ಠುಸ್ಸಾದ ಮೇಯರ್ ಚರ್ಚೆ: ಕೂಗಿನ ಉದ್ದೇಶವನ್ನೇ ಪ್ರಶ್ನಿಸತೊಡಗಿದ ಸಮುದಾಯ 

0
1305

ನಮ್ಮ ಪ್ರತಿನಿಧಿಯಿಂದ 
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಈ ಬಾರಿ ಮುಸ್ಲಿಮರಿಗೆ ಮೇಯರ್ ಸ್ಥಾನ ಸಿಗಬೇಕೆಂಬ ಕೂಗು ತಿರುವನ್ನು ಪಡಕೊಳ್ಳತೊಡಗಿದ್ದು, ಇದೀಗ ಈ ಕೂಗನ್ನೇ ಸಮುದಾಯ ಸಂದೇಹದಿಂದ ನೋಡತೊಡಗಿದೆ. ಮೇಯರ್ ಸ್ಥಾನದ ಚರ್ಚೆಗೆ ಆರಂಭದಲ್ಲಿ ಮುಸ್ಲಿಂ ಸಮುದಾಯದಿಂದ ಉತ್ತಮ ಸ್ಪಂದನೆ ಲಭ್ಯವಾಗಿತ್ತಾದರೂ ಇದೀಗ ಈ ಕೂಗಿನ ಹಿಂದೆ ರಾಜಕೀಯ ವಾಸನೆಯನ್ನು ಜನರು ಕಾಣತೊಡಗಿದ್ದಾರೆ. ಮಹಾ ನಗರ ಪಾಲಿಕೆಯ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಾಲ್ಕು ಮೇಯರ್ ಗಳು ನೇಮಕವಾಗಿದ್ದು, ಆಗ  ಇಲ್ಲದ ಮುಸ್ಲಿಂ ಮೇಯರ್ ಕೂಗು ವಿಧಾನ ಸಭಾ ಚುನಾವಣೆಯ ಈ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೇ ಕೇಳಿ ಬಂದಿರುವುದೇಕೆ ಎಂದು ಅನುಮಾನಿಸತೊಡಗಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರ ಜೊತೆ ವೈಯಕ್ತಿಕ ದ್ವೇಷವನ್ನು ಹೊಂದಿರುವವರು  ಮತ್ತು ಅವರನ್ನು ರಾಜಕೀಯವಾಗಿ ಸೋಲಿಸಲು ಪ್ರಯತ್ನಿಸುತ್ತಿರುವವರು ಉದ್ದೇಶ ಪೂರ್ವಕವಾಗಿಯೇ ಮುಸ್ಲಿಂ ಮೇಯರ್ ಎಂಬ ಗುಮ್ಮನನ್ನು ಹೊರಬಿಟ್ಟಿರಬಹುದೆಂಬ ಮಾತು ದಿನೇ ದಿನೇ ಜನರ ನಡುವೆ ವ್ಯಾಪಕವಾಗಿ ಕೇಳಿಬರುತ್ತಿದೆ. ಯು. ಟಿ. ಕಾದರ್, ರಮಾನಾಥ ರೈ, ಮೊಯಿದಿನ್ ಬಾವಾರ ವರ್ಚಸ್ಸನ್ನು ಹಾಳು ಮಾಡುವುದಕ್ಕೆ ಮಾಡಲಾದ ಸಂಚಿನ ಭಾಗ ಈ ಮುಸ್ಲಿಂ ಮೇಯರ್ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. 

ಈ ಜಿಲ್ಲೆಯಿಂದ ಆಯ್ಕೆಯಾದ ಏಳು ಕಾಂಗ್ರೆಸ್ ಶಾಸಕರಲ್ಲಿ ಇಬ್ಬರರು ಮುಸ್ಲಿಮರು. ಅದರಲ್ಲೂ ಓರ್ವರು ಕ್ಯಾಬಿನೆಟ್ ದರ್ಜೆಯ ಸಚಿವರು. ಅಲ್ಲದೆ ನಗರಸಭೆ, ಪಂಚಾಯತ್ ಸಹಿತ ವಿವಿಧ ಸಂಸ್ಥೆಗಳಲ್ಲಿ ಮುಸ್ಲಿಂ ಜನಪ್ರತಿನಿಧಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ. ಅಲ್ಲದೆ ಈ ಬಾರಿ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಉಪ ಮೇಯರ್ ಸ್ಥಾನ ಮುಸ್ಲಿಮರಿಗೇ ಸಿಕ್ಕಿದೆ. ಹೀಗಿದ್ದೂ, ಮುಸ್ಲಿಮರಿಗೆ ಕಾಂಗ್ರೆಸ್ ಏನನ್ನೂ ಕೊಟ್ಟಿಲ್ಲ ಎಂಬ ರೀತಿಯ ವಾದ ಎಷ್ಟು ಸರಿ ಎಂಬ ಪ್ರಶ್ನೆಯನ್ನು ಮುಸ್ಲಿಂ ಸಮುದಾಯದ ಜನಸಾಮಾನ್ಯರು ಆಕ್ರೋಶದಿಂದಲೇ ಕೇಳುತ್ತಿದ್ದಾರೆ. ಯು. ಟಿ. ಕಾದರ್, ರೈ, ಬಾವಾರನ್ನು ಎದುರು ಹಾಕಿಕೊಂಡ ಸಣ್ಣ ಗುಂಪು ಜಿಲ್ಲೆಯಲ್ಲಿದ್ದು, ಆ ಗುಂಪು ಅವರನ್ನು ಆಗಾಗ ದೂಷಿಸುತ್ತಲೇ ಬಂದಿದೆ. ಅದೇ ಗುಂಪಿನ ಸೃಷ್ಟಿ ಈ ಮೇಯರ್ ವಿವಾದ  ಎಂದು ಅನೇಕರು ಹೇಳುತ್ತಿದ್ದಾರೆ. ಅಲ್ಲದೆ, ತಮ್ಮ ರಾಜಕೀಯ ಸಾಧನೆಗಾಗಿ ಈ ಗುಂಪು ಸಮುದಾಯದ ಹೆಸರು ಬಳಸುವುದು  ತಪ್ಪು ಎಂದು ಅಭಿಪ್ರಾಯಪಡುತ್ತಾರೆ. 

“ಮುಸ್ಲಿಂ ಮೇಯರ್ ಕೂಗಿನ ಹಿಂದೆ ಇರುವುದು ಸಮುದಾಯ ಕಾಳಜಿಯಲ್ಲ ಬದಲಾಗಿ ವೈಯಕ್ತಿಕ ಹಿತಾಸಕ್ತಿ ಮಾತ್ರ. ಮುಂಬರುವ ವಿಧಾನ ಸಭಾ ಚುನಾವಣೆಯಳ್ಳಿ  ಮುಸ್ಲಿಂ ಮತವನ್ನು ವಿಭಜಿಸಿ, ಬಿಜೆಪಿಯನ್ನು ಗೆಲ್ಲಿಸುವುದು ಅವರ ಉದ್ದೇಶ…” ಎಂದು ಗಂಭೀರ ಆರೋಪ ಹೊರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ಮುಸ್ಲಿಮರಿಗೆ ಮೇಯರೂ ಇಲ್ಲ, ಕಾರ್ಪರೇಟ್ ಸ್ಥಾನವೂ ಇಲ್ಲ. ಅದಕ್ಕಿಂತ ಈಗಿನ ಉಪ ಮೇಯರ್ ಸ್ಥಾನವನ್ನು ಬೆಂಬಲಿಸಿ ಮುಂದಿನ ಬಾರಿ ಮೇಯರ್ ಸ್ಥಾನಕ್ಕೆ ಒತ್ತಾಯಿಸುವುದು ಉತ್ತಮ ಎಂಬ ಅಭಿಪ್ರಾಯವೇ ಹೆಚ್ಚಿನವರದ್ದು. 
ಅಂದಹಾಗೆ, ಮುಸ್ಲಿಮರಿಗೆ ಈ ಬಾರಿ ಮೇಯರ್ ಸ್ಥಾನ ಕೊಡುತ್ತಿದ್ದರೆ  ಬಿಜೆಪಿಯು ಅದನ್ನೇ ಹಿಂದೂ ಮತ ಧ್ರುವೀಕರಣಕ್ಕೆ ಬಳಸುತ್ತಿತ್ತು. “ಕಾಂಗ್ರೆಸ್ ನಿಂದ ಮುಸ್ಲಿಂ ಓಲೈಕೆ, ಹಿಂದೂಗಳಿಗೆ ಅನ್ಯಾಯ..”  ಎಂದೆಲ್ಲ ಪ್ರಚಾರ ಮಾಡುತ್ತಿತ್ತು ಎಂದು ಸಮುದಾಯದ ಹಿರಿಯರು ಅಭಿಪ್ರಾಯಪಡುತ್ತಾರೆ. 
ಮುಸ್ಲಿಂ ಮೇಯರ್ ಕೂಗಿನ  ಬಗ್ಗೆ ಆರಂಭದಲ್ಲಿ ಒಂದಿಷ್ಟು ಉತ್ಸಾಹ ತೋರಿದ ಸಮುದಾಯದ ನಾಯಕರು ನಂತರ, ಈ ವಾದದ ಹಿಂದೆ ಸಮುದಾಯ ಕಾಳಜಿಗಿಂತ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಯ ವಾಸನೆಯನ್ನು ಮನಗಂಡು ತಮ್ಮ ನಿಲುವಿನಿಂದ ಹಿಂಜರಿಯತೊಡಗಿದ್ದಾರೆ. ಜನಸಾಮಾನ್ಯರಂತೂ ಮುಂದಿನ ಚುನಾವಣೆಯಲ್ಲಿ ಫ್ಯಾಸಿಸ್ಟ್ ವಿಚಾರ ಧಾರೆಯನ್ನು ಸೋಲಿಸುವುದಕ್ಕೆ ನಮ್ಮ ಆದ್ಯತೆಯೇ ಹೊರತು ಮೇಯರ್ ಸ್ಥಾನ ಗಿಟ್ಟಿಸುವುದಕ್ಕಲ್ಲ ಎಂದು ಬಲವಾಗಿ ವಾದಿಸುತ್ತಿದ್ದಾರೆ. ಅಲ್ಲದೆ ಚುನಾವಣೆಯ ಈ ಹೊತ್ತಿನಲ್ಲಿ ಸಮುದಾಯ ವಿಭಜನೆಗೊಳ್ಳುವುದು ಬಿಜೆಪಿಗೆ ಮಾತ್ರ ಲಾಭದಾಯಕವಾಗಿದ್ದು, ಸಮುದಾಯದ ನಾಯಕರೆನಿಸಿದವರು  ಯಾರ ಹಿತವನ್ನು ರಕ್ಷಿಸಲು ಬಯಸಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.