ಟೋಪಿ-ಬುರ್ಖಾಧಾರಿಗಳನ್ನು ಬಹಿಷ್ಕರಿಸುವ ಶಾಸಕ ಮತ್ತು ಜನತಂತ್ರ

0
2448

ಕಾಂಗ್ರೆಸ್ ಪಕ್ಷದ ಶಾಸಕ, ಬಿಜೆಪಿ ಶಾಸಕ, ಕಮ್ಯುನಿಸ್ಟ್ ಪಕ್ಷದ ಶಾಸಕ, ಮುಸ್ಲಿಮ್ ಲೀಗ್ ಪಕ್ಷದ ಶಾಸಕ.. ಎಂದರೆ ಏನು? ಚುನಾವಣೆಯಲ್ಲಿ ಆ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದವ ಎಂಬ ಗುರುತು ಚಿಹ್ನೆಯೋ ಅಥವಾ ಆ ಪಕ್ಷದವರಿಗೆ ಮಾತ್ರ ಸಂಬಂಧಿಸಿದವ ಎಂಬ ನಾಮ ಸೂಚಕವೋ? ಓರ್ವ ಶಾಸಕ ಅಥವಾ ಸಂಸದನ ಬಗ್ಗೆ ಈ ದೇಶದ ಸಂವಿಧಾನ ಏನು ಹೇಳುತ್ತದೆ? ಆತ/ಕೆ ಜನಪ್ರತಿನಿಧಿಯೋ ಅಥವಾ ಧರ್ಮ ಪ್ರತಿನಿಧಿಯೋ? ಒಂದು ಕ್ಷೇತ್ರದಿಂದ ಆರಿಸಿ ಬರುವ ವ್ಯಕ್ತಿಯ ಮೇಲೆ ಈ ದೇಶದ ಸಂವಿಧಾನ ಹೊರಿಸುವ ಜವಾಬ್ದಾರಿಗಳೇನು? ಆತ ನಿರ್ದಿಷ್ಟ ಧರ್ಮದ ಅನುಯಾಯಿಗಳಿಗೆ ಬಹಿಷ್ಕಾರ ಘೋಷಿಸಬಹುದೇ? ನಿರ್ದಿಷ್ಟ ಧರ್ಮದ ಅನುಯಾಯಿಗಳಿಗಾಗಿ ಮಾತ್ರ ತಾನಿದ್ದೇನೆ ಎಂದು ಹೇಳಬಹುದೇ? ಇದರ ಸಾಂವಿಧಾನಿಕ ವಿಧಿ ವಿಧಾನಗಳು ಏನೇನು?

ಇದು, ವಿಜಯಪುರದ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೊಬ್ಬರ ಸಮಸ್ಯೆಯಲ್ಲ. ಇಂಥ ಪ್ರಶ್ನೆಗಳನ್ನು ಹುಟ್ಟು ಹಾಕಿದವರಲ್ಲಿ ಅವರು ಮೊದಲಿಗರೂ ಅಲ್ಲ. “ಬುರ್ಖಾ ಮತ್ತು ಟೋಪಿಧಾರಿಗಳು ನನ್ನ ಕಚೇರಿಗೆ ಬರುವುದು ಬೇಡ. ನನಗೆ ಮತ ಹಾಕಿರುವುದು ಹಿಂದೂಗಳು. ಅವರಿಗಷ್ಟೇ ನಾನು ಕೆಲಸ ಮಾಡುವೆ. ಹಿಂದೂ ಸಮುದಾಯದವರನ್ನು ಬಿಟ್ಟು ಬೇರೆ ಯಾರಿಗೂ ಕೆಲಸ ಮಾಡಿಕೊಡದಂತೆ ಮಹಾನಗರ ಪಾಲಿಕೆ ಸದಸ್ಯರಿಗೆ ತಾಕೀತು ಮಾಡಿರುವೆ..’ ಎಂದು ಕಾರ್ಯಕ್ರಮವೊಂದರಲ್ಲಿ ಅವರು ನೀಡಿರುವ ಹೇಳಿಕೆಯು ದೊಡ್ಡ ಸುದ್ದಿಯಾಗದಿರುವುದಕ್ಕೆ ಕಾರಣ ಈ ವಾಸ್ತವವೇ. ಅವರದೇ ಪಕ್ಷದ ಸಂಸದ ಅನಂತ ಕುಮಾರ್ ಹೆಗಡೆಯವರು ಈ ಹಿಂದೆ ‘ಮುಸ್ಲಿಮರ ಮತವೇ ಬೇಡ’ ಎಂದು ಹೇಳಿಕೊಂಡಿದ್ದರು. ಅಲ್ಲದೇ ವಿವಿಧ ರಾಜ್ಯಗಳಲ್ಲಿರುವ ಬಿಜೆಪಿಯ ಸಂಸದರು ಮತ್ತು ಶಾಸಕರು ಮುಸ್ಲಿಮರನ್ನು ಅವಹೇಳನಗೊಳಿಸುವ ಮತ್ತು ಅಸ್ಪೃಶ್ಯರಂತೆ ಕಾಣುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಬಸವನಗೌಡ ಪಾಟೀಲ್‍ರು ಅವೇ ಮನಸ್ಥಿತಿಯನ್ನು ತುಸು ನಿಷ್ಠುರವಾಗಿ ಮತ್ತು ಮುಲಾಜಿಲ್ಲದೇ ವ್ಯಕ್ತಪಡಿಸಿದ್ದಾರೆ ಎಂದಷ್ಟೇ ಹೇಳಬಹುದು. ಅಷ್ಟಕ್ಕೂ,

ಬಿಜೆಪಿಯು ಮುಸ್ಲಿಮರ ವಿರುದ್ಧ ಒಂದು ಬಗೆಯ ತಿರಸ್ಕಾರ ನೋಟವನ್ನು ಬೀರಲು ಕಾರಣವೇನು? ಟೋಪಿಧಾರಿಗಳು ಮತ್ತು ಬುರ್ಖಾಧಾರಿಗಳು ಎಂಬ ಪದಪ್ರಯೋಗ ಅಥವಾ ಮುಸ್ಲಿಮರ ಓಟು ಬೇಡ ಎಂಬ ಹೇಳಿಕೆಯು ಒಟ್ಟು ಮುಸ್ಲಿಮ್ ಸಮುದಾಯವನ್ನು ಸಂಬೋಧಿಸುತ್ತದೆಯೇ ಹೊರತು ನಿರ್ದಿಷ್ಟ ವ್ಯಕ್ತಿ-ಶಕ್ತಿಗಳನ್ನಲ್ಲ. ಮುಸ್ಲಿಮ್ ಸಮುದಾಯ ಬಿಜೆಪಿಗೆ ಏನು ತೊಂದರೆ ಮಾಡಿದೆ? ಮುಸ್ಲಿಮ್ ಸಮುದಾಯದ ರಾಜಕೀಯ ಒಲವು ಬಿಜೆಪಿಯ ಕಡೆಗಿಲ್ಲ ಅನ್ನುವುದು ಈ ಬಗೆಯ ಹೇಳಿಕೆಗೆ ಕಾರಣ ಎಂದಾದರೆ ಈ ಪಟ್ಟಿಯಲ್ಲಿ ಸೇರಬೇಕಾದ ಸಮುದಾಯಗಳು ಇನ್ನೂ ಇವೆಯಲ್ಲ- ಕ್ರೈಸ್ತರು, ದಲಿತರು, ಆದಿವಾಸಿಗಳು, ಸಿಕ್ಖರು, ಕುರುಬರು.. ಇವರ ಬಗ್ಗೆ ಬಿಜೆಪಿಯೇಕೆ ಇದೇ ಧಾಟಿಯಲ್ಲಿ ಮಾತಾಡುವುದಿಲ್ಲ? ಬಿಜೆಪಿಯತ್ತ ಒಲವು ತೋರಿಸದ ಹಲವು ಸಮುದಾಯಗಳು ಈ ದೇಶದಲ್ಲಿರುವಾಗ ಕೇವಲ ಮುಸ್ಲಿಮರೇ ಯಾಕೆ ಮತ್ತೆ ಮತ್ತೆ ಗುರಿಯಾಗುತ್ತಿದ್ದಾರೆ? ಒಂದು ವೇಳೆ, ಮುಸ್ಲಿಮ್ ಸಮುದಾಯದಲ್ಲಿ ಕ್ರಿಮಿನಲ್‍ಗಳಿದ್ದಾರೆ, ಭಯೋತ್ಪಾದಕರಿದ್ದಾರೆ, ದೇಶವಿರೋಧಿಗಳಿದ್ದಾರೆ.. ಮುಂತಾದುವುಗಳು ಇದಕ್ಕೆ ಕಾರಣವೆಂದಾದರೆ, ಯತ್ನಾಳ್ ಅವರು ಮೊದಲು ತಾನು ಪ್ರತಿನಿಧಿಸುವ ಸಮುದಾಯವನ್ನೇ ಬಹಿಷ್ಕರಿಸಬೇಕಾಗುತ್ತದೆ. ಯಾಕೆಂದರೆ, ಇಂಥವು ಯಾವುದಾದರೊಂದು ಧರ್ಮಕ್ಕೆ ಸೀಮಿತವಲ್ಲ. ಒಂದು ಧರ್ಮದ ಪ್ರತಿನಿಧಿಗಳಾಗಿ ಯಾರೂ ಇಂಥ ಕೆಲಸಗಳನ್ನು ಮಾಡುವುದೂ ಇಲ್ಲ. ಬಹಳ ಮಹತ್ವಪೂರ್ಣವಾದ ಈ ದೇಶದ ರಕ್ಪಣಾ ರಹಸ್ಯಗಳೂ ಸೇರಿ ದಾಖಲೆಗಳನ್ನು ಪಾಕಿಸ್ತಾನವೂ ಸೇರಿದಂತೆ ವಿದೇಶಿ ರಾಷ್ಟ್ರಗಳಿಗೆ ನೀಡಿದವರಲ್ಲಿ ಯತ್ನಾಳ್ ಅವರು ಪ್ರತಿನಿಧಿಸುವ ಸಮುದಾಯದವರು ಮುಂಚೂಣಿಯಲ್ಲಿದ್ದಾರೆ. ಭಯೋತ್ಪಾದನೆಯಾಗಲಿ, ಅತ್ಯಾಚಾರವಾಗಲಿ, ಕಳ್ಳತನವಾಗಲಿ ಅಥವಾ ಯಾವುದೇ ಸಮಾಜ ಘಾತುಕ ಕೃತ್ಯಗಳಾಗಲಿ ಎಲ್ಲದರಲ್ಲೂ ಎಲ್ಲ ಧರ್ಮದವರ ಪಾತ್ರವಿದೆ. ಹಾಗಂತ, ಆಯಾ ಧರ್ಮಗಳನ್ನೇ ಅವಕ್ಕೆ ಹೊಣೆಯೆಂದು ಹೇಳಬಹುದೇ? ನಿಜವಾಗಿ, ಸಮಾಜಘಾತುಕ ಕೃತ್ಯಗಳನ್ನು ವೈಯಕ್ತಿಕವಾಗಿ ನೋಡಬೇಕೇ ಹೊರತು ಧಾರ್ಮಿಕವಾಗಿಯಲ್ಲ. ಈ ದೇಶದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಹಗರಣಗಳನ್ನೊಮ್ಮೆ ಪರಿಗಣಿಸಿ ನೋಡಿ. ಅದರಲ್ಲಿ ಟೋಪಿವಾಲಾ ಮತ್ತು ಬುರ್ಖಾಧಾರಿಗಳು ಎಷ್ಟಿದ್ದಾರೆ? ಭ್ರಷ್ಟಾಚಾರಿಗಳ ಬಹುದೊಡ್ಡ ಪಟ್ಟಿಯೊಂದು ಈ ದೇಶದಲ್ಲಿದೆ. ಬ್ಯಾಂಕ್‍ಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿ ವಿದೇಶದಲ್ಲಿ ಆರಾಮವಾಗಿ ಕುಳಿತವರೂ ಇದ್ದಾರೆ. ಇವರಲ್ಲಿ ಯತ್ನಾಳ್ ಅವರ ಟೋಪಿ ಮತ್ತು ಬುರ್ಖಾಧಾರಿಗಳ ಪಾತ್ರ ಎಷ್ಟಿದೆ? ಈ ದೇಶದ ಹಿತ ಎಲ್ಲಕ್ಕಿಂತ ಮುಖ್ಯ ಎಂದು ಹೇಳುವ ಬಿಜೆಪಿಯು ಈ ದೇಶಕ್ಕೆ ಅಹಿತ ಮಾಡಿದವರನ್ನು (ಉದಾ: ರೆಡ್ಡಿಗಳು) ಜೊತೆಯಿರಿಸಿಕೊಂಡೇ ಮತ್ತು ಇಂಥ ಅಹಿತವೆಸಗಿದ ಅಸಂಖ್ಯ ಮಂದಿ ಪ್ರತಿನಿಧಿಸುವ ಧರ್ಮವನ್ನು ತಿರಸ್ಕಾರಯೋಗ್ಯ ಎಂದು ಪರಿಗಣಿಸದೆಯೇ ಬರೇ ಮುಸ್ಲಿಮರನ್ನು ಮಾತ್ರ ಆ ಪಟ್ಟಿಯಲ್ಲಿಟ್ಟಿರುವುದು ಯಾಕಾಗಿ? ಈ ದೇಶಕ್ಕೆ ಅಹಿತ ಎಸಗಿದವರ ಹೆಸರುಗಳನ್ನು ಪ್ರಾಮಾಣಿಕವಾಗಿ ಪಟ್ಟಿ ಮಾಡಿದರೆ ಮುಸ್ಲಿಮ್ ಹೆಸರುಗಳು ಅದರಲ್ಲಿ ಅತ್ಯಂತ ಕೊನೆಯಲ್ಲಷ್ಟೇ ಸ್ಥಾನ ಪಡೆದಾವು. ಯಾಕೆಂದರೆ, ದೇಶದಲ್ಲಿ ಮುಸ್ಲಿಮರ ಒಟ್ಟು ಸಂಖ್ಯೆಯೇ ತೀರಾ ಅತ್ಯಲ್ಪ. ಅದರಲ್ಲೂ ರಾಜಕೀಯವಾಗಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅವರು ಈ ದೇಶದ ಇತರ ಸಮುದಾಯಗಳಿಗೆ ಸ್ಪರ್ಧೆ ನೀಡಲಾಗದಷ್ಟು ದುರ್ಬಲರು. ಸರಕಾರದ ಆಯಕಟ್ಟಿನ ಜಾಗಗಳನ್ನು ಬಿಡಿ, ಸಾಮಾನ್ಯ ಉದ್ಯೋಗಿಗಳಾಗಿಯೂ ಅವರ ಪಾಲು ತೀರಾ ತೀರಾ ಕಡಿಮೆ. ಇದೊಂದು ವಾಸ್ತವ. ಹೀಗಿದ್ದೂ, ಬಿಜೆಪಿಯು ಮುಸ್ಲಿಮರನ್ನೇ ಗುರಿ ಮಾಡಿಕೊಂಡಿರುವುದರ ಉದ್ದೇಶವೇನು? ಒಂದು ವೇಳೆ, ಬಿಜೆಪಿಗೂ ಇಂಥ ಹೇಳಿಕೆಗಳಿಗೂ ಸಂಬಂಧವಿಲ್ಲ ಎಂದಾದರೆ, ಕನಿಷ್ಠ ಅದನ್ನು ರಾಜ್ಯ ನಾಯಕರು ಅಥವಾ ರಾಷ್ಟ್ರ ನಾಯಕರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸಬೇಕಾಗಿತ್ತು. ಅಂಥ ಹೇಳಿಕೆಗಳನ್ನು ಕೊಡುವವರನ್ನು ಪಕ್ಷದಿಂದ ಹೊರಗಿಟ್ಟು ಶಿಸ್ತಿನ ಪಾಠ ಕಲಿಸಬೇಕಾಗಿತ್ತು. ಆದರೆ ಬಿಜೆಪಿ ಅವಾವುದನ್ನೂ ಮಾಡುತ್ತಿಲ್ಲ. ಮಾತ್ರವಲ್ಲ, ಇಂಥ ಸಂದರ್ಭಗಳಲ್ಲೆಲ್ಲ ಗಾಢ ಮೌನಕ್ಕೆ ಜಾರುವುದನ್ನು ಅದು ರೂಢಿ ಮಾಡಿಕೊಂಡಿದೆ. ಈ ಮೌನವನ್ನು ಆ ಪಕ್ಷದ ಸಮ್ಮತಿಯೆಂದು ತಿಳಿದುಕೊಳ್ಳಬೇಕೋ ಅಥವಾ ಉದ್ದೇಶಪೂರ್ವಕ ಕಿವುಡುತನವೆಂದೋ?

ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕ ಅಥವಾ ಸಂಸದ ಜನಪ್ರತಿನಿಧಿಯಾಗುತ್ತಾನೆಯೇ ಹೊರತು ಧರ್ಮಪ್ರತಿನಿಧಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವವರೆಗೆ ಮಾತ್ರ ಆತ ನಿರ್ದಿಷ್ಟ ಪಕ್ಷದ ಅಭ್ಯರ್ಥಿ. ಗೆದ್ದ ಬಳಿಕ ಆತ ಆ ಕ್ಷೇತ್ರದ ಅಷ್ಟೂ ಜನರ ಪ್ರತಿನಿಧಿ. ಆ ಕ್ಷೇತ್ರದಲ್ಲಿ ತನಗೆ ಮತ ಚಲಾಯಿಸಿದವರನ್ನೂ ಚಲಾಯಿಸದವರನ್ನೂ ಸಮಾನ ರೀತಿಯಲ್ಲಿ ನೋಡಬೇಕಾದ ಹೊಣೆಗಾರಿಕೆಯನ್ನು ಆ ಗೆಲುವು ಆತನ ಮೇಲಿರಿಸುತ್ತದೆ. ಇದಕ್ಕಿರುವ ಇನ್ನೊಂದು ಆಧಾರ ಏನೆಂದರೆ, ಗೌಪ್ಯ ಮತದಾನ. ತನಗೆ ಮತ ಚಲಾಯಿಸಿದವರು ಯಾರು ಎಂಬ ವಿವರ ಅಭ್ಯರ್ಥಿಗಳ ಸಹಿತ ಯಾವ ಪಕ್ಷಕ್ಕೂ ಗೊತ್ತಾಗದಿರಲಿ ಅನ್ನುವ ಉದ್ದೇಶ ಗೌಪ್ಯ ಮತದಾನಕ್ಕಿದೆ. ಇಷ್ಟೆಲ್ಲ ಇದ್ದೂ ಯತ್ನಾಳ್ ಅವರು ಮುಸ್ಲಿಮರನ್ನು ತಿರಸ್ಕರಿಸಿ ಮಾತಾಡುತ್ತಾರೆಂದರೆ ಮತ್ತು ಅವರ ಪಕ್ಷವು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೆಂದರೆ, ಅದು ದೇಶದ ಸಂವಿಧಾನ ಮತ್ತು ವೈವಿಧ್ಯ ಪರಂಪರೆಗೆ ಎಸಗುವ ದ್ರೋಹ. ಅಂದಹಾಗೆ,

ಧರ್ಮಗಳು ರಾಜಕೀಯ ಲೆಕ್ಕಾಚಾರಕ್ಕಿಂತ ಹೊರಗಿನವು. ಒಂದು ನಿರ್ದಿಷ್ಟ ಧರ್ಮದ ಅನುಯಾಯಿಗಳಿನ್ನು ತಿರಸ್ಕಾರ ಯೋಗ್ಯರು ಎಂದು ಹೇಳುವುದರಿಂದ ಯತ್ನಾಳ್‍ರಿಗೆ ರಾಜಕೀಯ ಲಾಭ ಇದ್ದಿರಬಹುದಾದರೂ ಈ ಲಾಭದ ಅವಧಿ ದೀರ್ಘಕಾಲ ಇರಲಾರದು. ಯಾಕೆಂದರೆ, ವಿನಾ ಕಾರಣ ಒಂದು ಸಮುದಾಯವನ್ನು ಗುರಿಯಾಗಿಸುವುದು ಧರ್ಮವಿರೋಧಿ ಮತ್ತು ಪ್ರಕೃತಿ ವಿರೋಧಿಯಾಗುತ್ತದೆ. ಕೊನೆಗೆ ಪ್ರಕೃತಿಯೇ ಅಂಥವರನ್ನು ತಿರಸ್ಕರಿಸಿಬಿಡುತ್ತದೆ.