ಜಾತಿ ಕನ್ನಡಕವನ್ನು ತೆಗೆದಿರಿಸಿ ನೋಡಿ: ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್

0
550

ಬೆಂಗಳೂರು : ಬಿಜೆಪಿಯವರು ಜಾತಿ ಕನ್ನಡಕ ಹಾಕಿಕೊಂಡಿದ್ದಾರೆ. ಅವರು ಎಲ್ಲವನ್ನೂ ಆ ಕನ್ನಡಕದಿಂದಲೇ ನೋಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಮುಖ್ಯಮಂತ್ರಿಯವರು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಕೋಮು ಗಲಭೆ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ಮಾತ್ರ ಕೈ ಬಿಡಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿ ಆರೋಪ ಸರಿಯಲ್ಲ. ಈ ವಿಷಯಕ್ಕೆ ರಾಜಕೀಯ ಬಣ್ಣ ನೀಡುವುದೂ ಸಮಂಜಸವಲ್ಲ.

ಯಾವುದೇ ಜಾತಿ, ಧರ್ಮದವರಾಗಿರಲಿ ಜನಪರ ಹೋರಾಟಗಳಲ್ಲಿ ಭಾಗಿಯಾಗಿರುವ ನಿರಪರಾಧಿಗಳ ವಿರುದ್ಧ ಕೇಸು ದಾಖಲಾಗಿದ್ದರೆ ವಾಪಸ್ ಪಡೆಯುತ್ತೇವೆ. ಅಲ್ಪಸಂಖ್ಯಾತರ ವಿಷಯ ಮಾತ್ರ ಏಕೆ ಪ್ರಸ್ತಾಪವಾಗುತ್ತಿದೆ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ಸ್ಥಿತಿಗತಿ ಮತ್ತು ಅವರ ಅಭಿವೃದ್ಧಿ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಾಚಾರ್ ಸಮಿತಿ ನೇಮಕವಾಗಿತ್ತು. ಜತೆಗೆ ರಂಗನಾಥ ಮಿಶ್ರಾ ಅವರ ಸಮಿತಿಯೂ ರಚನೆಯಾಗಿತ್ತು.

ಬಿಜೆಪಿಯವರು ಕೇವಲ ಅಲ್ಪಸಂಖ್ಯಾತರ ಬಗ್ಗೆಯೇ ಬೊಟ್ಟು ಮಾಡಿ ಹೇಳುವುದು ಏಕೆ. ಇಂದಿನ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದವರೂ ಭಾಗವಹಿಸಿಲ್ಲವೇ ? ಬಿಜೆಪಿಯವರು ಮೊದಲು ಜಾತಿ ಎಂಬ ಕನ್ನಡಕವನ್ನು ಕಳಚಿ, ಮಾನವೀಯ ದೃಷ್ಟಿಯಿಂದ ನೋಡುವುದನ್ನು ಕಲಿಯಲಿ ಎಂದು ಮುಖ್ಯಮಂತ್ರಿಯವರು ಹೇಳಿದರು.