ಬಿಳಿ ಕಲ್ಲುಗಳ ಮಧ್ಯೆ ದಫನಗೊಳಿಸಲ್ಪಟ್ಟ ಬಾಲೆ: ಕತುವಾದ ಬಾಲೆಯ ಕುಟುಂಬವನ್ನು ಭೇಟಿಯಾದ ಬಳಿಕ…. 

0
513
ಅತ್ಯಾಚಾರಕ್ಕೊಳಗಾಗಿ ಕೊಲಗೈಯಲ್ಪಟ್ಟ ಹೆಣ್ಮಗಳ ಕುಟುಂಬವನ್ನು ಕೇರಳದ ಸಂಸದ ಇ.ಟಿ ಮುಹಮ್ಮದ್ ಬಶೀರ್ ಭೇಟಿ(ಫೋಟೋ ಮಾಧ್ಯಮಾಂ )

ಕತ್ ವಾದಲ್ಲಿ  ಅತ್ಯಾಚಾರಕ್ಕೊಳಗಾಗಿ ಕೊಲಗೈಯಲ್ಪಟ್ಟ ಹೆಣ್ಮಗಳ ಕುಟುಂಬವನ್ನು ಕೇರಳದ ಸಂಸದ ಇ.ಟಿ ಮುಹಮ್ಮದ್ ಬಶೀರ್ ಭೇಟಿಯಾದ  ಕೆಲ ಅನುಭವಗಳ ತುಣುಕು ಹೀಗಿದೆ. ಜಮ್ಮುವಿಗೆ ತಲುಪಿದ ನಾವು ಗೆಸ್ಟ್ ಹೌಸ್ ನಲ್ಲಿ ತಂಗಿದ್ದೆವು. ಜಮ್ಮುವಿನಲ್ಲಿ ವ್ಯಕ್ತಿಗತವಾಗಿ ಕೆಲವರ ಪರಿಚಯವಿದ್ದುದರಿಂದ ಕತುವಾದಲ್ಲಿನ ಮರ್ದಿತ ಕುಟುಂಬದ ಭೇಟಿಗೆ ಸಿದ್ದತೆ ನಡೆಸಿದ್ದೆ. ಸಂಸದನಾದ ಕಾರಣ ಭದ್ರತಾ ವ್ಯವಸ್ಥೆಯೂ ಇತ್ತು. ಗುಂಡು ನಿರೋಧಕ ವಾಹನದಲ್ಲಿ ಪ್ರಯಾಣಿಸಿದೆ. ಈ ಅತ್ಯಾಚಾರ ಪ್ರಕರಣವು ದೊಡ್ಡ ಚರ್ಚಾ ವಿಷಯವಾಗುವುದರೊಂದಿಗೆ ಕಾಶ್ಮೀರೀ ಪಂಡಿತ್ ಗಳ ಬೆದರಿಕೆಯಿಂದ ಹೆದರಿ ಈ ಕುಟುಂಬವು ಗ್ರಾಮ ತೊರೆದು ಹೋಗಿತ್ತು. ಅವರಿಗೆ ಆಶ್ರಯವೊದಗಿಸಿದ  ಓರ್ವರನ್ನು ಭೇಟಿಯಾದೆವು. ಬಕರ್ ವಾಲ್ ಸಮುದಾಯದ ಮರ್ದಿತ ಕುಟುಂಬವು ಈಗ ಅತ್ಯಾಚಾರ ನಡೆದ ಸ್ಥಳದಲ್ಲಿಲ್ಲ. ಅವರು ರಹಸ್ಯ ಸ್ಥಳವೊ೦ದರಲ್ಲಿ ತಂಗಿದ್ದರು. ಅಲ್ಲೆಲ್ಲಾ ಹುಡುಕಾಟದ ನಂತರ ಹುಡುಗಿಯ ತಂದೆ ಸಿಕ್ಕಿದರು. ಅವರು ಅಲ್ಲಿಂದ ಆ ಬಾಲಕಿಯ ತಾಯಿಯ ಬಳಿಗೆ ಕರೆದುಕೊಂಡು ಹೋದರು. ಅಂದರೆ ನಾನು ತಂಗಿದಲ್ಲಿಂದ ಸುಮಾರು ನೂರ ಹತ್ತು ಕಿಮೀ ದೂರವಿತ್ತು. ನನ್ನೊಂದಿಗೆ ನ್ಯೂಯಾರ್ಕ್ ಟೈಮ್ಸ್ ನ ವರದಿಗಾರರೂ ಇದ್ದರು. ಹೀಗೆ ಆ ಕುಟುಂಬದ ಬಳಿ ತೆರಳಿ ಸುಮಾರು ಮೂರು ಗಂಟೆಗಳ ಕಾಲ ತಂಗಿದ್ದೆವು. ಆಕೆಯ ಕೆಲ ಸಂಬಂಧಿಕರೂ, ಕಾಂಗ್ರೆಸ್ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಪ್ರತಿನಿಧಿಗಳೂ ಇದ್ದರು.
“ಆಕೆ ನನ್ನ ಪತಿಯ ಸಹೋದರಿಯ ಮಗಳು. ಬಾಯಲ್ಲಿ ಹಲ್ಲು ಮೂಡುವ ಮೊದಲೇ ಆಕೆ ತಾಯಿಯನ್ನು ಕಳಕೊಂಡಿದ್ದಳು. ಆ ಬಳಿಕ ಮಲತಾಯಿಯ ಬಳಿಯಿಂದ ನಾವು ಆಕೆಯನ್ನು ಕರೆದುಕೊಂಡು ಬಂದೆವು. ನಮ್ಮ ಮನೆಮಗಳಾಗಿ ಬೆಳೆದಳು” ಎಂದು ಆ ಸಾಕು ತಾಯಿ ಹೇಳಿದರು.
ಬೆಳಗ್ಗೆ ಬೇಗ ಮನೆಯಿಂದ ಹೊರಡುತ್ತಿದ್ದ ಅವಳು 11 ಗಂಟೆಗೆ ಮನೆಗೆ ಮರಳುತ್ತಿದ್ದಳು. ತಾಯಿಯೊಂದಿಗೆ ಮಾತನಾಡಿ ಮತ್ತೆ ಹೋಗಿದ್ದಾಳೆ ಎಂದು ಅಂದು ನಡೆದದ್ದೆಲ್ಲವನ್ನೂ ಅವರು ವಿವರಿಸಿದರು. ಅವಳು ಹೊರಗಿನವರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಅವಳಿಗೆ ಪ್ರಾಣಿಯೊಂದಿಗೆ ಪ್ರೀತಿ. ಅದರಲ್ಲೂ ಕುದುರೆಯೆಂದರೆ ತುಂಬಾ ಇಷ್ಟ. ಅವಳು ಶಾಲೆಗೂ ಹೋಗಿಲ್ಲ. ಪರಿಚಿತರು ಕರೆದರೂ ಅವರೊಂದಿಗೆ ಹೋಗುವಂತಹ ಸ್ವಭಾವ ಅವಳದ್ದಲ್ಲ. ಮಧ್ಯಾಹ್ನಕ್ಕಿಂತ ಮೊದಲು ಹೋದವಳು ಮರಳಿ ಬಂದಿಲ್ಲ ಎಂದು ಹೇಳಿದ ಆ ಮಾತೆ ದುಃಖ ತಾಳಲಾರದೆ ಅಳತೊಡಗಿತು. ಈ ಪೈಶಾಚಿಕ ಕೃತ್ಯ ನಡೆಸಿದವರು ಪರಿಚಿತರು ಎಂಬುದನ್ನು ತಿಳಿದು ಅವರು ಬೆಚ್ಚಿ ಬಿದ್ದಿದ್ದರು. ತನಗೆ ಪರಿಚಯವಿರುವ ಆರೋಪಿಗಳ ಹೆಸರನ್ನೂ ಆ ಮಾತೆ ಉಚ್ಚರಿಸಿತು. ಈ ದುಷ್ಕೃತ್ಯದ ಒಂದು ಸೂಚನೆ ಕೂಡಾ ನಮಗೆ ಲಭಿಸಿಲ್ಲ. ಬಹಳ ಸೌಹಾರ್ದಯುತವಾಗಿ ವಾಸಿಸುವ ಆ ಗ್ರಾಮವಾಸಿಗಳಿಂದ ಇಂತಹ ಯಾವುದೇ ತರದ ವರ್ತನೆ ಈ ಹಿಂದೆ ಆದ ಅನುಭವವಿಲ್ಲ.
ಕಳೆದು ಹೋದ ಮಗಳಿಗೆ ಬದಲಾಗಿ ಆ ಕುಟುಂಬಕ್ಕೆ ಏನೂ ಇಲ್ಲ. ಮುಂದಿನ ದಾರಿ ತಿಳಿಯದೆ ದಿಗ್ಬ್ರಾಂತವಾಗಿದೆ. ಕತುವಾದಲ್ಲಿ ಹಣ ನೀಡಿ ಖರೀದಿಸಿದ  ಸಣ್ಣ ಭೂಮಿಯಿತ್ತು.  ಅದರಲ್ಲಿ ಸಣ್ಣ ಗುಡಿಸಲೊಂದಿದೆ. ಆದರೆ ಕಾನೂನು ಪ್ರಕಾರ ಬುಡಕಟ್ಟು ವಿಭಾಗದವರಿಗೆ ಸಿಗಬೇಕಾದ ಬೂಮಿಯ ದಾಖಲೆ ಪತ್ರಗಳನ್ನು ಪಂಡಿತ್ ವಿಭಾಗದ ಸರ್ ಪಂಜ್ ಇವರಿಗೆ ನೀಡಿಲ್ಲ. ಏನೆಲ್ಲಾ ಪ್ರಯತ್ನ ಪಟ್ಟರೂ ಅದನ್ನು ನೀಡಲಿಲ್ಲ. ಕುದುರೆ ಮೇಯಿಸುವುದನ್ನು ಬಿಟ್ಟರೆ ಬೇರೆ ವರಮಾನ ಮಾರ್ಗ ಯಾವುದೂ ಇಲ್ಲ.
ಹೆಣ್ಮಗಳನ್ನು ದಫನ ಮಾಡಿದ ಸ್ಥಳಕ್ಕೆ ಹೋಗಲಾಗಲಿಲ್ಲ. ಕತ್ ವಾದಲ್ಲಿ ದಫನ ಮಾಡಲು ಅನುಮತಿಸದ ಕಾರಣ ಕಿಲೋ ಮೀಟರ್ ತನಕ ಕಾಡಿನಲ್ಲಿ ಸಾಗಿ ದಫನ ಮಾಡಿದ್ದರು. ಅಲ್ಲಿಗೆ ತೆರಳುವುದು ತುಂಬಾ ತ್ರಾಸದಾಯಕವಾದ ಕಾರಣ ಅವರು ಗೋರಿಯ ಫೋಟೋಗಳನ್ನು ಕ್ಲಿಕ್ಕಿಸಿ ತಂದಿದ್ದರು. ಬಿಳಿ ಕಲ್ಲುಗಳಿಂದ ಮುಚ್ಚಲಾದ ಗೋರಿಯದು.
ಅಳುತ್ತಾ ಮಾತು ಮುಗಿಸಿದ ಮಾತೆಯನ್ನು ಸಾಂತ್ವನಪಡಿಸುತ್ತಾ ಆರ್ಥಿಕ ಹಾಗೂ ಕಾನೂನುಪರವಾದ ಎಲ್ಲಾ ನೆರವು ನೀಡುವುದಾಗಿಯೂ ಏನಾದರೂ ಅಗತ್ಯ ಬಿದ್ದರೆ ಕರೆ ಮಾಡಿ ಎಂದು ಹೇಳಿದಾಗ ನನ್ನ ಮಗಳನ್ನು ಕೊಂದವರನ್ನು ನೇಣಿಗೇರಿಸಿ ಎಂದು ಬಿಕ್ಕಳಿಸಿದರು.
ಈ ಮೂಲಕ ಕತುವಾದಿಂದ ಬಕರ್ವಾಲಾ ಕುಟುಂಬವನ್ನು ಹೊರಹಾಕುವ ಯೋಜನೆಯಲ್ಲಿ ಪಂಡಿತ್ ವಿಭಾಗ ಯಶಸ್ವಿಯಾಗಿದೆ, ಆ ಕಾರಣದಿಂದಲೇ ಅವರ ಒಡೆತನದ ಭೂಮಿಯ ಹಕ್ಕು ಪತ್ರಗಳನ್ನು ನೀಡಲು ನಿರಾಕರಿಸಿರುವುದು. ಅವರು ಅಲ್ಲಿ ಸಂಘರ್ಷ ಭರಿತವಾಗಿರುವುದನ್ನು ಬಯಸುತ್ತಾರೆ.
ಆದ್ದರಿಂದ ಜಮ್ಮು ಕಾಶ್ಮೀರ ಮುಖ್ಯ ಮಂತ್ರಿ ಸಹಿತ ಎಲ್ಲ ನಾಯಕರೊಂದಿಗೆ ಈ ಕುರಿತು ಚರ್ಚೆಯಾಗಬೇಕು. ಕಾನೂನು ಕ್ರಮ ಕೈಗೊಳ್ಳಲು ಈ ಪ್ರಕರಣದ ಪರವಾಗಿ ಸುಪ್ರೀಮ್ ಕೋರ್ಟಿಗೆ ಹೋದ ಇಂದಿರಾ ಜೈ ಸಿಂಗ್ ರಿಗೆ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಲಾಗಿದೆ. ಅವರನ್ನೂ ಜೊತೆಗೆ ಈ ಪ್ರಕರಣದ ವಕೀಲೆ ದೀಪಿಕಾ ಸಿಂಗ್ ರಜಾವತ್ ರನ್ನೂ ಗುಲಾಮ್ ನಬಿ ಅಝಾದ್ ರನ್ನೂ ಭೇಟಿ ಮಾಡಿದ್ದೇವೆ.