ಅದು ಅಭಿವೃದ್ಧಿ ರಾಜಕಾರಣಕ್ಕೆ ಆಗುವ ಸೋಲಾಗುತ್ತದೆ ಮತ್ತು ಮುಂದೆ ಯಾವ ಪಕ್ಷವೂ ಅಭಿವೃದ್ಧಿಗೆ ಆಧ್ಯತೆ ನೀಡದೆ ಇರುವುದಕ್ಕೆ ಅದು ಕಾರಣವಾಗಬಹುದು. ಆದ್ದರಿಂದ,
ಭಾವನೆಗಳ ಮೇಲೆ ಆಡುವ ಆಟಕ್ಕೆ ಸೋಲಾಗಲಿ ಮತ್ತು ಅಭಿವೃದ್ಧಿ ರಾಜಕಾರಣಕ್ಕೆ ಗೆಲುವಾಗಲಿ.