ದೂರದರ್ಶಿತ್ವ ಇಲ್ಲದ ವಿರಾಶಾದಾಯಕ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯ

0
349

ಬೆಂಗಳೂರು : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ 2018-19ನೇ ಸಾಲಿನ ಮುಂಗಡ ಪತ್ರ ದೂರದರ್ಶಿತ್ವ, ದೃಷ್ಟಿಕೋನ ಇಲ್ಲದ, ಜನಪರವಲ್ಲದ ಕೇವಲ ಭರವಸೆಗಳ ಕಣ್ಣುಕಟ್ಟಿನ ಮುಂಗಡ ಪತ್ರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮುಂಗಡ ಪತ್ರ ತಯಾರಿಸಿ ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಆ ಯೋಜನೆಗಳ ಅನುಷ್ಠಾಕ್ಕೆ ಪೂರಕವಾಗಿ ಅನುದಾನ ನಿಗಧಿ ಮಾಡಿಲ್ಲ ಎಂದರು.

ಸೂರು ಇಲ್ಲದ ಎಲ್ಲರಿಗೂ 2022ರ ವೇಳೆಗೆ ವಸತಿ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ತನ್ನದೇ ಮಹತ್ವಾಕಾಂಕ್ಷೆಯ ವಸತಿ ಯೋಜನೆಗೆ ಮುಂಗಡ ಪತ್ರದಲ್ಲಿ ಹಣಕಾಸು ನಿಗಧಿ ಮಾಡಿಲ್ಲ.

ಬೆಂಗಳೂರು ಸಬ್ ಅರ್ಬನ್ ರೈಲು ವ್ಯವಸ್ಥೆ ಬಗ್ಗೆ ಹೇಳಿದ್ದಾರೆ. ನಾನು ಅದನ್ನು ಸ್ವಾಗತ ಮಾಡುತ್ತೇನೆ. ಮೆಟ್ರೋ ರೈಲು ಕಾಮಗಾಗಿ ಈಗಾಗಲೇ ಭರದಿಂದ ಸಾಗಿದೆ. ಅದರ ಜೊತೆಗೆ ಸಬ್ ಅರ್ಬನ್ ರೈಲು ವ್ಯವಸ್ಥೆ ಕುರಿತು ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈಕ್ವಿಟಿ ಕುರಿತು ತೀರ್ಮಾನ ಮಾಡಿದ್ದೇವೆ. ಕೇಂದ್ರವೂ ಈಕ್ವಿಟಿ ಘೋಷಣೆ ಮಾಡಿರುವುದು ಒಳ್ಳೆಯದು.

ಭರವಸೆಗಳು ಹುಸಿಯಾಗಿವೆ :
2019ರಲ್ಲಿ ಲೋಕಸಭೆಗೆ ಚುನಾವಣೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಕುರಿತು ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದರು. ಅದನ್ನು ಗಮನದಲ್ಲಿ ಇಟ್ಟುಕೊಂಡೇ ಜೇಟ್ಲಿ ಅವರು ಮುಂಗಡ ಪತ್ರ ಸಿದ್ಧಪಡಿಸಿದ್ದಾರೆ.

ಕೃಷಿ ವಲಯದ ಬೆಳವಣಿಗೆಗಾಗಿ ಸ್ವಾಮಿನಾಥನ್ ವರದಿ ಜಾರಿಗೆ ತರುವುದಾಗಿ ಲೋಕಸಭೆ ಚುನವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿತ್ತು. ಈಗ ಅದನ್ನು ಘೋಷಣೆ ಮಾಡಿದ್ದಾರೆ. ಆದರೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಉತ್ಪಾದನೆ ವೆಚ್ಚ ಗಮನಿಸಿಲ್ಲ.

ತೊಗರಿ ಬೇಳೆಯನ್ನು ಕ್ವಿಂಟಾಲ್‍ಗೆ 5,400 ರೂ. ಕೊಟ್ಟು ಖರೀದಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ರೈತರು ಆರೂವರೆ ಸಾವಿರ ರೂ. ಕೇಳುತ್ತಿದ್ದಾರೆ. ರಾಜ್ಯ ಸರ್ಕಾರ 5,400 ರೂ. ಜತೆಗೆ 600 ರೂ. ಕೊಟ್ಟಿದೆ. ಅನೇಕ ಬೆಳೆಗಳಿಗೆ ಇದೇ ರೀತಿ ಮಾಡಿದ್ದಾರೆ. ಒಂದೂವರೆ ಪಟ್ಟು ಹೆಚ್ಚು ಕೊಡುವ ಭರವಸೆ ಹುಸಿಯಾಗಿದೆ.

ಇನ್ನು ರೈತರ ಸಾಲ ಮನ್ನಾ ಕುರಿತು ಇರಿಸಿಕೊಂಡಿದ್ದ ನಿರೀಕ್ಷೆಯೂ ಹುಸಿಯಾಗಿದೆ. ಬಜೆಟ್‍ಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬಹುದು ಎಂಬ ಆಶಯ ಇತ್ತು. ಕೃಷಿಗೆ ನಮ್ಮ ಆಧ್ಯತೆ ಎಂದು ಕೇಂದ್ರವೇ ಹೇಳಿತ್ತು.

ಆದರೆ ರಾಜ್ಯಗಳತ್ತ ಬೆರಳು ತೋರಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್‍ಗಳ ಮೂಲಕ ರೈತರು ಪಡೆದಿರುವ ಸಾಲ ಮನ್ನಾ ಮಾಡುವ ಗೋಜಿಗೆ ಹೋಗಿಲ್ಲ. ನುಡಿದಂತೆ ಕೃಷಿಗೂ ಆದ್ಯತೆ ಕೊಟ್ಟಿಲ್ಲ.

ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಅವರ ಹೇಳಿಕೆ ಪ್ರಕಾರ ನಾಲ್ಕು ವರ್ಷದಲ್ಲಿ ಎಂಟು ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಆ ಕುರಿತಾಗಿಯೂ ಮುಂಗಡ ಪತ್ರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ.

ರಾಜ್ಯದ ಜನರಿಗೆ ನಿರಾಸೆಯಾಗಿದೆ :
ಕೇಂದ್ರ ಘೋಷಣೆ ಪ್ರಕಾರ ರಾಷ್ಟ್ರೀಯ ಆರೋಗ್ಯ ರಕ್ಷಣಾ ವಿಮೆ ಯೋಜನೆಯೂ ಜಾರಿಗೆ ಬಂದಿಲ್ಲ. ಒಂದು ಕುಟುಂಬಕ್ಕೆ ಒಂದು ಲಕ್ಷ ರೂ. ನೀಡಲಾಗುವುದು ಎಂದು ಹೇಳಿದ್ದರು. ಈಗ ಐದು ಲಕ್ಷ ಎಂದಿದ್ದಾರೆ. ಇದೂ ಕನ್ನಡಿಯೊಳಗಿನ ಗಂಟು. ಏಕೆಂದರೆ ಕಳೆದ ವರ್ಷದ ಯೋಜನೆಯೇ ಜಾರಿಗೆ ಬಂದಿಲ್ಲ. ಈಗ ಘೋಷಣೆ ಮಾಡಿರುವುದಕ್ಕೂ ಅನುದಾನ ನಿಗಧಿ ಮಾಡಿಲ್ಲ.

ಆದ್ಯತಾ ವಲಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನವಿಲ್ಲ. ಹೀಗಾಗಿ ಇದು ಬೆಳವಣಿಗೆಗೆ ಪೂರಕವಲ್ಲದ ಬಜೆಟ್ ಅಲ್ಲ. ಕೃಷಿ, ಶಿಕ್ಷಣ, ವಸತಿ ಹಾಗೂ ಆರೋಗ್ಯ ವಲಯಕ್ಕೆ ಅನುದಾನ ನೀಡದಿರುವುದು ಸರಿಯಲ್ಲ. ಬಜೆಟ್‍ಲ್ಲಿ ರಾಜ್ಯಕ್ಕೆ ವಿಶೇಷವಾದ ಕೊಡುಗೆ ಏನಿಲ್ಲ. ರಾಜ್ಯದ ಜನರಿಗೆ ಇದರಿಂದ ಭಾರಿ ನಿರಾಸೆಯಾಗಿದೆ.

ಬಂಡವಾಳಶಾಹಿಗಳ ಪರ :
ಕಚ್ಛಾ ತೈಲ ದರ ಬ್ಯಾರಲ್‍ಗೆ 110 ಡಾಲರ್ ಇದ್ದದ್ದು ಈಗ 43 ಡಾಲರ್‍ಗೆ ಇಳಿದಿದೆ. ಆದ್ದರಿಂದ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕಿತ್ತು. ಮೂರು ತಿಂಗಳಲ್ಲಿ ದರ ಹತ್ತು ರೂ. ಹೆಚ್ಚಾಗಿದೆ. ಉಳಿತಾಯವಾದ ಸಬ್ಸಿಡಿಯನ್ನು ಗ್ರಾಹಕರಿಗೆ ಸ್ವಲ್ಪವಾದರೂ ವರ್ಗಾವಣೆ ಮಾಡಬಹುದಾಗಿತ್ತು.Á ಕೆಲಸವೂ ಆಗಿಲ್ಲ.

ಕೆಲ ತೆರಿಗೆಗಳನ್ನು ಏರಿಕೆ ಮಾಡಿ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ಎಂಬುದು ಇದರಿಂದ ಮತ್ತೆ ಸಾಬೀತಾಗಿದೆ. ನೋಟು ಅಮಾನ್ಯದ ನಿರ್ಧಾರವೂ ಬಂಡವಾಳಶಾಹಿಗಳ ಪರವಾಗಿಯೇ ಇತ್ತು ಎಂಬುದನ್ನು ಗಮನಿಸಬೇಕು.

ಮೂರು ಲೋಕಸಭೆ ಕ್ಷೇತ್ರಕ್ಕೆ ಒಂದರಂತೆ ಮೆಡಿಕಲ್ ಕಾಲೇಜು ತೆರೆಯುವುದಾಗಿ ಹೇಳಿದ್ದಾರೆ. ಆದರೆ, ನಾವು ಜಿಲ್ಲೆಗೊಂದರಂತೆ ಕಾಲೇಜು ಮಾಡಲು ಮುಂದಾಗಿದ್ದೇವೆ. ಈಗಾಗಲೇ 16 ಕಾಲೇಜುಗಳು ಕಾರ್ಯಾರಂಭ ಮಾಡಿವೆ. ಐದು ವರ್ಷದಲ್ಲಿ ಬಿಜೆಪಿಯವರು ಒಂದೇ ಒಂದು ಕಾಲೇಜು ತೆರೆಯಲಿಲ್ಲ.

ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಅವರು ಮೆಡಿಕಲ್ ಕಾಲೇಜುಗಳ ಬಗ್ಗೆ ಗಮನ ಹರಿಸಲಿಲ್ಲ. ಬಿಜೆಪಿಯವರು ಕೇವಲ ಪುಂಗಿ ಗಿರಾಕಿಗಳು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವುದು ಗ್ಯಾರಂಟಿ ಎಂಬುದು ಮನವರಿಕೆ ಆಗಿರುವುದರಿಂದಲೇ ಕನಾಟಕಕ್ಕೆ ಬಜೆಟ್‍ನಲ್ಲಿ ಏನೂ ಕೊಟ್ಟಿಲ್ಲ. ಜನಪರ, ಬೆಳವಣಿಗೆಗೆ ಪೂರಕ, ದೂರದರ್ಶಿತ್ವ ಇಲ್ಲದ ಬಜೆಟ್.

ಅಚ್ಛೇದಿನ್ ಬಂದಿಲ್ಲ, ಬರುವುದೂ ಇಲ್ಲ :
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಜ್ಯ ಸರ್ಕಾರ ಆನ್‍ಲೈನ್ ವ್ಯವಸ್ಥೆ ಜಾರಿಗೆ ತಂದಿದೆ. ಅದನ್ನು ಕೇಂದ್ರವೂ ಜಾರಿಗೆ ತರುವುದಾಗಿ ಹೇಳಿ ಎರಡು ಸಾವಿರ ಕೋಟಿ ರೂ. ಘೋಷಣೆ ಮಾಡಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಇನ್ನು ಸಮಾಜ ಕಲ್ಯಾಣ, ಕೃಷಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಅನುದಾನವೂ ಭಾರಿ ಪ್ರಮಾಣದಲ್ಲೇನೂ ಹೆಚ್ಚಾಗಿಲ್ಲ.

ವಿತ್ತೀಯ ಕೊರತೆಯನ್ನು ಶೇ. 3.3ಕ್ಕೆ ಇಳಿಸುವುದಾಗಿ ಹೇಳಲಾಗಿದೆ. ಆದರೆ, ಪರಿಷ್ಕøತ ಅಂದಾಜು ವೆಚ್ಚದಲ್ಲಿ ಏನೂ ಆಗಿಲ್ಲ. ಇದು ಅಸಾಧ್ಯ. ಕೇಂದ್ರ ಸರ್ಕಾರದ ವಿತ್ತೀಯ ನಿರ್ವಹಣೆ ಸಹ ಉತ್ತಮವಾಗಿಲ್ಲ.

ಅಚ್ಛೇದಿನ್ ಇದುವರೆಗೆ ಬಂದಿಲ್ಲ. ಈ ಬಜೆಟ್‍ನಲ್ಲೂ ಬಂದಿಲ್ಲ. ಮುಂದೆ ಬರುವುದೂ ಇಲ್ಲ ಎಂದು ಮುಖ್ಯಮಂತ್ರಿಯವರು ಟೀಕಿಸಿದರು.

ಚುನಾವಣೆಗೆ ದಿಕ್ಸೂಚಿ :
ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಬಿಜೆಪಿ ತನ್ನ ಆಡಳಿತ ಇರುವ ರಾಜ್ಯದಲ್ಲೇ ಮುಗ್ಗರಿಸಿದೆ. ಇದು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here