ಮತದಾನಕ್ಕೆ ತೆರಳುವ ಮುನ್ನ ಒಂದಿಷ್ಟು..

0
377

ಅಬೂ ಸಲ್‍ವಾನ್

ಕರ್ನಾಟಕ ವಿಧಾನ ಸಭಾ ಚುನಾವಣೆಯ ಬಹಿರಂಗ ಪ್ರಚಾರಗಳಿಗೆ ಗುರುವಾರ ಅಂತ್ಯ ಹಾಡಲಾಗಿದೆ. ಈ ಬಾರಿಯ ಚುನಾವಣೆ ಬಹಳ ಜಿದ್ದಾ ಜಿದ್ದಿನ ಕಾದಾಟದಿಂದ ಕೂಡಿದೆ ಎಂಬುದು ಪ್ರಚಾರದ ಭರಾಟೆ ನೋಡಿದಾಗ ಅರ್ಥೈಸಬಹುದಾಗಿದೆ,
ಆದರೆ ಕೊನೇಯ ಹಂತದಲ್ಲಿ ನಡೆದ ಘಟನೆಗಳು ವಿಷಾದನೀಯ ಎನ್ನಲೇ ಬೇಕು.  ಹಲವೆಡೆ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಹೊಡೆದಾಡಿ ಹಲ್ಲೆ ನಡೆಸಿ ಮೂರ್ಖತನವನ್ನು ಮೆರೆದರು. ಯುವಕರು ಯಾರದೋ ಮಾತಿಗೆ ಪ್ರಚೋದಿತರಾಗಿ ವಿರೋಧಿ ಪಾಳಯದ ಮೇಲೆ ಹಲ್ಲೆ ನಡೆಸುವುದು ಪ್ರಜಾ ಪ್ರಭುತ್ವಕ್ಕೆ ಶೋಭೆಯಲ್ಲ. ಎಲ್ಲ ಪಕ್ಷಗಳಿಗೂ ಅವರದೇ ಆದ ರೀತಿಯಲ್ಲಿ ಕಾನೂನು ಬದ್ಧವಾಗಿ ಪ್ರಚಾರ ನಡೆಸುವ ಹಕ್ಕಿದೆ. ಅದರಲ್ಲಿ ಲೋಪವಾದರೆ ಪೋಲೀಸರು ತಡೆಯಬೇಕೇ ಹೊರತು ಯಾವುದೋ ಪಕ್ಷದ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳಬಾರದು. ರಾಜಕಾರಣಿಗಳು ಗೆದ್ದು ಗದ್ದುಗೆ ಏರುವಾಗ ನಾವೇಕೆ ಕೋರ್ಟು ಕಚೇರಿ, ಪೋಲೀಸುಠಾಣೆ ಅಂತ ಅಲೆಯಬೇಕು. ನಾವೇಕೆ ನಮ್ಮ ಮನೆ ಮಂದಿಯ ನೆಮ್ಮದಿಯನ್ನು ಹಾಳು ಮಾಡಬೇಕು? ನಮಗೂ ನೆಮ್ಮದಿಯ ಜೀವನ ನಡೆಸಬಹುದಲ್ಲವೇ? ಪರಸ್ಪರ ನೆರೆಹೊರೆಯವರನ್ನು ಕೆಂಗಣ್ಣಿಂದ ನೋಡಿ ಸಂಬಂಧ ಹಳಸಿಕೊಳ್ಳುವಂತೆ ಮಾಡುವುದಾದರೂ ಏಕೆ? ಈ ವರೆಗೆ ಪರವಾಗಿಲ್ಲ ಎಂಬಂತೆ ಬಹಳ ಚುನಾವಣೆಯ ಪ್ರಚಾರದ ದಿನಗಳು ಉರುಳಿದೆ. ಆದರೆ ಇನ್ನಾದರೂ ಚುನಾವಣೆ ಶಾಂತವಾಗಿ ನಡೆಯಲು ನಾವು ಶ್ರಮಿಸಬೇಕು. ಎಲ್ಲರೂ ಮತದಾನದಲ್ಲಿ ಭಾಗಿಯಾಗುವಂತೆ ಪ್ರಯತ್ನಿಸಬೇಕು. ಪಕ್ಷದ ಹೆಸರಲ್ಲಿ ಗಲಭೆ ಗೊಂದಲ ಸೃಷ್ಟಿಸಿ ಏನೂ ಲಾಭವಾಗದು.  ಯಾರಾದರೂ ದುರುಗುಟ್ಟಿ ನೋಡಿದರೂ ನಾವು ನಗುಮುಖದಿಂದ ಮುಗುಳ್ನಗೆಯಿಂದ ಎದುರುಗೊಳ್ಳಬೇಕು. ಇಲ್ಲಿ ಕೆರಳಿಸುವವರು, ಪ್ರಚೋಧಿಸುವವರು ಧಾರಾಳ ಮಂದಿ ಇದ್ದಾರೆ. ಆದರೆ ಅದಕ್ಕೆ ನಾವು ಆಹಾರವಾಗಿ ನಮ್ಮ ಬಾಳನ್ನು ಏಕೆ ಹಾಳು ಮಾಡಿಕೊಳ್ಳಬೇಕು. ಚುನಾವಣೆಗಳು ಬರುವುದು ದ್ವೇಷ ಸಾಧಿಸಲಿಕ್ಕಲ್ಲ. ಅದು ಸಂವಿಧಾನಬದ್ಧವಾದ ಹಕ್ಕು ಚಲಾಯಿಸುವುದಾಗಿದೆ. ಅದನ್ನು ದೇಶದ ಒಳಿತಿಗಾಗಿ ಬಳಸಬೇಕಾಗಿದೆಯೇ ಹೊರತು ಸ್ವಾರ್ಥಕ್ಕೆ ಬಳಸಿ ಸಮಾಜದ ಶಾಂತಿಯನ್ನು ಕೆಡಿಸಬಾರದು. ಜಾತಿ ಧರ್ಮದ ರಾಜಕೀಯಕ್ಕೆ ಅಂತ್ಯ ಹಾಡಿ ನಾವೆಲ್ಲ ಭಾರತೀಯರು ಎಂಬ ಸದ್ಭಾವನೆಯಿಂದ ದೇಶದ ಜನರ ಏಳಿಗೆ ಅಭಿವೃದ್ಧಿಗಾಗಿ ಪ್ರಯತ್ನಿಸಬೇಕು. ಭ್ರಷ್ಟರು ಅಧಿಕಾರಕ್ಕೇರುವುದನ್ನು ತಡೆಯಬೇಕು. ಸಾಮಾಜಿಕ ನ್ಯಾಯ ದೊರಕಿಸಿಕೊಡುವವರನ್ನು ಆರಿಸಬೇಕು. ಯಾವುದು ಸರಿ ಯಾವುದು ಅನ್ಯಾಯವೆಂಬುದನ್ನು ನಾವು ಚಿಂತನ ಮಂಥನ ನಡೆಸಿ ಮತದಾನ ಕೇಂದ್ರಕ್ಕೆ ತೆರಳಬೇಕು. ಯಾರಿಂದ ರಾಜ್ಯ ಏಳಿಗೆ ಕಾಣಬಹುದು. ರಾಜ್ಯದ ಹಿತವನ್ನು ಯಾರಿಂದ ಕಾಪಾಡಲು ಸಾಧ್ಯವೆಂಬುದನ್ನು ಪ್ರಾಮಾಣಿಕವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಯೋಚಿಸಿ ಮತದಾನ ಮಾಡಬೇಕು. ಜನಸಾಮಾನ್ಯರ ನೋವು ಭವಣೆಗಳಿಗೆ ಪರಿಹಾರ ಕಲ್ಪಿಸುವವರನ್ನು ಚುನಾಯಿಸಬೇಕು. ದೇಶದ ಜೀವನಾಡಿ ರೈತರ ಸಂಕಷ್ಟಗಳಿಗೆ ಧ್ವನಿಯಾಗುವವರನ್ನು ನಾವು ಚುನಾಯಿಸಬೇಕು, ಅನಗತ್ಯ ಸಮಸ್ಯೆ ಸೃಷ್ಟಿಸುವವರನ್ನೂ ಅಧಿಕಾರದಿಂದ ದೂರವಿಡಬೇಕು. ಸಹೋದರತೆ ಸಹಬಾಳ್ವೆ, ಸಾಮರಸ್ಯತೆ ರಾಜ್ಯದಲ್ಲಿ ನಳನಳಿಸುವಂತೆ ಮಾಡಬೇಕಾಗಿದೆ.  ಅದರ ಅಗತ್ಯ ಈಗ ರಾಜ್ಯಕ್ಕಿದೆ.  ರಾಜ್ಯದ ಏಳಿಗೆ ಮತ್ತು ಅವನತಿಯ ಮಂತ್ರ ದಂಡ ಮತದಾನವೆಂಬ ಅಸ್ತ್ರ ನಮ್ಮ ಕೈಯಲ್ಲಿದೆ. ಅದನ್ನು ನಾವು ಯಾವ ರೀತಿ ಬಳಸುತ್ತೇವೆಯೋ ಅದರಲ್ಲಿ ಅದರ ಯಶಸ್ಸು ಅಡಗಿದೆ. ಆದ್ದರಿಂದ ನಾಳೆ ಬೆಳಿಗ್ಗೆ ಬೇಗನೇ ಮತದಾನ ಮಾಡಿ ನಮ್ಮ ಹಕ್ಕನ್ನು ಚಲಾಯಿಸಬೇಕಾಗಿದೆ.