ಪ್ರವಾದಿ ಮುಹಮ್ಮದ್ (ಸ)ರ ಜೀವನ ಚರಿತ್ರೆ ಅಧ್ಯಯನ ಏಕೆ ಮತ್ತು ಹೇಗೆ ?

0
1248

ಪ್ರವಾದಿ ಮುಹಮ್ಮದ್ (ಸ)ರ ಜೀವನ ಚರಿತ್ರೆ ಅಧ್ಯಯನ ಏಕೆ ಮತ್ತು ಹೇಗೆ

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಗೆ ಅರಬರು ಸೀರತ್ ಎಂದು ಕರೆಯುತ್ತಿದ್ದರು.
ಆದ್ರೆ ಮುಸ್ಲಿಮ್ ವಿದ್ವಾಂಸರು ಹೆಚ್ಚಾಗಿ ಪ್ರವಾದಿ(ಸ) ರ ಜೀವನ ಚರಿತ್ರೆಗೆ ಮಾತ್ರ ಸೀರತ್ ಪದವನ್ನು ಬಳಸುತ್ತಾರೆ.
ಸೀರತ್ ಪದದ ಅರ್ಥ ‘ ಪಯಣ ‘ ಎಂದಾಗಿದೆ. ಅಂದ್ರೆ ನಾವು ಅವರ ಜೀವನ ಚರಿತ್ರೆಯ ಅಧ್ಯಯನ ನಡೆಸುವಾಗ ಪ್ರವಾದಿ(ಸ) ರ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾ ಅವರು ನಡೆಸಿದಂತಹ ಪಯಣವನ್ನೇ ಆದರ್ಶವಾಗಿಸಿಕೊಂಡು ನಮ್ಮ ಜೀವನದ ಪಯಣ ಸಾಗಿಸಲು ಯತ್ನಿಸಬೇಕು.
ಪವಿತ್ರ ಕುರ್ ಆನ್ ನಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಸಾರಿ ಪ್ರವಾದಿ(ಸ) ರು ನಮಗೆಲ್ಲಾ ಅತ್ಯುತ್ತಮ ಮಾದರಿಯಾಗಿದ್ದಾರೆಂದು ಹೇಳಲಾಗಿದೆ.
ಹೀಗಾಗಿ ನಮಗೆ ಮಾದರಿಯಾಗಿರುವ ಪ್ರವಾದಿ (ಸ) ರ ಜೀವನ ಚರಿತ್ರೆಯ ಅಧ್ಯಯನ ನಡೆಸದೇ ಅವರನ್ನು ಅನುಸರಿಸಲು ಸಾಧ್ಯವಿಲ್ಲ.

ಅದೇ ರೀತಿ ಜಗತ್ತಿನ ಪ್ರತಿಯೊಬ್ಬ ಮುಸ್ಲಿಮ್ ಸಹ ಪ್ರವಾದಿ(ಸ) ರನ್ನು ಅತಿ ಹೆಚ್ಚು ಪ್ರೀತಿಸುವುದಾಗಿ ವಾದಿಸುತ್ತಾನೆ. ನಾವು ಪ್ರೀತಿಸುವ ವ್ಯಕ್ತಿಯ ಜೀವನದ ಪ್ರತಿಯೊಂದು ಅಂಶ , ಅವರ ಆದರ್ಶ ಮತ್ತು ತತ್ವಗಳ ಅಧ್ಯಯನ ಹಾಗೂ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಲ್ಲವಾದಲ್ಲಿ ನಮ್ಮ ಪ್ರೀತಿಯು ಕೇವಲ ತೋರಿಕೆಯ ಪ್ರೀತಿಯಾಗುತ್ತದೆ.

ಅಲ್ಲಾಹನ ಅಂತಿಮ ಸಂದೇಶವಾಗಿರುವ ಪವಿತ್ರ ಕುರ್ ಆನ್ ನನ್ನು ಅರಿಯಲು ಪ್ರವಾದಿ (ಸ) ರ ಜೀವನ ಚರಿತ್ರೆಯ ಅಧ್ಯಯನವು ಅತ್ಯವಶ್ಯಕವಾಗಿದೆ.
ಒಟ್ಟಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಪ್ರವಾದಿ (ಸ) ರ ಜೀವನ ಚರಿತ್ರೆಯ ಅಧ್ಯಯನ ಇಸ್ಲಾಮ್ ಧರ್ಮದ ಅತ್ಯುತ್ತಮ ಪರಿಚಯವಾಗಿದೆ.

ಪ್ರವಾದಿ ಮುಹಮ್ಮದ್ (ಸ) ರ ಜೀವನ ಚರಿತ್ರೆಯ ಅಧ್ಯಯನ ಹೇಗೆ ?

ಕೆಲವು ಕೃತಿಗಳ ಹೊರತಾಗಿ ಪ್ರವಾದಿ(ಸ) ರ ಎಲ್ಲಾ ಜೀವನ ಚರಿತ್ರೆಗಳು ಸಾಮಾನ್ಯವಾಗಿ ಕಾಲಾನುಕ್ರಮದಲ್ಲಿರುತ್ತವೆ ಅಂದ್ರೆ ಅವರ ಹುಟ್ಟು , ಬಾಲ್ಯ, ಯೌವ್ವನ , ಮದುವೆ , ಪ್ರವಾದಿಯಾದ ಬಳಿಕ ಮಕ್ಕಾ ಜೀವನ , ಹಿಜರತ್ , ಬದರ್ , ಉಹದ್ , ಮಕ್ಕಾ ವಿಜಯ ಹಾಗೂ ಮರಣ.

ಹೀಗಾಗಿ ನಾವೆಲ್ಲಾ ಹೆಚ್ಚಾಗಿ ಪ್ರವಾದಿ (ಸ) ರ ವೈಯಕ್ತಿಕ ಜೀವನದ ಕುರಿತು ಹೆಚ್ಚು ಅಧ್ಯಯನ ನಡೆಸುತ್ತೇವೆಯೇ ಹೊರತು ಅವರ ಆದರ್ಶ , ತತ್ವ ಹಾಗೂ ಒಂದು ವಿಷಯದ ಕುರಿತು ಅವರು ಹೊಂದಿದ್ದ ಪರಿಕಲ್ಪನೆಯ ಬಗ್ಗೆ ತಿಳಿದುಕೊಳ್ಳಲು ಯತ್ನಿಸುವುದು ತುಂಬಾ ಕಡಿಮೆ.

ಇದನ್ನು ಸುಲಭವಾಗಿ ತಿಳಿಯಬೇಕಂದರೆ ನಮ್ಮ ಹೆಚ್ಚಿನ ಅಧ್ಯಯನ ಪ್ರವಾದಿ (ಸ) ರು ಏನು ಮಾಡಿದರು ಎಂಬುದರ ಕುರಿತಾಗಿರುತ್ತೆ ಹೊರತು ಯಾಕೆ ಮತ್ತು ಹೇಗೆ ಮಾಡಿದರೆಂದಲ್ಲ.

ಉದಾಹರಣೆಗೆ ಬದರ್ ಯುದ್ಧದಲ್ಲಿ ಪ್ರವಾದಿ(ಸ) ರು ತಮ್ಮ ಕೇವಲ ಮುನ್ನೂರಕ್ಕಿಂತ ಸ್ವಲ್ಪ ಅಧಿಕವಿದ್ದ ಅನುಯಾಯಿಗಳೊಂದಿಗೆ ಸಾವಿರಕ್ಕಿಂತ ಅಧಿಕವಿದ್ದ ಕುರೈಶ್ ರೊಂದಿಗೆ ಧೈರ್ಯ ಹಾಗೂ ವೀರತನದಿಂದ ಹೋರಾಡಿ ಗೆದ್ದರು ಎಂಬುದು ನಮಗೆಲ್ಲಾ ಗೊತ್ತು ಆದರೆ ಯುದ್ಧ ಯಾಕೆ ಮಾಡಿದರು ? ಯುದ್ಧದ ವೇಳೆ ಕಡ್ಡಾಯವಾಗಿ ಪಾಲಿಸುವಂತೆ ನೀಡಿದ ಆದೇಶಗಳೇನು ? ಯುದ್ಧದ ಸಂದರ್ಭದಲ್ಲಿ ಮಹಿಳೆ ,ಮಕ್ಕಳು ಹಾಗೂ ವೃದ್ಧರೊಂದಿಗೆ ಹೇಗೆ ವರ್ತಿಸಬೇಕು ? ಯುದ್ಧದ ನಂತರ ಕೈದಿಗಳೊಂದಿಗೆ ಹೇಗೆ ವರ್ತಿಸಬೇಕು ?
ಬಿಡುಗಡೆಯ ಬದಲಾಗಿ ಯುದ್ಧ ಕೈದಿಗಳಿಂದ ಅಪಾರವಾದ ಮೊತ್ತ ಪಡೆಯುವ ಅವಕಾಶವಿದ್ದರೂ ಮುಸ್ಲಿಮರಿಗೆ ಅಕ್ಷರ ಕಲಿಸುವ ಕೈದಿಗಳಿಗೆ ಬಿಡುಗಡೆಗೊಳಿಸಲಾಗುವುದೆಂದು ಪ್ರವಾದಿ (ಸ) ರು ಏಕೆ ಹೇಳಿದರು ?

ಇದಲ್ಲದೆ ಪ್ರವಾದಿ (ಸ) ರನ್ನು ಕುರೈಶರು ಮತ್ತು ತಾಯಫ್ ನ ಜನರು ಅಪಮಾನ ಮಾಡಿ ನಿಂದಿಸಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು ?

ತಾಯಫ್ ನಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಒಬ್ಬ ವ್ಯಕ್ತಿ ಸಂಯಮದಿಂದಿರಲು ಸಾಧ್ಯವೇ ?
ಹತ್ತು ದಿನಗಳ ನಂತರ ತಾಯಫ್ ನಿಂದ ಮಕ್ಕಾಗೆ ಮರಳಿದಾಗ ಕುರೈಶರ ಬಹಿಷ್ಕಾರ ಮತ್ತು ವಿರೋಧದ ನಡುವೆಯೂ ಪ್ರವಾದಿ (ಸ) ರಿಗೆ ರಕ್ಷಣೆ ನೀಡಲು ಮುತಿಮ್ ಬಿನ್ ಅದಿ ಎಂಬ ಮುಸ್ಲಿಮೇತರ ವ್ಯಕ್ತಿ ಸಿದ್ಧವಾಗಲು ಕಾರಣವೇನು ?
ಅದೇ ರೀತಿ ಹಿಜರತ್ ಸಂದರ್ಭದಲ್ಲಿ ಮಕ್ಕಾದಿಂದ ಮದೀನಾದವರೆಗೆ ಪ್ರವಾದಿ (ಸ) ಮತ್ತು ಅಬೂ ಬಕರ್ (ರ) ರಿಗೆ ಮಾರ್ಗದರ್ಶಕನಾಗಿ ಸಹಾಯ ಮಾಡಿದ ವ್ಯಕ್ತಿ ಸಹ ಮುಸ್ಲಿಮನಾಗಿರಲಿಲ್ಲ.
ಹಾಗಾದ್ರೆ ಮೇಲಿನ ಎರಡು ಅತ್ಯಂತ ನಿರ್ಣಾಯಕ ಘಟ್ಟಗಳಲ್ಲಿ ಪ್ರವಾದಿ (ಸ) ರು ಒಬ್ಬ ಮುಸ್ಲಿಮೇತರ ವ್ಯಕ್ತಿಯಿಂದ ಸಹಾಯ ಪಡೆಯಲು ಏಕೆ ಹಿಂಜರಿಯಲಿಲ್ಲ ?
ಮುಸ್ಲಿಮೇತರ ಬಾಂಧವರೊಂದಿಗೆ ನಮ್ಮ ಸಂಬಂಧಗಳು ಹೇಗಿರಬೇಕು ?

ಪ್ರವಾದಿ (ಸ) ರ ನ್ಯಾಯ ಮತ್ತು ಸಮಾನತೆಯ ಪರಿಕಲ್ಪನೆ ಏನಾಗಿತ್ತು ?
ಒಬ್ಬ ತಂದೆಯಾಗಿ , ಒಬ್ಬ ಪತಿಯಾಗಿ ಪ್ರವಾದಿ(ಸ)ರು ಹೇಗೆ ತಮ್ಮ ಕರ್ತವ್ಯ ನಿರ್ವಹಿಸಿದರು ?
ಮಹಿಳೆಯನ್ನು ಕೀಳಾಗಿ ನೋಡುತ್ತಿದ್ದ ಸಮಾಜದಲ್ಲಿ ಅವಳಿಗೆ ಗೌರವ ಮತ್ತು ಸಮಾನ ಹಕ್ಕು ದೊರಕಿಸಲು ಹೇಗೆ ಸಾಧ್ಯವಾಯಿತು ?
ಒಬ್ಬ ಯಜಮಾನ ಮತ್ತು ಗುಲಾಮನನ್ನು ಒಂದೇ ಪಂಕ್ತಿಯಲ್ಲಿ ಸಮನಾಗಿ ನಿಲ್ಲಲು ಪ್ರೇರೇಪಿಸಿದ ಭೋದನೆಗಳಾವುವು ?
ಒಬ್ಬ ಅನಾಥ ಬಾಲಕನ ಹಕ್ಕನ್ನು ನೀಡಲು ನಿರಾಕರಿಸಿದ್ದ ಅಬು ಜಹಲ್ ನಂತಹ ಕೆಟ್ಟ ವ್ಯಕ್ತಿಯೂ ಸಹ ಪ್ರವಾದಿ (ಸ) ರನ್ನು ಕಂಡೊಡನೆ ಪ್ರತಿ ಮಾತಾಡದೇ ಬಾಲಕನ ಹಣ ಹಿಂತಿರುಗಿಸಲು ಕಾರಣವೇನು ?

ಪ್ರವಾದಿ (ಸ) ರು ಇಂದಿಗೂ ಸಹ ನಮಗೆ ಮಾದರಿಯಾಗಿ ಕಾಣಲು ಮತ್ತು ಅವರ ಆದರ್ಶ-ತತ್ವಗಳನ್ನು ಅರ್ಥಪೂರ್ಣವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಲ್ಲಿ ನಮ್ಮ ಅಧ್ಯಯನವು ಈ ರೀತಿಯ ಯಾಕೆ ಎಂಬ ಪ್ರಶ್ನೆಗಳಿಂದ ಕೂಡಿದ್ದರೆ ಮಾತ್ರ ಸಾಧ್ಯ.
ಇಲ್ಲವಾದಲ್ಲಿ ಪ್ರವಾದಿ(ಸ) ರ ಜೀವನ ಚರಿತ್ರೆಯು ನಮಗೆ ಕೇವಲ ಒಬ್ಬ ಮಹಾನ್ ಐತಿಹಾಸಿಕ ವ್ಯಕ್ತಿಯ ಜೀವನವಾಗಿ ಕಾಣಿಸಬಹುದೇ ಹೊರತು ಇಂದಿಗೂ ಅನುಸರಿಸಲು ಯೋಗ್ಯವಾದ ಒಬ್ಬ ಆದರ್ಶ ಹಾಗೂ ಮಾದರಿಯಾಗಿ ಅಲ್ಲ.

@ಇರ್ಷಾದ್ ಬೆಂಗಳೂರು