ನೈಜೀರಿಯಾ: ತನ್ನ ಮನೆ ಮತ್ತು ಮಸೀದಿಯಲ್ಲಿ 250 ಕ್ರಿಶ್ಚಿಯನ್ನರನ್ನು ಅಡಗಿಸಿಟ್ಟು ಸಶಸ್ತ್ರ ದನಗಾಹಿಗಳ ದಾಳಿಯಿಂದ ರಕ್ಷಿಸಿದ ಇಮಾಮ್; ಬಿಬಿಸಿ ವರದಿ

0
1342

ಆಂಗ್ಲ ಮೂಲ: ummid.com
ಕನ್ನಡಕ್ಕೆ: ಆಯಿಷತುಲ್ ಅಫೀಫಾ

ನೈಜೀರಿಯದ ಕೇಂದ್ರ ನಗರವಾದ ಪ್ಲಾಟ್ಯು ರಾಜ್ಯದಲ್ಲಿ ಕಳೆದವಾರ ಸಶಸ್ತ್ರ ಮುಸ್ಲಿಂ ದನಗಾಹಿಗಳಿಂದ 250 ಕ್ಕೂ ಹೆಚ್ಚು ಕ್ರಿಶ್ಚಿಯನ್ನರನ್ನು ಉಳಿಸಲು ಇಮಾಮರೊಬ್ಬರು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾರೆ .
ಮುಖ್ಯವಾಗಿ ಕ್ರಿಶ್ಚಿಯನ್ ಸಮುದಾಯದ ಸುಮಾರು 262 ಪುರುಷರು, ಮಹಿಳೆಯರು ಮತ್ತು ಮಕ್ಕಳು ನೆರೆಹೊರೆಯ ಗ್ರಾಮದಿಂದ ಪಲಾಯನ ಮಾಡುತ್ತಿದ್ದಾಗ ಮುಸ್ಲಿಮರೆಂದು ಅಂದಾಜಿಸಲಾದ ಮುನ್ನೂರಕ್ಕೂ ಹೆಚ್ಚಿನ ದನಗಾಹಿ ಸಶಸ್ತ್ರ ಸೈನಿಕರ ಆಕ್ರಮಣಕ್ಕೆ ಒಳಗಾಗಿದ್ದಾರೆ.
ಅವರು ಗುಂಡು ಹಾರಿಸಲು ಮತ್ತು ಮನೆಗಳನ್ನು ಸುಟ್ಟುಹಾಕಲು ಪ್ರಾಂಭಿಸಿದಾಗ ಕೆಲವರು ಹೇಗಾದರೂ ನೆರೆಯ ಇಮಾಮ್ ವಾಸವಾಗಿರುವ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಕ್ಕೆ ತಪ್ಪಿಸಿಕೊಂಡು ಹೋಗುವಲ್ಲಿ ಸಫಲರಾದರು. ಇಮಾಮರು ತಕ್ಷಣ ಸಹಾಯಕ್ಕೆ ಬಂದರು. ಒಟ್ಟು 262 ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ತಮ್ಮ ಮನೆಯಲ್ಲಿ ಮತ್ತು ಮಸೀದಿಯಲ್ಲಿ ಅಡಗಿಸಿಟ್ಟುಕೊಂಡರು ಎಂದು ಬಿಬಿಸಿ ವರದಿ ಮಾಡಿದೆ.
“ನಾನು ಮೊದಲು ಮಹಿಳೆಯರನ್ನು ನನ್ನ ಮನೆಯಲ್ಲಿ ಅಡಗಿಸಿಟ್ಟೆ, ನಂತರ ಪುರುಷರನ್ನು ಮಸೀದಿಯಲ್ಲಿ ಅಡಗಿಸಿಟ್ಟೆ” ಎಂದು ಇಮಾಮ್ BBC ಗೆ ತಿಳಿಸಿದರು.
ನೈಜೀರಿಯಾದ ಕೇಂದ್ರೀಯ ವಲಯವನ್ನು ಕಾಡುತ್ತಿರುವ ಹಿಂಸಾಚಾರಕ್ಕೆ ಕಾರಣವೇನೆಂದರೆ, ಅಲ್ಲಿ ರೈತರು ಮತ್ತು ಅಲೆಮಾರಿ ದನಗಾಹಿಗಳು ಸಾಮಾನ್ಯವಾಗಿ ಭೂಮಿ ಮತ್ತು ಮೇಯಿಸುವಿಕೆ ಹಕ್ಕುಗಳಿಗಾಗಿ ಘರ್ಷಣೆ ಮಾಡುತ್ತಾರೆ.
ಈ ಪ್ರದೇಶವು ಆಗಾಗ ಕೋಮು ಉದ್ವಿಗ್ನತೆಗೆ ಒಳಗಾಗುತ್ತಿದೆ – ಫುಲಾನಿ ಜನಾಂಗದ ದನಗಾಹಿಗಳು ಬಹುತೇಕ ಮುಸ್ಲಿಮರು. ಆದರೆ ರೈತರು ಹೆಚ್ಚಾಗಿ ಬೆರೊಮ್ ಜನಾಂಗದ ಕ್ರಿಶ್ಚಿಯನರು.
ನೂರಾರು ಜನರು 2018 ರಲ್ಲಿ ಕೊಲ್ಲಲ್ಪಟ್ಟರು ಮತ್ತು ಹಲವು ವರ್ಷಗಳಿಂದ ಮುಯ್ಯಿಗೆ ಮುಯ್ಯಿ ಹಿಂಸೆ ನಡೆಯುತ್ತಿದೆ. 2016 ರ ವರದಿಯ ಪ್ರಕಾರ, ನೈಜೀರಿಯಾದ ಗ್ರಾಮೀಣ ಪ್ರದೇಶದ ಸಂಘರ್ಷದಲ್ಲಿ ಆದ ಸಾವಿನ ಪ್ರಮಾಣವು ಆ ವರ್ಷದಲ್ಲಿ ಬೋಕೊ ಹರಮ್ ನಿಂದ ಆದ ಸಾವುಗಳಿಗಿಂತ ಹೆಚ್ಚಾಗಿತ್ತು.
ಇಮಾಮ್ ಮಧ್ಯಪ್ರವೇಶಿಸಿರದಿದ್ದರೆ, ಸತ್ತವರ ಸಂಖ್ಯೆ ಹೆಚ್ಚಾಗಿರುತಿತ್ತು. ಕ್ರಿಶ್ಚಿಯನ್ ಪ್ರದೇಶದಿಂದ ಪಲಾಯನ ಮಾಡಿದವರ ಅನ್ವೇಷಣೆಯ ಸಲುವಾಗಿ ಸಶಸ್ತ್ರ ಸೈನಿಕರು
ಮುಖ್ಯವಾಗಿ ಮುಸ್ಲಿಮ್ ಗ್ರಾಮದಲ್ಲಿ ಗುಂಡುಹಾರಿಸಿ ಬೆದರಿಸಿದರು ಎಂದು ಬಿಬಿಸಿ ವರದಿ ಮಾಡಿದೆ
ಗ್ರಾಮಸ್ಥರು ಮಸೀದಿಯ ಕಡೆಗೆ ಓಡಿಹೋದರು ಎಂದು ದಾಳಿಕೋರರು ತಿಳಿದಾಗ, ಅಡಗಿಸಿದವರನ್ನು ಹೊರಗೆ ಬಿಡುವಂತೆ ಇಮಾಮರನ್ನು ಒತ್ತಾಯಿಸಿದರು. ಆದರೆ ಯಾವುದೇ ರಕ್ಷಣೆಯನ್ನು ಹೊಂದಿರದ ಇಮಾಮರು ಅವರ ಮಾತನ್ನು ಅನುಸರಿಸಲು ನಿರಾಕರಿಸಿದರು – ಮತ್ತು ಅವರ ಮಸೀದಿ ಪ್ರವೇಶವನ್ನು ಕೂಡ ತಡೆದರು .
ಮಸೀದಿ ಮತ್ತು ಅವರ ಮನೆಯನ್ನು ಸುಟ್ಟುಹಾಕುವ ಬೆದರಿಕೆ ಹಾಕಿದ ದನಗಾಹಿಗಳೊಂದಿಗೆ ಅವರು ಪರಿ ಪರಿಯಾಗಿ ವಿನಂತಿಸಿದರು. ದನಗಾಹಿಗಳು ಜಗ್ಗದಾಗ ಮುಸ್ಲಿಂ ಸಮುದಾಯದ ಇತರರ ಜೊತೆಯಲ್ಲಿ ಶಸ್ತ್ರಧಾರಿಗಳ ಮುಂದೆ ನೆಲದಲ್ಲಿ ಕುಳಿತರು. ಹೊರಟು ಹೋಗುವಂತೆ ಕೋರಿ ಕಣ್ಣೀರಿಳಿಸಿದರು.
40 ವರ್ಷಗಳ ಹಿಂದೆ, ಈ ಪ್ರದೇಶದಲ್ಲಿ ಕ್ರೈಸ್ತರು ಮುಸ್ಲಿಮರಿಗೆ ಮಸೀದಿಯನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಇಮಾಮರು ಸಹಾಯ ಮಾಡ ಬಯಸಿದರೆಂದು ಬಿಬಿಸಿ ಹೇಳಿದೆ. “ಅವರು ಮುಸ್ಲಿಂ ಸಮುದಾಯಕ್ಕೆ ಮುಕ್ತವಾಗಿ ಭೂಮಿ ನೀಡಿದ್ದಾರೆ” ಎಂದು ಇಮಾಮರು ಹೇಳಿದರು.
“ಶತಮಾನಗಳಿಂದಲೂ ನಾವು ಬೆರೊಮರೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದೇವೆ, ಕಳೆದವಾರ ನಡೆದ ಕೊಳಕು ಘಟನೆಯನ್ನು ನಾವು ಈವರೆಗೂ ನೋಡಿಲ್ಲ ” ಎಂದು ಮತ್ತೋರ್ವ ಮುಸ್ಲಿಂ ಮುಖಂಡ ಬಿಬಿಸಿಗೆ ತಿಳಿಸಿದರು.
ಅವರು ನಮ್ಮನ್ನು ಮಸೀದಿಯೊಳಗೆ ಕರೆದೊಯ್ದರು, ಒಮ್ಮೆಯೂ ಅವರು ನಮ್ಮನ್ನು ಹೊರಟು ಹೋಗುವಂತೆ ಮತ್ತು ಪ್ರಾರ್ಥನೆ ಮಾಡುವಂತೆ ಕೇಳಲಿಲ್ಲ. ಅವರು ನಮಗೆ ಆಹಾರವನ್ನು ಒದಗಿಸಿದರು ಮತ್ತು ನಾವು ಅವರಿಗೆ ಕೃತಜ್ಞರಾಗಿದ್ದೇವೆ ಎಂದು ಕ್ರೈಸ್ತರು ಹೇಳಿದರು.
ಹಳ್ಳಿಗರು ಇಮಾಮರೊಂದಿಗೆ ಐದು ದಿನಗಳ ಕಾಲ ತಂಗಿದರು. ನಂತರ ಶಿಬಿರಕ್ಕೆ ಹೊರಟುಹೋದರು. 2,000 ಕ್ಕಿಂತ ಹೆಚ್ಚು ಜನರು ಈಗ ಶಿಬಿರದಲ್ಲಿ ವಾಸಿಸುತ್ತಿದ್ದಾರೆ.
http://www.ummid.com/news/2018/July/02.07.2018/nigerian-imam-saved-260-christians-from-armed-attackers.html