ಬರಬರುತ್ತಾ ರಾಯರ ಕುದುರೆಗೇನಾಯಿತು?

0
469

ಬಹುಶಃ ಅಧ್ಯಕ್ಷರಾಗಿ ಆಯ್ಕೆಯಾದ ಆರಂಭದ ಆ ಉತ್ಸಾಹ ಟ್ರಂಪ್‍ರಲ್ಲಿ ಕುಗ್ಗುತ್ತಿದೆಯೇ? ಟ್ರಂಪ್ ಕುರಿತು ಹತ್ತಿರದಿಂದ ಬಲ್ಲವರು  ಹೌದೆನ್ನುತ್ತಾರೆ. ಅವರ ಇತ್ತೀಚೆಗಿನ ನಡೆಗಳೆಲ್ಲವೂ ಹೀಗೆಯೇ ಇದೆ. ಅಮೆರಿಕ ಜಗತ್ತಿಗೆ ಪೊಲೀಸ್. ಟ್ರಂಪ್ ಅಧ್ಯಕ್ಷರಾದ ಆರಂಭ ದಿನದಲ್ಲಿ  ಮುಸ್ಲಿಮರ ವಿರುದ್ಧ ನಿರಂತರ ಅಮೆರಿಕದೊಳಗೂ ಅವಹೇಳನ ನಡೆದಾಗ ಅಮೆರಿಕದ ಶತಮಾನಗಳ ಹಿಂದಿನ ಜನಾಂಗೀಯ ತಾರತಮ್ಯ  ನೀತಿ ಪುನಃ ಗರಿಗೆದರುತ್ತಿದೆ ಎಂದು ಬಲವಾದ ಆತಂಕ ಹುಟ್ಟಿಕೊಂಡಿತ್ತು. ಆದರೆ ಈಗ ಹಿಂದಿನ ಅಧ್ಯಕ್ಷರ ನೀತಿಗೆ ವಿರುದ್ಧ ಟ್ರಂಪ್  ಸಿರಿಯ, ಅಫ್ಘಾನಿಸ್ತಾನ ದಿಂದ ಸೈನಿಕರನ್ನು ಖಾಲಿ ಮಾಡಿಸಲು ಹೊರಟಿದ್ದಾರೆ.

ಹತ್ತಾರು ವರ್ಷಗಳಿಂದ ಸರ್ವಾಧಿಕಾರಿಯ ಹಿಡಿತದಿಂದ ವಿಮೋಚನೆ ಬಯಸಿದ ಸಿರಿಯದ ಜನರ ಹೋರಾಟ ಆಂತರಿಕ ಯುದ್ಧವಾಗಿ  ಮಾರ್ಪಟ್ಟ 2014ರಲ್ಲಿ ಅಮೆರಿಕದ ಸೇನೆ ಅಲ್ಲಿಗೆ ಬಂತು. ಸಿರಿಯದ ಅಧ್ಯಕ್ಷ ಬಶರುಲ್ ಅಸದ್‍ರ ವಿರುದ್ಧ ಹೋರಾಡುತ್ತಿದ್ದ ಸಿರಿಯನ್  ಡೆಮಾಕ್ರಾಟಿಕ್ ಫ್ರಂಟ್‍ಗೆ ಅಮೇರಿಕ ಸಶಸ್ತ್ರ ಬೆಂಬಲ ಕೊಟ್ಟಿತು. ಜೊತೆಗೆ ಐಸಿಸ್‍ನ ಶಕ್ತಿ ಕೇಂದ್ರದಲ್ಲಿ ಆಕಾಶ ದಾಳಿಗೂ ಮುಂದಾಯಿತು.

ಅಮೆರಿಕದ ಈ ದಾಳಿಯಲ್ಲಿ 3740 ಸಿರಿಯನ್ ನಾಗರಿಕರು ಮತ್ತು 2000ಕ್ಕೂ ಹೆಚ್ಚು ಐಸಿಸ್‍ನವರು ಕೊಲ್ಲಲ್ಪಟ್ಟಿದ್ದಾರೆಂದು ಅಧಿಕೃತವಾಗಿ  ಹೇಳಲಾಗುತ್ತಿದೆ. ಆದರೆ, ಅಮೆರಿಕಕ್ಕೆ ಅಸದ್‍ರನ್ನು ಹಿಡಿತ ದಲ್ಲಿಟ್ಟುಕೊಳ್ಳುವುದಕ್ಕೂ ಆಗಲಿಲ್ಲ. ಐಸಿಸ್ ಅನ್ನು ಸಂಪೂರ್ಣ ಇಲ್ಲದಾಗಿಸಲೂ  ಆಗಲಿಲ್ಲ. ಹಣ, ಸೇನೆಯ ಶ್ರಮ, ಜೀವ ಇವೆಲ್ಲವೂ ಸಿರಿಯದಲ್ಲಿ ನೆಲದಲ್ಲಿ ವಿನಾಕಾರಣ ಕಳೆದು ಹೋಗಿದೆ, ಇನ್ನೂ ಹೋಗುತ್ತಲೇ  ಇರುತ್ತದೆ. ಇದಕ್ಕೆ ಅರ್ಥವಿಲ್ಲ. ಈ ನಿಟ್ಟಿನಲ್ಲಿ ಪೂರ್ವ ಅಧ್ಯಕ್ಷರ ಎಡಬಿಡಂಗಿತನ ತಾನು ಮಾಡಿದರೆ ಅಮೆರಿಕಕ್ಕೆ ಇನ್ನಷ್ಟು ನಷ್ಟ ಎಂಬ ಲೆಕ್ಕವನ್ನೆಲ್ಲ ಕೂಡಿ ಕಳೆದು ಅಳೆದು ನೋಡಿದ ಟ್ರಂಪ್ ಒಬ್ಬ ಉದ್ಯಮಿಯಂತೆ ನಿರ್ಧರಿಸಿಬಿಟ್ಟರು. ಇನ್ನು ಸಿರಿಯದಲ್ಲಿ ನಮ್ಮ ಸೈನಿಕರಿಲ್ಲ.  ಹೊಡೆದಾಡಿ ಸಾಯುವುದಿದ್ದರೆ ನಮ್ಮವರೇಕೆ ಅಲ್ಲಿ ಸಾಯಬೇಕು? ಅಲ್ಲಿನವರೇ ಬಡಿದುಕೊಂಡು ಸಾಯಲಿ ಎಂದು ನಿರ್ಧರಿಸಿದರು. ಈ  ವಿಷಯದಲ್ಲಿ ಟ್ರಂಪ್ ಅಪ್ಪಟ ವ್ಯವಹಾರಸ್ಥನಂತೆ ವರ್ತಿಸಿದ್ದಾರೆ. ಅಷ್ಟಕ್ಕೂ ಅವ ರೊಬ್ಬ ಯಶಸ್ವಿ ಉದ್ಯಮಿ. ಹಿಂದಿನ ಯಾವುದೇ  ಅಧ್ಯಕ್ಷರಿಂದ ಇಂಥ ನಿರ್ಧಾರ ತಳೆಯಲಾಗಲಿಲ್ಲ ಎಂಬುದಿಲ್ಲಿ ಬಹಳ ಮುಖ್ಯವಾಗುತ್ತದೆ.

2001ರ ಸೆಪ್ಟಂಬರ್‍ನಲ್ಲಿ ಅಮೆರಿಕದ ಅವಳಿಗೋಪುರ ಕುಸಿದ ಎರಡೇ ತಿಂಗಳಲ್ಲಿ ಅಂದಿನ ಅಧ್ಯಕ್ಷ ಜೂನಿಯರ್ ಬುಶ್ ಭಯೋ ತ್ಪಾದಕರ  ವಿರುದ್ಧ ಯುದ್ಧಘೋಷಿಸಿ ಅಪ್ಘಾನಿಸ್ತಾನಕ್ಕೆ ಸೇನೆ ಕಳುಹಿಸಿದರು. ಬರೋಬ್ಬರಿ ಹದಿನೇಳು ವರ್ಷಗಳ ನಂತರವೂ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಇದೆ. ಕೊನೆಯಾಗಿಲ್ಲ. ಅವರನ್ನು ಇಲ್ಲವಾಗಿಸಲು ಅಮೆರಿಕದ ಸೈನ್ಯಕ್ಕೆ ಸಾಧ್ಯವೂ ಆಗಿಲ್ಲ. ಅಲ್ಲಿಗೆ ಅತಿಕ್ರಮಿಸಲು ಸೇನೆ ಕಳುಹಿಸಿದಾಗ  ಅಲ್ಲಿನ ಪರಿಸ್ಥಿತಿ ಹೇಗಿತ್ತೋ ಅದು ಈಗಲೂ ಹಾಗೆಯೇ ಇದೆ. ಇವನ್ನೆಲ್ಲ ಲೆಕ್ಕ ಮಾಡಿ ನೋಡಿದ ಟ್ರಂಪ್ ಯಾಕೆ ಅಲ್ಲಿಗಾಗಿ ನಮ್ಮ ಹಣ  ಹೋಗಬೇಕೆಂದು ಯೋಚಿಸತೊಡಗಿದರು. ಅಲ್ಲಿಂದಲೂ ಅರ್ಧಾಂಶ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ.

ಇವೆಲ್ಲ ಯಾವ ಟ್ರಂಪ್ ಮಾಡುತ್ತಿರುವುದೆಂದರೆ ಅಧ್ಯಕ್ಷರಾಗಿದ್ದಾಗ ಜನಾಂಗೀಯವಾಗಿ ಚಿಂತಿಸಿದ, ಮುಸ್ಲಿಮ್ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ  ಪ್ರವೇಶಕ್ಕೆ ನಿಷೇಧ ಹೇರಿದ, ನಿರಾಶ್ರಿತರನ್ನು ಅಮೇರಿಕದತ್ತ ಒಂದು ಹೆಜ್ಜೆ ಮುಂದೆ ಇಡಲೂ ಬಿಡದ ನಿರ್ಧಾರ ತೆಗೆದುಕೊಂಡ ಟ್ರಂಪ್  ಮಾಡುತ್ತಿದ್ದಾರೆ. ಬಹುಶಃ ಇಲ್ಲಿಯೂ ಅವರ ಆರ್ಥಿಕ ಲೆಕ್ಕಾಚಾರವೇ ಹೀಗೆ ಮಾಡಿಸಿರಬಹುದು. ನಿರಾಶ್ರಿತರಿಗಾಗಿ ಯಾಕೆ ಹಣ ಶ್ರಮ ನಷ್ಟ  ಮಾಡಿಕೊಳ್ಳಬೇಕು? ಹೊರ ದೇಶದ ಪ್ರಜೆಗಳಿಗೆ ಯಾಕೆ ಇಲ್ಲಿ ಉದ್ಯೋಗ ಕೊಡಬೇಕು? ಇವೆಲ್ಲ ಅಮೆರಿಕಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟವೇ  ಕೊಡುವಂತಹದ್ದು.

ಈಗ ಅಫ್ಘಾನಿಸ್ತಾನ, ಸಿರಿಯಗಳಿಂದ ಸೈನ್ಯ ವನ್ನು ವಾಪಸು ಕರೆಯಿಸಿಕೊಂಡರೆ ಪ್ರಾಣವೂ ಹಣವೂ ಸಮಯವೂ ಉಳಿಯುತ್ತದೆ ಎಂಬ  ಪಕ್ಕಾ ಲೆಕ್ಕಾಚಾರ ಟ್ರಂಪ್‍ರದ್ದಾಗಿದೆ. ಇಲ್ಲಿಯೂ ಅಮೆರಿಕ ಫಸ್ಟ್ ಎಂಬ ಚಿಂತನೆ ಅವರದ್ದು. ಆದರೆ ಈ ಎಲ್ಲ ನಿರ್ಧಾರಗಳು ಟ್ರಂಪ್‍ಗೆ ಸುಲಭವಾಗಿಲ್ಲ. ಜಗತ್ತಿನಲ್ಲಿ ನಡೆಸುವ ಪೊಲೀಸ್ ಗಿರಿಯನ್ನೇ ತಲೆಯಲ್ಲಿ ತುಂಬಿಟ್ಟುಕೊಂಡವರು ಅಮೆರಿಕದ ಆಡಳಿತಗಾರರು. ಸಿರಿಯದಿಂದ  ಸೈನ್ಯ ವಾಪಾಸು ತರುವುದನ್ನು ವಿರೋಧಿಸಿ ಮೊದಲು ಪೆಂಟಗನ್ ಮುಖ್ಯಸ್ಥ ಜಿಂ ಮ್ಯಾಚಿಸ್ ರಾಜೀ ನಾಮೆ ಇತ್ತರು. ತನ್ನ ರಾಜೀನಾಮೆಗೆ  ಸಿರಿಯದ ವಿಷಯ ಕಾರಣವೆಂದು ಅವರು ಹೇಳಿಯೂ ಬಿಟ್ಟರು.

ಸಿರಿಯದ 2000 ಸೈನಿಕರನ್ನು ವಾಪಾಸು ಕರೆಯುತ್ತಿರುವುದು ಐಸಿಸ್  ಅನ್ನು ಸೋಲಿಸಿ ಯಾಗಿದೆ ಎಂಬ ಕಾರಣದಿಂದಲ್ಲ. ಟ್ರಂಪ್‍ರ ಖರ್ಚು ಕಡಿಮೆ ಮಾಡುವ ಲೆಕ್ಕಾಚಾರದಲ್ಲಿ. ಅಫ್ಘಾನಿಸ್ತಾನದಲ್ಲಿರುವ ಹದಿ ನಾಲ್ಕು ಸಾವಿರ ಸೈನಿಕ ರಲ್ಲಿ ಅರ್ಧದಷ್ಟು ಸೈನಿಕರನ್ನು ಹಿಂದೆ ಕರೆಸುವುದು ಕೂಡ ಇದೇ ಕಾರಣದಿಂದ. ಆದರೆ ಇದನ್ನು ವಿರೋಧಿಸಿ  ಅಮೆರಿಕದ ರಾಜತಾಂತ್ರಿಕ ಪ್ರತಿನಿಧಿ ಬ್ರೆಟ್ ಮೆಕ್‍ಗರ್ಗ್‍ರೂ ರಾಜೀನಾಮೆ ನೀಡಿದರು. ಇವರೆಲ್ಲರಿಗೂ ತಮ್ಮ ದೇಶಕ್ಕೆಷ್ಟು ನಷ್ಟವಾದರೂ  ಜಗತ್ತಿನ ಪೊಲೀಸ್‍ಗಿರಿ ಮುಖ್ಯವಾಗಿದೆ. ಹುಂಬ ನಂತೆ ಕಾಣುವ ಡೊನಾಲ್ಡ್ ಟ್ರಂಪ್ ಯಾರ ರಾಜೀನಾಮೆಗೂ ಬಗ್ಗದೆ ಬುದ್ಧಿವಂತಿಕೆ  ಮೆರೆದಿದ್ದಾರೆ. ಆದರೆ ಈ ನಿರ್ಧಾರದ ಹಿಂದೆ ಕೇವಲ ಆರ್ಥಿಕ ಕಾರಣವೊಂದೇ ಆಗಿರಬಹುದು ಎಂದು ಹೇಳಿ ಬಿಡುವುದು ಆತುರದ  ನಿರ್ಧಾರವಾಗ ಬಹುದು. ಒಂದರ್ಥದಲ್ಲಿ ಇದರ ಹಿಂದೆ ಸಮಾ ಧಾನಕ್ಕಿಂತ ಹೆಚ್ಚು ಆತಂಕಗಳೇ ಇವೆ. ಅಮೆರಿಕ ದಲ್ಲೇ ಕೂತು ಹೊರ  ದೇಶಗಳನ್ನು ಹೊಡೆದಾಡಿಸಿ ದರೆ ಹಣವೂ ಉಳಿಯುತ್ತೆ, ತನ್ನ ಸೈನಿಕರ ಜೀವವೂ ಉಳಿಯುತ್ತೆ. ಆಯುಧಗಳೂ ಮಾರಿ ಹೋಗುತ್ತವೆ, ಅಲ್ವಾ.