ಡಿಸೆಂಬರ್‌ನಲ್ಲಿ ಭಾರತಕ್ಕೆ ಕೊರೋನಾ ವಾಕ್ಸಿನ್| ಸರಕಾರದ ತುರ್ತು ಅಂಗೀಕಾರ ಸಿಗದಿದ್ದಲ್ಲಿ ಜನವರಿ ತನಕ ಕಾಯಬೇಕಾದೀತು: ಸೆರಂ ಮುಖ್ಯಸ್ಥ

0
125

ಸನ್ಮಾರ್ಗ ವಾರ್ತೆ

ನವದೆಹಲಿ: ಡಿಸೆಂಬರ್ ತಿಂಗಳಲ್ಲಿ ಕೊರೋನಾ ವಾಕ್ಸಿನ್ ಭಾರತದಲ್ಲೂ ಲಭ್ಯವಾಗಲಿದೆ ಎಂದು ಸೆರಂ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಅದರ್ ಪೂನಾವಾಲ ತಿಳಿಸಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಪ್ರಮುಖ ಔಷಧಿ ತಯಾರಿಕಾ ಕಂಪೆನಿಯಾಗಿರುವ ಅಸ್ಟ್ರಾಜೆನೆಕಾ ತಯಾರಿಸುವ ಕೋವಿಡ್ ವ್ಯಾಕ್ಸಿನ್‌ಗೆ ಸರಕಾರ ತುರ್ತು ಅಂಗೀಕಾರ ನೀಡಿದಲ್ಲಿ ದೇಶದಲ್ಲಿ ಡಿಸೆಂಬರ್ ತಿಂಗಳಿನಿಂದ ಬಳಕೆಗೆ ಸಜ್ಜಾಗಲಿದೆ ಎಂದು ಅದರ್ ಪೂನಾವಾಲ ಸ್ಪಷ್ಟಪಡಿಸಿದರು. ಸರಕಾರದ ಅಂಗೀಕಾರ ಶೀಘ್ರವೇ ದೊರಕದಿದ್ದರೆ ಜನವರಿ ತನಕ ಕಾಯಬೇಕಾಗುತ್ತದೆ ಎಂದೂ ಅವರು ತಿಳಿಸಿದರು.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಅಸ್ಟ್ರಾಜೆನೆಕಾ ಜಂಟಿಯಾಗಿ ಸೇರಿಕೊಂಡು ಅಭಿವೃದ್ಧಿಪಡಿಸುವ ಕೋವಿಡ್ ವಾಕ್ಸಿನ್ ಭಾರತದಲ್ಲಿ ನಿರ್ಮಿಸಲು ಪುಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆರಂ ಇನ್ಸ್ಟಿಟ್ಯೂಟ್ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ 10 ಕೋಟಿ ಡೋಸ್ ತಯಾರಿಸಲಾಗುತ್ತದೆ. 2021ರ ಆರಂಭದಲ್ಲಿ ಅಥವಾ ವರ್ಷಾರ್ಧದಲ್ಲಿ ದೇಶವಿಡೀ ಕೋವಿಡ್ ವಾಕ್ಸಿನ್ ವಿತರಿಸಬೇಕೆನ್ನುವ ಗುರಿಯನ್ನು ಸೇರಂ ಹೊಂದಿದೆ.

ವಾಕ್ಸಿನ್‌ಗೆ ತುರ್ತು ಲೈಸನ್ ಲಭಿಸದೇ ಇದ್ದ ಸನ್ನಿವೇಶ ಎದುರಾದರೆ ಅಥವಾ ಡಿಸೆಂಬರ್ ತನಕ ಪ್ರಯೋಗಗಳು ಮುಂದುವರಿದಲ್ಲಿ ವಾಕ್ಸಿನ್ ಬಳಕೆಗೆ ಸಿದ್ಧವಾಗಲು 2021 ಜನವರಿ ತನಕ ಕಾಯಬೇಕಾದೀತು. ಬ್ರಿಟನ್‌ನಲ್ಲಿರುವ ವಾಕ್ಸಿನ್ ಪ್ರಯೋಗ ಇದರೊಡನೆಯೇ ಪೂರ್ತಿಯಾಗಬೇಕಿದೆಯೆಂದೂ ಅದರ್ ಪೂನವಾಲ ತಿಳಿಸಿದರು.