ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುತ್ತೇನೆಂದ ಬಿಜೆಪಿ: ಅರುಣಾಚಲದಲ್ಲಿ ಬುಡಕಟ್ಟುಗಳ ಆಕ್ರೋಶ, ಕ್ರೈಸ್ತರ ಓಲೈಕೆಯೆಂದು ಟೀಕೆ

0
394

ಅರುಣಾಚಲಪ್ರದೇಶದಲ್ಲಿ ಜಾರಿಯಲ್ಲಿರುವ ಮತಾಂತರ ವಿರೋಧಿ ಕಾಯ್ದೆಯನ್ನು ರದ್ದು ಪಡಿಸುವುದಾಗಿ ಅಲ್ಲಿನ ಬಿಜೆಪಿ ಸರಕಾರವು ಘೋಷಿಸಿರುವುದನ್ನು ಅಲ್ಲಿನ ಬುಡಕಟ್ಟು ಸಮುದಾಯಗಳು ತೀವ್ರವಾಗಿ ಖಂಡಿಸಿದ್ದು, ಇದು ಕ್ರೈಸ್ತರನ್ನು ಓಲೈಸುವ ನೀತಿಯಾಗಿದೆಯೆಂದು ಕಿಡಿಕಾರಿವೆ.
ಕ್ರೈಸ್ತರನ್ನೇ ಗುರಿಯಾಗಿಟ್ಟುಕೊಂಡು ರಚಿಸಲಾಗಿದೆಯೆಂದು ಹೇಳಲಾಗುವ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವುದಾಗಿ ಅರುಣಾಚಲಪ್ರದೇಶದ ಕ್ಯಾಥೋಲಿಕ್ ಅಸೋಸಿಯೇಶನ್ (APCA) ಏರ್ಪಡಿಸಿದ ಸಭೆಯಲ್ಲಿ ಮುಖ್ಯಮಂತ್ರಿ ಫೆಮಾ ಖಂಡು ಘೋಷಿಸಿದ ಬಳಿಕ ಈ ಆಕ್ರೋಶ ವ್ಯಕ್ತವಾಗಿದೆ.
ಮತಾಂತರ ನಿಷೇಧ ಕಾಯ್ದೆಯ ಪರ ಬಿಜೆಪಿ ತನ್ನನ್ನು ಗುರುತಿಸಿಕೊಂಡಿದ್ದು, ಕ್ರೈಸ್ತರು ಮತ್ತು ಮುಸ್ಲಿಮರು ಈ ದೇಶದ ಹಿಂದೂಗಳನ್ನು, ಬುಡಕಟ್ಟು ಜನಾಂಗಗಳನ್ನು ಆಮಿಷದಿಂದ ಮತಾಂತರಗೊಳಿಸುತ್ತಿವೆ ಎಂದು ವಾದಿಸುತ್ತಾ ಬಂದಿದೆ. ಅದಕ್ಕೆ ಪುರಾವೆಯಾಗಿ ಅರುಣಾಚಲ ಪ್ರದೇಶವೂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತರು ಅಧಿಕವಾಗಿರುವ ಅಂಕಿಸಂಖ್ಯೆಗಳನ್ನು ಆಗಾಗ ಉಲ್ಲೇಖಿಸುತ್ತದೆ.
ಇಂಥ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಯ್ದೆ ರದ್ದಿಗೆ ಮುಂದಾಗಿರುವುದನ್ನು ಅರುಣಾಚಲ ಪ್ರದೇಶದ ಬುಡಕಟ್ಟು ನಂಬಿಕೆ ಮತ್ತು ಸಂಸ್ಕ್ರತಿ ರಕ್ಷಣೆಗಾಗಿರುವ ಸಂಘಟನೆ(IFCSAR), ನಿಶಿ ಬುಡಕಟ್ಟು ಸಂಸ್ಕ್ರತಿ ಮತ್ತು ನಂಬಿಕೆಗಾಗಿರುವ ಸಂಘಟನೆ (NIFCS) ಅಲ್ಪಸಂಖ್ಯಾಕರ ಓಲೈಕೆ ನೀತಿ ಎಂದು ಟೀಕಿಸಿವೆ.
IFCSAR ಮತ್ತು NIFCS ಸಂಘಟನೆಗಳು ಅರುಣಾಚಲ ಪ್ರದೇಶದ ಅತಿದೊಡ್ಡ ಸಂಘಟನೆಗಳಾಗಿದ್ದು, ನಿಶಿ ಸಮುದಾಯವನ್ನೂ ಒಳಗೊಂಡ ತನಿ ಬುಡಕಟ್ಟು ಗುಂಪು ಅರುಣಾಚಲದ ಅತಿದೊಡ್ಡ ಸ್ಥಳೀಯ ಜನಾಂಗವಾಗಿ ಗುರುತಿಸಿಕೊಂಡಿದೆ.
1951 ರಿಂದ 2011 ರ ನಡುವೆ ಕ್ರೈಸ್ತರ ಸಂಖ್ಯೆ 30.26% ಆಗಿದ್ದು, ಅದರಲ್ಲಿ ಈ ಬುಡಕಟ್ಟುಗಳೇ ಅತ್ಯಧಿಕ ಎಂದು ಅವು ಹೇಳಿವೆ.
ಮುಖ್ಯಮಂತ್ರಿಗಳು ಬುಡಕಟ್ಟುಗಳ ಭಾವನೆಯನ್ನು ತ್ರಣವಾಗಿ ಕಂಡಿದ್ದು, ಕಾಯ್ದೆ ರದ್ದುಪಡಿಸಿದರೆ ಸುಮ್ಮನಿರಲಾರೆವು ಎಂದು ಎಚ್ಚರಿಸಿವೆ.
ಇದೇವೇಳೆ, ಮುಖ್ಯಮಂತ್ರಿಯ ಹೇಳಿಕೆಯನ್ನು ಅರುಣಾಚಲಪ್ರದೇಶ ಕ್ರಿಶ್ಚಿಯನ್ ಫಾರಂ ಸ್ವಾಗತಿಸಿದೆ.