ಮಕ್ಕಾ ಮಸೀದಿಯಲ್ಲಿ ಸ್ಫೋಟವೇ ನಡೆದಿಲ್ಲ… ತೀರ್ಪಿನ ಬಳಿಕದ ಉದ್ಘಾರ

0
608

ನ್ಯೂಸ್ ಡೆಸ್ಕ್

ಮಕ್ಕಾ ಮಸೀದಿ ಸ್ಪೋಟದ ಆರೋಪಿಗಳೆಲ್ಲರನ್ನೂ ಹೈದರಾಬಾದ್‍ನ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಸಾಕ್ಷ್ಯ ಗಳ ಕೊರತೆಯಿಂದ ಸ್ವಾಮೀ ಅಸೀಮಾನಂದ ಸಹಿತ ಐವರನ್ನು ಎನ್.ಐ.ಎಯ ವಿಶೇಷ ನ್ಯಾಯಾಲಯವು ಆರೋಪಮುಕ್ತಗೊಳಿಸಿದೆ. ಈ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುವುದಾಗಿ ಪ್ರತಿವಾದಿಗಳು ತಿಳಿಸಿದ್ದಾರೆ.
ಒಟ್ಟು ಎಂಟು ಆರೋಪಿಗಳಲ್ಲಿ ಐವರನ್ನು ದೋಷಮುಕ್ತಗೊಳಿಸಲಾಗಿದೆ.
ಮಕ್ಕಾ ಮಸೀದಿ ಸ್ಪೋಟವು 2007ರ ಮೇ18ರಂದು ಶುಕ್ರವಾರ ಮಧ್ಯಾಹ್ನ 1:25 ಕ್ಕೆ ನಡೆದಿತ್ತು. ಸುಮಾರು ಹತ್ತು ಸಾವಿರ ಮಂದಿ ಆ ಸ್ಪೋಟದ ಸಂದರ್ಭ ಮಸೀದಿಯಲ್ಲಿದ್ದರು, ವಿಶ್ವ ಪ್ರಸಿದ್ದ ಚಾರ್ಮಿನಾರ್ ಬಳಿಯಿರುವ ಮಕ್ಕಾ ಮಸೀದಿಯಲ್ಲಿ ನಡೆದ ಸ್ಪೋಟಕ್ಕೆ 9 ಮಂದಿ ಬಲಿಯಾಗಿ 58 ಮಂದಿ ಗಾಯಗೊಂಡಿದ್ದರು, ಸ್ಪೋಟದ ತೀವ್ರತೆಗೆ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದರು. ಸ್ಪೋಟದ ಆರೋಪವನ್ನು ಮುಸ್ಲಿಮರಮೇಲೆ ಹೊರಿಸುವ ಪ್ರಯತ್ನವೂ ನಡೆಯಿತು. ಈ ಸ್ಪೋಟದ ಹಿಂದೆ ಲಷ್ಕರೆ ತಯ್ಯಿಬದ ಕೈವಾಡವೆಂದು ಪ್ರಚಾರ ಪಡಿಸಲಾಗಿತ್ತು. ನಿರಪರಾಧಿಗಳ ಬಂಧನವೂ ನಡೆಯಿತು. ಪ್ರತಿಭಟನೆ ತೀವ್ರವಾದಾಗ ಪೋಲಿಸರು ಚುರುಕಾದರು. ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಈ ಸ್ಪೋಟದ ಹಿಂದೆ ಹಿಂದುತ್ವ ಶಕ್ತಿಗಳ ಕೈವಾಡವನ್ನು ಎನ್‍ಐಎ ಪತ್ತೆ ಹಚ್ಚಿತು. ಕೊನೆಗೆ ಎನ್‍ಐಎ ಸ್ವಾಮೀ ಅಸೀಮಾನಂದ, ರಾಜೇಂದ್ರ ಚೌದುರಿ, ಲೋಕೇಶ್ ಶರ್ಮ, ಭರತ್ ಮೋಹನ್ ಲಾಲ್‍ರಥೇಶ್ವರ್,ದೇವೇಂದ್ರ ಗುಪ್ತ ಮುಂತಾದವರನ್ನು ಬಂಧಿಸಿ ವಿಚಾರಣೆ ನಡೆಸಿತು. ಆರೆಸ್ಸೆಸ್ ಪ್ರಚಾರಕರಾದ ಸಂದೀಪ್ ವಿ.ಡಾಂಗೆ, ಆರೆಸ್ಸೆಸ್ ಪ್ರಚಾರಕ ರಾಮಚಂದ್ರ ಕಲ್‍ಸಾಂಗ್ರ ಎಂಬ ಇಬ್ಬರು ಆರೋಪಿಗಳು ಈ ವರೆಗೂ ಪತ್ತೆಯಾಗಿಲ್ಲ. ಅವರು ಕೊಲ್ಲಲ್ಪಟ್ಟಿರಬಹುದೆಂಬ ಶಂಕೆಯೂ ಇದೆ. ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಶಿ ಎಂಬ ಆರೋಪಿಯು ತನಿಖೆಯ ಸಂದರ್ಭ ಕೊಲ್ಲಲ್ಪಟ್ಟಿದ್ದನು.

ಅಸೀಮಾನಂದನನ್ನು 2010ರಲ್ಲಿ ಬಂಧಿಸಲಾಯಿತು. ಈತ ತನಿಖೆಯ ವೇಳೆ, ಹಿಂದೂಗಳು ಮತ್ತು ಅವರ ದೇವಾಲಯಗಳ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಪ್ರತೀಕಾರವಾಗಿ ಮುಸ್ಲಿಮರ ಮೇಲೆ ದಾಳಿ ನಡೆಸಲು ಯೋಜನೆ ಸಿದ್ದಪಡಿಸಿದೆವುಮತ್ತು ಬಾಂಬ್ ಕಾ ಜವಾಬ್ ಬಾಂಬ್ (ಬಾಂಬ್‍ಗೆ ಬಾಂಬ್ ಪ್ರತ್ಯುತ್ತರ) ಎಂಬುದಾಗಿ ಹೇಳಿದ್ದ. ಈ ನಡುವೆ ಮನಪರಿವರ್ತನೆಯಾದವನಂತೆ ಅಸೀಮಾನಂದ ತಪ್ಪೊಪ್ಪಿಕೊಂಡಿದ್ದ. ಮಕ್ಕಾ ಮಸೀದಿ ಮುಂತಾದ ಎಲ್ಲಾ ಸ್ಪೋಟಗಳ ಸಂಚಿನಲ್ಲಿ ಭಾಗಿಯಾಗಿದ್ದಾಗಿ ದೆಹಲಿಯ ತೀಸ್ ಹಝಾರೀ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದ. ಆದರೂ ಬಳಿಕ ಆ ಹೇಳಿಕೆಯನ್ನು ಹಿಂಪಡೆದಿದ್ದ. ಇದಾಗಿ ಹನ್ನೊಂದು ವರ್ಷಗಳ ಬಳಿಕ ಆರೋಪಿಗಳು ದೋಷಮುಕ್ತಗೊಂಡಿದ್ದಾರೆ. ಹಾಗಾದರೆ ಈ ಸ್ಪೋಟ ಯಾರೂ ಮಾಡದೇ ತನ್ನಿಂತಾನೇ ಸಂಭವಿಸಿತೇ? ಹಾಗಾದರೆ ಅವರು ನೀಡಿದ ತಪ್ಪೊಪ್ಪಿಗೆ ಹೇಳಿಕೆಯ ಬೆನ್ನು ಹತ್ತುವ ಕೆಲಸದಲ್ಲಿ ತನಿಖಾ ತಂಡ ಪ್ರಯತ್ನಿಸಿದೆಯೇ.. ಒಂದೂ ಅರ್ಥವಾಗುತ್ತಿಲ್ಲ. ಬಲಿಯಾದ ಜೀವಕ್ಕೆ ನ್ಯಾಯ ಕೊಡುವವರು ಯಾರು?