ನೋಟು ನಿಷೇಧದ ಫಲಿತಾಂಶ- ಮೋದಿ!

0
2850

ಪೊರೆಯೊಂದು ಕಳಚಿದೆ. ಸುಳ್ಳು ಸುಳ್ಳೇ ಹುಟ್ಟು ಹಾಕಲಾಗಿದ್ದ ಭ್ರಮೆಯೊಂದರ ಭಾಗವಾಗಿ ಬದುಕಿದ ಪ್ರಧಾನಿ ನರೇಂದ್ರ ಮೋದಿಯವರು ಸಧ್ಯ ಆ ಭ್ರಮೆಗಳಿಂದ ಮುಕ್ತವಾಗಿ ದೇಶದ ಮುಂದೆ ನಿಂತಿದ್ದಾರೆ. ಅವರ ಮಾತು ಕಟ್ಟಿದೆ. ಮುಖ ಬಿಳುಚಿದೆ. ವರ್ಷದ ಹಿಂದೆ ಅವರು ಈ ದೇಶದ ಕಟ್ಟ ಕಡೆಯ ನಾಗರಿಕನ ಜೇಬನ್ನು ಸ್ಪರ್ಶಿಸಿದ್ದರು. ಈ ಹಿಂದಿನ ಯಾವ ಪ್ರಧಾನ ಮಂತ್ರಿಗಳೂ ತೋರದ ಧೈರ್ಯವೋಂದು ಅದನ್ನು ಬಣ್ಣಿಸಲಾಗಿತ್ತು. ಬಡವನನ್ನು ಬಲವಂತವಾಗಿ ಅವರು ಬ್ಯಾಂಕಿನೆದುರು ಸರತಿ ಸಾಲಲ್ಲಿ ನಿಲ್ಲಿಸಿದರು. `50 ದಿನ ಕೊಡಿ, ಕ್ರಾಂತಿ ಮಾಡುತ್ತೇನೆ’ ಎಂದು ಬಡವನಲ್ಲಿ ಆಸೆ ಹುಟ್ಟಿಸಿದರು. ತಮ್ಮ ಕೈಯಲ್ಲಿರುವ ಹಣವನ್ನೆಲ್ಲ ಬ್ಯಾಂಕಿನಲ್ಲಿಟ್ಟು ಕ್ರಾಂತಿಗಾಗಿ ಕಾದ ಬಡವರಿಗೆ ವಿಜಯ್ ಮಲ್ಯ ಪ್ರಥಮವಾಗಿ ಆ ಕ್ರಾಂತಿಯ ದರ್ಶನ ಮಾಡಿದರು. ಇದೀಗ ನೀರವ್ ಮೋದಿ. ಈ ಎರಡು ಕ್ರಾಂತಿಕಾರಿ ಬೆಳವಣಿಗೆಗಳಿಂದ ಈ ದೇಶಕ್ಕಾದ ನಷ್ಟ 33 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಎಂದು ಹೇಳಲಾಗುತ್ತದೆ. 2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ ನೋಟ್ ನಿಷೇಧ ಮಾಡಿರುವುದರ ಹಿಂದೆ ನಿಜಕ್ಕೂ ಯಾರಿದ್ದಾರೆ? ಅವರಿಗೆ ಅಂಥದ್ದೊಂದು ಸಲಹೆಯನ್ನು ಕೊಟ್ಟವರು ಯಾರು? ಆರ್‍ಬಿಐ ಗವರ್ನರ್ ರಘುರಾಂ ರಾಜನ್ ಈ ನೋಟ್ ನಿಷೇಧ ಕ್ರಾಂತಿಗೆ ವಿರೋಧವಾಗಿದ್ದರು ಎಂಬುದೇ ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸದಿರುವುದಕ್ಕೆ ಕಾರಣವೇ? ಅವರ ವಿರೋಧವನ್ನು ನಿರ್ಲಕ್ಷಿಸುವಂತೆ ನರೇಂದ್ರ ಮೋದಿಯವರಿಗೆ ಸೂಚನೆ ಕೊಟ್ಟವರು ಯಾರು? ಆ ಸೂಚಕರಿಗೂ ಕೇಂದ್ರ ಸಚಿವ ಸಂಪುಟಕ್ಕೂ ಏನು ಸಂಬಂಧ ಇದೆ? ಅವರು ಸಂಪುಟದಿಂದ ಹೊರಗಿನವರೋ? ಪ್ರಧಾನಿಯವರು ವಿದೇಶ ಪ್ರವಾಸ ಕೈಗೊಳ್ಳುವಾಗ ಜೊತೆಗೊಯ್ಯುವ ಉದ್ಯಮಿಗಳೇ ಈ ಸೂಚನೆ ನೀಡಿದ್ದರೋ? ಪ್ರಧಾನಿಯವರ ಜೊತೆ ತೆರಳುವ ಉದ್ಯಮಿಗಳ ಹೆಸರನ್ನು ಬಹಿರಂಗಪಡಿಸಲು ಪ್ರಧಾನಿ ಕಾರ್ಯಾಲಯ ನಿರಾಕರಿಸುತ್ತಿರುವುದು ಯಾಕೆ? ನೀರವ್ ಮೋದಿಯಂಥ ಇನ್ನಷ್ಟು ಮೋದಿಗಳು ನೋಟ್ ನಿಷೇಧದ ಲಾಭ ಪಡೆದುಕೊಂಡಿದ್ದಾರೆಯೇ? ಸಿಬಿಐ ದಾಖಲಿಸಿದ ಎಫ್‍ಐಆರ್‍ನ ಆಧಾರದಲ್ಲಿ ಹೇಳುವುದಾದರೆ, ನೀರವ್‍ಗೆ ನೀಡಲಾದ ಸಾಲ ಸಂಬಂಧಿ ಎಲ್ಲ ತಿಳುವಳಿಕಾ ಪತ್ರಗಳಿಗೆ ಸಹಿ ಹಾಕಿದ್ದು 2017ರಲ್ಲಿ. ಪ್ರಧಾನಿಯವರ ಕಾರ್ಯಾಲಯದ ಗಮನಕ್ಕೆ ಬಂದ ಬಳಿಕವೂ ದಾವೋಸ್ ಶೃಂಗ ಸಭೆಗೆ ತೆರಳಿದ ನಿಯೋಗದಲ್ಲಿ ನೀರವ್ ಮೋದಿ ಇರಲ್ಲವೇ? ಇದು ಹೇಗೆ ಸಾಧ್ಯ?

ಇಲ್ಲೊಂದು ಕ್ರೂರ ತಮಾಷೆಯಿದೆ. ಮಲ್ಯ, ನೀರವ್‍ರಂಥ ಅನೇಕರು ಮೊದಲು ಉದ್ಯಮಿಗಳ ವೇಷ ಧರಿಸುತ್ತಾರೆ. ನಕಲಿ ಕಂಪೆನಿಗಳನ್ನು ಹುಟ್ಟು ಹಾಕುತ್ತಾರೆ. ಭಾರೀ ಗಾತ್ರದ ಯೋಜನೆಗಳನ್ನು ರೂಪಿಸುತ್ತಾರೆ. ಆ ಬಳಿಕ ಬ್ಯಾಂಕುಗಳಿಂದ ಬೃಹತ್ ಪ್ರಮಾಣದಲ್ಲಿ ಸಾಲ ಎತ್ತುವ ಹುನ್ನಾರ ನಡೆಸುತ್ತಾರೆ. ಸೂಟು-ಬೂಟು-ಟೈಗಳಿಂದ ಬಿಗಿದಿರುವ ಮನುಷ್ಯ ಎಂಬ ನೆಲೆಯಲ್ಲಿ ಇವರಿಗೆ ಬ್ಯಾಂಕುಗಳಲ್ಲೂ ವಿಶೇಷ ಆಕರ್ಷಣೆ ಮತ್ತು ಗೌರವ ಇರುತ್ತದೆ. ಇವರ ಗಾಂಭೀರ್ಯಕ್ಕೆ ಮತ್ತು ಕೋಟ್ಯಾಂತರ ರೂಪಾಯಿಗಳ ಯೋಜನೆಗೆ ಬ್ಯಾಂಕ್‍ಗಳಲ್ಲಿರುವ ‘ಗೋಕುಲ್ ನಾಥ್ ಶೆಟ್ಟಿ’ಯಂಥ ಉದ್ಯೋಗಿಗಳು ಬೇಗನೇ ಶರಣಾಗುತ್ತಾರೆ. ಹೀಗೆ ಸಾಲ ಪಡೆದುಕೊಂಡು ವಂಚಿಸಿದ ಬಳಿಕ ಬ್ಯಾಂಕುಗಳು ಅವರ ಆಸ್ತಿಯನ್ನು ಜಪ್ತಿ ಮಾಡುತ್ತವೆ. ಬಳಿಕ ಅದನ್ನು ಹರಾಜಿಗಿಡುತ್ತವೆ. ತಮಾಷೆ ಇರುವುದೂ ಇಲ್ಲೇ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳು ಆ ಹರಾಜಿನಲ್ಲಿ ತೀರಾ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ ಅನ್ನುವುದು ಈ ಸಾಲಗಾರ ಉದ್ಯಮಿಗೆ ಗೊತ್ತು. ಆತ ಬೇನಾಮಿ ಹೆಸರಲ್ಲಿ ಪುನಃ ಆ ಆಸ್ತಿಗಳನ್ನು ಖರೀದಿಸುತ್ತಾನೆ. ವ್ಯಾಪಾರ ಆರಂಭಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಪುನಃ ಸಾಲ ಎತ್ತುವಳಿ ನಡೆಯುತ್ತದೆ. ಉದ್ಯಮ ಆರಂಭಿಸುವಾಗ ಅತನಲ್ಲಿದ್ದುದು ಸೂಟು-ಬೂಟು ಮಾತ್ರ. ಬ್ಯಾಂಕ್ ಸಾಲದಿಂದಲೇ ಉದ್ಯಮ ಆರಂಭವಾಗುತ್ತದೆ. ವಂಚನೆ ನಡೆಯುತ್ತದೆ. ಬ್ಯಾಂಕ್‍ನ ತನ್ನದೇ ಆಸ್ತಿಯನ್ನು ಜಪ್ತಿ ಮಾಡಿ ಹರಾಜು ಕೂಗುತ್ತದೆ. ಆತ ಮತ್ತೊಂದು ಹೆಸರಲ್ಲಿ ಅದೇ ಬ್ಯಾಂಕ್‍ನ ವಂಚಿಸಿದ ಹಣದಿಂದ ಹರಾಜನ್ನು ಪಡೆದುಕೊಳ್ಳುತ್ತಾನೆ. ಇಲ್ಲಿ ಆತನಿಗೆ ನಯಾ ಪೈಸೆ ನಷ್ಟವಿಲ್ಲ. ನಷ್ಟ ಸಂಭವಿಸುವುದೆಲ್ಲ ಬ್ಯಾಂಕುಗಳಿಗೆ. ಹಾಗಂತ, ಬ್ಯಾಂಕ್‍ನಲ್ಲಿರುವ ಹಣವೂ ಬ್ಯಾಂಕ್‍ನದ್ದಲ್ಲ. ನರೇಂದ್ರ ಮೋದಿಯವರ `50 ದಿನಗಳ ಕ್ರಾಂತಿ’ಯಲ್ಲಿ ಹರಿದು ಬಂದ ನೋಟುಗಳು. ಇವೇ ನೋಟುಗಳನ್ನು ಓರ್ವ ರೈತ ಪಡಕೊಳ್ಳಬೇಕು ಎಂದರೆ ಬ್ಯಾಂಕುಗಳು ನೂರಾರು ತಕರಾರುಗಳನ್ನು ತೆಗೆಯುತ್ತವೆ. ಮೊದಲನೆಯದಾಗಿ ಉದ್ಯಮಿಯಂಥ ಸೂಟು-ಬೂಟು ರೈತನಲ್ಲಿಲ್ಲ. ಕೋಟ್ಯಾಂತರ ರೂಪಾಯಿಗಳ ಯೋಜನೆ ಮಾಡಲೂ ಅತನಿಗೆ ಬರಲ್ಲ. ಇಂಥ ಒರಟು ಚರ್ಮದ ಮನುಷ್ಯರಿಗೆ ಗೋಕುಲನಾಥ ಶೆಟ್ಟಿಯಂಥ ಬ್ಯಾಂಕ್ ಉದ್ಯೋಗಿಗಳು ಗೆಳೆಯರಾಗುವುದಕ್ಕೆ ಸಾಧ್ಯವೂ ಇಲ್ಲ. ಅಂದಹಾಗೆ, ಸರಕಾರಿ ಸ್ವಾಮ್ಯದ 21 ಬ್ಯಾಂಕುಗಳೇ ಈ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ನಿಯಂತ್ರಿಸುತ್ತವೆ. ಹಾಗಂತ, ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಮಾತ್ರ ಈ ದೇಶದಲ್ಲಿರುವುದಲ್ಲ. ಧಾರಾಳ ಖಾಸಗಿ ಬ್ಯಾಂಕುಗಳಿವೆ. ಆದರೆ ಸಾಲ ಮರು ಪಾವತಿಸಿದ ಮೋದಿಯಂಥ ಉದ್ಯಮಿಗಳೆಲ್ಲ ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನೇ ಸಾಲಕ್ಕಾಗಿ ಆಶ್ರಹಿಸಿಕೊಂಡಿದ್ದಾರೆ. ಖಾಸಗಿ ಬ್ಯಾಂಕ್‍ಗಳತ್ತ ಅವರು ಸುಳಿಯುವುದೇ ಇಲ್ಲ. ಇದರ ಅರ್ಥ ಇಷ್ಟೇ. ಉದ್ಯಮಿಗಳಿಗೂ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೂ ಉದ್ಯಮಕ್ಕಿಂತ ಹೊರತಾದ ತಿಳುವಳಿಕೆ ಇದೆ.

ಈ ತಿಳುವಳಿಕೆಗೆ ಅವರ ಉದ್ಯಮವಷ್ಟೇ ಕಾರಣ ಅಲ್ಲ. ಅವರಿಗೂ ಆಡಳಿತದ ಮಂದಿಗೂ ಸಂಬಂಧ ಇದೆ. ಅವರು ದೊಡ್ಡ ಮಟ್ಟದಲ್ಲಿ ರಾಜಕೀಯ ಪಕ್ಷಗಳಿಗೆ ಪಾರ್ಟಿ ಫಂಡ್ ನೀಡುತ್ತಾರೆ. ಚುನಾವಣೆಯನ್ನು ಎದುರಿಸಬೇಕಾದರೆ ರಾಜಕೀಯ ಪಕ್ಷಗಳಿಗೆ ಹಣ ಬೇಕೇ ಬೇಕು. ಅದು ಶೂನ್ಯದಿಂದ ಹುಟ್ಟುವುದಿಲ್ಲ. ಮೋದಿ-ಮಲ್ಯರಂಥವರು ಅದನ್ನು ಉತ್ಪಾದಿಸಿ ಹಂಚುತ್ತಾರೆ. ಅವರಿಗೆ ಆ ಮೊತ್ತವನ್ನು ಬ್ಯಾಂಕುಗಳು ಕೊಡುತ್ತವೆ. ಹಾಗೆ, ಬ್ಯಾಂಕುಗಳು ಕೊಡುವಂತೆ ಮಾಡಲು ದೇಣಿಗೆ ಪಡೆದುಕೊಂಡವರು ಸಹರಿಸುತ್ತಾರೆ. ಹೀಗೆ ಪಡೆದುಕೊಂಡ ಹಣವನ್ನು ಈ ಉದ್ಯಮಿಗಳು ಪಾವತಿಸದೇ ವಂಚಿಸಿದಾಗ ಬ್ಯಾಂಕುಗಳು ದಿವಾಳಿಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಇದೇ ದೇಣಿಗೆ ಪಡಕೊಂಡವರು ವಹಿಸಿಕೊಳ್ಳುತ್ತಾರೆ. ಅವರು ಮತ್ತೆ ಬ್ಯಾಂಕಿಗೆ ಹಣಕಾಸು ಮರುಪೂರಣ ಮಾಡುವುದಕ್ಕಾಗಿ ತೆರಿಗೆದಾರರ ಹಣವನ್ನು ಬಳಸಿಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು 2016 ನವೆಂಬರ್ 8 ರಂದು ಮಾಡಿದ `ನೋಟ್ ನಿಷೇಧ ಕ್ರಾಂತಿ’ಯ ಹಿಂದಿನ ಉದ್ದೇಶಗಳಲ್ಲಿ ಇದೂ ಒಂದು ಅಥವಾ ಇದುವೇ. ಬ್ಯಾಂಕ್‍ಗಳಿಗೆ ಬೃಹತ್ ಪ್ರಮಾಣದಲ್ಲಿ ತೆರಿಗೆದಾರರ ಹಣವನ್ನು ಮರುಪೂರಣಗೊಳಿಸಿ ಬ್ಯಾಂಕ್‍ಗಳ ಹೊಟ್ಟೆ ತುಂಬಿಸುವುದು ಮತ್ತು ನೀರವ್‍ರಂಥ ದೇಣಿಗೆದಾರರಿಗೆ ಸಾಲ ಒದಗಿಸುವುದು. `ಮಲ್ಯ ವಂಚಿಸಿ ತಪ್ಪಿಸಿಕೊಂಡ ಬಳಿಕವೂ ನೀರವ್‍ರಂಥವರು ಹೇಗೆ ತಯಾರಾಗುತ್ತಾರೆ, ಬ್ಯಾಂಕ್‍ಗಳೇಕೆ ಜಾಗ್ರತೆ ಪಾಲಿಸುವುದಿಲ್ಲ’ ಎಂಬ ಪ್ರಶ್ನೆ ಇಂದು ನಾಗರಿಕರಲ್ಲಿದೆ. ನಿಜವಾಗಿ ದೇಣಿಗೆ ನೀಡುವ ಉದ್ಯಮಿಗಳು ಮತ್ತು ದೇಣಿಗೆ ಸ್ವೀಕರಿಸುವ ರಾಜಕೀಯ ಪಕ್ಷಗಳ ಮಟ್ಟಿಗೆ ಈ ಪ್ರಶ್ನೆಯೇ ಬಾರಿಶತನದ್ದು. ಅದು ಉಭಯತ್ರರ ನಡುವಿನ ತಿಳುವಳಿಕೆ.

ನರೇಂದ್ರ ಮೋದಿ ಮತ್ತು ನೀರವ್ ಮೋದಿ ಎಂಬ ಹೆಸರುಗಳಲ್ಲಿ `ಮೋದಿ’ ಎಂಬ ಸಮಾನ ಪದವಿರುವುದಕ್ಕೆ ಕಾರ್ಯಕಾರಣ ಸಂಬಂಧ ಇಲ್ಲದೇ ಇರಬಹುದು. ಆದರೆ, ನರೇಂದ್ರ ಮೋದಿಯವರ ನೋಟ್ ನಿಷೇಧಕ್ಕೂ ಉದ್ಯಮಿಗಳಿಗೂ ಬಹುತೇಕ ಸಂಬಂಧ ಇದೆ. ಅವರು ಹೇಳಿದ 50 ದಿನಗಳು 10 ಬಾರಿ ಕಳೆದ ಬಳಿಕವೂ ನೋಟ್ ನಿಷೇಧದ ಪ್ರಯೋಜನಗಳನ್ನು ವಿವರಿಸಲು ಅವರು ವಿಫಲರಾಗಿರುವುದೇ ಇದಕ್ಕೆ ಉತ್ತಮ ಪುರಾವೆ. ಅವರನ್ನು ಸುತ್ತವರಿದಿದ್ದ ಭ್ರಮೆ ಕಳಚಿದೆ. ನೀರವ್ ಅದಕ್ಕೆ ನಿಮಿತ್ತ ಮಾತ್ರ.