ಫೆಲೆಸ್ತೀನ್‍ನಲ್ಲಿ ಹಮಾಸ್-ಫತಹ್ ಮೈತ್ರಿ ಸರಕಾರ?

0
489

ಫೆಲೆಸ್ತೀನ್‍ನಲ್ಲಿ ಐಕ್ಯ (ಮೈತ್ರಿ) ಸರಕಾರ ರಚನೆಯಾಗುವುದರೊಂದಿಗೆ ರಮಲ್ಲಾ ಪುನಃ ಜಗತ್ತಿನ ಗಮನವನ್ನು ಆಕರ್ಷಿಸಿದೆ. ಮಧ್ಯಪ್ರಾಚ್ಯದ ಶಾಂತಿಪಾಲಕರಾದ, ಅಮೆರಿಕ, ರಷ್ಯ, ಯುರೋಪಿಯನ್ ಯೂನಿಯನ್, ವಿಶ್ವಸಂಸ್ಥೆ ಈ ನಾಲ್ಕು ಶಕ್ತಿಗಳ ದೃಷ್ಟಿ ಈಗ ರಮಲ್ಲದತ್ತ ಹರಿದಿದೆ. ಈ ಹಿಂದೆ ಕೂಡಾ ರಮಲ್ಲಾ ಸುದ್ದಿಯಾಗಿತ್ತು. 1987ರಲ್ಲಿ ಒಂದನೇ ಇಂತಿಫಾದ ಆರಂಭವಾದಾಗ ಮೊದಲ ಬಾರಿ ಅದರಲ್ಲಿ ಸೇರಿದ್ದು ಪಶ್ಚಿಮದಂಡೆಯ ಮಧ್ಯದಲ್ಲಿರುವ ರಮಲ್ಲಾದ ಯುವಕರು. ಸರ್ವಾಯುಧಭೂಷಿತ ರಾದ ಇಸ್ರೇಲಿನ ಸೈನಿಕರ ಕೋವಿ ಗರ್ಜಿಸಿದಾಗ ಸಾಯಲು ನಾವು ತಯಾರಿಲ್ಲ ಎಂದು ಅವರು ಘೋಷಿಸಿ, ಕಲ್ಲು, ಕೋವಿ, ಗುಂಡುಗಳೊಂದಿಗೆ ಸೇನೆಯನ್ನು ಎದುರಿಸಿದರು. 1967ರಲ್ಲಿ ಆರು ದಿವಸಗಳ ಯುದ್ಧದಲ್ಲಿ ಜೆರುಸಲೇಂ ಮತ್ತು ಸಮೀಪದ ಪ್ರದೇಶಗಳನ್ನು ಇಸ್ರೇಲ್ ವಶಪಡಿಸಿ ಕೊಂಡಿತ್ತು. ಈ ಯುದ್ಧದ ಇಪ್ಪತ್ತನೇ ವಾರ್ಷಿಕ ಆಚರಿಸುತ್ತಿದ್ದಾಗ ಅವರು ಪ್ರತಿಭಟನೆಯ ಇಂತಿಫಾದ (ಜಾಗೃತಿ) ಎನ್ನುವ ಹೆಸರಿನ ಪ್ರತಿಭಟನೆಯನ್ನು ಆರಂಭಿಸಿದರು. ಇಂದು ರಮಲ್ಲಾದಲ್ಲಿ ಪ್ರಧಾನಿ ಡಾ. ರಾಮಿ ಹಂದುಲ್ಲ ಫೆಲೆಸ್ತೀನಿ ಐಕ್ಯ ಸರಕಾರದ ಆಡಳಿತ ಕಾರ್ಯದ ಕುರಿತು ಚರ್ಚಿಸುತ್ತಿದ್ದಾರೆ.
ಸ್ವದೇಶದಲ್ಲೇ ಭೂಮಿ, ಮನೆ, ನಡೆದಾಡಲು ದಾರಿ ಇಲ್ಲದೆ ಕಷ್ಟಪಡುವ ವಿಶ್ವದ ಒಂದೇ ಒಂದು ಜನತೆಯಿದ್ದರೆ ಅದು ಫೆಲೆಸ್ತೀನಿಯರು ಮಾತ್ರ ಆಗಿರಬಹುದು. ಸೈನಿಕ ಶಕ್ತಿ ಮತ್ತು ಸಂಪತ್ತು ವಿಜಯದ ಮಾನದಂಡವಾಗಿ ಪರಿಗಣಿಸುವ ಇಂದಿನ ಆಧುನಿಕ ಜಗತ್ತಿನಲ್ಲಿ ಪೀಡಿತರ ಅಳುವಿಗೆ ಕಿವಿಗೊಡಲು ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಸಾಧ್ಯವಿಲ್ಲ. ಡೊನಾಲ್ಡ್ ಟ್ರಂಪ್ ಚುನಾವಣಾ ಕಾಲದಲ್ಲಿಯೇ ಇಸ್ರೇಲ್‍ನ ಇಂಗಿತಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸಿದ್ದರು. ಟೆಲ್ ಅವೀವ್‍ನಿಂದ ರಾಜಧಾನಿಯನ್ನು ಜೆರುಸಲೇಂಗೆ ಬದಲಾಯಿಸಬೇಕೆನ್ನುವ ನೆತನ್ಯಾಹುರ ಬೇಡಿಕೆಗೆ ಅನುಕೂಲಕರವಾಗಿ ಹೇಳಿಕೆ ನೀಡಿದ್ದರು. ಫೆಲೆಸ್ತೀನಿಯರನ್ನು ಮಣಿಸುವ ಉದ್ದೇಶದಿಂದ ಟ್ರಂಪ್‍ರ ಅಳಿಯ ಜೆರಾಲ್ಡ್ ಕ್ರುಸ್ನರ್ ಇಸ್ರೇಲ್ ಪ್ರವಾಸ ನಡೆಸಿದರು. ಆದರೆ ಇದು ಹಮಾಸ್ ಮತ್ತು ಫತಹನ್ನು ಒಟ್ಟುಗೂಡಲು ಪ್ರೇರೇಪಿಸಿತು. ಟ್ರಂಪ್ ಅಧಿಕಾರವಹಿಸಿಕೊಂಡೊಡನೆ ಜನವರಿ ಯಲ್ಲಿ ಹಮಾಸ್ ಮತ್ತು ಫತಹ್‍ನ ಪ್ರತಿನಿಧಿಗಳು ರಷ್ಯದ ವಿದೇಶ ಸಚಿವ ಶಾಸೆ ಲಾವ್ರೋರೋವ್ ರೊಡನೆ ಮೂರು ದಿವಸ ಸಮಾಲೋಚನೆ ನಡೆಸಿದ್ದರು. ಪರಸ್ಪರ ಭಿನ್ನಾಭಿಪ್ರಾಯವನ್ನು ಮರೆತು ಒಗ್ಗೂಡಲು ಸಿದ್ಧರಾದುದರ ಫಲಿತಾಂಶವೇ ಫೆಲೆಸ್ತೀನಿನ ಐಕ್ಯ (ಮೈತ್ರಿ) ಸರಕಾರವಾಗಿದೆ.