ದೇಶದ ಸಂವಿಧಾನ ಬದಲಾಯಿಸುವ ಮುನ್ನ ಪಕ್ಷದ ಸಂವಿಧಾನ ಬದಲಾಯಿಸಲಿ

0
553

ಐ. ಎಸ್ ಬೆಂಗಳೂರು

ದೇಶದ ಸಂವಿಧಾನ ಬದಲಾಯಿಸುವ ಮುಂಚೆ ಹೆಗಡೆಯವರಿಗೆ ಧೈರ್ಯ ಹಾಗೂ ತಮ್ಮ ಹೇಳಿಕೆ ಬಗ್ಗೆ ಪ್ರಾಮಾಣಿಕತೆಯಿದ್ದರೆ ತಾವು ಕಳೆದ ೩ ದಶಕಗಳಿಂದ ಪ್ರತಿನಿಧಿಸುತ್ತಿರುವ ಪಕ್ಷದ ಸಂವಿಧಾನವನ್ನು ಮೊದಲು ಬದಲಾಯಿಸಬೇಕು..

ಕನಿಷ್ಟ ಪಕ್ಷ ಬದಲಾವಣೆಯಾಗಬೇಕೆಂದು ತಮ್ಮ ರಾಷ್ಟ್ರೀಯ ನಾಯಕತ್ವಕ್ಕೆ ಸವಾಲೆಸೆಯಬೇಕು.

ಇಂದು ಪಕ್ಷಗಳಿಗೆ, ಅವುಗಳ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ, ಪಕ್ಷದ ಸಂವಿಧಾನವು ಪ್ರಾಯೋಗಿಕವಾಗಿ ಎಷ್ಟು‌ ಪ್ರಸ್ತುತವಾಗಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯೇನಲ್ಲ.  ಪಕ್ಷಗಳ ಕಾರ್ಯವಿಧಾನ, ನಾಯಕರ ಭಾಷಣಗಳು, ಕಾರ್ಯಕರ್ತರ ನಡೆಗಳೇ ಪಕ್ಷದ‌ ಸಂವಿಧಾನ ಹಾಗೂ ಅದರ ಪ್ರಸುತತೆಯ ನಡುವೆಯಿರುವ ವೈರುಧ್ಯಗಳನ್ನು ಎತ್ತಿ ತೋರಿಸುತ್ತವೆ.

ಅದಾಗ್ಯೂ, ಸೈದ್ಧಾಂತಿಕ ನೆಲೆಯಲ್ಲಿ ಪಕ್ಷದ  ಸಂವಿಧಾನಕ್ಕೆ ಒಂದು ಮಹತ್ವವಿದೆ. ಅದು ಎಷ್ಟರ ಮಟ್ಟಿಗೆ ಪಾಲನೆಯಗುತ್ತಿದೆ ಎಂಬುವುದು ಬೇರೆ ಮಾತು.

ಬಿಜೆಪಿ ಪಕ್ಷದ ಸಂವಿಧಾನದ ಪರಿಚ್ಛೇದ 2 ರಲ್ಲಿ ವಿವರಿಸಲಾಗಿರುವಂತೆ, ಪಕ್ಷವು ಸಮಾಜವಾದ, ಜಾತ್ಯಾತೀತವಾದ ಹಾಗೂ ದೇಶದ ಸಂವಿಧಾನಕ್ಕೆ ಬದ್ಧವಾಗಿರುವುದಾಗಿ ಹೇಳಲಾಗಿದೆ. ಮುಂದುವರಿದು ಪರಿಚ್ಛೇದ 3ರಲ್ಲಿ ಗಾಂಧಿಜೀಯವರ ಕಾರ್ಯನೀತಿಯನ್ನು ಪಾಲಿಸುವುದಗಿಯೂ ಹೇಳಿದೆ.

ಹಾಗಾದರೆ ಹೆಗಡೆಯವರು ಮೊತ್ತಮೊದಲು ಮಾಡಬೇಕಾದ ಕೆಲಸ ತಮ್ಮ ಪಕ್ಷದ ಸಂವಿಧಾನ ಬದಲಾಯಿಸುವುದು. ಆ ಬಗ್ಗೆ ಪಕ್ಷದ ಸಭೆಯಲ್ಲಿ ನಾಯಕರಿಗೆ ಜೋರಾಗಿ ಅವಾಜ್ ಹಾಕಿ ಅವರನ್ನು ಪ್ರಶ್ನಿಸುವುದು. ಅದು ಬಿಟ್ಟು, ಚುನಾವಣೆ ಹತ್ತಿರ ಬರುವಾಗ ಯಡಿಯೂರಪ್ಪ ವರ್ಚಸ್ಸನ್ನು ಕಡಿಮೆ ಮಾಡಲು, ಅಥವಾ ಪುಕ್ಸಟ್ಟೆ ಪ್ರಚಾರ ಗಿಟ್ಟಿಸಲೋ ಎಲ್ಲೆಲ್ಲೋ ದೇಶದ ಸಂವಿಧಾನದ ಬಗ್ಗೆ, ಗಾಂಧಿಜಿ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ ತಿರುಗಾಡುವುದು 5 ಬಾರಿ ಸಂಸದರಾಗಿ ಆಯ್ಕೆಯಾಗಿರುವ ವ್ಯಕ್ತಿಗೆ ಶೋಭೆ ತರುವಂತಹದ್ದಲ್ಲ.