ಜಸ್ಟಿಸ್ ಲೋಯಾ ಮತ್ತು ಉಚ್ಚನ್ಯಾಯಾಲಯ

0
303

: ಸಲೀಮ್ ಬೋಳಂಗಡಿ

ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ನಲ್ಲಿ ಕೊಲ್ಲಲ್ಪಟ್ಟ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಹೆಚ್. ಲೋಯಾರವರ ಸಂಶಯಾಸ್ಪದ ಸಾವಿನ ಕುರಿತು ಪ್ರತ್ಯೇಕವಾದ ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಮ್ ಕೋರ್ಟು ತೀರ್ಪಿತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್‍ಶಾ ಆರೋಪಿ ಸ್ಥಾನದಲ್ಲಿರುವ ಈ ಪ್ರಕರಣದ ಬಗ್ಗೆ ಅನಮಾನಕ್ಕೆ ಪುಷ್ಟಿ ಕೊಡುವ ಸಾಕಷ್ಟು ವರದಿಗಳು ಮಾಧ್ಯಮಗಳಲ್ಲಿ ಬಂದಿವೆ. ಹೀಗಿರುವಾಗ ಇಂತಹದ್ದೊಂದು ತೀರ್ಪು ದೌರ್ಭಾಗ್ಯಕರ. ಇದರ ವಿರುದ್ದ ಮೇಲ್ಮನವಿ ಸಲ್ಲಿಸುವ ಮಾತುಗಳು ಕೇಳಿಬರುತ್ತಿರುವುದು ಆಶಾದಾಯಕ ಬೆಳವಣಿಗೆ.
2014ರ ಡಿ ಸೆಂಬರ್ ಒಂದರಂದು ನಾಗ್ಪುರದಲ್ಲಿ ಸಹನ್ಯಾಯಾಧೀಶರೋರ್ವರ ಮಗಳ ಮದುವೆಯಲ್ಲಿ ಭಾಗವಹಿಸಲು ಜಸ್ಟಿಸ್ ಲೋಯಾ ತೆರಳಿದ್ದರು. ಆಗ ಅವರ ಭದ್ರತಾ ಸಿಬಂದಿಯು ಅನಾರೋಗ್ಯದ ಕಾರಣದಿಂದ ಗೈರುಹಾಜರಾಗಿದ್ದರು. ರವಿ ಭವನ್ ಗೆಸ್ಟ್ ಹೌಸ್‍ನಲ್ಲಿ ಅವರು ತಂಗಿದ್ದರು.  ಆದರೆ ಗೆಸ್ಟ್ ಹೌಸ್‍ನ ದಾಖಲೆಯಲ್ಲಿ ಅವರ ಜೊತೆಗಿದ್ದ ನ್ಯಾಯಾಧೀಶ ಶ್ರೀಕಾಂತ್ ಕುಲಕರ್ಣಿಯ ಹೆಸರು ಮಾತ್ರ ದಾಖಲಾಗಿದೆ. ಅಲ್ಲಿ ಅವರು ಹೃದಯಾಘಾತದಿಂದ ಸಾವೀಗೀಡಾಗಿದ್ದಾರೆಂದು ಹೇಳಲಾಗಿತ್ತು. ಮರಣೋತ್ತರ ಪರೀಕ್ಷೆಯ ಬಗ್ಗೆಯೂ ಅನುಮಾನ ಗರಿಗೆದರಿತ್ತು. ಒಂದೇ ದಿನ ಎರಡು ಮರಣೋತ್ತರ ಪರೀಕ್ಷೆ ನಡೆದಿತ್ತು. ಪೋಲೀಸ್ ದಾಖಲೆಗಳಲ್ಲಿಯೂ ವ್ಯತ್ಯಾಸ ಕಂಡುಬಂದಿತ್ತು.  ಭಾರತದ ನುರಿತ ಫೋರೆನ್ಸಿಕ್ ತಜ್ಞ ಡಾಕ್ಟರ್ ಆರ್.ಕೆ ಶರ್ಮ ಇದು ಹೃದಯಾಘಾತದಿಂದ ಮರಣ ಸಂಭವಿಸಿದ್ದಲ್ಲ. ಮೆದುಳಿಗೆ ಅಘಾತವಾಗಿ ಅಥವಾ ವಿಷ ನುಸುಳಿಯೋ ಸಾವು ಸಂಭವಿಸಿದೆಯೆಂಬ ಕುರುಹುಗಳು ಚಿಕಿತ್ಸೆಯ ದಾಖಲೆಗಳಲ್ಲಿ ಕಂಡುಬಂದಿದೆ. ಎರಡು ದಿನಗಳಲ್ಲಿ ಮುಗಿಸಬಹುದಾದ ಆಂತರಿಕ ಅವಯವಗಳ ಪರೀಕ್ಷೆಗೆ 14 ದಿನ ತಗಲಿದ್ದೇಕೆ ಎಂದೂ ಕೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಲೋಯಾರ ಸಹೋದರಿ ಸಹಿತ ಅನೇಕರು ಲೋಯಾ ಸಾವಿನ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದರು.
ಈ ಪ್ರಕರಣವನ್ನು ಗಮನಿಸಿದಾಗ ನ್ಯಾಯಾಧೀಶರ ಮೇಲೆ ರಾಜಕೀಯ ಒತ್ತಡಗಳು ಯಾವ ರೀತಿ ಪ್ರಭಾವ ಬೀರುತ್ತವೆ ಎ೦ಬುದನ್ನು ಅಂದಾಜಿಸಬಹುದು. ಅಮಿತ್ ಶಾ ವಿರುದ್ಧ ತೀಕ್ಷ್ಣ  ನಿಲುವನ್ನು ಲೋಯಾರವರು ಹೊಂದಿದ್ದರು ಎಂಬುದು ಇಲ್ಲಿ ಗಮನಾರ್ಹ. ಲೋಯಾರವರ ಸಾವಿನ ಮೂರು ವರ್ಷಗಳ ಬಳಿಕ 2017ರ ನವೆಂಬರ್‍ನಲ್ಲಿ 8 ಕಾರವಾನ ಮ್ಯಾಗಝಿನ್ ಲೋಯಾ ಸಾವಿನ ಕುರಿತು ಸಂಶಯ ವ್ಯಕ್ತ ಪಡಿಸಿತ್ತು. ಅಮಿತ್ ಶಾ ವಿರುದ್ಧ ಆರೋಪ ಪಟ್ಟಿ ಸಮರ್ಪಿಸಿದ್ದರಿಂದ ಜಸ್ಟಿಸ್ ಲೋಯಾರವರು ತೀವ್ರ ಒತ್ತಡವನ್ನು ಅನುಭವಿಸಿದ್ದರು. ತಂದೆ ಹರಿಕಿಶನ್ ಲೋಯಾ, ಸಹೋದರಿ ಡಾಕ್ಟರ್ ಅನುರಾಧ ಬಿಯಾನಿ ,ಸಹೋದರಿ ಪುತ್ರಿ ನೂಪುರ್ ಬಾಲ ಪ್ರಸಾದ್, ಬಿಯಾನಿ ಮಿತ್ರ ವಕೀಲ ಉದಯ್ ಗಾವ್ರೆ ಮುಂತಾದವರು ಕಾರವಾನ್‍ಗೆ ನೀಡಿದ ಸಂದರ್ಶನದಲ್ಲಿ ಈ ಅನುಮಾನ ವ್ಯಕ್ತ ಪಡಿಸಿದ್ದರು. ಈ ಪ್ರಕರಣದಿಂದ ಅಮಿತ್ ಶಾರನ್ನು ಹೊರಗಿಡಲು ಬಾಂಬೆ  ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ ಮೂಲಕ ನೂರು ಕೋಟಿರೂಪಾಯಿ ಹಾಗೂ ಸೊತ್ತನ್ನು ಆಮಿಷ  ಒಡ್ಡಲಾಲಾಗಿತ್ತು ಎಂದು ಕಾರವಾನ್ ಮ್ಯಾಗಝಿನ್‍ನಲ್ಲಿ ಹೇಳಲಾಗಿತ್ತು.
ಈ ಮಧ್ಯೇ ನನಗಾಗಲೀ ತಾಯಿಗಾಗಲೀ ಏನಾದರೂ ಸಂಭವಿಸಿದರೆ ಅದಕ್ಕೆ ಜಸ್ಟಿಸ್ ಮೋಹಿತ್ ಶಾ ಕಾರಣಕರ್ತರು ಎಂದು ಲೋಯಾರವರ ಪುತ್ರ ಅನೂಜ್ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಕೆಲ ದಿನಗಳ ಬಳಿಕ ಅನೂಜ್ ತನ್ನ ತಂದೆಯ ಸಾವಿನಲ್ಲಿ ಯಾವುದೇ ಸಂಶಯವಿಲ್ಲ, ಅವರು ಹೃದಯಾಘಾತದಿಂದ ಮೃತರಾದರು ಎಂದು ತಿಳಿಯಿತು ಎಂದರು. ಬಳಿಕ ಒತ್ತಡದಿಂದ ಈ ಹೇಳಿಕೆ ಬಂದಿದೆಯೆಂದು ಮಾವ ಹೇಳಿರುವುದು ವಿವಾದವಾಯಿತು.
ಹೀಗೆ ನಾನಾ ರೀತಿ ಅನುಮಾನಗಳಿಗೆಡೆ ಮಾಡಿದ ಈ ವಿವಾದವನ್ನು ಸುಪ್ರೀಮ್ ಕೋರ್ಟು ಲಘುವಾಗಿ ಪರಿಗಣಿಸಬಾರದಿತ್ತು. ಇಂತಹ ಪ್ರಕ್ರಿಯೆಗಳು ಜನರಿಗೆ ನ್ಯಾಯಾಲಯದ ಬಗ್ಗೆ ಇರುವ ನಂಬಿಕೆಗಳಿಗೆ ಕುಂದುಂಟು ಮಾಡುತ್ತದೆ.