ನೀವು ಅವರ ಪರವೋ ಇವರ ಪರವೋ?

0
450

Gujrat 2017: How did the media fare? (ಗುಜರಾತ್ ಚುನಾವಣೆಯನ್ನು ಮಾಧ್ಯಮಗಳು ಹೇಗೆ ಬಿಂಬಿಸಿದುವು?) ಎಂಬ ಶೀರ್ಷಿಕೆಯಲ್ಲಿ ಖ್ಯಾತ ಪತ್ರಕರ್ತೆ ಸೇವಂತಿ ನೈನಾನ್ ಬರೆದ ಲೇಖನವು ಇಂಟರ್‍ನೆಟ್ ಪತ್ರಿಕೆ ದ ಹೂಟ್‍ನಲ್ಲಿ ಡಿ. 14ರಂದು ಪ್ರಕಟವಾಗಿತ್ತು. ಇದರಲ್ಲಿ ಅವರು ದೂರದರ್ಶನದ(ಆಆ) ವಾರ್ತೆಯ ಬಗ್ಗೆ ವಿಶ್ಲೇಷಣೆ ನಡೆಸಿದ್ದರು. ದೂರದರ್ಶನವೆಂಬುದು ಝೀ ನ್ಯೂಸ್, ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಇಂಡಿಯಾ ನ್ಯೂಸ್ ಚಾನೆಲ್‍ಗಳಂತೆ ಖಾಸಗಿ ಸಂಸ್ಥೆಯಲ್ಲ. ಗುಜರಾತ್ ಚುನಾವಣೆಯ ಸಮಯದಲ್ಲಿ ಈ ಎಲ್ಲ ಚಾನೆಲ್‍ಗಳು ಯಾವ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ದುವು ಅನ್ನುವುದು ಎಲ್ಲರಿಗೂ ಗೊತ್ತು. ಎಲ್ಲವೂ ಬಿಜೆಪಿ ಪರ ಚಾನೆಲ್‍ಗಳಂತೆ ಒಂದರ ಮೇಲೆ ಒಂದು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಝೀ ನ್ಯೂಸ್‍ನ ವರದಿಗಾರನೋರ್ವ ಕಚ್ ಪ್ರದೇಶದ ಜನರ ಬಾಯಿಗೆ ಮೈಕ್ ಹಿಡಿದರು. ಪ್ರಶ್ನೆ ಹೀಗಿತ್ತು- ‘ಇಲ್ಲಿ ಅಭಿವೃದ್ಧಿ ಆಗಿದೆಯೇ? ನಿಮ್ಮ ವಿಶ್ವಾಸಾರ್ಹ ವ್ಯಕ್ತಿ ಮೋದಿಯೋ ರಾಹುಲೋ?’ ಮೋದಿ ಎಂಬ ಉತ್ತರ ವನ್ನು ಬಯಸಿಯೇ ಆ ವರದಿಗಾರ ಪ್ರಶ್ನೆ ಕೇಳಿದ್ದ. ಆ ಉತ್ತರ ಸಿಗದಾಗ ಇನ್ನೊಬ್ಬರ ಬಾಯಿಗೆ ಮೈಕ್. ಮತ್ತೆ ಮತ್ತೆ ಪ್ರಶ್ನೆ. ಜೊತೆಗೇ ಪ್ರಶ್ನೆಯ ಗಾತ್ರವೂ ಕಿರಿ ದಾಗುತ್ತಾ ಹೋಗುತ್ತಿತ್ತು. ಕೊನೆಗೆ ಪ್ರಶ್ನೆಯು ಎಷ್ಟು ಚಿಕ್ಕ ದಾಯಿತೆಂದರೆ, ‘ನಿಮಗೆ ಮೋದಿಯವರಲ್ಲಿ ನಂಬಿಕೆ ಇದೆಯೇ’ ಅನ್ನುವಲ್ಲಿಗೆ ತಲುಪಿತು.
ಹಾಗಂತ, ದೂರದರ್ಶನವು ಖಾಸಗಿ ಸಂಸ್ಥೆಯಲ್ಲವಲ್ಲ. ಅದು ಸರಕಾರಿ ಸಂಸ್ಥೆ. ಖಾಸಗಿ ಸಂಸ್ಥೆಗಳಿಗಿಂತ ಭಿನ್ನವಾಗಿ ಅದರ ವಾರ್ತೆ, ವಿಶ್ಲೇಷಣೆ, ವರದಿಗಳಿರಬೇಕಾಗುತ್ತದೆ. ಅತ್ಯಂತ ನಂಬಿಕರ್ಹ ಸುದ್ದಿಗಳಿಗಾಗಿ ವೀಕ್ಷಕರು ದೂರದರ್ಶನವನ್ನು ಆಶ್ರಯಿಸುತ್ತಾರೆ. ಗುಜರಾತ್ ಚುನಾವಣೆಯ ಸಮಯದಲ್ಲಿ ದೂರದರ್ಶನ ಹೇಗೆ ನಡಕೊಂಡಿತು ಅನ್ನುವುದನ್ನು ಸೇವಂತಿ ನೈನಾನ್ ವಿವರಿಸಿದ್ದಾರೆ. ದೂರದರ್ಶನದ ವರದಿಗಾರ ಗುಜರಾತ್‍ನ ಅಂರೇಲಿಯಿಂದ ಮಾಡಿದ ವರದಿಯ ಸ್ಯಾಂಪಲ್ ಹೀಗಿದೆ:
‘ಅಂರೇಲಿ ಇವತ್ತು ಸುರಕ್ಷಿತವಾಗಿದೆ. ಅರ್ಧರಾತ್ರಿಯಲ್ಲೂ ಹೆಣ್ಮಕ್ಕಳಿಗೆ ಹೊರಗೆ ತಿರುಗಾಡಬಹುದಾದಂತಹ ಸುರಕ್ಷಿತ ವಾತಾವರಣವಿದೆ. ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ವೇಳೆ ಹೀಗೆ ಇರಲಿಲ್ಲ ಎಂದು ಓರ್ವ ವಿದ್ಯಾರ್ಥಿನಿ ಅಭಿಪ್ರಾಯ ಹಂಚಿ ಕೊಂಡಿದ್ದಾರೆ.’
ತಮಾಷೆ ಏನೆಂದರೆ, ಗುಜರಾತ್‍ನಲ್ಲಿ ಕಾಂಗ್ರೆಸ್‍ನ ಆಡಳಿತ ಕೊನೆಗೊಂಡು 22 ವರ್ಷಗಳೇ ಕಳೆದಿವೆ. ಒಂದು ಸುರಕ್ಷಿತ ವಾತಾವರಣ ನೆಲೆಗೊಳ್ಳುವುದಕ್ಕೆ 22 ವರ್ಷಗಳು ಬೇಕಾಯಿತೇ ಎಂಬ ಪ್ರಶ್ನೆಯೊಂದು ಪತ್ರಕರ್ತನಾಗಿ ಆ ವರದಿಗಾರನಲ್ಲಿ ಹುಟ್ಟಬೇಕಾದುದು ಸಹಜ. ಆದರೆ ಅಂಥಹದ್ದೊಂದು ಪ್ರಶ್ನೆ ಬಿಡಿ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆ ವಿದ್ಯಾರ್ಥಿನಿಯ ಜನನವಾಗಿತ್ತೇ ಎಂಬ ಅನುಮಾನವನ್ನೂ ಆ ವರದಿಗಾರ ವ್ಯಕ್ತಪಡಿಸಿಲ್ಲ. ದೂರದರ್ಶನದಲ್ಲಿ ಅಭಿಪ್ರಾಯ ಮಂಡಿಸುವ ವೇಳೆ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ಕೊಡಬೇಕಾದುದು ಅನಿವಾರ್ಯ. ಆದರೆ ವಾರ್ತೆ ಮತ್ತು ಸುದ್ದಿ ವಿಶ್ಲೇಷಣೆಯ ಸಮಯದಲ್ಲಿ ಈ ಅನಿವಾರ್ಯತೆ ಇರುವುದಿಲ್ಲವಲ್ಲ. ದೂರದರ್ಶನ ಮಾಡಿದ್ದೂ ಇದನ್ನೇ. ಅದು ವಾರ್ತೆಯ ಸಮಯದಲ್ಲಿ ಹೆಚ್ಚಿನ ಅವಧಿ ಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಅವರ ಭಾಷಣಗಳಿಗೆ ಮೀಸಲಿಟ್ಟಿತು. ವಾರ್ತೆಯ ನಡುವೆ ಮೋದಿಯವರ ಭಾಷಣವನ್ನು 5 ನಿಮಿಷಗಳ ವರೆಗೂ ಪ್ರಸಾರ ಮಾಡುತ್ತಿತ್ತು. ಇದರ ಬಳಿಕ ನಿರೂಪಕನು ಈ ಭಾಷಣವನ್ನು ಸಂಕ್ಷಿಪ್ತವಾಗಿ ವೀಕ್ಷಕರ ಮುಂದಿಡುವುದು ನಡೆಯುತ್ತಿತ್ತು. ಬಳಿಕ ಹಿರಿಯ ಪತ್ರಕರ್ತ ಎಂಬ ಹೆಸರಲ್ಲಿ ಬಿಜೆಪಿ ಪರ ಪತ್ರಕರ್ತರನ್ನು ಚಾನೆಲ್‍ನಲ್ಲಿ ಕೂರಿಸಿ ಚರ್ಚೆ. ಬಳಿಕ ಗುಜರಾತ್‍ನಲ್ಲಿರುವ ವರದಿಗಾರನಿಂದ ವಿಶ್ಲೇಷಣೆ. ಹೀಗೆ ದೂದರ್ಶನ ಹೇಗೆ ಆಡಳಿತ ಪಕ್ಷದ ಪರವಾಗಿ ಪ್ರಚಾರ ನಡೆಸಿತು ಅನ್ನುವುದನ್ನು ಸೇವಂತಿ ನೈನಾನ್ ದಾಖಲೆ ಸಮೇತ ವಿವರಿಸಿದ್ದಾರೆ.
ನಿಜವಾಗಿ, ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದ ವಿಶ್ವಾಸಾರ್ಹತೆ ದೊಡ್ಡ ಮಟ್ಟದಲ್ಲಿ ಪ್ರಶ್ನೆಗೊಳಗಾಗಿದೆ. ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳನ್ನು ಓದುಗರು ನಿರ್ದಿಷ್ಟ ಪಕ್ಷ, ಜಾತಿ ಮತ್ತು ನಿರ್ದಿಷ್ಟ ವಿಚಾರಧಾರೆಯವುಗಳೆಂದು ವಿಭಜಿಸಿ ನೋಡುವಷ್ಟು ಅವುಗಳ ವಿಶ್ವಾಸಾರ್ಹತೆ ಕುಸಿದಿದೆ. ಭಾರತದಲ್ಲಿ ಮೊದಲು ಪತ್ರಿಕೆ ಪ್ರಾರಂಭವಾದದ್ದು 1870ರಲ್ಲಿ. ಬೆಂಗಾಳಿ ಗೆಝೆಟ್ ಈ ದೇಶದ ಮೊದಲ ಪತ್ರಿಕೆ. ಇದು ಪ್ರಾರಂಭವಾಗಿ ಸುಮಾರು 140 ವರ್ಷಗಳೇ ಸಂದುವು. ಸದ್ಯ ಪತ್ರಿಕೆಗಳ ಗುಣಮಟ್ಟ ಹೇಗಿದೆ? ಜನರು ಸುದ್ದಿ ಮತ್ತು ವಿಶ್ಲೇಷಣೆಗಾಗಿ ಪತ್ರಿಕೆಗಳನ್ನೇ ಅವಲಂಬಿಸಿದ್ದ ಈ ಹಿಂದಿನ ಸ್ಥಿತಿಯಲ್ಲಿ ಏನೇನು ಬದಲಾವಣೆಗಳಾಗಿವೆ? ಈ ದೇಶದಲ್ಲಿ 1927ರಲ್ಲಿ ರೇಡಿಯೋ ಪ್ರಸಾರ ಪ್ರಾರಂಭವಾಯಿತು. ಸ್ಯಾಟಲೈಟ್ ಟಿ.ವಿ. ಚಾನೆಲ್ ಪ್ರಾರಂಭಗೊಂಡದ್ದು ಬಹುತೇಕ 1990ರಲ್ಲಿ. ಬಹುಶಃ ದೇಶದಲ್ಲಿ ದೈನಿಕ, ಪಾಕ್ಷಿಕ, ಮಾಸಿಕ.. ಇತ್ಯಾದಿ ಹೆಸರಲ್ಲಿ ಪ್ರಕಟವಾಗುವ ಪತ್ರಿಕೆಗಳು ಸಾವಿರಾರು ಇವೆ. 1600ಕ್ಕಿಂತಲೂ ಅಧಿಕ ಟಿ.ವಿ. ಸಂಸ್ಥೆಗಳಿವೆ. ಸಂವಹನ ಮಾಧ್ಯಮ ಈ ದೇಶದಲ್ಲಿ ಎಷ್ಟು ಕ್ಷಿಪ್ರಗತಿಯಲ್ಲಿ ಬೆಳೆದಿದೆ ಎಂಬುದಕ್ಕೆ ಈ ಅಂಕಿ ಸಂಖ್ಯೆಗಳೇ ಉತ್ತಮ ಉದಾಹರಣೆ. ಆದರೆ ಇವತ್ತು ಈ ಸ್ಥಾಪಿತ ಮಾಧ್ಯಮ ಗಳಿಗೆ ಪರ್ಯಾಯವಾಗಿ ಸಾಮಾಜಿಕ ಜಾಲತಾಣಗಳು ತೀವ್ರ ಸ್ಪರ್ಧೆಯೊಡ್ಡತೊಡಗಿವೆ. ಇಂಟರ್‍ನೆಟ್ ಪತ್ರಿಕೆಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿವೆ. ವೀಡಿಯೋಗಳು, ಸುದ್ದಿಗಳು, ವಿಶ್ಲೇಷಣೆಗಳು ಕ್ಷಣ ಕ್ಷಣ ಗ್ರಾಹಕರನ್ನು ತಲುಪತೊಡಗಿದೆ. ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಿಗೆ ಹೋಲಿಸಿದರೆ ಇಂಟರ್‍ನೆಟ್ ಪತ್ರಿಕೆಗಳಲ್ಲಿ ಅನೇಕಾರು ಅನುಕೂಲತೆಗಳಿರುವುದು ಈ ಮಾಧ್ಯಮ ವನ್ನು ಜನಪ್ರಿಯಗೊಳಿಸುವಲ್ಲಿ ದೊಡ್ಡ ಪಾತ್ರ ನಿರ್ವಹಿಸು ತ್ತಿದೆ ಎಂದು ಹೇಳಬಹುದು. ಇಲ್ಲಿ ಎಷ್ಟು ಬೇಕಾದರೂ ಸ್ಪೇಸ್ ಇದೆ. 2016ರಲ್ಲಿ ಭಾರತದಲ್ಲಿ 377 ಮಿಲಿಯನ್ ಇಂಟರ್‍ನೆಟ್ ಬಳಕೆದಾರರು ಮತ್ತು 220 ಮಿಲಿಯನ್ ಸ್ಮಾರ್ಟ್ ಪೋನ್ ಬಳಕೆದಾರರಿದ್ದರು. 2020ರ ವೇಳೆಗೆ ಈ ಬಳಕೆದಾರರ ಸಂಖ್ಯೆ 500 ಮಿಲಿಯನ್‍ಗೇರುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಒಂದು ವರ್ಷದ ಹಿಂದಿನ ಲೆಕ್ಕಾಚಾರದಂತೆ, ಈ ದೇಶದಲ್ಲಿ 150 ಮಿಲಿಯನ್ ಫೇಸ್‍ಬುಕ್ ಬಳಕೆದಾರರಿದ್ದರು. ವಾಟ್ಸಾಪ್ ಬಳಕೆದಾರರ ಸಂಖ್ಯೆ 160 ಮಿಲಿಯನ್. 80 ಮಿಲಿಯನ್ ಯೂಟ್ಯೂಬ್ ಬಳಕೆದಾರರು. ಆದರೆ ಕಳೆದೊಂದು ವರ್ಷದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಅಭೂತಪೂರ್ವವೆನ್ನುವಷ್ಟು ವೇಗವಾಗಿ ಬೆಳೆದಿದೆ. ವಿವಿಧ ಮೊಬೈಲ್ ಕಂಪೆನಿಗಳ ದರ ಸಮರದಿಂದಾಗಿ ಪ್ರತಿ ಪ್ರಜೆಯೂ ಸ್ಮಾಟ್ ಫೆಪೋನ್ ಖರೀದಿಸುವ ಮತ್ತು ಇಂಟರ್‍ನೆಟ್ ಸೌಲಭ್ಯ ಪಡಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ/ಳೆ. ಇದರ ನೇರ ಪರಿಣಾಮ ಎದುರಾಗಿರುವುದು ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಮೇಲೆ. ಅದರಲ್ಲೂ ಮುಖ್ಯವಾಗಿ ಟಿ.ವಿ. ಚಾನೆಲ್‍ಗಳು ಈ ಬೆಳವಣಿಗೆಯ ನೇರ ಪರಿಣಾಮವನ್ನು ಎದುರಿಸಬೇಕಾದ ಆತಂಕಕ್ಕೆ ಗುರಿಯಾಗಿವೆ. ವರ್ಷದ ಹಿಂದೆ ಸುಮಾರು 650 ಮಿಲಿಯನ್ ಮನೆಗಳು ಟಿ.ವಿ. ಚಾನೆಲ್‍ಗಳ ಸಂಪರ್ಕವನ್ನು ಪಡೆದುಕೊಂಡಿದ್ದವು ಮತ್ತು 450 ಮಿಲಿಯನ್ ಇಂಟರ್‍ನೆಟ್ ಗ್ರಾಹಕರು ಮತ್ತು 220 ಮಿಲಿಯನ್ ಸ್ಮಾರ್ಟ್ ಪೋನ್ ಗ್ರಾಹಕರು ಈ ದೇಶದಲ್ಲಿದ್ದರು. ಆದರೆ ಇವತ್ತು ಟಿ.ವಿ. ಸಂಪರ್ಕ ಪಡಕೊಳ್ಳುವ ಮನೆಗಳ ಸಂಖ್ಯೆಯ ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಏರುತ್ತಿದೆ. ಇದು ಟಿ.ವಿ. ಚಾನೆಲ್‍ಗಳ ಅಸ್ತಿತ್ವದ ಮೇಲೆಯೇ ಪರಿಣಾಮ ಬೀರಬಹುದಾದಂತಹ ಬೆಳವಣಿಗೆ ಎಂದು ಹೇಳಲಾಗುತ್ತದೆ. ಜನರು ಇವತ್ತು ಸುದ್ದಿಗಾಗಿ ಚಾನೆಲ್ ಗಳ ಮೊರೆ ಹೋಗುವುದಕ್ಕಿಂತ ಇಂಟರ್‍ನೆಟ್ ಪತ್ರಿಕೆಗಳು ಮತ್ತು ಫೇಸ್‍ಬುಕ್, ವಾಟ್ಸಾಪ್, ಟ್ವಿಟರ್, ಯೂಟ್ಯೂಬ್ ಗಳತ್ತ ವಾಲುತ್ತಿದ್ದಾರೆ.
1990ರ ಕಾಲದಲ್ಲಿ ಅಚ್ಚರಿಯ ಪೆಟ್ಟಿಗೆಯಾಗಿ ಎಲ್ಲರನ್ನೂ ಆಕರ್ಷಿಸಿದ್ದ ಟಿ.ವಿ. ಇವತ್ತು ವಿಶ್ವಾಸಾರ್ಹತೆಯ ದೊಡ್ಡ ಸವಾಲನ್ನು ಎದುರಿಸುತ್ತಿದೆ. ದಿನಕ್ಕೊಂದರಂತೆ ಹುಟ್ಟಿಕೊಂಡ ಚಾನೆಲ್‍ಗಳು ಇದಕ್ಕೆ ಒಂದು ಕಾರಣವಾದರೆ, ರಾಜಕೀಯ ಮತ್ತು ಕಾರ್ಪರೇಟ್ ಹಿತಾಸಕ್ತಿಗಳು ಈ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದು ಇನ್ನೊಂದು ಕಾರಣ. ಕಾರ್ಪರೇಟ್ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ಕಂಡುಕೊಂಡಂದೇ ಈ ಕ್ಷೇತ್ರ ತನ್ನ ಕುಸಿತದ ಆರಂಭಕ್ಕೆ ಮುನ್ನುಡಿ ಬರೆಯಿತು. ಇವತ್ತು ಕನ್ನಡವಾಗಲಿ, ಇಂಗ್ಲಿಷ್ ಚಾನೆಲ್‍ಗಳಾಗಲಿ ಪ್ರತಿಯೊಂದರ ಬಗ್ಗೆಯೂ ಅವು ಹೀಗೆಯೇ ಎಂಬ ಪೂರ್ವ ನಿರ್ಧರಿತ ಅಭಿಪ್ರಾಯಗಳು ಸಾರ್ವಜನಿಕವಾಗಿ ನೆಲೆಗೊಂಡಿವೆ. ಯಾವ್ಯಾವ ಚಾನೆಲ್ ಯಾವ್ಯಾವ ಪಕ್ಷದ ಪರ ಮತ್ತು ಯಾವ್ಯಾವ ವಿಚಾರಧಾರೆಯ ಪರ ಎಂಬುದನ್ನು ಜನರು ಥಟ್ಟಂಥ ಹೇಳಿಬಿಡುವ ಸ್ಥಿತಿಯಿದೆ. ಪ್ರೈಮ್ ಟೈಮ್‍ನಲ್ಲಿ ನಡೆಯುವ ಚರ್ಚೆಗಳ ಬಗ್ಗೆ ಸಾರ್ವಜನಿಕವಾಗಿ ಉಡಾಫೆ ಭಾವವಿದೆ. ಚರ್ಚೆಯ ಆರಂಭದಲ್ಲೇ ಈ ಚರ್ಚೆಯ ಅಂತ್ಯ ಹೀಗೆ ಎಂದು ಹೇಳಿಬಿಡುವಂತಹ ವಾತಾವರಣ ಜನರ ನಡುವೆ ಇದೆ. ಇದರ ಪರಿಣಾಮ ಏನಾಯಿತೆಂದರೆ ಜನರು ದೊಡ್ಡ ಸಂಖ್ಯೆಯಲ್ಲಿ ಇಂಟರ್‍ನೆಟ್ ಪತ್ರಿಕೆ ಮತ್ತಿತರ ಪರ್ಯಾಯ ಸುದ್ದಿ ಮೂಲಗಳ ಕಡೆಗೆ ವಲಸೆ ಹೋಗುವಂತಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಹೆಚ್ಚಿನ ಸಮಯವನ್ನು ವ್ಯಯಿಸತೊಡಗಿದರು. ಚಾನೆಲ್‍ಗಳು ಏರ್ಪಡಿಸುವ ಚರ್ಚೆಗಳು ನೀರಸವೆನಿಸತೊಡಗಿದುವು. ಟಿ.ವಿ. ಚಾನೆಲ್‍ಗಳ ಒಂದು ಗಂಟೆಯ ಚರ್ಚೆಯಲ್ಲಿ ಸಿಗುವ ಮಾಹಿತಿ ಮತ್ತು ವಿವರಗಳಿಗಿಂತ ಫೇಸ್‍ಬುಕ್ ಮತ್ತು ಟ್ವೀಟರ್‍ಗಳಲ್ಲಿ ಕೆಲವು ನಿಮಿಷಗಳಲ್ಲೇ ಅದಕ್ಕಿಂತ ಹೆಚ್ಚಿನವು ಸಿಗುವಂತಹ ಸನ್ನಿವೇಶ ನಿರ್ಮಾಣವಾಯಿತು. ಯುವ ಸಮೂಹವನ್ನಂತೂ ಈ ಪರ್ಯಾಯ ಮಾಧ್ಯಮ ಭಾರೀ ಪ್ರಮಾಣದಲ್ಲಿ ಆಕರ್ಷಿಸಿತು. ಸದ್ಯದ ಪರಿಸ್ಥಿತಿಯನ್ನು ಮುಂದಿಟ್ಟು ಹೇಳುವುದಾದರೆ, ಮುಂದಿನ ಒಂದೆರಡು ವರ್ಷ ಗಳಲ್ಲಿ ಸುದ್ದಿ ಚಾನೆಲ್‍ಗಳು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಲೇಬೇಕಾದ ಅನಿವಾರ್ಯತೆಯೊಂದು ಎದುರಾಗಿದೆ. ಇವುಗಳಿಗೆ ಪರ್ಯಾಯ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್‍ನೆಟ್ ಪತ್ರಿಕೆಗಳು ಜನರನ್ನು ಆಕರ್ಷಿಸಲಿವೆ. ನಿರ್ದಿಷ್ಟ ಪಕ್ಷದ ಪರ ವಾದಿಸುವುದಕ್ಕಾಗಿ ಚರ್ಚೆಯನ್ನು ಹಮ್ಮಿಕೊಳ್ಳುವವರು ಕ್ರಮೇಣ ತಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ನಡೆಸಬೇಕಾದ ಸಂದರ್ಭ ವೊಂದು ನಿರ್ಮಾಣವಾಗಲಿದೆ.
ಕಚ್‍ನಲ್ಲಿ ನಿಂತು, ‘ನೀವು ಮೋದಿ ಪರವೋ ರಾಹುಲ್ ಪರವೋ’ ಎಂದು ಪ್ರಶ್ನಿಸುತ್ತಾ ಕೊನೆಗೆ ‘ನೀವು ಮೋದಿ ಪರವೋ’ ಎಂಬಲ್ಲಿಗೆ ಪ್ರಶ್ನೆಯನ್ನು ಸಂಕ್ಷಿಪ್ತಗೊಳಿಸಿ ‘ಹೌದು’ ಎಂದು ಉತ್ತರ ಬರುವಲ್ಲಿಗೆ ತನ್ನ ವರದಿಗಾರಿಕೆಯನ್ನು ಕೊನೆಗೊಳಿಸುವ ಪತ್ರಕರ್ತ ಮತ್ತು ಸುದ್ದಿ ಚಾನೆಲ್‍ಗಳು ಮುಂದಿನ ದಿನಗಳಲ್ಲಿ ಈ ಪರ್ಯಾಯ ಮಾಧ್ಯಮದ ಎದುರು ಅಸ್ತಿತ್ವಕ್ಕಾಗಿ ಹೋರಾಡಬೇಕಾದೀತು.
@ ಏ.ಕೆ. ಕುಕ್ಕಿಲ