ಬಿಜೆಪಿಯ ಸೋಲನ್ನು ಆಸಿಫಾ ಬರೆಯುವಳೇನೋ

0
1078
ಕಳೆದ ಫೆಬ್ರವರಿಯಲ್ಲಿ ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಹಿಂದೂ ಏಕ್ತಾ ಮಂಚ್ ನಡೆಸಿದ ರ್ಯಾಲಿಗೂ ಇದೇ ಎಪ್ರಿಲ್‍ನಲ್ಲಿ ಜಾರ್ಖಂಡ್‍ನ  ರಾಮ್‍ಘರ್ ನಲ್ಲಿ ಬಿಜೆಪಿ ನಡೆಸಿದ ರಾಲಿಗೂ (ಟೈಮ್ ಆಫ್ ಇಂಡಿಯಾ, ಎಪ್ರಿಲ್ 11) ಒಂದಕ್ಕಿಂತ ಹೆಚ್ಚು ಸಾಮ್ಯತೆಗಳಿವೆ. 8ರ ಹರೆಯದ  ಬಾಲೆಯನ್ನು ಹುರಿದು ಮುಕ್ಕಿದ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕಥುವಾದಲ್ಲಿ ರಾಲಿ ನಡೆದಿದ್ದರೆ, ಗೋಮಾಂಸ ಸಾಗಿಸುತ್ತಿದ್ದಾರೆಂದು ಆರೋಪಿಸಿ ಅಲೀಮುದ್ದೀನ್ ಅನ್ಸಾರಿಯನ್ನು 2017 ಜೂನ್ 9 ರಂದು ಥಳಿಸಿ ಕೊಂದವರನ್ನು ಅಮಾಯಕರೆಂದು  ವಾದಿಸಿ ರಾಮ್‍ಘರ್ ನಲ್ಲಿ ರಾಲಿ ನಡೆಸಲಾಯಿತು.
ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಹಿಂದೂ ಏಕ್ತಾ ಮಂಚ್ ನಡೆಸಿದ ರಾಲಿ

ರಾಮ್ ಘರ್ ನ ರಾಲಿಗೆ ನೇತೃತ್ವ ನೀಡಿದ ಬಿಜೆಪಿಯ ಮಾಜಿ ಶಾಸಕ ಶಂಕರ್ ಚೌಧರಿಯವರು, ರಾಳಿಗಿಂತ ಮೊದಲು ದುರ್ಗಾ ದೇವಾಲಯದಲ್ಲಿ ತಲೆ ಬೋಳಿಸಿದರು. ಪೊಲೀಸ್ ಕಸ್ಟಡಿಯಲ್ಲಿ ಅಲೀಮುದ್ದೀನ್ ಸಾವಿಗೀಡಾಗಿದ್ದಾನೆಯೇ ಹೊರತು ಗುಂಪು ಆತನನ್ನು ಥಳಿಸಿಯೇ ಇಲ್ಲ ಎಂದು ವಾದಿಸಿದರು. ಬಿಜೆಪಿಯ ಜಿಲ್ಲಾ ಮಾಧ್ಯಮ ಮುಖ್ಯಸ್ಥ ನಿತ್ಯಾನಂದ್ ಮಹತೋ ಸೇರಿದಂತೆ 11 ಮಂದಿಗೆ ತ್ವರಿತಗತಿ ನ್ಯಾಯಾಲಯವು ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಅವರು  ಪ್ರಶ್ನಿಸಿದರು. ಇಡೀ ರಾಲಿಯಲ್ಲಿ ಭಾರತದ ರಾಷ್ಟ್ರ ಧ್ವಜ, ಭಾರತ್ ಮಾತಾಕಿ ಜೈ ಮತ್ತು ಕೇಸರಿ ಧ್ವಜಗಳು ರಾರಾಜಿಸಿದುವು. ಅಂದಹಾಗೆ,  ಕಥುವಾದಲ್ಲಿ ಹಿಂದೂ ಏಕ್ತಾ ಮಂಚ್ ಎಂಬ ವೇದಿಕೆಯಡಿ ನಡೆಸಲಾದ ರಾಲಿಯಲ್ಲಿ ಬಿಜೆಪಿಯ ಇಬ್ಬರು ಸಚಿವರು ಭಾಗವಹಿಸಿದರು. ¨ ಭಾರತದ ರಾಷ್ಟ್ರ ಧ್ವಜ, ಭಾರತ್ ಮಾತಾಕಿ ಜೈಗಳು ಈ ರಾಲಿಯಲ್ಲೂ ಕಾಣಿಸಿದುವು. ವಿಷಾದ ಏನೆಂದರೆ, ಎರಡೂ ರಾಲಿಗಳನ್ನು ಸಂಘಟಿಸಿದ್ದು ಬಿಜೆಪಿ ಮತ್ತು ಈ ರಾಲಿಗಳಲ್ಲಿ ಅಸಿಫಾ ಮತ್ತು ಅಲೀ

ಜಾರ್ಖಂಡ್‍ನ  ರಾಮ್ ಘರ್ ನಲ್ಲಿ ಬಿಜೆಪಿ ನಡೆಸಿದ ರ್ಯಾಲಿ

ಮುದ್ದೀನ್ ಅನ್ಸಾರಿಯನ್ನು  ಹತ್ಯೆಗೈದವರನ್ನು ಬಿಡುಗಡೆಗೊಳಿಸಿ ಎಂದು ಆಗ್ರಹಿಸ ಲಾಯಿತು. ಏನಿದರ ಅರ್ಥ? ಬಿಜೆಪಿಯ ರಾಷ್ಟ್ರವಾದಿ ಸಿದ್ಧಾಂತವು ಮುಸ್ಲಿಮ್  ವಿರೋಧಿ ಆಧಾರದಡಿಯಲ್ಲಿ ರಚಿತವಾಗಿದೆಯೇ? ಮುಸ್ಲಿಮರ ವಿರುದ್ಧ ಮಾಡುವ ಯಾವುದೇ ಕ್ರೌರ್ಯವು ಸಹ್ಯ ಎಂದು ಅದು  ಪ್ರತಿಪಾದಿಸುತ್ತಿದೆಯೇ? ಅಲೀಮುದ್ದೀನ್ ಅನ್ಸಾರಿಯನ್ನು ನಡು ಬೀದಿಯಲ್ಲಿಟ್ಟು ಥಳಿಸಿದ ವಿಡಿಯೋ ಈ ದೇಶದ ಕೋಟ್ಯಾಂತರ ಮಂದಿಯ  ಮೊಬೈಲ್‍ನಲ್ಲಿ ಇವತ್ತಿಗೂ ಇದೆ. ಆತ ಗೋ ಮಾಂಸ ಸಾಗಿಸುತ್ತಿದ್ದನೋ ಇಲ್ಲವೋ ಅನ್ನುವುದು ನಂತರದ ವಿಚಾರ. ಬೇಡ, ಗೋ ಮಾಂಸ  ಸಾಗಿಸುತ್ತಿದ್ದನೆಂದೇ ಇಟ್ಟುಕೊಳ್ಳೋಣ. ಅದನ್ನು ಪ್ರಶ್ನಿಸುವ ವಿಧಾನ ಯಾವುದು? ಪ್ರಶ್ನಿಸಬೇಕಾದವರು ಯಾರು? ಖಾಸಗಿ ಗುಂಪಿಗೆ ವ್ಯಕ್ತಿಯ  ಮೇಲೆ ಕೈ ಮಾಡುವ ಅಧಿಕಾರವನ್ನು ಈ ದೇಶದ ಕಾನೂನ ನೀಡಿಯೇ ಇಲ್ಲ. ಆದರೆ ಬಿಜೆಪಿ ಪದೇ ಪದೇ ಈ ಬಹುಮುಖ್ಯ ಪ್ರಶ್ನೆಯಿಂದ  ತಪ್ಪಿಸಿಕೊಳ್ಳುತ್ತಿರುವುದು ಯಾಕಾಗಿ? ಸಂತ್ರಸ್ತರು ಮುಸ್ಲಿಮರಾದರೆ ಅದನ್ನು ಸಂಭ್ರಮಿಸುವ ಮತ್ತು ಆರೋಪಿಗಳ ಪರವೇ ರಾಲಿ ನಡೆಸುವ  ಹಂತಕ್ಕೆ ಬಿಜೆಪಿ ಮುಟ್ಟಿರುವುದು ಏತಕ್ಕೆ? ದೇಶವನ್ನು ಆಳುತ್ತಿರುವ ಪಕ್ಷವೊಂದು ಈ ರೀತಿಯಾಗಿ ವರ್ತಿಸುತ್ತಿರುವುದಕ್ಕೆ ರಾಜಕೀಯ  ಕಾರಣವೇ? 8ರ ಹರೆಯದ ಬಾಲೆಯನ್ನು ಹುರಿದು ಮುಕ್ಕಿದವರ ಪರ ರಾಲಿ ನಡೆಸಿದರೆ ಬಿಜೆಪಿಗೆ ಓಟು ಸಿಗುತ್ತದೆಯೇ? ಮುಸ್ಲಿಮರ  ವಿರುದ್ಧ ಹಲ್ಲೆ ಹತ್ಯೆ, ಅತ್ಯಾಚಾರ ನಡೆಸುವುದರಿಂದ ಬಿಜೆಪಿಯ ಓಟುಗಳ ಸಂಖ್ಯೆಯಲ್ಲಿ ಏರಿಕೆ ಉಂಟಾಗುತ್ತ ದೆಂದಾದರೆ, ಆ ಓಟು  ಹಾಕುವವರು ಯಾರು? ಅವರ ಮನಃಸ್ಥಿತಿ ಏನು?

ನಿಜ; ಅತ್ಯಾಚಾರ, ಹತ್ಯೆ, ಹಲ್ಲೆ ಇತ್ಯಾದಿಗಳು ಪ್ರಧಾನಿ ನರೇಂದ್ರ ಮೋದಿಯರ ಅಧಿಕಾರಾವಧಿಯಲ್ಲಿ ಆರಂಭವಾದದ್ದಲ್ಲ ಮತ್ತು ಅವರು  ಅಧಿಕಾರದಿಂದ ಕೆಳಗಿಳಿದ ಕೂಡಲೇ ಇವೆಲ್ಲ ದಿಢೀರಾಗಿ ಕೊನೆ ಗೊಳ್ಳುತ್ತದೆಂದು ಭಾವಿಸಬೇಕಾಗಿಯೂ ಇಲ್ಲ. ಆದರೆ, ಒಂ

ದು ಸರಕಾರದ  ಯೋಗ್ಯತೆ ಗೊತ್ತಾಗುವುದು- ಈ ಎಲ್ಲ ಸಂದರ್ಭಗಳಲ್ಲಿ ಅದರ ಪ್ರತಿಕ್ರಿಯೆ ಏನಾಗಿರುತ್ತದೆ ಎಂಬುದರ ಆಧಾರದಲ್ಲಿ. ಅಸಿಫಾಳನ್ನು ಹುರಿದು  ಮುಕ್ಕಿದ್ದು ಜನವರಿಯಲ್ಲಿ. ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಹಿಂದೂ ಏಕ್ತಾ ಮಂಚ್ ರಾಲಿ ನಡೆಸಿದ್ದು ಫೆಬ್ರವರಿಯಲ್ಲಿ.  ಬಿಜೆಪಿಯ ಇಬ್ಬರು ಸಚಿವರು ಇದೇ ರಾಲಿಯಲ್ಲಿ ಭಾಗವಹಿಸಿದ್ದರು. ಒಂದು ವೇಳೆ, ಬಿಜೆಪಿಗೆ ಈ ಬಗ್ಗೆ ಅತೃಪ್ತಿ ಇದ್ದಿದ್ದೇ ಆಗಿದ್ದರೆ, ತಕ್ಷಣಕ್ಕೆ  ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರಿಗೆ ಸೂಚನೆ ಕೊಡಬಹುದಿತ್ತು. ದುರಂತ  ಏನೆಂದರೆ, ಈ ಘಟನೆ ನಡೆದು ಎರಡು ತಿಂಗಳವರೆಗೆ ಬಿಜೆಪಿ ಮೌನ ಪಾಲಿಸಿತು. ಯಾವಾಗ ದೇಶಾದ್ಯಂತ ಈ ಬಗ್ಗೆ ಆಕ್ರೋಶ  ವ್ಯಕ್ತವಾಯಿತೋ ಆ ಬಳಿಕ ಅನಿವಾರ್ಯವೆಂಬಂತೆ ಆ ಸಚಿವರ ರಾಜಿನಾಮೆ ಪಡಕೊಳ್ಳಲು ಪಕ್ಷ ತೀರ್ಮಾನಿಸಿತು. ಇದರರ್ಥವೇನು?  ಒಂದು ಜವಾಬ್ದಾರಿಯುತ ಪಕ್ಷ ನಡಕೊಳ್ಳಬೇಕಾದ ರೀತಿಯೇ ಇದು? ಫೆಬ್ರವರಿಯಿಂದ ಎಪ್ರಿಲ್ ವರೆಗಿನ ಈ ಎರಡು ತಿಂಗಳ ಅವಧಿಯಲ್ಲಿ  ಬಿಜೆಪಿ ಯಾಕೆ ಈ ಇಬ್ಬರು ಸಚಿವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ? ಒಂದುವೇಳೆ, ಬಾಲೆಯನ್ನು ಹತೈಗೈದ ಕೃತ್ಯಕ್ಕೆ ರಾಷ್ಟ್ರೀಯ ವಾಗಿ ಪ್ರತಿಭಟನೆ ವ್ಯಕ್ತವಾಗದೆ ಇರುತ್ತಿದ್ದರೆ ಇನ್ನೂ ಆ ಸಚಿವರಿಬ್ಬರನ್ನು ಬಿಜೆಪಿ ಅಧಿಕಾರದಲ್ಲಿ ಮುಂದುವರಿಸುತ್ತಿತ್ತಲ್ಲವೇ?

ಜಮ್ಮುವಿನ ಕಥುವಾ ಮತ್ತು ಜಾರ್ಖಂಡ್‍ನ ರಾಮ್ ಘರ್ ನಲ್ಲಿ ನಡೆದ ರಾಲಿಗಳು ಈ ದೇಶಕ್ಕೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ.  ಅದು ಏನೆಂದರೆ, ಸಂತ್ರಸ್ತರು ಮುಸ್ಲಿಮರಾಗಿದ್ದರೆ ಮತ್ತು ಆರೋಪಿಗಳು ಮುಸ್ಲಿಮೇತರರಾಗಿದ್ದರೆ ಬಿಜೆಪಿ ಆರೋಪಿಗಳ ಪರ ನಿಲ್ಲುತ್ತದೆ.  ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಅದರ ಸಚಿವರೇ ರಾಲಿ ನಡೆಸುತ್ತಾರೆ. ಪಕ್ಷದ ನಾಯಕರು ತಲೆ ಬೋಳಿಸುತ್ತಾರೆ. ಆಸಿಫಾ ಮತ್ತು ಅಲೀಮುದ್ದೀನ್ ಅನ್ಸಾರಿ ಇಬ್ಬರೂ ಇದಕ್ಕೆ ಅತ್ಯಂತ ತಾಜಾ ಉದಾಹರಣೆಗಳು. ಬಿಜೆಪಿಗೂ ಬಿಜೆಪಿಯೇತರ ಪಕ್ಷಗಳಿಗೂ ನಡುವೆ ಇರುವ ದೊಡ್ಡ  ವ್ಯತ್ಯಾಸ ಇದು. ದೇಶಾದ್ಯಂತ ಇವತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದರೆ ಅದಕ್ಕೆ ಅದರ ಈ ವಿಭಜನವಾದಿ ರಾಜಕೀಯ  ಸಿದ್ಧಾಂತವೇ ಪ್ರಮುಖ ಕಾರಣ. ಒಂದು ರಾಷ್ಟ್ರೀಯ ಪಕ್ಷವಾಗಿ ಇರಬೇಕಾದ ವಿಶಾಲ ಧೋರಣೆ ಮತ್ತು ಸಮತಾಭಾವ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ಅದು ಪ್ರತಿಪಾದಿಸುವ ಭಾರತ ತೀರಾ ಚಿಕ್ಕದು. ಆ ಭಾರತದಲ್ಲಿ ಎಲ್ಲರೂ ಸಮಾನರಲ್ಲ. ಈ ಭಾರತದಲ್ಲಿ ಅಪರಾಧವೊಂದು ಅಪರಾಧವಾಗಿ ಪರಿಗಣಿತವಾಗುವುದಕ್ಕೂ ಕೆಲವಾರು ಮಿತಿಗಳಿವೆ. ಅತ್ಯಾಚಾರವನ್ನು ಶಿಕ್ಷಾರ್ಹ ಕ್ರೌರ್ಯವೆಂದು ಪರಿಗಣಿಸಬೇಕೋ  ಬೇಡವೋ ಅನ್ನುವುದು ಅತ್ಯಾಚಾರಕ್ಕೊಳಗಾದವರ ಧರ್ಮ ಮತ್ತು  ಅತ್ಯಾಚಾರಗೈದವರ ಧರ್ಮವನ್ನು ನೋಡಿ ತೀರ್ಮಾನಿಸಲಾಗುತ್ತದೆ. ಸದ್ಯದ ಬಿಜೆಪಿ ಇದು. ಕಥುವಾದ ಕುರಿತಂತೆ ಅದರ ವರ್ತನೆ ಇದಕ್ಕೆ  ಪುರಾವೆಯಾಗಿ ದೇಶದ ಮುಂದಿದೆ. ರಾಮ್ ಘರ್ ನಲ್ಲಿ ನಡೆದ ರಾಲಿಯೂ ಇದರ ಬೆನ್ನಿಗಿದೆ. ಬಹುಶಃ, 2019ರ ಲೋಕಸಭಾ  ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಆಸಿಫಾ ಬರೆಯುವಳೇನೋ?