ಝೈಬುನ್ನಿಸಾ: ಹತ್ಯೆಯೋ ಆತ್ಮಹತ್ಯೆಯೋ?

0
1134

ವಿಶೇಷ ವರದಿ

ಇತ್ತೀಚೆಗೆ ಮಂಡ್ಯದ ಕೆ.ಆರ್. ಪೇಟೆಯಲ್ಲಿರುವ ನವೋದಯ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಝೈಬುನ್ನಿಸಾ ಎಂಬ ವಿದ್ಯಾರ್ಥಿನಿಯ ಸಾವು ಸಂಭವಿಸಿದ್ದು ಮತ್ತು ಆ ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿರುವುದು ಎಲ್ಲರಿಗೂ ಗೊತ್ತು. ಝೈಬುನ್ನಿಸಾ ಆತ್ಮಹತ್ಯೆ ಮಾಡಿಕೊಂಡಿದ್ದಾದ್ದಾಳೆ ಎಂದು ಶಾಲಾ ಶಿಕ್ಷಕ ವೃಂದ ಹೇಳುವಾಗ, ಆಕೆಯ ಹೆತ್ತವರು ಮತ್ತು ಸಾಂದರ್ಭಿಕ ಸಾಕ್ಷ್ಯಗಳು ಆ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪುವುದಕ್ಕೆ ಪೂರಕವಾಗಿಲ್ಲ. ಈ ಸಾವಿಗಿಂತ ಮೊದಲು ಆಕೆ ತನ್ನ ತಾಯಿಗೆ ಮಾಡಿದ ದೂರವಾಣಿ ಕರೆಯಲ್ಲೂ ಹೀಗೆ ಅನುಮಾನಿಸುವುದಕ್ಕೆ ಪೂರಕ ಅಂಶಗಳೇ ಇವೆ. ಆದ್ದರಿಂದಲೇ ಈ ಸಾವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಎಂದು ಸನ್ಮಾರ್ಗ ಪತ್ರಿಕೆಯು ಸರಕಾರವನ್ನು ಒತ್ತಾಯಿಸುತ್ತದೆ. ನಮ್ಮ ಪ್ರತಿನಿಧಿ ಸಲೀಮ್ ಬೋಳಂಗಡಿಯವರು ಘಟನಾ ಸ್ಥಳಕ್ಕೆ ತೆರಳಿ, ಝೈಬುನ್ನಿಸಾಳ ಹೆತ್ತವರು ಮತ್ತಿತರರೊಂದಿಗೆ ಮಾತನಾಡಿ ತಯಾರಿಸಿದ ವರದಿ ಇಲ್ಲಿದೆ…

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಅಲ್ಪಸಂಖ್ಯಾತ ನವೋದಯ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಉಪ್ಪಿನಂಗಡಿ ಮೂಲದ ಝೈಬುನ್ನಿಸಾ ಎಂಬ ಹದಿಮೂರರ ಹರೆಯದ ಬಾಲಕಿಯ ಸಾವಿನ ಪ್ರಕರಣದಲ್ಲಿ ಕೆಲವು ಗೊಂದಲಗಳು ಎದ್ದು ಕಾಣುತ್ತಿವೆ. ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಹೇಳಿಕೆಗಳು ಹಲವು ಸಂಶಯಗಳಿಗೆ ಗ್ರಾಸವೊದಗಿಸಿದೆ. ಇಂತಹ ಸಾವಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದರೆ ಮಾತ್ರ ಸತ್ಯಾಂಶ ಹೊರ ಬರಲು ಸಾಧ್ಯ. ಇಲ್ಲದಿದ್ದರೆ ಇಂತಹ ಪ್ರಕರಣಗಳಿಗೆ ಆತ್ಮಹತ್ಯೆಯೆಂಬ ಸುಲಭ ಪದ ಬಳಸಿ ಮುಚ್ಚಿ ಹಾಕಿ ಆರೋಪಿಗಳು ಪಾರಾಗುವ ಸಂಭವಗಳು ಮುಂದಿನ ದಿನಗಳಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವು ಕಡೆ ವಿದ್ಯಾರ್ಥಿನಿಯರ ಸಾವಿನಲ್ಲಿ ಆತ್ಮಹತ್ಯೆಯ ಪದ ಬಳಕೆಯಾಗಿರುವುದನ್ನು ನಾವು ನೋಡಿದ್ದೇವೆ. ಒಂದುವೇಳೆ, ಈ ವಸತಿ ಶಾಲೆಯ ಇಂಗ್ಲೀಷ್ ಶಿಕ್ಷಕ ರವಿಯಿಂದ ಆಗುತ್ತಿರುವ ಕಿರುಕುಳವನ್ನು ಮನೆಗೆ ಕರೆ ಮಾಡಿ ಝೈಬುನ್ನಿಸಾ ಹೇಳಿರುವುದನ್ನು ಮನೆಯವರು ರೆಕಾರ್ಡ್ ಮಾಡದೆ ಇದ್ದಿದ್ದರೆ ಅಥವಾ ಝೈಬುನ್ನಿಸಾ ಫೋನ್ ಮಾಡಿ ವಿಷಯ ತಿಳಿಸದೇ ಇದ್ದಿದ್ದರೆ ಈ ಪ್ರಕರಣವೂ ಹತ್ತರಲ್ಲಿ ಹನ್ನೊಂದನೆಯದಾಗಿ ಸೇರುತ್ತಿತ್ತು ಎಂಬುದು ನಿಸ್ಸಂಶಯ. ಯಾಕೆಂದರೆ ಪ್ರಸ್ತುತ ಶಾಲೆಗೆ ತೆರಳಿ ವಿದ್ಯಾರ್ಥಿಗಳನ್ನು ಮಾತಾಡಿಸಿದಾಗ ಗೊಂದಲಮಯ ಉತ್ತರ ದೊರೆಯಿತು. ವಿದ್ಯಾರ್ಥಿ ಗಳಿಗೆ ಇದೇ ರೀತಿ ಉತ್ತರಿಸಬೇಕೆಂದು ತಾಕೀತು ಮಾಡಲಾಗಿದೆಯೇ ಎಂಬ ಅನುಮಾನ ಮೂಡಿ ಬಂತು. ಇಷ್ಟಕ್ಕೂ ಝೈಬುನ್ನಿಸಾ ಆ ವಸತಿ ಶಾಲೆಯ ಆರೋಗ್ಯ ಮಂತ್ರಿಯಾಗಿದ್ದಳು.
ಈ ಬಗ್ಗೆ ಝೈಬುನ್ನಿಸಾ ತಾಯಿ ನಸೀಮರನ್ನು ಮಾತನಾಡಿಸಿದಾಗ ತಿಳಿಸಿದ ಕೆಲ ವಿಚಾರಗಳು ಆಶ್ಚರ್ಯಕ್ಕೀಡು ಮಾಡಿತು. ಮೂರು ವಾರಗಳ ಹಿಂದೆ ನಡೆಸಿದ ಶಾಲಾ ಮಕ್ಕಳ ಐದು ದಿನಗಳ ಪ್ರವಾಸದ ಬಳಿಕ ಸಮಸ್ಯೆ ಆರಂಭವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಸುಮಾರು ಎಪ್ಪತ್ತಮೂರು ಮಕ್ಕಳಿಂದ ತಲಾ 1,500 ರೂಪಾಯಿ ಪಡೆದು ಪಟ್ಟದ ಕಲ್ಲು, ಐಹೊಳೆ, ಬಿಜಾಪುರ ಮುಂತಾದೆಡೆ ಪ್ರವಾಸ ಮಾಡಸಲಾಗಿತ್ತು. ಈ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಝೈಬುನ್ನಿಸಾಳ ಕಿರಿಯ ಸಹೋದರ ಹಾಗೂ ಸಹೋದರಿ (ಅವಳಿ ಜವಳಿ) ಕೂಡಾ ಈ ಪ್ರವಾಸ ತಂಡದಲ್ಲಿದ್ದರು. (ವಸತಿ ಶಾಲೆಯಲ್ಲಿ ಈ ಸಹೋದರ ಸಹೋದರಿಯರ ಜೊತೆ ಮಾತನಾಡುವುದಕ್ಕೂ ಬೇರೆಯುವುದಕ್ಕೂ ರವಿಸರ್ ನಿರ್ಬಂಧ ಹೇರಿದ್ದರು ಎಂದು ಆ ಅವಳಿ ಜವಳಿ ಸಹೋದರ, ಸಹೋದರಿಯರು ಹೇಳಿದ್ದಾರೆ.) ಈ ಪ್ರವಾಸದ ಸಂದರ್ಭದಲ್ಲಿ ಕೆಲವು ಬೋಟಿಂಗ್ ಮತ್ತು ಪಾರ್ಕುಗಳ ಪ್ರವೇಶಕ್ಕೆ ಪ್ರತ್ಯೇಕ ಶುಲ್ಕವನ್ನು ವಿದ್ಯಾರ್ಥಿಗಳಿಂದ ಶಿಕ್ಷಕಿಯರು ಪಡೆಯುತ್ತಿದ್ದರು ಎಂಬ ಆಪಾದನೆಯೂ ಇದೆ. 1,500 ರೂಪಾಯಿ ಪಡೆದೂ ಹೆಚ್ಚುವರಿ ಶುಲ್ಕ ಪಡೆಯುವುದರ ವಿರುದ್ಧ ಝೈಬುನ್ನಿಸಾ ಪ್ರತಿಭಟಿಸಿದ್ದಳು. ಹೀಗೆ ಪ್ರವಾಸ ಮುಗಿದ ಬಳಿಕ ಎರಡು ದಿನ ಶಾಲೆಗೆ ರಜೆ ನೀಡಲಾಗಿತ್ತು. ಆದರೆ ಝೈಬುನ್ನಿಸಾ ಹದಿನೈದು ದಿವಸಗಳ ತನಕ ಶಾಲೆಗೆ ಹೋಗಿರಲಿಲ್ಲ. ಹೋಗಲು ಹಿಂದೇಟು ಹಾಕಿದಾಗ ನನ್ನ ತಂಗಿ ಮತ್ತು ನಾನು ಆಕೆಯನ್ನು ಒತ್ತಾಯಿಸಿ, ‘ಇನ್ನೊಂದೆರಡು ತಿಂಗಳಲ್ಲವೇ ಮುಗಿಸಿ ಬಾ ಮತ್ತೆ ಬೇಕಾದರೆ ನಿಲ್ಲಿಸೋಣ… ಎಂದು ಹೇಳಿ ಕಳುಹಿಸಿದ್ದೆವು. ಆ ಬಳಿಕದ ದಿನಗಳಲ್ಲಿ ಆಕೆಯ ಮೇಲೆ ನಿರಂತರ ಕಿರುಕುಳ ನಡೆದಿದೆ’ ಎನ್ನುತ್ತಾರೆ ಝೈಬುಳ ತಾಯಿ.
ಮಂಗಳ ಮುಖಿ, ಹಂದಿ ತಿನ್ನುವವಳು ಎಂದೆಲ್ಲಾ ರವಿ ನಿಂದಿಸುತ್ತಿದ್ದ ಬಗ್ಗೆ ಮನೆಯವರಲ್ಲಿ ಝೈಬುನ್ನಿಸಾ ದೂರಿಕೊಂಡದ್ದು ರೆಕಾರ್ಡ್ ಆಗಿದೆ. ಈ ಕರೆ ಮಾಡುವುದಕ್ಕಿಂತ ಮೊದಲು ತಂದೆಗೆ ಎರಡು ಬಾರಿ ಆಕೆ ಕರೆ ಮಾಡಿದ್ದಳು. ಆಗ ಅವರು ‘ಮೈಸೂರಲ್ಲಿ ನಡೆಯುವ ತಬ್ಲೀಗ್ ಸಮ್ಮೇಳನಕ್ಕೆ ಬರುವವನಿದ್ದೇನೆ, ಆಗ ನಿನ್ನ ಬಳಿ ಬರುತ್ತೇನೆ’ ಎಂದು ಸಮಾಧಾನಿಸಿದ್ದರು. ಅಲ್ಲದೆ, ‘ಮೊನ್ನೆ ತಾನೇ ಹೋದದ್ದಲ್ಲವೇ, ಹೋದ ಕೂಡಲೇ ಯಾಕೆ ಈ ಫೋನು ಎಂದು’ ಅದನ್ನು ತಾನು ನಿರ್ಲಕ್ಷಿಸಿದ್ದೆ ಎಂದವರು ಹೇಳಿದರು. ಆ ಬಳಿಕ ಆಕೆ ತನ್ನ ತಾಯಿಯ ಮೊಬೈಲಿಗೆ ಕರೆ ಮಾಡಿದ್ದಾಳೆ. ಆಗ ಅದು ಸ್ವಿಚ್ಡ್ ಆಫ್ ಆಗಿತ್ತು. ಕೂಡಲೇ ಚಿಕ್ಕಮ್ಮನ ಮೊಬೈಲ್‍ಗೆ ಕರೆ ಮಾಡಿದ್ದಾಳೆ. ಮೇಲೆ ತಿಳಿಸಿದಂತೆ ರವಿ ನೀಡುತ್ತಿರುವ ಕಿರುಕುಳದ ಬಗ್ಗೆ ಅವರಲ್ಲಿ ವಿವರಿಸಿದ್ದಾಳೆ. ಹೀಗೆ ಅವಳು ಕರೆ ಮಾಡಬೇಕಾದರೆ ಅಲ್ಲಿ ಯಾವ ಮಟ್ಟದ ಕಿರುಕುಳ ಅನುಭವಿಸಿರಬಹುದು ಎಂಬುದನ್ನು ಅಂದಾಜಿಸಬಹುದು. ಕೂಡಲೇ ಪೋಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವಂತೆ ಚಿಕ್ಕಮ್ಮ ಸಲಹೆ ನೀಡಿದ್ದಾರೆ. ಸಂಜೆ ನಾಲ್ಕೂ ಮೂವತ್ತೈದರ ಹೊತ್ತಿಗೆ ಈ ಕರೆ ಬಂದಿದೆ. ಈ ಫೋನ್‍ಗೆ ಮತ್ತೆ ಕರೆ ಮಾಡಬೇಡಿ, ಇದು ನನ್ನ ಸ್ನೇಹಿತೆಯೋರ್ವಳ ಫೋನು ಎಂದೂ ಝೈಬುನ್ನಿಸಾ ಮನೆಯವರಿಗೆ ತಿಳಿಸಿದ್ದಾಳೆಂದು ಹೇಳಿದ ಆಕೆಯ ತಾಯಿ ನಸೀಮಾ, ನಾನು ಸಂಜೆ 5:30ರ ವೇಳೆಗೆ ಶಾಲೆಯ ಅಡುಗೆಯ ಮೇಲ್ವಿಚಾರಕ ಬಾಬುರವರ ಮೊಬೈಲ್‍ಗೆ ಕರೆ ಮಾಡಿದೆ. ಅವರದ್ದು ಸ್ವಿಚ್ಡ್ ಆಫ್ ಆಗಿತ್ತು. ನಂತರ ರವಿ, ಅಸ್ಮಾ ಮೇಡಮ್, ಅಡುಗೆ ಮಾಡುವ ಮಹಿಳೆ ಪಪುವಿಗೆ ಕಾಲ್ ಮಾಡಿದೆ. ಎಲ್ಲರದ್ದೂ ಸ್ವಿಚ್ಡ್ ಆಫ್ ಆಗಿತ್ತು. ವಾರ್ಡನ್ ಕಂ ಪ್ರಾಂಶುಪಾಲೆ ರತ್ನಮ್ಮಗೆ ಕರೆ ಮಾಡಿದೆ. ಮೊದಲು ಹಲೋ ಹಲೋ ಎಂದು ಹೇಳಿ ನಂತರ ಕಟ್ ಮಾಡಿದ್ದಾರೆ. ಸಂಜೆ 6:30ಕ್ಕೆ ವಸತಿ ಶಾಲೆಯ ಹತ್ತಿರದ ಪೆಟ್ರೋಲ್ ಬಂಕ್‍ನ ಹುಡುಗನೊಬ್ಬ ಝೈಬುನ್ನಿಸಳ ತಂಗಿಯಿಂದ ನಂಬರ್ ಪಡೆದು ಕಾಲ್ ಮಾಡಿ, ‘ಝೈಬುನ್ನಿಸಾಗೆ ಹುಷಾರಿಲ್ಲ. ಸೀರಿಯಸ್ ಆಗಿದೆ. ತಕ್ಷಣ ಬನ್ನಿ…’ ಎಂದು ಹೇಳಿದ್ದಾನೆ. ಬಳಿಕ ರಾತ್ರಿ ಎಂಟು ಮೂವತ್ತಕ್ಕೆ ಯೂನುಸ್ ಖಾನ್ ಎಂಬವರು ಪೋನ್ ಮಾಡಿದರು. ಝೈಬುಳ ತಂಗಿಯ ಕೈಯಲ್ಲಿ ಪೋನ್ ಕೊಡುವಂತೆ ನಾನು ಹೇಳಿದೆ. ಆಗ ಅವಳು ಕೊರಳಲ್ಲಿ ವೇಲ್ ಸುತ್ತಿದ ಬಗ್ಗೆ ತಿಳಿಸಿದಳು. ನಿಜ ವಾಗಿಯೂ ನಾವು ತುಂಬಾ ಕಳವಳಗೊಂಡೆವು. ಹಾಗೆ ನಾವು ಅಲ್ಲಿಗೆ ತಲುಪಿದಾಗ ರಾತ್ರಿ ಒಂದೂವರೆ ಗಂಟೆಯಾಯಿತು. ಪೋಲೀಸ್ ಕೇಸು ಎಲ್ಲಾ ನಡೆದಾಗ ನಾಲ್ಕು ಗಂಟೆಯಾಯಿತು ಎಂದು ಝೈಬುನ್ನಿಸಾಳ ತಾಯಿ ಹೇಳಿದರು.

ಈ ಬಗ್ಗೆ ಶಾಲಾ ಸಿಬ್ಬಂದಿಗಳಲ್ಲಿ (ಜನವರಿ 31ರಂದು) ವಿಚಾರಿಸಿದಾಗ ಈ ಘಟನೆ ನಡೆಯುವ ಮುನ್ನಾದಿನ ಸಂಜೆ 5 ಗಂಟೆಗೆ ಹೋದ ಪ್ರಾಂಶುಪಾಲೆ ಕಂ ವಾರ್ಡನ್ ಆಗಿದ್ದ ರತ್ನಮ್ಮ ಆ ತನಕವೂ ವಸತಿ ಶಾಲೆಯ ಕಡೆ ಮುಖ ಹಾಕಿಲ್ಲ. ಅವರ ಎರಡೂ ಮೊಬೈಲು ಸ್ವಿಚ್ಡ್ ಆಫ್ (ಈ ಬರಹ ಬರೆಯುವ ಫೆ. 3ರ ವರೆಗೆ) ಆಗಿದೆ. ಅವರು ಈಗ ಎಲ್ಲಿದ್ದಾರೆಂದು ಯಾರಿಗೂ ತಿಳಿದಿಲ್ಲ ಎಂದು ಸಿಬ್ಬಂದಿಗಳೇ ತಿಳಿಸಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಪುಷ್ಟಿ ನೀಡಿದೆ. ನೇತ್ರಾ ಎಂಬ ಶಿಕ್ಷಕಿ ಕೂಡಾ ಘಟನೆ ನಡೆದ ದಿನ ಮಧ್ಯಾಹ್ನ ಊರಲ್ಲಿ ಜಾತ್ರೆಯಿದೆ, ಗೃಹಪ್ರವೇಶವಿದೆ ಎಂದು ಹೇಳಿ ರಜೆ ಹಾಕಿ ಹೋಗಿದ್ದರು.

ಝೈಬುನ್ನಿಸಾಳ ಆಪ್ತೆಯೆಂದು ಹೇಳಲಾಗುವ ನಿತ್ಯಶ್ರೀ ಎನ್ನುವ ವಿದ್ಯಾರ್ಥಿನಿಯನ್ನು ಮಾತನಾಡಿಸಿದಾಗ ಆಕೆಯಿಂದ ಗೊಂದಲಮಯ ಉತ್ತರ ಸಿಕ್ಕಿತು. ಒಮ್ಮೆ- ಝೈಬುನ್ನಿಸಾಳನ್ನು ಆಸ್ಪತ್ರೆಗೆ ವ್ಯಾನ್‍ನಲ್ಲಿ ಕರೆದು ಕೊಂಡು ಹೋದರು ಎಂದರೆ ಇನ್ನೊಮ್ಮೆ, ಕಾರ್‍ನಲ್ಲಿ ಕರೆದುಕೊಂಡು ಹೋದರು ಎಂದಳು. ಹಿಂದಿನಿಂದ ರವಿ ಸಾರ್ ಬೈಕಲ್ಲಿ ಹೋಗಿದ್ದಾರೆ ಎಂದೂ ಹೇಳಿದ್ದಾಳೆ. ಝೈಬುನ್ನಿಸಾಳನ್ನು ರವಿ ನೇಣಿನಿಂದ ಇಳಿಸಿದ್ದಾರೆ. ಸಾನಿಯಾ ಕೊರಳಿನಿಂದ ವೇಲ್ ಬಿಚ್ಚಿದ್ದಾಳೆ. ಸೀಮಾ ತಬಸ್ಸುಮ್ ಪ್ರಕಾರ ಅವಳು ನನ್ನಲ್ಲಿ ತಲೆ ನೋವು ಎಂದು ಹೇಳಿದಾಗ ನಾನೇ ವಿಕ್ಸ್ ಕೊಟ್ಟು ಮಲಗಿಸಿದ್ದೆ ಎಂದು ಹೇಳಿದ್ದಾಳೆ. ಮಾರ್ಚ್ ಫಾಸ್ಟ್ ಮಾಡುವಾಗ ಅವಳಿಂದ ಸರಿಯಾಗಿ ಮಾಡಲು ಆಗುತ್ತಿರಲಿಲ್ಲ. ಆಗ ರವಿ ಸಾರ್ ಎರಡೇಟು ನೀಡಿದ್ದಾರೆ. ಮಿಸ್ರಿಯ ಎನ್ನುವವಳು ಹೇಳುವಂತೆ, ನಾನು ತುಂಬಾ ಹೊತ್ತು ಕದ ಬಡಿದೆ. ಆಕಡೆಯಿಂದ ಶಬ್ದ ಬರಲಿಲ್ಲ. ಕೊನೆಗೆ ಬಾಗಿಲಿನ ಕೆಳ ಭಾಗವನ್ನು ಸರಿಸಿದೆ. ಬಾಗಿಲಿನ ಮೇಲ್ಭಾಗಕ್ಕೆ ಒಳಗಿಂದ ಚಿಲಕ ಹಾಕಲಾಗಿತ್ತು. ಕೆಳ ಭಾಗ ಸರಿಸಿ ನೋಡಿದಾಗ ಕಾಲು ಕಂಡು ಬಂದು ಕಿರುಚಿದೆ. ಆಗ ರವಿ ಸಾರ್ ಮತ್ತೊಬ್ಬರು ಬಂದು ಬಾಗಿಲು ಒಡೆದರು ಎನ್ನುತ್ತಾಳೆ. ಆದರೆ ಆ ಬಾಗಿಲನ್ನು ಗಮನಿಸಿದಾಗ ಅದರ ಒಳಗಿನಿಂದ ಮೇಲಿನ ಭಾಗದ ಚಿಲಕ ಹಾಕಿದ್ದರೆ ಕೆಳಭಾಗ ಸರಿಸಿ ನೋಡಲು ಸಾಧ್ಯವಿಲ್ಲ ಎಂದು ಅನಿಸುತ್ತದೆ. ಅದರಲ್ಲೂ ಮಕ್ಕಳು ಸರಿಸಿದರು ಎಂದರೆ ನಂಬಲಿಕ್ಕಾಗದು. ರವಿಸಾರ್ ಮತ್ತು ಅವರ ಫ್ರೆಂಡ್ ಒಬ್ಬರು ಸೇರಿ ಬಾಗಿಲು ಒಡೆದರು ಎಂದು ವಿಧ್ಯಾರ್ಥಿಗಳು ಹೇಳುತ್ತಿದ್ದಾರೆ.

ವಿದ್ಯಾರ್ಥಿಗಳು ಮಾತನಾಡುವಾಗ ಶಿಕ್ಷಕಿಯವರು ಮಧ್ಯೆ ಪ್ರವೇಶಿಸುತ್ತಿದ್ದರು. ವಿದ್ಯಾರ್ಥಿಗಳು ಉತ್ತರಿಸುವಾಗ ಆಗಾಗ ಶಿಕ್ಷಕಿಯರ ಮುಖ ನೋಡುವುದನ್ನು ನಾವು ಗಮನಿಸಿದ್ದೇವೆ. ಅಡುಗೆಯ ಮೇಲ್ವಿಚಾರಕ ಬಾಬುರವರನ್ನು ಮಾತನಾಡಿಸಿದಾಗ, ಮಕ್ಕಳ ಕಿರು ಚಾಟ ಕೇಳಿ ರವಿ, ನಾನು, ಮಕ್ಕಳು ಎಲ್ಲರೂ ಓಡಿ ಹೋದೆವು. ಬಾಗಿಲು ಬಡಿಯುವುದನ್ನು ನಾನು ನೋಡಿದೆ. ಅಲ್ಲಿಗೆ ತಲುಪುವಷ್ಟರಲ್ಲಿ ಮಗುವನ್ನು ಇಳಿಸಿಯಾಗಿದೆ ಎಂದು ಹೇಳಿದರು. ರವಿ ಬಾಗಿಲು ಒಡೆಯುವುದನ್ನು ಅವರು ನೋಡಿದ್ದಾ ರೆಂದಾದರೆ ಅವರು ತಲುಪುವಷ್ಟರಲ್ಲಿ ಅಂದರೆ ಇಪ್ಪತ್ತು ಅಡಿ ಯಷ್ಟು ದೂರದ ಆ ಕೊಠಡಿಗೆ ತಲುಪುವಷ್ಟರಲ್ಲಿ ಮಗುವನ್ನು ಇಳಿಸಿಯಾಗಿದೆ ಎನ್ನುವ ಮಾತಿನಲ್ಲಿಯೂ ಸಂದೇಹ ಮೂಡಿದೆ. ಅಷ್ಟು ಬೇಗ ಮಗುವನ್ನು ಇಳಿಸಲು ಸಾಧ್ಯವೇ? ಝೈಬುನ್ನಿಸಾಳನ್ನು ಅಲ್ಲಿಂದ ಎತ್ತಿ ತಂದ ಸ್ಥಳೀಯ ಅಫ್ಸರ್ ಪಾಶಾನನ್ನು ಮಾತನಾಡಿಸಿದಾಗ, ಮಕ್ಕಳ ಕಿರುಚಾಟ ಕೇಳಿ ನಾನು ಓಡಿ ಹೋಗಿದ್ದೆ. ಆಗ ಝೈಬುನ್ನಿಸಾಳನ್ನು ಮಲಗಿಸಿಡಲಾಗಿತ್ತು. ಹೆಚ್ಚು ಕಮ್ಮಿ ಆಗಲೇ ಪ್ರಾಣ ಹಾರಿ ಹೋಗಿತ್ತು ಎಂದು ಹೇಳಿದ್ದಾನೆ. ರವಿಯ ಗೆಳೆಯನ ಬೈಕ್‍ನಲ್ಲಿ ಝೈಬುನ್ನಿಸಾಳನ್ನು ಅಪ್ಸರ್ ಪಾಶಾ ಹಿಂದಿನಿಂದ ಹಿಡಿದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿಂದಿನಿಂದ ರವಿ ಬೈಕ್‍ನಲ್ಲಿ ಹಿಂಬಾಲಿಸಿದ್ದಾರೆ. ಅಂದಹಾಗೆ ಇಷ್ಟು ಗಂಭೀರ ಘಟನೆ ನಡೆದಿದ್ದರೂ ಶಾಲಾ ಆಡಳಿತ ಮಂಡಳಿ ಮನೆಯವರಿಗೆ ತಕ್ಷಣ ಸುದ್ದಿ ಮುಟ್ಟಿಸದಿರುವುದು ಏಕೆ? ಯಾರೋ ಹೊರಗಿನವರು ಝೈಬುನ್ನಿಸಾ ತಂಗಿಯಿಂದ ನಂಬರ್ ಪಡೆದು ಕರೆ ಮಾಡಿ ಝೈಬುನ್ನಿಸಾಳಿಗೆ ಸೀರಿಯಸ್ ಇದೆ ಬನ್ನಿ ಎಂದಿರುವುದು ಏನನ್ನೂ ಸೂಚಿಸುತ್ತದೆ? ಆನಂತರವಷ್ಟೇ ಮನೆಯವರು ಅಲರ್ಟ್ ಆಗಿದ್ದಾರೆ. ಅವಾಂತರ ನಡೆದ ತಕ್ಷಣ ಅಂಬ್ಯುಲೆನ್ಸ್ ಗೆ ಫೋನ್ ಮಾಡಲಿಲ್ಲ ಏಕೆ? ಪೋಲೀಸರಿಗೆ ತಿಳಿಸುವ ಪ್ರಯತ್ನವೂ ಮಾಡಲಿಲ್ಲ. ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳುವ ರವಿ ಆತುರಾತುರವಾಗಿ ಝೈಬುಳನ್ನು ನೇಣಿನಿಂದ ಇಳಿಸಿದ್ದು ಯಾಕೆ? ಪ್ರವಾಸದ ಬಳಿಕ ಒಮ್ಮಿಂದೊಮ್ಮೆಗೆ ಇಂಗ್ಲಿಷ್ ಶಿಕ್ಷಕ ರವಿಗೆ ಝೈಬುನ್ನಿಸಾಳ ಮೇಲೆ ದ್ವೇಷ ಹುಟ್ಟಲು ಕಾರಣವೇನಿರಬಹುದು? ಪ್ರವಾಸದ ಬಳಿಕ ಅವಳ ಕೊಠಡಿಯಲ್ಲಿ ಅವಳ ಬಟ್ಟೆ ಬರೆ ಸರಿಯಗಿ ಜೋಡಿಸಿಲ್ಲವೆಂದು ದಬಾಯಿಸಲು ಕಾರಣವೇನು? ಹೆಣ್ಮಕ್ಕಳು ಮಾತ್ರ ಇರುವ ಕೊಠಡಿಯನ್ನು ಪುರುಷ ಶಿಕ್ಷಕನೋರ್ವ ತಪಾಸಿಸುವುದು ಎಷ್ಟು ಸರಿ? ಅವಳು ಮಾರ್ಚ್ ಫಾಸ್ಟ್ ಮಾಡದ ದಿನ ಅವಳನ್ನು ಹಿಂಬಾಲಿಸಿ ಅವಳ ಕೊಠಡಿಗೆ ಹೋದದ್ದೇಕೆ? ಇವೆಲ್ಲ ಅಂಶವನ್ನು ಗಮನಿಸಿದಾಗ ಪ್ರವಾಸದ ಬಳಿಕ ರವಿ ಆಕೆಯ ಮೇಲೆ ನಿಗಾ ಇಟ್ಟಿರುವುದು ಸ್ಪಷ್ಟವಾಗುತ್ತದೆ. ಪ್ರವಾಸದ ನಡುವೆ ಏನಾದರೂ ನಡೆಯಬಾರದ್ದು ನಡೆದಿತ್ತೇ? ಅಥವಾ ರವಿಯ ಕುರಿತು ಏನಾದರೂ ರಹಸ್ಯ ಅವಳ ಅರಿವಿಗೆ ಬಂದಿದೆಯೇ? ಯಾಕೆಂದರೆ ‘ಆಕೆ ಪತ್ತೇದಾರಿಕೆಯ ಗುಣ ಹೊಂದಿ ದ್ದಳು, ಅವಳಿಗೆ ಏನಾದರೂ ಸಂಶಯ ಕಂಡು ಬಂದರೆ ಅದರ ಬೆನ್ನು ಹತ್ತಿ ಪರಿಶೀಲಿಸುವಂತಹ ಗುಣ ಅವಳಲ್ಲಿತ್ತು’ ಎಂದು ಆಕೆಯ ತಾಯಿ ಹೇಳಿ ರುವುದನ್ನು ಗಮನಿಸಬಹುದು. ಹಾಗೆಯೇ ವಿದ್ಯಾರ್ಥಿನಿಯರು ಹೆಚ್ಚಾಗಿರುವ ಈ ವಸತಿ ಶಾಲೆಯಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಶಿಕ್ಷಕಿಯರು ಯಾರೂ ಇರಲಿಲ್ಲ ಎಂದು ಶಿಕ್ಷಕಿಯೊಬ್ಬರು ತಿಳಿಸಿದರು. ಈ ರವಿ ಮಾತ್ರ ಇದ್ದರು. ಹುಡುಗಿಯರು ಇರುವ ವಸತಿ ಶಾಲೆಯಲ್ಲಿ ವಾರ್ಡನ್ ಆಗಿ (ರತ್ನಮ್ಮರ ಗೈರು ಹಾಜರಿಯಲ್ಲಿ) ಓರ್ವ ಪುರುಷನಿಗೆ ವಹಿಸಿರುವುದು ಎಷ್ಟು ಸರಿ?

ಝೈಬುನ್ನಿಸಾ ಕಲಿಯುವುದರಲ್ಲಿ ಜಾಣೆ ಎಂದು ಶಿಕ್ಷಕಿಯರೇ ಹೇಳುತ್ತಾರೆ. ಭವಿಷ್ಯದ ಬಗ್ಗೆ ಕನಸು ಕಂಡವಳು. ಹೃದ್ರೋಗಿಯಾಗಿದ್ದ ತನ್ನ ತಂದೆಯೊಡನೆ ನಾನು ಡಾಕ್ಟರ್ ಕಲಿತು ಮೊದಲು ನಿಮ್ಮ ಹೃದಯ ಶಸ್ತ್ರ ಚಿಕಿತ್ಸೆ ಮಾಡುತ್ತೇನೆ ಎಂದೂ ಹೇಳಿದ್ದಳು. ಹೀಗೆ ಆಕೆಯ ಹೆತ್ತಮ್ಮ ನಸೀಮರ ಮಾತು ಮುಂದುವರಿಯುತ್ತದೆ. ನನ್ನ ಪುತ್ರಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಅನ್ಯಾಯವಾದರೆ ಪ್ರತಿಭಟಿಸುವ ಗುಣ ಹೊಂದಿದ್ದಳು. ನನಗೆ ನ್ಯಾಯ ಕೊಡಿಸಿ ಎಂದು ಗೋಗರೆಯುತ್ತಾರೆ.
ಹಲವು ಸಂಶಯ, ಸಂದೇಹಗಳಿಗೆ ಎಡೆ ಮಾಡಿರುವ ಈ ಪ್ರಕರಣವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸತ್ಯ ಬಹಿರಂಗ ಪಡಿಸಬೇಕಾದ ಅಗತ್ಯವಿದೆ. ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು ವ್ಯಾಪಕವಾಗುತ್ತಿರುವಾಗ ಅದಕ್ಕೊಂದು ಅಂತ್ಯ ಹಾಡಬೇಕಾದ ಅಗತ್ಯವಿದೆ.