ಪ್ರಸವ ವೇದನೆ ಮತ್ತು ತರ್ಕ

0
998

ಏ. ಕೆ. ಕುಕ್ಕಿಲ

ಪ್ರಸವ ವೇದನೆ ತೀವ್ರವಾಗತೊಡಗಿತು. ಪ್ರಸವಕ್ಕೆ ಸಂಬಂಧಿಸಿ ಒಂದಕ್ಕಿಂತ ಹೆಚ್ಚು ಪುಸ್ತಕಗಳನ್ನು ಓದಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೂ ಎದೆಯೊಳಗೆ ನಡುಕ ಪ್ರಾರಂಭವಾಯಿತು. ಆಕೆ ತರ್ಕದಲ್ಲಿ ಎತ್ತಿದ ಕೈ. ಪ್ರತಿಯೊಂದನ್ನೂ ತರ್ಕದ ಒರೆಗೆ ಹಚ್ಚಿ ಒಪ್ಪಿಕೊಳ್ಳುವವಳು. ಅಮ್ಮನನ್ನು ಎಷ್ಟು ಬಾರಿ ತರ್ಕದಲ್ಲಿ ಮಣಿಸಿದ್ದಾಳೋ ಗೊತ್ತಿಲ್ಲ. ತನ್ನ ಹುಟ್ಟಿನ ಸಮಯದಲ್ಲಿ ಅನುಭವಿಸಿದ ನೋವು, ವೇದನೆಗಳನ್ನು ಸ್ಮರಿಸಿ ಅಮ್ಮ ಭಾವುಕವಾಗುವಾಗ ಆಕೆ ತೀರಾ ನಿರ್ಭಾವುಕವಾಗಿ ಅದನ್ನು ತರ್ಕಕ್ಕೊಡ್ಡುತ್ತಿದ್ದಳು. “ನೀವು ನನ್ನನ್ನು ಪ್ರಸವಿಸಬೇಕೆಂದು ತೀರ್ಮಾನಿಸಿ ಗರ್ಭ ಧರಿಸಿರಲಿಲ್ಲ, ನಿಮ್ಮಿಬ್ಬರ ದಾಂಪತ್ಯ ಸುಖದ ಫಲಿತಾಂಶವಾಗಿ ನಾನು ಹುಟ್ಟಿದೆ, ಅದರಲ್ಲಿ ಭಾವುಕತೆಗೇನು ಸ್ಥಾನ..” ಎಂದು ಒಮ್ಮೆ ಅಮ್ಮನ ಬಾಯಿ ಮುಚ್ಚಿಸಿದ್ದಳು. ಅಮ್ಮ ಐದು ಮಕ್ಕಳನ್ನು ಪ್ರಸವಿಸಿದ್ದು ಮತ್ತು ಅದಕ್ಕಾಗಿ ಅಮ್ಮ ಅನುಭವಿಸಿರಬಹುದಾದ ವೇದನೆಯನ್ನು ಆಕೆಯ ತರ್ಕಶಾಸ್ತ್ರವು ತೀರಾ ಸಾಮಾನ್ಯವಾಗಿ ಕಂಡಿತ್ತು.
ಮುಂಜಾನೆಯಿಂದ ವೇದನೆಯನ್ನು ಅನುಭವಿಸಿದ ಆಕೆ ಇಳಿಸಂಜೆಯಾಗುವಾಗ ಪ್ರಸವಿಸಿದಳು. ಅಮ್ಮ ತರ್ಕಕ್ಕಿಂತ ಮಿಗಿಲು ಎಂದಾಕೆಗೆ ಅನಿಸಿತು. ಅಮ್ಮ ಇರುತ್ತಿದ್ದರೆ… ಎಂದು ಅನಿಸಿದ್ದೇ ತಡ, ಆಕೆಯ ಕೆನ್ನೆ ಒದ್ದೆಯಾಯಿತು. ಸಿಹಿ ಹಂಚುತ್ತಾ ಖುಷಿಯಲ್ಲಿದ್ದ ಸಂಬಂದಿಕರು ಕಣ್ಣೀರನ್ನು ನೋಡಿ ಅಚ್ಚರಿಪಟ್ಟರು.

“ಇದು ಅಳುವ ಸಮಯವಲ್ಲ, ನಗುವ ಸಮಯ” ಎಂದು ಸಾಂತ್ವನಿಸಿದರು.