ನರ್ಸ್ ಜಯಲಕ್ಷ್ಮಿ ಸೇರ್ಪಡೆಯಿಂದ ರಂಗೇರಿದ ನೌಹೇರಾ ಶೇಖ್ ರ ಎಂವಿಪಿ 

0
507

: ಸಲೀಮ್ ಬೊಳಂಗಡಿ
ನೌಹೇರಾ ಶೇಖ್ ನೇತೃತ್ವದ ಆಲ್ ಇಂಡಿಯಾ ಮಹಿಳಾ ಎಂಪವರ್ ಪಾರ್ಟಿಗೆ ನರ್ಸ್ ಜಯಲಕ್ಷ್ಮಿ ಸೇರ್ಪಡೆಯಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವ ರೇಣುಕಾಚಾರ್ಯರನ್ನು ತೀವ್ರವಾಗಿ ಕಾಡಿ ಸರಕಾರಕ್ಕೆ ಕಂಟಕವಾಗಿದ್ದ ನರ್ಸ್ ಜಯಲಕ್ಷ್ಮಿ ಈಗ ನೌಹೇರಾ ಶೇಖ್ ಎಂಬ ಚಿನ್ನದ ಉದ್ಯಮಿಯ ಸಾಮಾಜಿಕ ಬದ್ದತೆ ಮತ್ತು ಕಾಳಜಿಯನ್ನು ಮೆಚ್ಚಿ ಪಕ್ಷ ಸೇರಿದ್ದಾರಂತೆ. ನೌಹೇರಾ ಶೇಖ್ ರಾಜಕೀಯ ಪ್ರವೇಶವೇ ಒಂದು ಗೊಂದಲದ ಗೂಡು. ಯಾರನ್ನೋ ತೃಪ್ತಿ ಪಡಿಸಲು ಈ ಪಕ್ಷ ಸ್ಥಾಪಿಸಿದ್ದಾರೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ ತಾನೇ? ಕರ್ನಾಟಕ ಸಮಸ್ಯೆಯ ಬಗ್ಗೆ ಏನೂ ಅರಿಯದ ಇವರಿಗೆ  ಚುನಾವಣೆ ಹತ್ತಿರವಾಗುತ್ತಿದ್ದಂತೆ ಕನ್ನಡಿಗರ ಮೇಲೆ ಅನುಕಂಪ ಮೂಡಿದೆ. ಮುಸ್ಲಿಮ್ ಮಹಿಳೆಯರ ಬಗ್ಗೆ ಅನುಕಂಪ ಉಕ್ಕೇರುತ್ತಿದೆ. ಅವರ ಬಡವರ ಪರ ಕಾಳಜಿಯೇ ಹಾಸ್ಯಾಸ್ಪದ.  ಸೆಲೆಬ್ರಿಟಿಗಳನ್ನು  ಪಕ್ಷದ ಉದ್ಘಾಟನೆಗೆ ತಂದು ಕೂರಿಸಿ ಮೆರೆದರು.

ಟೆನಿಸ್ ತಾರೆ ಸಾನಿಯಾ ಮಿರ್ಜಾ, ಫಾರ ಖಾನ್ ಮತ್ತು ಇತರರು ಇಂಡಿಯಾ ಮಹಿಳಾ ಸಬಲೀಕರಣ ಪಾರ್ಟಿಯ (ಎಂಇಪಿ) ಉದ್ಘಾಟನಾ ಸಮಾರಂಭ ದಲ್ಲಿ ಭಾಗವಹಿಸಿದ ಚಿತ್ರ
ನವೆಂಬರ್ 12, 2017 ರ ಭಾನುವಾರದಂದು ನವದೆಹಲಿಯಲ್ಲಿ ನಡೆದ ಆಲ್ ಇಂಡಿಯಾ ಮಹಿಳಾ ಸಬಲೀಕರಣ ಪಾರ್ಟಿಯ ಉದ್ಘಾಟನಾ ಕಾರ್ಯಕ್ರಮ ದಲ್ಲಿ(ಎಮ್ಪಿಪಿ) ಬಾಬಿ ಡಿಯೋಲ್, ಅಫ್ತಾಬ್ ಶಿವದಾನಿ ಮತ್ತಿತರರು.

ಈಗ ನರ್ಸ್ ಜಯಲಕ್ಷ್ಮಿಯ ಸೇರ್ಪಡೆ.  ಇವರು ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರಂತೆ. ಸದ್ಯದಲ್ಲಿ ಕ್ಷೇತ್ರದ ಹೆಸರೂ ಪ್ರಕಟಿಸುತ್ತಾರಂತೆ. ರಾಜ್ಯದಲ್ಲಿ ವಿದ್ಯುತ್, ನೀರಿನ ಸಮಸ್ಯೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಜೀವ ಇರುವ ತನಕ ಹೋರಾಡುತ್ತಾರಂತೆ. ಯೋಜನೆಯೇನೋ ಪರವಾಗಿಲ್ಲ. ಆದರೆ ಇವರ ಗತ ಚರಿತ್ರೆಯ ಬಗ್ಗೆ ಗಮನಿಸಿದರೆ ಇಂತಹವರು ಸಮಸ್ಯೆ ಸೃಷ್ಟಿಸಿದ್ದಲ್ಲದೆ ಪರಿಹರಿಸಿದ ಉದಾಹರಣೆ ಕಂಡು ಬರುತ್ತಿಲ್ಲ. ಆದರೆ ನೌಹೇರಾ ಮತ್ತು ನರ್ಸ್ ಜಯಮ್ಮರ ರಂಗಿನ ರಾಜಕಾರಣ ರಂಗೇರಲಿದೆ. ಕೆಲ ಮತಗಳನ್ನು ತಮ್ಮ ಬುಟ್ಟಿಗಿಳಿಸಿ ಮತ ವಿಭಜನೆಯಿಂದ ಯಾರಿಗೋ ಲಾಭ ಮಾಡುತ್ತಾರೆಯೇ ಹೊರತು ಬೇರೇನೂ ಇವರಿಂದ ಸಾಧಿಸಲಾಗದು. ತ್ರಿವಳಿ ತಲಾಕ್ ಬಗೆಗಿನ ಮೋದಿ ಸರಕಾರದ ನಿಲುವನ್ನು ಸ್ವಾಗತಿಸಿದ ನೌಹೇರಾ ಶೇಖ್ ನಿಗೂಢತೆಯ ಬಗ್ಗೆ ಕರ್ನಾಟಕದವರು ಅರ್ಥ ಮಾಡಿಕೊಳ್ಳದಷ್ಟು ಮುಗ್ದರೇನಲ್ಲ. ಈ ಪಕ್ಷವು ಶೇಕಡಾ ಐವತ್ತರಷ್ಟು ಮಹಿಳೆಯರಿಗೆ ಸ್ಪರ್ಧೆಗೆ ಅವಕಾಶ  ನೀಡುತ್ತದೆಯೆಂದೂ ಪಕ್ಷದ ರಾಷ್ಟ್ರೀಯ ಅದ್ಯಕ್ಷೆ ಯೂ ಆಗಿರುವ ನೌಹೇರಾ ಹೇಳಿದ್ದನ್ನೂ ಇಲ್ಲಿ ಸ್ಮರಿಸಬಹುದು, ಪಕ್ಷದ ಚಿಹ್ನೆ ವಜ್ರ. ಅದು ಬಡವರಿಗೆ ಮರೀಚಿಕೆಯಾದ್ದರಿಂದ ಮತ ಗಳಿಸುವುದು ಕೂಡಾ ಮರೀಚಿಕೆಯಾಗಬಹುದೇನೋ? ಅಥವಾ ಮತ ಗಳಿಸಿದರೂ ನಾಪತ್ತೆಯಾಗಬಹುದೇನೋ

ಪಕ್ಷದ ಚಿಹ್ನೆ ವಜ್ರ.